ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-6

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

26 ಕೃತಿ: ಮೊಸರಗಿಣ್ಣು

ಕರ್ತೃ: ಹರಿಚರಣ

ಇದೊಂದು ಮಕ್ಕಳ ಪುಸ್ತಕ. ಹರಿಚರಣ (ಬಹುಶಃ ಕಾವ್ಯನಾಮ ಇರಬಹುದೇನೋ?!) ಎಂಬ ಉದಯೋನ್ಮುಖ ಸಾಹಿತಿ ಇದನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪ್ರಾಕಾರಗಳಲ್ಲಿ ತುಸು ಕ್ಲಿಷ್ಟಕರ ಸಾಹಿತ್ಯವೆಂದರೆ ಮಕ್ಕಳ ಸಾಹಿತ್ಯ. ಮಕ್ಕಳು ಮತ್ತು ಮಕ್ಕಳ ಮನಸ್ಸನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಚಿಸುವ ಪದ್ಯ ಅಥವ ಗದ್ಯವು ಮಕ್ಕಳಿಗೆ ಅರ್ಥವಾಗುವಂತೆ ಹಾಗೂ ಇಷ್ಟವಾಗುವಂತೆ ಇರಬೇಕಾದ್ದು ಅಗತ್ಯ. ಈ ಬಗೆಯ ಪುಸ್ತಕಗಳು ಮಕ್ಕಳಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರಿಗೂ ಆಪ್ಯಾಯಮಾನ ಆಗುವಂತಿರಬೇಕು ಎಂಬ ಕಾತುರತೆ ಮತ್ತು ಕಾಳಜಿವುಳ್ಳ ಇಂತಹ ಲೇಖಕರು ಖಂಡಿತ ಯಶಸ್ವಿಯಾಗುತ್ತಾರೆ.

ಲೇಖಕರು ಯಾರೇ ಆಗಿರಲಿ ಮಕ್ಕಳ ಪುಸ್ತಕ ಬರೆಯುವಾಗ ಹೆಚ್ಚಿನ ಎಚ್ಚರ ವಹಿಸುವುದು ಅನಿವಾರ್ಯ. ರಚನೆಕಾರನು ಮಕ್ಕಳಲ್ಲಿ ಮಕ್ಕಳಾಗುವ ಪ್ರಾಮಾಣಿಕ ಯತ್ನದೆಡೆ ಸಾಗುವಲ್ಲಿ ಚಿಣ್ಣರ ಪಾತ್ರದೊಳಗೆ ಹೊಕ್ಕು ಎಳೆಯರಾಗಿ ಪರಕಾಯ ಪ್ರವೇಶ ಮಾಡುವಂಥ ಸಾಹಸ ಕಾರ್ಯ ಅವಶ್ಯ ಎನಿಸುತ್ತದೆ. ಏಕೆಂದರೆ ಈ ಕಾಲದಲ್ಲಿ ಮಕ್ಕಳ ಸಾಹಿತ್ಯ ಬರೆಯುವ ಸಕ್ಸಸ್ಫುಲ್ ಸಾಹಿತಿಗಳು ಬೆರಳೆಣಿಕೆಯಷ್ಟು ಮಾತ್ರ ಇರುವಾಗ ಹರಿಚರಣ ಅವರಂತಹ ಮಕ್ಕಳ ಸಾಹಿತಿಗಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸೋಣ.

ಅಂತರ್ರಾಷ್ಟ್ರೀಯ ಮಕ್ಕಳ ವರ್ಷ-೧೯೭೯: ಪ್ರಾರಂಭವಾದಾಗಿಂದ ಅನ್ಯಭಾಷೆಗಿಂತ ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯ ಪ್ರಕಟಣೆ ಸಂಖ್ಯೆಯಲ್ಲಿ ಮಾತ್ರವಲ್ಲದೆ ಸಮರ್ಥತೆ ಸಮಗ್ರತೆ ಹಾಗೂ ಗುಣಾತೀತ ಕ್ಷೇತ್ರದಲ್ಲೂ ಗಣನೀಯ ಬೆಳವಣಿಗೆ ಕಂಡಿದೆ. ಈ ಸಾಧನೆಯ ಶಿಖರವೇರಲು ಕನ್ನಡನಾಡಿನ ಓದುಗರ, ಪ್ರಕಾಶಕರ, ಗ್ರಂಥಾಲಯಗಳ ಹಾಗೂ ಮಾರಾಟಗಾರರ ಕೊಡುಗೆಯ ಜತೆಗೆ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಕೊಡುಗೆಯೂ ಅಪಾರ ಎಂಬುದನ್ನು ಎಲ್ಲರು ಒಪ್ಪಬಹುದು.

“ಮೊಸರಗಿಣ್ಣು” ಶೀರ್ಷಿಕೆಯುಳ್ಳ ಈಒಂದು ಕಿರುಪುಸ್ತಕವು ಹೆಸರಿಗೆ ತಕ್ಕಂತೆ ಸಿಹಿ-ಹುಳಿ ಎರಡರ ಮಿಶ್ರಣದಿಂದ ಕೂಡಿದೆ. ಭಾರತದಲ್ಲಿ ಕಾಮಧೇನು ಎಂದು ಪೂಜಿಸಲ್ಪಡುವ ಹಸುವಿನ ಹಾಲಿನಿಂದ ತಯಾರಿಸುವ ಶ್ರೇಷ್ಠ ಪೌಷ್ಟಿಕ ಆಹಾರ ಎನಿಸಿದ ಮೊಸರಗಿಣ್ಣಿನ ಬಗ್ಗೆ ಆಕರ್ಷಕ ಚಿತ್ರಗಳ ಸಮೇತ ಸುಂದರವಾಗಿ ಬರೆಯಲಾಗಿದೆ. ಮೊಸರು ಮತ್ತು ಹಾಲಿನಲ್ಲಿ ಇರುವ ಪ್ರಮುಖವಾದ ಪ್ರೋಟೀನು ಮತ್ತು ಪೌಷ್ಟಿಕಾಂಶಗಳ ಬಗ್ಗೆ ಸರಳ ಭಾಷೆಯಲ್ಲಿ ಮಾಹಿತಿ ನೀಡಿದ್ದಾರೆ. ಪ್ರಪಂಚದ ಹಲವಾರು ವಿದೇಶೀ ಗಿಣ್ಣುಗಳ ಬಗ್ಗೆ ಕಿರು ಪರಿಚಯವನ್ನು ಅಂಕಿ-ಅಂಶದೊಡನೆ ತಿಳಿಸಿಕೊಟ್ಟಿದ್ದಾರೆ.

ಕಡಿಮೆ ಬೆಲೆಗೆ ದೊರಕುವ ಈ ಮೊಸರಗಿಣ್ಣು ಪುಸ್ತಕವನ್ನು ಎಳೆಯ ಮಕ್ಕಳಿಗೆ ತಕ್ಕಂತೆ ರಚಿಸಲಾಗಿದೆ. ಅಮೃತಪಾನ ಎನಿಸಿದ ಹಾಲಿನ ಬಗ್ಗೆ ಮತ್ತು ಇದರ ಉಪ-ಉತ್ಪನ್ನಗಳ (ಬೈ-ಪ್ರಾಡಕ್ಟ್ಸ್) ಬಗ್ಗೆ ಸಾಧ್ಯವಾದಷ್ಟು ಉಪಯುಕ್ತ ಮಾಹಿತಿ ವಿವರಿಸಿದ್ದಾರೆ.

(ಮೈವಿವಿ, ಮಾನಸಗಂಗೋತ್ರಿ, ಮೈಸೂರು 1.11.1981″ಗ್ರಂಥಲೋಕ” ಮಾಸಿಕದಲ್ಲಿ ಪ್ರಕಟಿತ)

 

27.ಕೃತಿ : ಬಾರ್ಕೋಲು ಮಹಿಮೆ

ಕರ್ತೃ : ರಾಘವೇಂದ್ರ ಕುಷ್ಟಗಿ

ಹೈದ್ರಾಬಾದ್ ಕರ್ನಾಟಕದ ಜನಪ್ರಿಯ ಹಿರಿಯ ಸಾಹಿತಿ ಬರೆದ ಒಂದು ಸಾಮಾಜಿಕ ಕಿರು ನಾಟಕ. ಬಾರ್ಕೋಲು ಮಹಿಮೆ ಎಂಬ ಹೊತ್ತಗೆಯಲ್ಲಿ ಎರಡು ಬಿಡಿ ಬಿಡಿ ದೃಶ್ಯಗಳು ಸೇರಿದಂತೆ ಒಟ್ಟಾರೆ ಏಳು ದೃಶ್ಯಗಳು ಇರುತ್ತವೆ. ಇದಕ್ಕೆ ಹೊಂದಿಕೊಳ್ಳುವಂತೆ ಒಟ್ಟು ಹನ್ನೊಂದು ಪಾತ್ರಗಳು ಇವೆ. ಓದುಗರು ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಈ ನಾಟಕದಲ್ಲಿ ಸ್ತ್ರೀ ಅಥವಾ ಮಹಿಳಾ ಪಾತ್ರಗಳೇ ಇಲ್ಲದಿರುವುದು. ಇದನ್ನು ವಿಶೇಷವಾಗಿ ಈ ನಾಟಕವನ್ನು ಪ್ರಯೋಗ ಮಾಡುವವರು ಗಮನಿಸಲೇಬೇಕಾದ ವಿಷಯ.

ಲೇಖಕರು ಕೆಲವು ಜನಪದ ಪದ್ಯ ಅಥವ ಲಾವಣಿಗಳನ್ನೂ ಇದರಲ್ಲಿ ಸೇರಿಸಿರುವುದು ಮತ್ತೊಂದು ವೈಶಿಷ್ಟ್ಯ. ಕೃತಿಯ ಆದಿಯಲ್ಲೇ ಕುಷ್ಟಗಿಯವರು ‘ಬಾರ್ಕೋಲು ಮಹಿಮೆ’ ಎಂದರೆ ಏನೆಂಬುದನ್ನು “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ನಾಟಕಕಾರ ತಮ್ಮ ಸೀಮೆಯ ಗ್ರಾಮೀಣ ಭಾಷೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಹಳೇ ಮೈಸೂರು ರಾಜ್ಯ/ಪ್ರಾಂತ್ಯದ ಓದುಗರಿಗೆ ಅಥವಾ ನಾಟಕ ಪ್ರಯೋಗ ಮಾಡುವವರಿಗೆ ಬಾಯಿಪಾಠ ಮಾಡಿಕೊಳ್ಳಲು ತುಸು ಇರಿಸು ಮುರಿಸು ಜತೆಗೆ ಕಷ್ಟಸಾಧ್ಯ ಎನಿಸಬಹುದೆನ್ನುವ ಕನ್ನಡ ಭಾಷೆ ಬಳಸಿದ್ದಾರೆ. ಪುರಾತನ ಹಾಗು ಆಧುನಿಕ ವ್ಯವಸಾಯದ ಬಗ್ಗೆ ಹಾಗೂ ತತ್ಸಂಬಂಧ ವ್ಯವಹಾರಗಳ ಬಗ್ಗೆ ಕೊಂಚ ಅರಿವು ಮೂಡಿಸಿದ್ದಾರೆ.

ಇಂದಿನ ಹಾಗು ಮುಂದಿನ ರೈತಾಪಿ ಪೀಳಿಗೆಗಳಿಗೆ ಎರಡು ಪ್ರಮುಖ ಪಾತ್ರಗಳ ಮುಖೇನ ಹೇಳಿಸಿರುವ ಪಾಠ ಹೀಗಿದೆ: “ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ವಿದ್ಯಾವಂತರಿರಲಿ, ಅವಿದ್ಯಾವಂತರಿರಲಿ ಪ್ರತಿಯೊಬ್ಬ ರೈತನು ನಿಷ್ಠೆಯಿಂದ ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಕೃಷಿ ಕಾಯಕ ಮಾಡಿದ್ದೆ ಆದರೆ ತನ್ನ ವೈಯಕ್ತಿಕ ಬೆಳವಣಿಗೆಯ ಜತೆಗೆ ದೇಶದ ಪ್ರಗತಿಯನ್ನೂ ಸಾಧಿಸಲು ಸಾಧ್ಯವಾಗುತ್ತದೆ” ಬಾರ್ಕೋಲು ಮಹಿಮೆ ನಾಟಕವನ್ನು ಕೇವಲ ಓದುವುದರಿಂದ ಯೋಗಿಕವಾಗಿ ಏನನ್ನೂ  ಸಾಧಿಸಲು ಅಸಾಧ್ಯ. ಆದರೆ ಸಮಯೋಚಿತ-ಸಂದರ್ಭೋಚಿತ ಸ್ಥಳಗಳಲ್ಲಿ ನಾಟಕದ ಸತತ ಪ್ರಯೋಗ-ಪ್ರದರ್ಶನಗಳಿಂದ ಆಗಾಗ್ಗೆ ವಿಶೇಷದ್ದೇನಾದರು ಸಾಧಿಸಲು ಸಾಧ್ಯವಾಗಬಹುದು.

(ಮೈ.ವಿ.ವಿ. ಮಾನಸಗಂಗೋತ್ರಿ 1.11.1981-ಗ್ರಂಥಲೋಕ)

  1. ಕೃತಿ:ಮರಿದುಂಬಿ

ಕರ್ತೃ: ಎಂ.ಮಲ್ಲಿಕಾರ್ಜುನ ಯಮ್ಮಿಯವರ್

ಕನ್ನಡ ಕಾವ್ಯಲೋಕದಲ್ಲಿ ಹೊಸಬರಲ್ಲದ ಆದರೆ ಹಳಬರೂ ಅಲ್ಲದ ಕವಿಯೊಬ್ಬರು ‘ಮರಿದುಂಬಿ’ ಕವನ ಸಂಕಲನದಿಂದ ಪದ್ಯಪ್ರಾಂತ್ಯಕ್ಕೆ ಪಾದಾರ್ಪಣೆ ಮಾಡಿರುವುದು ಸ್ವಾಗತಾರ್ಹ. ಪ್ರಾಧ್ಯಾಪಕ ಹುದ್ದೆಯಲ್ಲಿರುವ ಪ್ರೊ:ಎಂ.ಎಂ.ಯಮ್ಮಿಯವರು ಒಟ್ಟು 27 ಕವನಗಳನ್ನು ಜೋಕೆತಪ್ಪದಂತೆ ಜೋಪಾನವಾಗಿ ಜೋಡಿಸಿ ಕೃತಿ ರಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಾಸ ಜೋಡಿಸುವ ಕಿಲಾಡಿಗಳೂ ಕವನ ಸಂಕಲನ ಬರೆವುದು ಅತಿಯಾಗಿದ್ದು ಇವುಗಳನ್ನು ಬೆಳಕಿಗೆ ತಂದು ಲೋಕಾರ್ಪಣೆ ಮಾಡುವ ವ್ಯಾವಹಾರಿಕ ದೃಷ್ಟಿಯುಳ್ಳ ಪ್ರಕಾಶಕರು ಇಷ್ಟೇ ಸಂಖ್ಯೆಯಲ್ಲಿ ಹುಟ್ಟಿಕೊಂಡಿರುವುದು ಸಹ  ಒಂದುರೀತಿ ಕವನ ಸಾಮ್ರಾಜ್ಯಕ್ಕೆ ಮಾರಕ ಅಲ್ಲವಾದರೂ ಕನ್ನಡ ಸಾರಸ್ವತ ಪ್ರಪಂಚಕ್ಕೆ ಪೂರಕ ಅಲ್ಲವೇನೋ ಎನಿಸಬಹುದು.

ಪ್ರಸ್ತುತ ಎಂ.ಮಲ್ಲಿಕಾರ್ಜುನ ಯಮ್ಮಿಯವರ್ ಬರೆದಿರುವ ಈ ಪುಸ್ತಕದಲ್ಲಿ ಹಲವಾರುಕಡೆ ವಾಸ್ತವಿಕತೆ, ಸ್ವತಂತ್ರವಿಚಾರ, ಮುಕ್ತಭಾವನೆ ಬೀಜಗಳು ಮೊಳಕೆ ಒಡೆದಿವೆಯಾದರೂ ಉತ್ತಮ ಕವನಕೃಷಿ ನಡೆಸಿಲ್ಲವಾದ್ದರಿಂದ ಗಟ್ಟಿ ಬೆಳೆಯ ಪೈರು ಚಿಗುರದೆ ದವಸದ ಇಳುವರಿ ಸಾಕಾಗಲಿಲ್ಲ. ಕೆಲವೆಡೆ ಇಂದಿನ ಸಮಾಜದ ಅಂಟು ರೋಗದಂತೆ ಇರುವ ವಿಚಿತ್ರ ಪರಿಸರ, ಹರಿದು ಮುಕ್ಕುವ ಕಡು ಬಡತನ ನಿರಾಶೆ ನಿಂದನೆ ಅನೀತಿ ಅಕ್ರಮ ಮುಂತಾದವು ಇಲ್ಲಿನ ಪದ್ಯಗಳಿಗೆ ಪ್ರೇರಣೆ ಆದಂತಿದೆ.

ಮಕ್ಕಳ ಪದ್ಯ ಚುಟುಕ ಧಾಟಿ ಹಾಗೂ ವಚನಗಳ ಸಂಗಮವೇ ಈ ಹೊತ್ತಗೆಯ ವೈಶಿಷ್ಟ್ಯ ಹೆಚ್ಚಿಸಿ ಅಲ್ಪಸ್ವಲ್ಪ ಸಾಹಿತ್ಯ ಪ್ರತಿಭೆ ಹೊರ ಹೊಮ್ಮುವಂತೆ ಮಾಡಿರುವುದು ಸಮಾಧಾನಕರ ಸಂಗತಿ. ಆದರೆ “ಅಕ್ಕರೆ, ನಕ್ಕರೆ, ಸಕ್ಕರೆ, ಸಿಕ್ಕರೆ” ಎಂಬುವ ನೂರಾರು ಸಾಲುಗಳನ್ನು ಓದುವಾಗ ಎಂಥವರಿಗೂ ಅನಿಸುತ್ತದೆ: ಇದು ಗದ್ಯವೋ ಪದ್ಯವೋ ನಾಟಕ-ಚಲನಚಿತ್ರ ಗೀತೆಯೋ ಅಥವಾ ಪ್ರಾಸ ಪದವೋ? ಎಂದು!

(ಮೈ.ವಿ.ವಿ.ಮಾನಸಗಂಗೋತ್ರಿ ಮೈಸೂರು, 1.12.1979 “ಗ್ರಂಥಲೋಕ”ದಲ್ಲಿ ಪ್ರಕಟಿತ)

29.ಕೃತಿ : ಸೌಭಾಗ್ಯ(ನಾಟಕ)

ಕರ್ತೃ: ಸು.ಬೈ.ಸಿದ್ದಪ್ಪ

ಪ್ರಸ್ತುತ ಭಾರತದ ಪ್ರಚಲಿತ ಸಮಸ್ಯೆಗಳಲ್ಲಿ ಒಂದಾದ “ಬಾಲವಿಧವೆಯ ಪುನರ್ವಿವಾಹ” ಎಂಬ ಸದ್ಭವಿಷ್ಯ ವಿಷಯದ ಬಗ್ಗೆ ವಿಚಾರ ಮಂಥನ ನಡೆಸಿ ಚಿಮ್ಮಿಸಿದ ಅಮೃತದಂತಹ (ಕೆಲವರಿಗೆ ಹಾಲಾಹಲದಂಥ?) ಅಭಿಪ್ರಾಯವನ್ನು ಲೇಖಕ ಸಿದ್ದಪ್ಪನವರು ‘ಸೌಭಾಗ್ಯ’ ಎಂಬ ನಾಟಕ ರೂಪದಲ್ಲಿ ರಚಿಸಿ ಹೊರಚೆಲ್ಲಿದ್ದಾರೆ. ಇವತ್ತಿನ ಕಾಲಕ್ಕೆ ಇಂತಹ ಧೈರ್ಯಶಾಲಿ ಲೇಖಕರ ಕೊರತೆ ಇರುವುದು ಸಹಜ.

ಸಾಮಾಜಿಕ ಹಾಗು ಮಾನವಿಕ ಓರೆಕೋರೆ, ಆಗುಹೋಗು, ಟೀಕೆಟಿಪ್ಪಣಿ, ಮುಂತಾದ ಬಗ್ಗೆ ದೃಢ ನಿಲುವಿನಿಂದ ನಿರ್ಭಯ ಹಾದಿಯಲ್ಲಿ ನಡೆದು ವಾಸ್ತವತೆ ಮನನ ಮಾಡಿದವರನ್ನು, ಕ್ರಾಂತಿಯನ್ನು ನಿಯಂತ್ರಿಸುವರನ್ನು ಅಥವ ಪರಿಷ್ಕರಿಸುವರನ್ನು ಹಾಗೂ ಹಿನ್ನಡೆ ಬಯಸುವರನ್ನು ಲೆಕ್ಕಿಸದೇ ಬರೆದ ನಾಟಕ ಇದು. ವಿರೋಧಿ ಬಣದ ಬಗ್ಗೆ ತಲೆ ಕೆಡಿಸಿ ಕೊಳ್ಳದ ಲೇಖಕ, ಈ ನಾಟಕದ ಮೂಲಕ ಹೊಸ ಪ್ರಯೋಗವನ್ನು ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಸಾಮಾಜಿಕ ಕಾಳಜಿ ಬಗ್ಗೆ ಗಂಭೀರ ಚಿಂತನೆಯುಳ್ಳ ಇಂಥ ಲೇಖಕರನ್ನು ಬೆಂಬಲಿಸುವುದು ಅವರವರ ಇಚ್ಛೆಗೆ ಬಿಟ್ಟಿದ್ದು?!ಸದರಿ ನಾಟಕವನ್ನು ಪ್ರಯೋಗ ಮಾಡುವ ಅಥವ ಓದಿಯೂ ತೆಪ್ಪಗಿರುವ ಶ್ರೀಸಾಮಾನ್ಯ ಸೇರಿದಂತೆ ಸಾಮಾಜಿಕ ಕಳಕಳಿ ಇರುವ ಹಾಗೂ ನತದೃಷ್ಟ ಬಾಲವಿಧವೆಯರ ಜೀವನದ ಬಗ್ಗೆ ಸಾಮಾಜಿಕ ಪ್ರಜ್ಞೆ ಇರುವ ಎಷ್ಟುಜನ ಇಂಥ ಕಹಿಸತ್ಯ ಅರಗಿಸಿ ಕೊಂಡಾರು? ಆದರೆ ಶೋಷಿತ ಸಮಾಜದ ಅನಾಗರಿಕ ವ್ಯವಸ್ಥೇಲಿ ಬದಲಾವಣೆಯ ಕ್ರಾಂತಿಯನ್ನು ಅಳವಡಿಸಿಕೊಳ್ಳು ವಲ್ಲಿ ಈ ನಾಟಕ ಸ್ವಲ್ಪವಾದರೂ ಪರಿಣಾಮ ಬೀರುತ್ತದೆ?!

(ಮೈ.ವಿ.ವಿ.ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಮಾನಸಗಂಗೋತ್ರಿ, 1.12.1979-ಗ್ರಂಥಲೋಕ ಮಾಸಿಕದಲ್ಲಿ ಪ್ರಕಟಿತ)

  1. ಕೃತಿ:ಭಕ್ತಧ್ರುವ

ಕರ್ತೃ: ಪಳಕಳ ಸೀತಾರಾಮಭಟ್ಟ

1979ನೇ ಇಸವಿಯನ್ನು ಅಂತಾರಾಷ್ಟ್ರೀಯ ಮಕ್ಕಳ ವರ್ಷ ಎಂದು ಘೋಷಿಸಿದ ನಂತರ ಎಳೆಯರಿಗೆ ಸಂಬಂಧಿಸಿದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕು ಕಾಣುತ್ತಿವೆ. ಈ ದಿಸೆಯಲ್ಲಿ ಕನ್ನಡನಾಡಿನ ಲೇಖಕರು ಮತ್ತು ಪ್ರಕಾಶಕರು ಪ್ರಶಂಸನಾರ್ಹರು. ಇವರೆಲ್ಲರ ಹಾದಿಯಲ್ಲೆ ಶ್ರೀ ಪ. ಸೀತಾರಾಮ ಭಟ್ಟರು ಸಹ ಹೆಜ್ಜೆ ಮೂಡಿಸಿರುವ ಪ್ರಯುಕ್ತ ‘ಭಕ್ತಧ್ರುವ’ ದಂತಹ ಮಕ್ಕಳ ಪುಸ್ತಕಗಳು ಹೆಚ್ಚು ಗಮನಾರ್ಹವೂ ಸ್ವಾಗತಾರ್ಹವೂ ಎನಿಸುತ್ತದೆ.

ಬಾಲಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಿರುವ ಶ್ರೀಯುತ ಭಟ್ಟರು, ಪೌರಾಣಿಕ ಹಿನ್ನೆಲೆಯ ಓರ್ವ ಮಹಾರಾಜನ ಪುತ್ರ ‘ಧ್ರುವ’ ಎಂಬ ರಾಜಕುಮಾರನ ಭಕ್ತಿಯ ಬಗ್ಗೆ ಬರೆದಿರುವ ಮಕ್ಕಳ ನಾಟಕ. ಆಧ್ಯಾತ್ಮಿಕ ಕುರಿತಾದ ಈ ಸಫಲ ಕೃತಿಯಲ್ಲಿ ಏಳು ಪಾತ್ರಗಳು ಪ್ರಮುಖವಾಗಿದ್ದು, ಇನ್ನುಳಿದವು ಬಣ್ಣ ಹಚ್ಚಿಕೊಂಡು ಸ್ಟೇಜ್ ಮೇಲೆ ಪಾತ್ರ ವಹಿಸುವ ಮಕ್ಕಳಿಗೆ ಖುಷಿ ಕೊಡುವಂತಿವೆ. ಈ ಕಿರು ನಾಟಕದ ಅವಧಿಯು ಒಂದು (ಗಂಟೆ)ತಾಸು ಇರಬಹುದು. ಪ್ರೌಢಶಾಲೆ ಮತ್ತು ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳು ಟ್ಯಾಲೆಂಟ್ಸ್-ಡೇ ಮುಂತಾದ ಮುಖ್ಯ ದಿನಗಳ ಕಾರ್ಯಕ್ರಮದಂದು ಸದರಿ ನಾಟಕವನ್ನು ಪ್ರಯೋಗ ಮಾಡುವಂತಿದೆ.

ಎಳೆಯರ ನಾಟಕ ಎಂದರೆ ಏನೋ ಒಂಥರಾ ಸಡಗರ ಸಂಭ್ರಮ ಇದ್ದೆ ಇರುತ್ತದೆ. ಶ್ರೀ ಪಳಕಳ ಸೀತಾರಾಮಭಟ್ಟರು ಸರಳ ಕನ್ನಡದಲ್ಲಿ ರಚಿಸಲಾದ ‘ಭಕ್ತ ಧ್ರುವ’ ಕಿರುನಾಟಕವು ಜನಸಾಮಾನ್ಯರ, ಪೋಷಕರ ಹಾಗೂ ಶಾಲಾಮಕ್ಕಳ ಗಮನ ಸೆಳೆಯುತ್ತದೆ. ಆಸಕ್ತಿ ಉಳ್ಳವರು ಆಗಾಗ್ಗೆ ಹೆಚ್ಚಿನ ಸಂಖ್ಯೆಯ ನಾಟಕ ಪ್ರಯೋಗ ಮಾಡುವ ಮೂಲಕ ಲೇಖಕರ ಶ್ರಮವನ್ನ ಸದುಪಯೋಗ ಪಡಿಸಿಕೊಳ್ಳಬಹುದು.

(ಮೈ.ವಿ.ವಿ. ಅಂಚೆ ತೆರಪಿನ ಶಿಕ್ಷಣ ಸಂಸ್ಥೆ ಮಾನಸಗಂಗೋತ್ರಿ ಡಿಸೆಂಬರ್ 1979ರ ಗ್ರಂಥಲೋಕ ಮಾಸಪತ್ರಿಕೆಯಲ್ಲಿ ಪ್ರಕಟಿತ )

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-5

admin
the authoradmin

Leave a Reply

Translate to any language you want