ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ನಟ, ನಿರ್ಮಾಪಕ ದಿಲೀಪ್ ರಾಜ್ (47) ಹೃದಯಾಘಾತದಿಂದ ಬುಧವಾರ ಮುಂಜಾನೆ ಉತ್ತರಹಳ್ಳಿಯ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗದೆ ನಿಧನರಾಗಿದ್ದು ಅಂತ್ಯಕ್ರಿಯೆಯನ್ನು ಸಂಜೆ ರಾಮನಗರ ತಾಲೂಕಿನ ಗುನ್ನೂರು ಬಳಿಯ ಫಾರ್ಮ್ ಹೌಸ್‌ನಲ್ಲಿ ನೆರವೇರಿಸಲಾಗಿದೆ.
ಅವರು ಬುಧವಾರ ಮುಂಜಾನೆ ಮನೆಯಲ್ಲಿ ಅವರು ಕುಸಿದು ಬಿದ್ದಿದ್ದರು ಕೂಡಲೇ ಅವರನ್ನು ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ, ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ದಿಲೀಪ್ ರಾಜ್ ಅವರ ನಿಧನಕ್ಕೆ ಚಂದನವನ ಹಾಗೂ ಕಿರುತೆರೆಯ ಕಲಾವಿದರು, ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ. ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಉತ್ತರಹಳ್ಳಿಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು ಆ ನಂತರ ಸಂಜೆ ಲಿಂಗಾಯತ ಸಂಪ್ರದಾಯದಂತೆ ರಾಮನಗರ ತಾಲೂಕಿನ ಗುನ್ನೂರು ಬಳಿಯ ಫಾರ್ಮ್ ಹೌಸ್‌ನಲ್ಲಿ ನೆರವೇರಿತು.
1978ರ ಸೆಪ್ಟೆಂಬರ್ 2ರಂದು ಜನಿಸಿದ್ದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಲ್ಲೇ ನೃತ್ಯ ನಿರ್ದೇಶನದತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ನಂತರ ನಾಟಕ ಮಂಡಳಿಗೆ ಸೇರಿ, ಕಂಬದ ಮನೆ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದರು. ಜನನಿ, ರಂಗೋಲಿ, ಅರ್ಧಸತ್ಯ, ಕುಂಕುಮ ಭಾಗ್ಯ, ಮಾಂಗಲ್ಯ, ಪ್ರೀತಿಗಾಗಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.
ಕೆಲವು ವರ್ಷಗಳ ಕಾಲ ಕಿರುತೆರೆಯಿಂದ ದೂರ ಉಳಿದಿದ್ದ ದಿಲೀಪ್ ರಾಜ್, ರಥಸಪ್ತಮಿ ಧಾರಾವಾಹಿ ಮೂಲಕ ಮರುಪ್ರವೇಶ ಮಾಡಿದರು. ಬಳಿಕ ತಾವೇ ನಿರ್ಮಿಸಿ ನಟಿಸಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಎಜೆ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಸದ್ಯ ಕೃಷ್ಣರುಕ್ಕು ಧಾರಾವಾಹಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಪಾರು ಹಾಗೂ ವಿದ್ಯಾ ವಿನಾಯಕ ಧಾರಾವಾಹಿಗಳಿಗೂ ಬಂಡವಾಳ ಹೂಡಿದ್ದರು.
2005ರಲ್ಲಿ ಬಿಡುಗಡೆಯಾದ ಗೆಳೆಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ದಿಲೀಪ್ ರಾಜ್, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮಿಲನ ಸಿನಿಮಾದ ಖಳನಾಯಕನ ಪಾತ್ರದ ಮೂಲಕ ಹೆಚ್ಚಿನ ಗುರುತಿಸಿಕೊಂಡರು. ಬಾಯ್ ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಅವರು, ಲವ್‌ಗುರು, ಗಾನಾಬಜಾನಾ, ಸುಗ್ರೀವ, ಅಂಬಿ ನಿಂಗ್ ವಯಸ್ಸಾಯ್ತೋ ಸೇರಿದಂತೆ 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ಲವ್ ಮಾಕ್ಟೇಲ್ 3 ಸಿನಿಮಾದಲ್ಲೂ ನಟಿಸಿದ್ದರು.








