ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಹಣಕ್ಕಾಗಿ ಪರಿಚಿತ ವೃದ್ದೆಯೊಬ್ಬರನ್ನು ವ್ಯಕ್ತಿಯೊಬ್ಬ ಕೊಲೆಮಾಡಿ ನಂತರ ಟಾಯ್ಲೆಟ್ ಫಿಟ್ ಗೆ ಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನ ನಡೆಸಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದ್ದು, ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
ತಿಪ್ಪೂರು ಗ್ರಾಮದ ದಿವಂಗರ ಮೂಡಲಶೆಟ್ಟಿ ಎಂಬುವರ ಪತ್ನಿ ಗೌರಮ್ಮ(80) ಕೊಲೆಯಾದ ದುರ್ದೈವಿ ವೃದ್ಧೆ. ಅದೇ ಗ್ರಾಮದ ವೀರಭದ್ರೇಗೌಡ ಅಲಿಯಾಸ್ ವಿಷ್ಣು ಎಂಬಾತನೇ ಕೊಲೆ ಮಾಡಿದ ಹಂತಕ. ತಿಪ್ಪೂರು ಗ್ರಾಮದ ಕೊಪ್ಪಲುಬೀದಿಯಲ್ಲಿರುವ ಗೌರಮ್ಮ ಮತ್ತು ವೀರಭದ್ರೇಗೌಡನ ಮನೆ ಅಕ್ಕಪಕ್ಕದಲ್ಲಿದ್ದು ವೃದ್ದೆ ಗೌರಮ್ಮ ಆಸ್ತಿವಿಚಾರದಲ್ಲಿ ತಮ್ಮ ಮಕ್ಕಳಿಂದ ದೂರವಿದ್ದು ವೀರಭದ್ರನ ಮೇಲೆ ನಂಬಿಕೆಯಿಟ್ಟಿದ್ದರು. ತನ್ನ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದ ಅವರು ಆತನಿಂದ ಕೆಲವೊಂದು ಸಹಾಯ ಪಡೆಯುತ್ತಿದ್ದರು. . ಬ್ಯಾಂಕ್‌ನಿಂದ ಹಣತರಲು, ಹಣಕಟ್ಟಲು ಈತ ಸಹಾಯ ಮಾಡುವ ಮೂಲಕ ನಂಬಿಕೆಗಳಿಸಿದ್ದನು. ಹಲವಾರು ಬಾರಿ ಹಣದ ಸಹಾಯಮಾಡಿದ್ದ ಎನ್ನಲಾಗಿದೆ.
ಇದೇ ರೀತಿ ವಿಶ್ವಾಸದಿಂದ ಇದ್ದ ವೀರಭದ್ರೇಗೌಡ ಕಳೆದ 11 ದಿನಗಳ ಹಿಂದೆ ಗೌರಮ್ಮನಿಂದ ಸುಮಾರು 70ಸಾವಿರ ನಗದು ಮತ್ತು ಚಿನ್ನಾಭರಣವನ್ನು ಕಿತ್ತುಕೊಂಡು ನಂತರ ಆಕೆಯನ್ನು ಕೊಲೆ ಮಾಡಿ ತನ್ನ ಮನೆಯ ಹಿಂದೆ ಇರುವ ಶೌಚಾಲಯದ ಗುಂಡಿಯಲ್ಲಿ ಹಾಕಿ ಗುಂಡಿಯನ್ನು ಮುಚ್ಚಿ ತನಗೇನು ತಿಳಿಯದಂತೆ ಇದ್ದನು.
ಗೌರಮ್ಮ ಗ್ರಾಮದಲ್ಲಿ ಕಾಣದಿದ್ದಾಗ ಇವರಪುತ್ರ ಸದಾನಂದ ಎಂಬುವರು ತನ್ನತಾಯಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಗೌರಮ್ಮನವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಪಕ್ಕದ ಮನೆಯಲ್ಲಿದ್ದ ಹಂತಕ ವೀರಭದ್ರೇಗೌಡ ತನಗೇನು ತಿಳಿಯದು ಎಂಬಂತೆ ಮಲೆಮಹದೇಶ್ವರ ಬೆಟ್ಟಕ್ಕೆ ಯಾತ್ರೆಗೆ ತೆರಳಿ ನಂತರ ಮನೆಯಲ್ಲಿ ಉಳಿದಿದ್ದ ಎನ್ನಲಾಗಿದೆ. ತನ್ನ ತಾಯಿಯ ಹುಡುಕಾಟದಲ್ಲಿದ್ದವರಿಗೆ ವೀರಭದ್ರೇಗೌಡನ ಮನೆಗೆ ಹೋಗಿ ಕೇಳಿದರೆ ಆತನಿಗೆ ಎಲ್ಲಿಗಾದರೂ ಹೋಗಿರುವ ಬಗ್ಗೆ ಗೊತ್ತಿರಬಹುದೇನೋ ಎಂದು ತಿಳಿದು ಕೊಳ್ಳುವ ಸಲುವಾಗಿ ಆತನ ಮನೆಗೆ ತೆರಳಿದ್ದರು.
ಆತನ ಮನೆಗೆ ತೆರಳಿದವರಿಗೆ ಮನೆಯ ಹಿಂದಿನಿಂದ ಏನೋ ದುರ್ವಾಸನೆ ಬಂದಿದೆ. ಹೀಗಾಗಿ ಅದು ಏನು ಎಂದು ನೋಡಲು ಹಿತ್ತಲಿಗೆ ಹೋಗಿದ್ದಾರೆ. ಆಗ ಟಾಯ್ಲೆಟ್ ಫಿಟ್‌ನಲ್ಲಿ ಗೌರಮ್ಮನನ್ನು ಹೂತು ನಂತರ ಮರಳನ್ನು ಹಾಕಿ ಮುಚ್ಚಿಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆಯು ಇಡೀ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದ್ದು ಜನತೆಯಲ್ಲಿ ಭೀತಿಯನ್ನುಂಟು ಮಾಡಿದೆ. ಘಟನೆಗೆ ಸಂಬಂಧಪಟ್ಟಂತೆ ಹಂತಕ ವೀರಭದ್ರೇಗೌಡನನ್ನು ವಶಕ್ಕೆ ಪಡೆದಿರುವ ಕೆ.ಆರ್.ನಗರ ಪೋಲೀಸರು ಗುಂಡಿಯಿಂದ ಮೃತದೇಹವನ್ನು ಹೊರತೆಗೆದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಗೌರಮ್ಮನವರ ಪುತ್ರ ಸದಾನಂದ ನೀಡಿದ ದೂರಿನಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.








