LatestMysore

ಶಿಕ್ಷಣ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗೆ ಮಲ್ಲೇಶ ಸಿ ಎ ರವರಿಗೆ “ಶಿಕ್ಷಣ ರತ್ನ – 2026 ” ಪ್ರಶಸ್ತಿ ಪ್ರದಾನ

 ಮೈಸೂರು: ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ  ನೀಡುವ ” ಶಿಕ್ಷಣ ರತ್ನ – 2026 ” ಪ್ರಶಸ್ತಿಯನ್ನು  ಮಲ್ಲೇಶ ಸಿ ಎ  ಅವರ ಶಿಕ್ಷಣ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಯನ್ನು ಪರಿಗಣಿಸಿ ನೀಡಿ ಗೌರವಿಸಲಾಯಿತು.

ಮನುಷ್ಯ ಚೈತನ್ಯದ ಅನಂತ ಕ್ರಿಯಾಶೀಲ ಸಾಧ್ಯತೆಗಳ ಪ್ರತಿಮಾ ರೂಪ ಹಾಗೂ ಬೆಳಕಿನ ಅನುರೂಪ ಶ್ರೀಯುತ ಮಲ್ಲೇಶ ಸಿ.ಎ. ಅವರಾಗಿದ್ದಾರೆ. ಇವರು 24 ಏಪ್ರಿಲ್ 1964ರಂದು ಚಾಮರಾಯನಕೋಟೆಯಲ್ಲಿ ಅಪ್ಪಾಜಾಚಾರ್ಯ ಹಾಗೂ ಪುಟ್ಟಮ್ಮ ಅವರ ಹೆಮ್ಮೆಯ ಸುಪುತ್ರರಾಗಿ ಜನಿಸಿದರು. ಸ್ನಾತಕೋತ್ತರ ಹಾಗೂ ಬಿ.ಇಡಿ  ಪದವಿ ಗಳಿಸಿ  6 ಏಪ್ರಿಲ್ 1984ರಂದು ಸರ್ಕಾರಿ ಶಾಲೆಗೆ ಸಮಾಜ ವಿಜ್ಞಾನ, ಆಂಗ್ಲ ಭಾಷಾ ವಿಷಯದ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದರು. ಒಟ್ಟು ಮುವತ್ತೆಂಟು ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ ಅವರ ಶಿಕ್ಷಕ ವೃತ್ತಿಯ ಸೇವೆ ಅನುಪಮ ಹಾಗೂ ಅದ್ವಿತೀಯವಾದುದು.

ಪ್ರೌಢಶಾಲಾ ಶಿಕ್ಷಕರಾಗಿ ಕಾಯಕ ನಿಷ್ಠೆಯಿಂದ ಹಾಗೂ ಕರ್ತವ್ಯವೇ ದೇವರು ಎಂಬ ಆದರ್ಶ ಮೌಲ್ಯದಲ್ಲಿ ಬದುಕನ್ನು ರೂಪಿಸಿಕೊಂಡವರು ಶ್ರೀಯುತ ಮಲ್ಲೇಶ ಅವರು. ತಮ್ಮ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಾಠ-ಪ್ರವಚನಗಳನ್ನು‌ ಮಾತ್ರ ಬೋಧಿಸದೆ ಸಂಸ್ಕಾರಯುತ ಆದರ್ಶ ವ್ಯಕ್ತಿತ್ವಕ್ಕೆ ಅಗತ್ಯವಾಗಿ ಬೇಕಾದ ಮೌಲ್ಯಗಳನ್ನು ತಮ್ಮ ನಡೆ-ನುಡಿಯಲ್ಲಿ ಬಿತ್ತಿದರು. ಈ ಬಗೆಯ ಆದರ್ಶ ಮೌಲ್ಯಗಳು ತಮ್ಮ‌ ಮಕ್ಕಳು ಹಾಗೂ ಮೊಮ್ಮಕ್ಕಳಲ್ಲೂ ರಕ್ತಗತವಾಗಿರುವಂತೆ ನೋಡಿಕೊಂಡಿದ್ದಾರೆ.

ನಲಿ-ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ, ಸಿ.ಆರ್.ಪಿ ಆಗಿ 15 ವರ್ಷ ಸೇವೆ ಸಲ್ಲಿಸಿದ್ದಾರೆ, ಪ್ರೌಢಶಾಲಾ ಶಿಕ್ಷಕರಾಗಿ ಸುಮಾರು 12 ವರ್ಷ ಕಾರ್ಯ ನಿರ್ವಹಿಸಿರುತ್ತಾರೆ. ಇಂತಹ ಮೇರು ವ್ಯಕ್ತಿತ್ವದ ಶ್ರೀಯುತ ಮಲ್ಲೇಶ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ನೂರಾರು ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿ ಆದರಣೀಯದಿಂದ ಗೌರವಿಸಿ  ಸನ್ಮಾನಿಸಿರುವುದು ವಿಶೇಷ. ಮುಖ್ಯವಾಗಿ ಲಯನ್ಸ್ ಕ್ಲಬ್ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ತಮ್ಮದೇ ವಿಶಿಷ್ಟ, ವಿರಳ ಹಾಗೂ ಸರಳತೆಯ ವ್ಯಕ್ತಿತ್ವದಿಂದ ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ಹಿರಿಯರ ನಡೆಯಲ್ಲಿ ನಡೆಯುವ, ಕಿರಿಯರಿಗೆ ದೀಪದಾರಿಯಾಗಿ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ತಮ್ಮ ಬದುಕನ್ನು ದೈವತ್ವದ ನೆಲೆಯಾಗಿಸಿಕೊಂಡಿದ್ದಾರೆ. ಇಂತಹ ಜೀವ ಕುಸುಮ ವ್ಯಕ್ತಿತ್ವದ ಶ್ರೀಯುತ ಮಲ್ಲೇಶ ಅವರ ಶಿಕ್ಷಣ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಯನ್ನು ಪರಿಗಣಿಸಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ” ಶಿಕ್ಷಣ ರತ್ನ – 2026 ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

admin
the authoradmin

Leave a Reply