ಹುಣಸೂರು(ಹಿರಿಕ್ಯಾತನಹಳ್ಳಿಸ್ವಾಮಿಗೌಡ): ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಬದ್ಧತೆಯಿಂದ ಬಳಸಿಕೊಂಡಾಗ ಮಾತ್ರ ಉಳಿಯಲು ಸಾಧ್ಯ ಎಂದು ನಗರದ ಡಿ.ದೇವರಾಜ ಅರಸು ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಸಂತಕುಮಾರ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ರೋಟರಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಎನ್ನುವುದು ಭಾಷೆಯ ಹೆಸರಲ್ಲ, ನಾಡಿನ ಹೆಸರು. ನಾಡು ಉಳಿದರೆ ನಾವು ಎಂಬುದನ್ನು ಅರಿತುಕೊಳ್ಳಬೇಕು. ಕನ್ನಡಕ್ಕೆ ಕನ್ನಡಿಗರೇ ಶತ್ರುಗಳಾಗಿದ್ದಾರೆ. ಹೀಗಾಗಿ ನಮ್ಮ ಅಲೋಚನಾ ಕ್ರಮಗಳು ಬದಲಾಗಬೇಕಿದೆ. ಕನ್ನಡತನ ಎನ್ನುವುದು ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕ ಜಗತ್ತಿನ ಎಲ್ಲ ಜ್ಞಾನಗಳೂ ಕನ್ನಡ ಭಾಷೆಯ ಮೂಲಕ ಕನ್ನಡಿಗನನ್ನು ತಲುಪಿದಲ್ಲಿ ಕನ್ನಡ ಭಾಷೆ ಮತ್ತು ನೆಲ ಉಳಿಯಲು ಸಾಧ್ಯ.
ಕನ್ನಡ ಎನ್ನುವುದು ಕೇವಲ ಭೂಮಿ, ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಪರಂಪರೆ ಎಂಬುದನ್ನು ಅರಿತುಕೊಳ್ಳಬೇಕು. ತಾಯಿಯ ಎದೆ ಹಾಲು ಮಕ್ಕಳಿಗೆ ಪ್ರೀತಿ ಸಿಗುವಂತೆ ಕನ್ನಡ ಭಾಷೆಯೂ ಅಷ್ಟೆ, ಕೀಳರಿಮೆ ಬೇಡ, ಅನ್ಯ ಭಾಷೆಯೂ ಅನಿವಾರೈತೆಯಾಗಿಸಿಕೊಳ್ಳಬೇಕು. ನಮ್ಮ ಕನ್ನಡಮ್ಮನೆ ನಮ್ಮ ಆದ್ಯತೆಯಾಗಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹರವೆ ಮಹದೇವ್ ಮಾತನಾಡಿ, ಕಳೆದ 4 ವರ್ಷಗಳಲ್ಲಿ ತಾಲೂಕಿನಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 150ಕ್ಕೂ ಹೆಚ್ಚು ಮಂದಿಗೆ ಗೌರವ ಸಮರ್ಪಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕಾರ್ಯದರ್ಶಿ ಶಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್..ಕಾಳನಾಯಕ, ಎಸಿಡಿಪಿಒ ಸೋಮಣ್ಣ, ಪೌರಾಯುಕ್ತ ಎಂ.ಮಾನಸ, ಎಲ್‌ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಕೆ.ಎಚ್. ವೀರಭದ್ರಪ್ಪ, ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಮಾತನಾಡಿದರು.
ತಾಲೂಕು ಪಂಚಾಯಿತಿ ಇಒ ಕೆ. ಹೊಂಗಯ್ಯ, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಸ್.ಜಯರಾಂ, ಕಸಾಪ ಕಾರ್ಯದರ್ಶಿ ಟಿ. ಲೋಕೇಶ್, ಉಪಾಧ್ಯಕ್ಷ ಸಿ.ಎಸ್. ಮಹೇಶ್, ಕೆ. ನಂಜುಂಡಸ್ವಾಮಿ, ಲಕ್ಷ್ಮಿಕಾಂತ್, ವಿಜಯ, ಗಂಗಾಧರ್, ಕುಮಾರ್ ಇತರರು ಇದ್ದರು. ಇದೇ ವೇಳೆ 15 ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು








