LatestMysore

ಹುಣಸೂರಿನ ಹೈಟೆಕ್ ಆಸ್ಪತ್ರೆ ಶೀಘ್ರದಲ್ಲಿಯೇ ಸಾರ್ವಜನಿಕ ಸೇವೆಗೆ ಸಮರ್ಪಣೆ:ದಿನೇಶ್ ಗುಂಡೂರಾವ್

 ಹುಣಸೂರು: ನೂರು ಹಾಸಿಗೆಗಳ ಹೈಟೆಕ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಗುರುವಾರ ನಗರದ ಬಿ.ಎಂ. ಬೈಪಾಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ 31.5 ಕೋಟಿ ರೂ. ವೆಚ್ಚದ ನೂತನ ಆಸ್ಪತ್ರೆಯ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯ ಆಡಳಿತದಲ್ಲಿ ಅಂದಿನ ಶಾಸಕ ಎಚ್.ಪಿ. ಮಂಜುನಾಥ್ ಅವರ ವಿಶೇಷ ಕಾಳಜಿಯ ಮೇರೆಗೆ ಈಹೈಟೆಕ್ ಆಸ್ಪತ್ರೆಗೆ ಅನುದಾನ ನೀಡಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ನಂತರ ಬಂದ ಬಿಜೆಪಿ ಸರ್ಕಾರವು ಅನುದಾನ ಬಿಡುಗಡೆ ಮಾಡದೆ ಯೋಜನೆಯನ್ನು ನನೆಗುದಿಗೆ ತಳ್ಳಿತು. ಇದೀಗ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 9.5 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ವೇಗ ನೀಡಿದೆ. ಇನ್ನು 15 ದಿನಗಳಲ್ಲಿ ಕಟ್ಟಡದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಗತ್ಯವಿರುವ 1.50 ಕೋಟಿ ರೂ. ಅನುದಾನವನ್ನೂ ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು. ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಎಲ್ಲ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿನ ಬದಲಾವಣೆಗಳ ಕುರಿತು ಮಾಹಿತಿ ನೀಡಿದ ಸಚಿವರು, ಹಿಂದೆ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿತ್ತು. ನಾನು ಸಚಿವನಾದ ಮೇಲೆ ಪ್ರತಿ ತಾಲ್ಲೂಕಿನಲ್ಲೂ ತಜ್ಞ ವೈದ್ಯರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಈಗಾಗಲೇ ರಾಜ್ಯದ 141 ತಾಲ್ಲೂಕು ಆಸ್ಪತ್ರೆಗಳಲ್ಲಿ ನುರಿತ ತಜ್ಞರ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದರು.

ಟೆಲಿ-ರೇಡಿಯಾಲಜಿಯ ನೂತನ ಆವಿಷ್ಕಾರ : ರಾಜ್ಯದಲ್ಲಿ ರೇಡಿಯಾಲಜಿಸ್ಟ್ ಗಳ ಕೊರತೆ ಇರುವುದನ್ನು ಒಪ್ಪಿಕೊಂಡ ಸಚಿವರು, ಈ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ‘ಟೆಲಿ-ರೇಡಿಯಾಲಜಿ’ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ತಾಲೂಕು ಆಸ್ಪತ್ರೆಗಳಲ್ಲಿ ರೇಡಿಯಾಲಾಜಿಸ್ಟ್ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬೇಡಿಕೆ : ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಸಚಿವರಿಗೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಳೆಯ ಸಾರ್ವಜನಿಕ ಆಸ್ಪತ್ರೆಯನ್ನು ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯನ್ನಾಗಿ ಪರಿವರ್ತಿಸಬೇಕು ಎಂದು ಕೋರಿದರು. ಈ ಮೂಲಕ ತಾಲ್ಲೂಕಿನ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಪುಪ್ಪಾ ಅಮರ್‌ನಾಥ್, ತಹಶೀಲ್ದಾರ್ ಮಂಜುನಾಥ್, ನಗರ ಸಭಾಯುಕ್ತೆ ಮಾನಸ, ಹುಡಾ ಅದ್ಯಕ್ಷ ಅಮರ್ ನಾಥ್,  ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಾಘು ಕಲ್ಕುಣಿಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ರವಿಪ್ರಸನ್ನ, ಬಿಳಿಕೆರೆ ಬ್ಲಾಕ್ ಅಧ್ಯಕ್ಷ ಪ್ರೇಮ್ ಕುಮಾರ್,  ಕಾರ್ಯಧ್ಯಕ್ಷ ಗದ್ದಿಗೆ ದೇವರಾಜ್, ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ವಿ. ಮಹದೇವ್, ರಕ್ಷಾ ಸಮಿತಿ ಸದಸ್ಯರಾದ ನಿಲುವಾಗಿಲು ಪ್ರಭಾಕರ್, ನಾಗರಾಜು. ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಉದ್ಯಮಿ ಟಿ.ಕೃಷ್ಣ,  ಮುಖಂಡರಾದ ಜಯರಾಮ್, ಸುನೀತ ಜಯರಾಮೇಗೌಡ, ನಾಡಪ್ಪನಹಳ್ಳಿ ದೇವರಾಜ್,  ಸೇರಿದಂತೆ ಅನೇಕರು ಹಾಜರಿದ್ದರು ‌

admin
the authoradmin

Leave a Reply

Translate to any language you want