CrimeLatest

ಭ್ರೂಣಪತ್ತೆ… ಕೆಲವೈದ್ಯರಿಗೆ ಹಣ ಮಾಡುವ ದಂಧೆಯಾಯ್ತಾ? ಇದಕ್ಕೆ ಇತಿಶ್ರೀ ಯಾವಾಗ?

ಭ್ರೂಣಪತ್ತೆ ಇದೀಗ ದುಡ್ಡು ಮಾಡುವ ಮಹಾದಂಧೆಯಾಗಿ ಮಾರ್ಪಟ್ಟಿದ್ದು, ಅಕ್ರಮವಾಗಿ ಇದು ನಡೆಯುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬಂದಾಗಷ್ಟೆ ಸುದ್ದಿಯಾಗುತ್ತದೆ.. ದಂಧೆ ಎಲ್ಲೆಲ್ಲಿ ನಡೆಯುತ್ತಿದೆಯೋ ಗೊತ್ತಿಲ್ಲ.. ಆದರೆ ಮಂಡ್ಯದಲ್ಲಿ ಆಳವಾಗಿ ಬೇರೂರಿದೆ ಎಂಬುದಕ್ಕೆ ಇಲ್ಲಿ ಆಗಾಗ್ಗೆ ಬೆಳಕಿಗೆ ಬರುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದ್ದು, ಇದೀಗ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ದಂಧೆ ಪತ್ತೆಯಾಗಿದ್ದು, ಮೂವರು ವೈದ್ಯರನ್ನು ಅರೆಸ್ಟ್ ಮಾಡಲಾಗಿದೆ. ತಪ್ಪಿಸಿಕೊಂಡಿರುವ ವೈದ್ಯೆಗಾಗಿ ಹುಡುಕಾಟ ನಡೆಯುತ್ತಿದೆ.

ಭ್ರೂಣಪತ್ತೆ ಕಾನೂನಿನ ಪ್ರಕಾರ ಮಹಾ ಅಪರಾಧವಾಗಿದ್ದು, ಕಾನೂನು ಉಲ್ಲಂಘನೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯ ನಾಮಫಲಕ ಸಾಮಾನ್ಯವಾಗಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೇತು ಹಾಕಲಾಗಿರುತ್ತದೆ. ಆದರೆ ಭ್ರೂಣ ಪತ್ತೆ ಮತ್ತು ಹತ್ಯೆಯೇ ಮಹಾದಂಧೆಯಾಗಿ ಕೆಲವರ ಜೇಬು ತುಂಬುತ್ತಿದೆ. ಅಂತಹ ದಂಧೆ ನಡೆಸುವವರು ಐಷಾರಾಮಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಈ ದಂಧೆ ಆಗೊಮ್ಮೆ, ಈಗೊಮ್ಮೆ ಅಲ್ಲೊಂದು, ಇಲ್ಲೊಂದು ಎಂಬಂತೆ ಬೆಳಕಿಗೆ ಬರುತ್ತಿದೆ ವಿನಃ ಉಳಿದಂತೆ ಯಾವುದೂ ಗೊತ್ತೇ ಆಗದಂತೆ ನಡೆದುಹೋಗಿ ಬಿಡುತ್ತವೆ.

ವೈದ್ಯಕೀಯ ಲೋಕದಲ್ಲಿ ಕಾನೂನನ್ನು ಮೀರಿ ಅಡ್ಡದಾರಿಯಿಂದ ಹಣ ಸಂಪಾದಿಸಬಹುದಾದ ಮಾರ್ಗದಲ್ಲಿ ಭ್ರೂಣಪತ್ತೆ ಮತ್ತು ಹತ್ಯೆ ಒಂದಾಗಿದ್ದು, ಇದನ್ನು ಕಾನೂನು ಪ್ರಕಾರ ನಿಷೇಧಿಸಿ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗುತ್ತಿದ್ದರೂ ಅಲ್ಲಲ್ಲಿ ನಡೆಯುತ್ತಲೇ ಇದ್ದು, ಕೆಲವರು  ಇದನ್ನೇ ದಂಧೆಯನ್ನಾಗಿ ಮಾಡಿಕೊಂಡು ಬದುಕನ್ನು ದುಂಡಗೆ ಮಾಡಿಕೊಳ್ಳುತ್ತಿದ್ದಾರೆ. ಮೂರು ವರ್ಷದ ಹಿಂದೆ ಅಂದರೆ 2023ರರ ನವೆಂಬರ್‌ನಲ್ಲಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಭೇದಿಸಿದ್ದರು.

ಈ ಸಂಬಂಧ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದರು. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿ ಆಲೆಮನೆಯೊಂದರಲ್ಲಿ ಚಿಕ್ಕದಾದ ಶೆಡ್ ನಿರ್ಮಾಣ ಮಾಡಿ, ಬೆಂಗಳೂರಿನಿಂದ ಗರ್ಭಿಣಿಯರನ್ನು ಕರೆದುಕೊಂಡು ಬಂದು ಅಲೆಮನೆಯಲ್ಲಿಯೇ ಭ್ರೂಣಹತ್ಯೆಯನ್ನು ಎಸಗಲಾಗುತ್ತಿತ್ತು. ಅವತ್ತು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣ ರಾಜ್ಯಮಟ್ಟದಲ್ಲಿ ಭಾರೀ ಸುದ್ದಿ ಮಾಡಿತ್ತು. ಅದು ಅಲ್ಲಿಗೆ ಮುಗಿದು ಹೋಯಿತು ಎಂದೇ ಜನ ಭಾವಿಸಿದ್ದರು. ಆದರೆ ಕಳೆದ ವರ್ಷ  ಇಂತಹದ್ದೇ ಪ್ರಕರಣ ಮೈಸೂರಿನಲ್ಲಿ ನಡೆದಿತ್ತು. ಇದೆಲ್ಲವನ್ನು ಗಮನಿಸಿದರೆ ದಂಧೆ ನಡೆಸುವವರು ಒಬ್ಬರೇ ಆದರೆ ಅವರನ್ನು ಜೈಲಿಗೆ ತಳ್ಳಿ ಅಬ್ಬಾ ದಂಧೆಗೆ ಇತಿಶ್ರೀ ಹಾಡಿಬಿಟ್ಟಿದ್ದೇವೆ ಎಂದು ಸುಮ್ಮನಾಗಿ ಬಿಡಬಹುದು. ಆದರೆ ಇಂತಹವರು ಕ್ಯಾನ್ಸರ್ ನಂತೆ ಹರಡಿಕೊಂಡಿರುವುದರಿಂದ ಮತ್ತು ಭ್ರೂಣಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರು ಎಲ್ಲೆಡೆ ಇರುವುದರಿಂದ  ಇದನ್ನು ಮಟ್ಟಹಾಕುವುದು ಕಷ್ಟವೇ..

ಈ ದಂಧೆಯಿಂದಲೇ ಬದುಕನ್ನು ದುಂಡಗಾಗಿಸಿಕೊಳ್ಳುವವರು ಸರ್ಕಾರ ಮತ್ತು ಕಾನೂನಿಗೆ ಮಣ್ಣೆರಚಿ ತಾವು ತಮ್ಮ ದಂಧೆಯನ್ನು ನಡೆಸಲು ಹೊಸ ಮಾರ್ಗವನ್ನು ಹುಡುಕುತ್ತಲೇ ಇರುತ್ತಾರೆ. ಈಗಾಗಲೇ ಹೆಣ್ಣಿನ ಸಂಖ್ಯೆ ಕ್ಷೀಣಿಸುತ್ತಿದೆ. ಗಂಡಿಗೆ ಹೋಲಿಸಿದರೆ ಹೆಣ್ಣಿನ ಸರಾಸರಿ ಅನುಪಾತ ಕುಗ್ಗುತ್ತಿದೆ. ಇದರ ಪರಿಣಾಮ ಮದುವೆಯಾಗಲು ಹೆಣ್ಣು ಸಿಗದೆ ದೇವದಾಸರಂತೆ ಅಲೆದಾಡುತ್ತಿರುವ ಗಂಡು ಮಕ್ಕಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೂ ಬಹಳಷ್ಟು ಜನರಿಗೆ ಇವತ್ತಿಗೂ ತಮಗೆ ಗಂಡು ಬೇಕೆಂಬ ಕೆಟ್ಟ ಮನಸ್ಥಿತಿಯಂತು ಇದ್ದೇ ಇದೆ. ಹೀಗಾಗಿ ಅವರು ಗರ್ಭಿಣಿಯಾಗುತ್ತಿದ್ದಂತೆಯೇ  ಅಡ್ಡದಾರಿಯಿಂದ ಭ್ರೂಣ ಪತ್ತೆ ಮಾಡುವ ಮತ್ತು ಒಂದು ವೇಳೆ ಹೆಣ್ಣು ಮಗು ಎಂಬುದು ಗೊತ್ತಾದರೆ ಅದನ್ನು ತೆಗೆಸಲು ಮುಂದಾಗುತ್ತಾರೆ.

ಇದಕ್ಕಾಗಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ತಯಾರಿರುತ್ತಾರೆ. ಇನ್ನೊಂದೆಡೆ ಅನೈತಿಕ ಸಂಬಂಧಗಳಿಂದ ಅಥವಾ ವಿವಾಹಪೂರ್ವ ಗರ್ಭಧಾರಣೆ, ಮಕ್ಕಳೇ ಬೇಡವೆಂಬ ಕಾರಣದಿಂದ ಗರ್ಭವನ್ನು ತೆಗೆಸುವವರು ಇದ್ದಾರೆ. ಇಂತಹವರನ್ನೇ ಟಾರ್ಗೆಟ್ ಮಾಡಿ ದಂಧೆ ನಡೆಸುವವರು ಬದುಕು ಕಟ್ಟಿಕೊಂಡಿದ್ದಾರೆ.

ಹಳ್ಳಿಯಿಂದ ಪಟ್ಟಣದ ತನಕ ಬಹುತೇಕ ಜನರು ಗಂಡು ಮಗು ಬೇಕೆಂದು ಬಯಸುತ್ತಿದ್ದು, ಅದಕ್ಕಾಗಿ ಭ್ರೂಣಪತ್ತೆ ಮಾಡುವವರನ್ನು ಹುಡುಕುತ್ತಿರುತ್ತಾರೆ. ಅಂತಹವರಿಗೆ ಭ್ರೂಣ ಪತ್ತೆ ಮಾಡಿ ವಿಷಯ ತಿಳಿಸುವ ಮತ್ತು ಭ್ರೂಣ ಹತ್ಯೆ ಮಾಡುವ ಕೆಲಸಕ್ಕೆ ದಂಧೆಕೋರರು ಮುಂದಾಗುತ್ತಾರೆ. ಹಾಗೆಂದು ಇವರು ಸುಲಭವಾಗಿ ಕರೆದುಕೊಂಡು ಹೋಗಿ ಮಾಡುವುದಿಲ್ಲ. ಭ್ರೂಣಪತ್ತೆ ಮಾಡುವ ಮುನ್ನ ಯಾರು ಪತ್ತೆ ಮಾಡಲು ಬಂದಿದ್ದಾರೋ ಅವರನ್ನು ಮೂರರಿಂದ ನಾಲ್ಕು ಲೊಕೇಷನ್ ಗಳಿಗೆ ಅಲೆದಾಡಿಸಿರುತ್ತಾರೆ. ಪೂರ್ಣ ನಂಬಿಕೆ ಬಂದ ಬಳಿಕವಷ್ಟೇ ಕೊನೆಗೆ ತಾವು ಪತ್ತೆ ಮಾಡುವ ಸ್ಥಳಕ್ಕಿಂತ ಸ್ವಲ್ಪ ದೂರದ ಸ್ಥಳಕ್ಕೆ ಬರುವಂತೆ ಹೇಳುತ್ತಾರೆ.   ಬಳಿಕ ಅಲ್ಲಿಂದ ಮಹಿಳೆಯನ್ನು ಮಾತ್ರ ಕರೆದೊಯ್ದು ಮತ್ತೆ ಅದೇ ಸ್ಥಳಕ್ಕೆ ಕರೆದುಕೊಂಡು ಬಿಟ್ಟು ಹೋಗುತ್ತಾರೆ. ಹೀಗೆ ತಾವು ದಂಧೆ ನಡೆಸುವ ಸ್ಥಳವನ್ನು ತುಂಬಾ ಗೌಪ್ಯವಾಗಿಡುತ್ತಾರೆ.

ಭ್ರೂಣಪತ್ತೆ ಮಾಡಲು ಮತ್ತು ಭ್ರೂಣವನ್ನು ತೆಗೆಸುವ ಉದ್ದೇಶದಿಂದ ಹೋಗುವವರು ಹಣ ಕೊಟ್ಟು ತಮ್ಮ ಕೆಲಸ ಮುಗಿಯಿತಲ್ಲ ಎಂದು ತಮ್ಮ ಮನೆ ಸೇರಿಕೊಳ್ಳುತ್ತಾರೆ. ಇನ್ನು ಈ ದಂಧೆಗೆ ಗ್ರಾಹಕರನ್ನು ಹುಡುಕಲೆಂದೇ ಕೆಲವು ದಲ್ಲಾಳಿಗಳಿದ್ದು ಅವರು ಗ್ರಾಹಕರನ್ನು ನಿಗದಿತ ಸ್ಥಳಕ್ಕೆ ಕರೆತರುತ್ತಾರೆ. ದುಡ್ಡು ಪೀಕಿಸಿಕೊಂಡು ಅವರು ನಿಜವಾಗಿಯೂ ತಪಾಸಣೆಗೆ ಬಂದಿದ್ದಾರಾ? ಅಥವಾ ತಪಾಸಣೆ ವೇಷದಲ್ಲಿ ಪೊಲೀಸರೋ, ಆರೋಗ್ಯಾಧಿಕಾರಿಗಳೋ ಬಂದಿದ್ದಾರೋ ಎಂಬುದನ್ನು ಮನದಟ್ಟು ಮಾಡಿಕೊಂಡು ಮುಂದಿನ ಹೆಜ್ಜೆಯಿಡುತ್ತಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಬಳಿಕವೇ ದಂಧೆಕೋರರು ಮುಂದಿನ ಕೆಲಸ ಮಾಡುತ್ತಾರೆ.

ನ್ಯಾಯವನ್ನು ಮೀರಿದ ಯಾವುದೇ ಕೆಲಸ ಮಾಡಿದರೂ ಅದಕ್ಕೆ ಒಂದಲ್ಲ ಒಂದು ದಿನ ಕಂದಾಯ ಕಟ್ಟಲೇ ಬೇಕಾಗುತ್ತದೆ ಎಂಬುದಕ್ಕೆ ಇದೀಗ ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಪ್ರಕರಣ ಸಾಕ್ಷಿಯಾಗಿದೆ. ಸದ್ಯ ಕೆ.ಆರ್.ಪೇಟೆಯ ಡಯಾಗ್ನಸ್ಟಿಕ್ ಸೆಂಟರ್ನಲ್ಲಿ ಅಕ್ರಮ ಭ್ರೂಣ ಲಿಂಗ ಪತ್ತೆ ಆರೋಪದ ಮೇಲೆ ಮೂವರು ಖಾಸಗಿ ವೈದ್ಯರನ್ನು ಬಂಧಿಸಲಾಗಿದ್ದು ಅವರು ಬೇರಾರು ಅಲ್ಲ ಕೆ.ಆರ್.ಪೇಟೆ ಪಟ್ಟಣದ ಚೇತನಾ ನರ್ಸಿಂಗ್ ಹೋಮ್ನ ವೈದ್ಯೆ ಡಾ.ದಿವ್ಯಾ, ನಾವಿ ಡಯಾಗ್ನಸ್ಟಿಕ್ ಸೆಂಟರ್ನ ವೈದ್ಯ ಡಾ‌.ಹರ್ಷಿತ್ ಹಾಗೂ ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್ನ ಡಾ.ಪರೀಶ್  ಆಗಿದ್ದಾರೆ.

ಇವರ ಮೇಲೆ ಸುಮಾರು 31 ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿರುವ ಆರೋಪವಿದೆ. ಹೀಗಾಗಿ ಇವರ ಬಗ್ಗೆ ದೂರುಗಳು ಬಂದ ತಕ್ಷಣವೇ ಪೊಲೀಸರು ದಾಳಿ ನಡೆಸಿ  ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ದಂಧೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ಎಂಬುವರ ಪಾತ್ರವಿದೆ ಎಂದು ಹೇಳಲಾಗುತ್ತಿದ್ದು, ಅವರು ತಲೆಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು ಪಟ್ಟಣ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಒಟ್ಟು 17 ಆರೋಪಿಗಳ ವಿರುದ್ಧ 12 ಪ್ರತ್ಯೇಕ ಎಫ್‌ಐಆರ್‌ ಗಳನ್ನು  ದಾಖಲು ಮಾಡಿದ್ದು, ಇದರಲ್ಲಿ ಸರ್ಕಾರಿ ವೈದ್ಯೆ, ಮೂವರು ಖಾಸಗಿ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ ಹಾಗೂ ಖಾಸಗಿ ವ್ಯಕ್ತಿಗಳು ಸೇರಿದ್ದಾರೆ ಎನ್ನಲಾಗಿದೆ.  ಮಂಡ್ಯದಲ್ಲಿ ಇಂತಹದೊಂದು ದಂಧೆ ನಡೆಯುತ್ತಿದೆ ಎನ್ನುವುದು ಜಗಜ್ಜಹೀರಾಗಿದೆ.  ಹೀಗಾಗಿ ದೂರು ಬಂದ ಹಿನ್ನಲೆಯಲ್ಲಿ ಪಟ್ಟಣದ ಎರಡು ಡಯಾಗ್ನಸ್ಟಿಕ್ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿರುವುದನ್ನು ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ಪತ್ತೆ ಮಾಡಿದ್ದರು.

ನಾವಿ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ 2024ನೇ ಸಾಲಿನಲ್ಲಿ 19 ಮತ್ತು 2025ನೇ ಸಾಲಿನಲ್ಲಿ 5 ಸೇರಿದಂತೆ ಒಟ್ಟು 24 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲಾಗಿದ್ದರೆ, ಕುಶಾಲ್ ಡಯಾಗ್ನಾಸ್ಟಿಕ್‌ ಸೆಂಟರ್‌ನಲ್ಲೂ 7 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿರುವ ಆರೋಪವಿದೆ. ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಉಪ ಲೋಕಾಯುಕ್ತರು ತನಿಖೆಗೆ ಆದೇಶಿಸಿದ್ದರು. ಉಪ ಲೋಕಾಯುಕ್ತ ಬಿ.ವೀರಪ್ಪರ ಆದೇಶದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಕೃತ್ಯ ಬಯಲಾಗಿತ್ತು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಮೂವರು ವೈದ್ಯರನ್ನು ಇದೀಗ ಬಂಧಿಸಲಾಗಿದ್ದು ಅವರ  ವಿರುದ್ಧ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕಲಂ 65(1), 64(2)(ಎಂ), 376(2)(ಎನ್) ಭಾರತೀಯ ನ್ಯಾಯ ಸಂಹಿತೆ-2023 ಮತ್ತು 6 ಮತ್ತು 21 ಪೋಕ್ಸೋ ಕಾಯ್ದೆ 2017ರಡಿ ಒಟ್ಟು 12 ಮೊಕದ್ದಮೆ ದಾಖಲು ಮಾಡಲಾಗಿದೆ.

ವೈದ್ಯರನ್ನು ಅರೆಸ್ಟ್ ಮಾಡಿರುವ ವಿಚಾರ ಇದೀಗ ಮಂಡ್ಯ ಮಾತ್ರವಲ್ಲದೆ ರಾಜ್ಯದಲ್ಲಿ ಸುದ್ದಿಯಾಗಿದ್ದು, ಅನೈತಿಕ ಮಾರ್ಗದಲ್ಲಿ ಹಣ ಸಂಪಾದಿಸುವುದು ಬೇಕಿತ್ತಾ ಎಂದು ಜನ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಜನವಲಯದಲ್ಲಿ ಆಕ್ರೋಶಗಳು ಕೇಳಿ ಬರುತ್ತಿವೆ. 2024ರಲ್ಲಿ ಪಾಂಡವಪುರದ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್ ಯಂತ್ರವನ್ನಿಟ್ಟುಕೊಂಡು ನೂರಾರು ಸಂಖ್ಯೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡಿದ ಪ್ರಕರಣ ನಡೆದಿತ್ತು. 2025 ರಲ್ಲಿ ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಕ್ವಾಟ್ರಸ್ ನಲ್ಲಿಯೇ ಹೆಣ್ಣು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುವ ಪ್ರಕರಣ ನಡೆದಿತ್ತು. ಶಿವಳ್ಳಿಯ ಹಾಡ್ಯದಲ್ಲೂ ಇಂತಹ ಹೀನ ಕೃತ್ಯ ನಡೆದಿತ್ತು.

ಈ ಪ್ರಕರಣಗಳು ಜನರ ನೆನಪಿನಿಂದ ಮಾಸುವ ಮೊದಲೇ ಈಗ ಕೆ.ಆರ್ ಪೇಟೆಯ ಚೇತನ ಮೆಟರ್ನಿಟಿ ಸೆಂಟರ್ ನ ಡಾ. ದಿವ್ಯ ಚೇತನ, ನಾವಿ ಡಯಾಗ್ನೋಸ್ಟಿಕ್ ಸೆಂಟರ್ ಡಾ.ಹರ್ಷಿತ್, ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ ನ ಡಾ‌. ಹರೀಶ್ ಹಾಗೂ ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಪ್ರಿಯಾಂಕ ಎಂಬವರು ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣದಲ್ಲಿ ಆರೋಪಿಗಳಾಗಿರುವುದು ವೈದ್ಯಕೀಯ ಲೋಕಕ್ಕೆ ಕಳಂಕ ತರುವ ವಿಷಯವಾಗಿದೆ ಎನ್ನುವುದಂತು ಸತ್ಯ. ಸದ್ಯ ಮಂಡ್ಯ ಜಿಲ್ಲೆಯಾದ್ಯಂತ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತಾ? ಕಾದು ನೋಡಬೇಕು.

 

-ಬಿ.ಎಂ.ಲವಕುಮಾರ್

admin
the authoradmin

Leave a Reply

Translate to any language you want