ArticlesLatestLife style

ಕೊಡಗಿನಲ್ಲಿ ಮಾದಕ ಜಾಲ… ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸೋಣ

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-29

ಕೊಡಗಿಗೆ ಗಾಂಜಾ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ… ಹಿಂದೆ ಜಿಲ್ಲೆಯನ್ನು ಕೆಲವರು ಗಾಂಜಾ ಬೆಳೆಯಲು ಬಳಸಿಕೊಳ್ಳುತ್ತಿದ್ದರು. ಈಗ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.. ಜಿಲ್ಲೆಯ ಜನ ಎಚ್ಚೆತ್ತುಕೊಳ್ಳದಿದ್ದರೆ ಗಂಡಾಂತರ ತಪ್ಪಿದಲ್ಲ.. ಮಾದಕ ವಿಷಜಾಲದಿಂದ ಯುವಜನತೆಯನ್ನು ರಕ್ಷಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಈ ಕುರಿತಂತೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೊಡಗಿನ ಹಸಿರಿನಲ್ಲಿ ಈಗ ವಿಷದ ನೆರಳು ಆವರಿಸುತ್ತಿದೆ. ಕೊಡಗಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಪೊನ್ನಂಪೇಟೆ ಸಮೀಪ ಸುಮಾರು 6 ಕೆಜಿಗಳಷ್ಟು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದು ಈ ಜಾಲದ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂಬುದಕ್ಕೆ ಸಾಕ್ಷಿ.

ಈ ದಂಧೆಯ ಮುಖ್ಯ ಟಾರ್ಗೆಟ್ ಯಾರು ಗೊತ್ತಾ? ನಮ್ಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು 17 ರಿಂದ 25ರ ಆಸುಪಾಸಿನ ಯುವಕ-ಯುವತಿಯರು. ಸಮೀಕ್ಷೆಯೂ ಇದನ್ನೇ ಹೇಳುತ್ತಿದೆ. ಕಾಫಿ ತೋಟ, ಬಸ್ ನಿಲ್ದಾಣ, ಪಾರ್ಕ್, ಹಾಸ್ಟೆಲ್, ಕಾಲೇಜು ಸುತ್ತಮುತ್ತ ಈ ಜಾಲ ಬೇರು ಬಿಟ್ಟಿದೆ. ತನಿಖೆಯಲ್ಲಿ ಹೊರ ರಾಜ್ಯದವರ ಕೈವಾಡವೂ ಬಯಲಾಗುತ್ತಿದೆ. ಅವರು ಸ್ಥಳೀಯ ಯುವಕರನ್ನು ಗೊತ್ತಿಲ್ಲದಂತೆ ಈ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ.

ಆತಂಕದ ವಿಷಯ ಏನೆಂದರೆ, ಪೋಷಕರ ಗಮನಕ್ಕೂ ಬರದೆ, ಶಿಕ್ಷಕರ ಗಮನಕ್ಕೂ ಬರದೆ ಇನ್ನೆಷ್ಟು ಅವಾಂತರಗಳು ನಡೆಯುತ್ತಿರಬಹುದು? ಒಬ್ಬ ಯುವಕ ಮಾದಕಕ್ಕೆ ಬಲಿಯಾದರೆ ಒಂದು ಕುಟುಂಬವೇ ಹಾಳಾಗುತ್ತದೆ. ಸರಿಯಾದ ಸಮಯಕ್ಕೆ ಮದುವೆಯಾಗದೆ, ಉದ್ಯೋಗವಿಲ್ಲದೆ, ಜೀವನವೇ ನರಕವಾಗುವ ಸಂಭವಿದೆ. ಇಡೀ ಕೊಡಗಿನ ಭವಿಷ್ಯವೇ ಪ್ರಶ್ನಾರ್ಥಕವಾಗುತ್ತದೆ.

ಇದನ್ನು ತಡೆಗಟ್ಟಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಕೇವಲ ಕೇಸ್ ದಾಖಲಿಸದೆ, ಈ ಜಾಲವನ್ನು ಬೇರು ಸಮೇತ ಕಿತ್ತು ಹಾಕುವ ಕಾರ್ಯಾಚರಣೆ ಆಗಬೇಕು. ಪೆಡ್ಲರ್‌ಗಳಿಗೆ ಕಠಿಣ ಶಿಕ್ಷೆ ಆಗಬೇಕು. ಆದರೆ ಕಾನೂನಿನಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಸಮಾಜವೂ ಜಾಗೃತವಾಗಬೇಕು. ಹಿಂದಿನ ಕಾಲದಲ್ಲಿ ಬೀದಿ ನಾಟಕ, ಜಾಥಾ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರು.

ಇಂದಿಗೂ ಅಂತಹ ಜನಸ್ನೇಹಿ ಕಾರ್ಯಕ್ರಮಗಳು ಬೇಕಾಗಿವೆ. ಶಾಲೆ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ತರಗತಿ, ಪೋಷಕರ ಸಭೆ, ಯುವಜನರಿಗೆ ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅವರನ್ನು ಸಕಾರಾತ್ಮಕ ದಾರಿಗೆ ತರಬೇಕು.

ಜನರೇ, ಇದೇ ನಮ್ಮ ಕರ್ತವ್ಯ… ಪೋಷಕರೇ, ನಿಮ್ಮ ಮಕ್ಕಳು ಯಾರ ಜೊತೆ ಸ್ನೇಹ ಮಾಡುತ್ತಿದ್ದಾರೆ, ರಾತ್ರಿ ಎಲ್ಲಿ ಹೋಗುತ್ತಿದ್ದಾರೆ ಅಂತ ಗಮನವಿರಲಿ. ಶಿಕ್ಷಕರೇ, ಶಾಲೆಯ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ತಕ್ಷಣ ಮಾಹಿತಿ ನೀಡಿ.  ಡ್ರಗ್ಸ್ ಮಾರಾಟ ಮಾಡುವವರನ್ನು ನಿಖರವಾಗಿ ಗೊತ್ತಾದ ಕೂಡಲೇ ತಕ್ಷಣವೇ 100 ಅಥವಾ 112ಕ್ಕೆ ಪೊಲೀಸರಿಗೆ ಕರೆ ಮಾಡಿ ತಿಳಿಸಿ. ಇಲ್ಲವೇ ಸಾಮಾಜಿಕ ಜಾಲತಾಣದಲ್ಲಿ ಅವರ ವಿವರಗಳನ್ನು ಹಾಕಿ ಜನರನ್ನು ಎಚ್ಚರಿಸಿ. ಮಾಹಿತಿ ನೀಡಿದವರ ವಿವರಗಳನ್ನು ಸಂಬಂಧಪಟ್ಟ ಇಲಾಖೆಗಳು ಕಡ್ಡಾಯವಾಗಿ ಗೌಪ್ಯವಾಗಿಡಬೇಕು.

ಯುವಕರೇ, ಒಂದು ಕ್ಷಣದ ಮಜಾಕ್ಕಾಗಿ ನಿಮ್ಮ ಇಡೀ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. “ಇಲ್ಲ” ಎಂದು ಹೇಳುವ ಧೈರ್ಯ ತೋರಿಸಿ.ಪರಿಸರದ ಜೊತೆಗೆ ಮನುಷ್ಯನ ಬದುಕೂ ಮುಖ್ಯ. ಕೊಡಗು ಪ್ರಕೃತಿ ಮಾತ್ರವಲ್ಲ, ಮನುಷ್ಯರಿಂದಲೂ ಸುಂದರವಾಗಿದೆ. ಆ ಸೌಂದರ್ಯವನ್ನು ಉಳಿಸೋಣ.

ನನ್ನ ಒಕ್ಕೊರಲಿನ ಬೇಡಿಕೆ: ಕೊಡಗು ಜಿಲ್ಲೆಯನ್ನು “ಮಾದಕ ಮುಕ್ತ ಜಿಲ್ಲೆ” ಎಂದು ಘೋಷಿಸಬೇಕು. ಇದು ಸರ್ಕಾರದ ಕೆಲಸ ಮಾತ್ರವಲ್ಲ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಮಾಡುವ ಜನಜಾಗೃತಿ ಅಭಿಯಾನವಾಗಬೇಕು.

ಕೊಡಗಿನ ‘ನಾಳೆ’ ನಮ್ಮ ಕೈಯಲ್ಲಿದೆ…. ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ…

admin
the authoradmin

Leave a Reply