ಭಕ್ತರ ದರ್ಶನಕ್ಕೆ ಸಜ್ಜಾದ ಕೊಟ್ಟಿಯೂರು ಮಹಾಶಿವ… ಇಲ್ಲಿ ಹರಕೆ ಹೊತ್ತರೆ ಇಷ್ಟಾರ್ಥ ನೆರವೇರಲಿದೆ…
ಈ ಬಾರಿ ಮೇ 29 ರಿಂದ ಜೂನ್ 24 ವರೆಗೆ ದರ್ಶನ

ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾಲ್ಲೂಕು. 9945272126.
ದೇವರ ನಾಡು ಎಂದೇ ಪ್ರಸಿದ್ದಿಗೆ ಹೆಸರಾಗಿರುವ ಕೇರಳವು ಧಾರ್ಮಿಕ ಪುರಾತನ ಪ್ರಕೃತಿ ಆರಾಧನೆಯ ದೇವಾಲಯಗಳ ತವರೂರು ಎಂದು ಹೇಳಬಹುದು. ದಕ್ಷಿಣ ಭಾರತದ ವಿಶೇಷ ದೇವಾಲಯಗಳಲ್ಲಿ ಒಂದಾದ ಕೊಟ್ಟಿಯೂರು ದೇವಾಲಯವು ಕಣ್ಣೂರು ಜಿಲ್ಲೆಯ ದಟ್ಟ ಅರಣ್ಯದ ಬೆಟ್ಟಗುಡ್ಡಗಳ ನಡುವೆ, ಹಚ್ಚ ಹಸಿರಿನ ಪ್ರಕೃತಿ ರಮಣೀಯ ಸೌಂದರ್ಯದ ಮಡಿಲಿನ ಮಧ್ಯೆ ಸಾಗೋ ಸುಮಾರು ಒಂದು ಕಿ.ಮೀ ರಸ್ತೆಯಲ್ಲಿ ಸರಣಿ ದಟ್ಟ ವಾಹನಗಳ ನಡುವೆ ಅಂಕು-ಡೊಂಕಾದ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಸಿದರೆ ಬಾವಲಿ ನದಿಯ ತಟದಲ್ಲಿ ಸುತ್ತಲು ಪರಿಶುದ್ಧವಾದ ನೀರು ಮತ್ತು ಮಂಜಿನಿಂದ ಆವೃತವಾಗಿರುವ ಶ್ರೀ ಕ್ಷೇತ್ರ ಕೊಟ್ಟಿಯೂರು ದೇವಸ್ಥಾನವಿದೆ.

ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನದ ಎರಡು ದೇವಸ್ಥಾನಗಳಿವೆ. ಒಂದು ಇಕ್ಕೇರೆ ಕೊಟ್ಟಿಯೂರು, ಮತ್ತೊಂದು ಅಕ್ಕೇರೆ ಕೊಟ್ಟಿಯೂರು. ಇಕ್ಕೇರೆ ಕೊಟ್ಟಿಯೂರು ಮಂದಿರ ವರ್ಷದ 11 ತಿಂಗಳು ದರ್ಶನಕ್ಕೆ ಮಾತ್ರ ತೆರೆದಿರುತ್ತದೆ. ಆದರೆ ಅಕ್ಕೇರೆ ಕೊಟ್ಟಿಯೂರು ವರ್ಷದಲ್ಲಿ ಕೇವಲ 28 ದಿನಗಳು ಮಾತ್ರ ತೆರೆದಿರುತ್ತದೆ. ಈ ದೇವಸ್ಥಾನವೇ ಅತ್ಯಂತ ವಿಶಿಷ್ಟ ನೆಲೆ. ಶ್ರದ್ಧೆ ಭಕ್ತಿ, ಭಾವ ಮತ್ತು ಸರಳತೆಯಿಂದಾಗಿ ಕೇರಳವಲ್ಲದೆ ಇತರೆ ರಾಜ್ಯಗಳಲ್ಲಿ ಶಕ್ತಿ ಪೀಠಗಳ ಮೂಲ ದೇವರು ಎಂದು ಮನೆ ಮಾತಾಗಿದೆ.
ಹಿಂದೂ ದೇವಾಲಯಗಳ ಉಪಸ್ಥಿತಿಯ ಸಂಸ್ಕೃತಿ ಮತ್ತು ದೇವರ ಮಹಾಸಂಗಮವಾಗಿದೆ. ಇದು ಮೂಲತಃ ಶಿವನ ಆಲಯ ಜೊತೆಗೆ ಇಲ್ಲಿ ಶಿವನ ಪತ್ನಿ ಪಾರ್ವತಿಯ ಮತ್ತೊಂದು ಅವತಾರ ಎಂದು ನಂಬಲಾಗುವ ಸತಿ ದೇವಿ, ಬ್ರಹ್ಮ ಹಾಗೂ ವಿಷ್ಣುವನ್ನು ಇಲ್ಲಿ ಆರಾಧಿಸಲಾಗುತ್ತದೆ. ಆದರೆ ಪ್ರಮುಖವಾಗಿ ಇಲ್ಲಿ ಶಿವನೇ ಆರಾಧ್ಯ ದೈವ. ಇಲ್ಲಿನ ವಿಶೇಷವೆಂದರೆ ಶಿವನು ಸ್ವಯಂಭು ಶಿವಲಿಂಗ ಇದಾಗಿದ್ದು ಜನರಲ್ಲಿ ಭಕ್ತಿ-ಭಾವಗಳ ನಡುವೆ ಶಿವನು ನೆಲೆಸಿದ್ದಾನೆ.

ಕೊಟ್ಟಿಯೂರು ಕ್ಷೇತ್ರದ ಐತಿಹಾಸಿಕ ಹಿನ್ನೆಲೆ ಏನು?
ಕೊಟ್ಟಿಯೂರು ದೇವಸ್ಥಾನವು ಸಾವಿರ ವರ್ಷಗಳ ಐತಿಹ್ಯ ವಿದ್ದು, ಮಾತಾ ಸತಿಯ ತಂದೆ ಪ್ರಜಾಪತಿ ದಕ್ಷನು ಯಾಗವನ್ನು ಆಯೋಜಿಸಿದಾಗ ತಂದೆ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಮಗಳು ಮತ್ತು ಶಿವನನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ. ಆ ಯಾಗಕ್ಕೆ ಸತಿಯು ಹೋಗಲು ಶಿವನ ಅನುಮತಿ ಕೇಳುತ್ತಾಳೆ. ಶಿವನು ನೀನು ಅಲ್ಲಿಗೆ ಹೋಗುವುದು ಬೇಡ ಎಂದು ಪರಿಪರಿಯಾಗಿ ಎಷ್ಟೇ ಹೇಳಿದರು ಅವಳು ಕೇಳಲಿಲ್ಲ. ಅಪ್ಪನ ವ್ಯಾಮೋಹದಿಂದ ಅವಳಿಗೆ ನಿರಾಶೆ ಮಾಡುವುದು ಬೇಡವೆಂದು ತೆರಳಲು ಹೇಳುತ್ತಾನೆ. ಆಗ ಸಂತೋಷದಿಂದ ಸತಿಯು ಸಂಭ್ರಮದಿಂದ ಯಾಗಸ್ಥಳಕ್ಕೆ ತೆರಳುತ್ತಾಳೆ.

ಆದರೆ ಅಲ್ಲಿ ನಡೆದದ್ದೇ ಬೇರೆ ತಾನೊಂದು ಬಗೆದರೆ ದೈವ ಒಂದು ಬಗೆದಂತೆ ಎಂಬಂತೆ ತಂದೆಯಾದ ದಕ್ಷನು ಆಹ್ವಾನವಿಲ್ಲದೆ ಬಂದಿದ್ದ ಇವಳನ್ನು ಜನರ ಎದುರಿಗೆ ಅವಮಾನಿಸಿ ನಿಂದಿಸಿ ಬಹಳ ನಿಷ್ಟೂರವಾಗಿ ನಡೆಸಿಕೊಳ್ಳುತ್ತಾನೆ. ಈ ಅವಮಾನವನ್ನು ತಾಳಲಾರದೆ ಯಜ್ಞದ ಕುಂಡಕ್ಕೆ ಹಾರಿ ಅಗ್ನಿಯಲ್ಲಿ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಈ ವಿಷಯ ಶಿವನಿಗೆ ತಿಳಿದು ಸತಿಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಶಿವನಿಗೆ ರೋಷಾಗ್ನಿ ಕೋಪ ತಾಪ ಎಲ್ಲವೂ ಒಮ್ಮೆಲೆಗೆ ಬರುತ್ತದೆ.

ಆಗ ತನ್ನ ಜಡೆಯನ್ನು ಕಿತ್ತು ಬಿಸಾಡುತ್ತಾನೆ. ಇದರಿಂದ ವೀರಭದ್ರ ಮತ್ತು ಭದ್ರಕಾಳಿ ಜನಿಸುತ್ತಾರೆ. ಇವರಿಗೆ ಯಜ್ಞವನ್ನು ಸರ್ವನಾಶ ಮಾಡಿ ಎಂದು ಅಪ್ಪಣೆ ನೀಡುತ್ತಾನೆ. ವೀರಭದ್ರನು ದಕ್ಷನ ತಲೆಯನ್ನು ಕಡಿದು ಚಂಡಾಡುತ್ತಾನೆ. ಆಗ ಬ್ರಹ್ಮನು ಕೋಪದಲ್ಲಿದ್ದ ಶಿವನನ್ನು ಸಮಾಧಾನಗೊಳಿಸಿ ಯಾಗವನ್ನು ಸಮಾಪ್ತಿಗೊಳಿಸಲು ಹೇಳುತ್ತಾನೆ. ಶಿವನು ದಕ್ಷನ ದೇಹಕ್ಕೆ ಕುರಿಯ ತಲೆಯನ್ನು ಹಾಕಿ ಮರು ಜೀವ ನೀಡುತ್ತಾನೆ. ಭವಿಷ್ಯದಲ್ಲಿ ಈ ಕ್ಷೇತ್ರಕ್ಕೆ ಬರುವವರಿಗೆ ಹೆಣ್ಣಾಗಿ ಸತಿ ಕಳೆದುಕೊಂಡ ನೋವು ಬರದಿರಲಿ ಎಂದು ವರವನ್ನು ನೀಡುತ್ತಾನೆ. ಸತಿ ದೇವಿಯು ಅಗ್ನಿಗಾಗುತಿಯಾದ ಸ್ಥಳದ ಸನಿಹದಲ್ಲಿ ಸ್ವಯಂಭು ಶಿವಲಿಂಗವಾಗಿ ರೂಪಗೊಳ್ಳುತ್ತಾನೆ.

ಒಮ್ಮೆ ಆದಿವಾಸಿ ಜನರು ಬೇಟೆಗಾಗಿ ಕಾಡಿಗೆ ತೆರಳಿದಾಗ ಈ ಕಲ್ಲಿಗೆ ಬಾಣವನ್ನು ಉಜ್ಜಿದಾಗ ರಕ್ತವು ಸುರಿಯುತ್ತದೆ. ಇದನ್ನು ನೋಡಿ ಗಾಬರಿಗೊಂಡು ನಾಯರ್ ಕುಟುಂಬ ವರ್ಗಕ್ಕೆ ತಿಳಿಸುತ್ತಾರೆ. ಆಗ ಅವರು ನೀರು, ಹಾಲು, ತುಪ್ಪದ ಅಭಿಷೇಕವನ್ನು ಮಾಡುತ್ತಾರೆ. ಆಗ ರಕ್ತ ನಿಲ್ಲದೇ ಇದ್ದಾಗ ಎಳೆ ನೀರನ್ನು ಹಾಕುತ್ತಾರೆ. ಆಗ ರಕ್ತವು ನಿಲ್ಲುತ್ತದೆ. ಈ ವಿಸ್ಮಯವನ್ನು ಕಂಡು ಬೆರಗಾಗಿ ಜ್ಯೋತಿಷಿಗಳಿಗೆ ನಡೆದ ಘಟನೆಯನ್ನು ತಿಳಿಸಿದಾಗ ಪ್ರಜಾಪತಿ ದಕ್ಷನು ಯಾಗ ಮಾಡಿದ ಪುಣ್ಯ ಪವಿತ್ರ ಸ್ಥಳವಿದು ಎಂದು ಹೇಳುತ್ತಾರೆ. ಅಂದಿನಿಂದ ಶಿವನ ಲಿಂಗ ಉದ್ಭವದ ಸ್ಥಳಕ್ಕೆ ವೈಭವ, ಆಡಂಬರವಿಲ್ಲದ ಪೂಜಾ ಕೈಂಕರ್ಯಗಳು ಪ್ರತಿ ವರ್ಷ ಮೇ. ಜೂನ್ ತಿಂಗಳಿನಲ್ಲಿ ಬರುವ ವೈಶಾಖ ಮಾಸದಲ್ಲಿ 28 ದಿನಗಳು ಉತ್ಸವಗಳು ಧಾರ್ಮಿಕ ಪೂಜಾ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಸರಳವಾಗಿ ಸಹಸ್ರಾರು ಭಕ್ತರ ನಡುವೆ ಜರುಗುತ್ತವೆ.

ಈ ದೇವಾಲಯದ ವೈಶಿಷ್ಟ್ಯ ಏನೇನು ಗೊತ್ತಾ?
ಈ ದೇವಾಲಯಕ್ಕೆ ಯಾವುದೇ ಶಾಶ್ವತ ದೊಡ್ಡ ಕಟ್ಟಡಗಳಿಲ್ಲ. ಪ್ರತಿ ವರ್ಷ ವೈಶಾಖ ಮಾಸ ಯಾವಾಗ ಬರುತ್ತದೋ ಆ ಮಾಸದಲ್ಲಿ ಮಾತ್ರ ಈ ದೇವಸ್ಥಾನ 28 ದಿನಗಳ ಕಾಲ ಭಕ್ತರಿಗೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ಎಲ್ಲಾ ದಿನಗಳಲ್ಲಿ ಇಲ್ಲಿಗೆ ಯಾರಿಗೂ ಪ್ರವೇಶವಿರುವುದಿಲ್ಲ. ಆ ಸಂದರ್ಭದಲ್ಲಿ ಇಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದುಕೊಂಡಿರುತ್ತವೆ. ಮತ್ತೆ ಮುಂದಿನ ವರ್ಷ ವೈಶಾಖ ಮಾಸ ಬಂದಾಗ ಇಲ್ಲಿಗೆ ಆಗಮಿಸುವ ಕೇರಳದ ನಿರ್ದಿಷ್ಟ ಕೆಲವು ಸಮುದಾಯದ ಜನರು ಈ ಪವಿತ್ರ ಸ್ಥಳವನ್ನು ಸ್ವಚ್ಛಮಾಡಿ ತೆಂಗಿನ ಗರಿಗಳ ತಾತ್ಕಾಲಿಕ ಕುಟೀರವನ್ನು ಭವ್ಯವಾಗಿ ನಿರ್ಮಿಸುತ್ತಾರೆ. ಈ ದೇವಸ್ಥಾನದ ಒಳಗಡೆ ದೀಪ ಹಚ್ಚುತ್ತಾರೆ. ಅಲ್ಲೊಂದು ಎತ್ತರದ ಸ್ಥಳದಲ್ಲಿ ಉದ್ಭವ ಶಿವಲಿಂಗ ಇದ್ದು, ಅದರ ಸುತ್ತಲೂ ನೀರು ಹರಿಯುತ್ತದೆ. ಆ ನೀರನ್ನು ಹಾಯ್ದುಕೊಂಡು ಹೋಗಿ ದರ್ಶನವನ್ನು ಜನರು ಪಡೆಯುತ್ತಾರೆ. ಸರಳ ಪೂಜೆ ಅರ್ಥ ಪೂರ್ಣವಾದ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.

ಈ ದೇವರಿಗೆ ಎಳೆ ನೀರಿನ ಅಭಿಷೇಕ ಅತಿ ಪ್ರಿಯ
ಅವಿವಾಹಿತರು, ಕುಟುಂಬದ ಸಮಸ್ಯೆ ಇರುವವರು. ಸಂಕಷ್ಟದಲ್ಲಿರುವವರು, ರೋಗರುಜಿನೆವುಳ್ಳವರು. ಸಂತಾನ ಭಾಗ್ಯ ಇಲ್ಲದವರು ಭಕ್ತಿಯಿಂದ ಈ ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಹರಕೆ ಮಾಡಿಕೊಂಡರೆ ನೆರವೇರುತ್ತದೆ ಎಂಬ ಅಪಾರವಾದ ಭಕ್ತಿ, ನಂಬಿಕೆ, ವಿಶ್ವಾಸ ಜನರಲ್ಲಿ ಮನೆ ಮಾಡಿದೆ. ಹರಕೆ ಹೊರುವವರು ಈ ಶೆ+ಡ್ ಮಾದರಿಯ ದೇವಸ್ಥಾನದ ಒಳಗೆ ಹೋಗಿ ಬೆಳ್ಳಿ ಮತ್ತು ಸ್ವರ್ಣ ಕೊಡಗವನ್ನು ಸಮರ್ಪಣೆಯನ್ನು ಭಕ್ತರು ಮಾಡ್ತಾರೆ. ದಿನದ ಎರಡು ಬಾರಿ ಆನೆಗಳ ಮೇಲೆ ಶಿವ ಪಾರ್ವತಿಯ ವಿಗ್ರಹಗಳನ್ನು ಇರಿಸಿ ವಿರಾಜಮಾನವಾಗಿ ದೇವಾಲಯ ಸುತ್ತಲೂ ಉತ್ಸವವನ್ನು ಮಾಡಲಾಗುತ್ತದೆ. ತುಂತುರು ಮಳೆಯ ಹನಿಯಲ್ಲಿಯೇ ನೆನೆದು ದೇವರ ದರುಶನವನ್ನು ಪ್ರತಿನಿತ್ಯ ಲಕ್ಷಾಂತರ ಜನರು ಕಣ್ತುಂಬಿಕೊಳ್ಳುತ್ತಾರೆ.

ಪ್ರಸ್ತುತ ದಿನಗಳಲ್ಲಿ ದೇವಸ್ಥಾನಗಳನ್ನು ವೈಭವಿಕರಿಸಿ ದೇವರ ಹೆಸರಿನಲ್ಲಿ ಪ್ರತಿಯೊಂದು ಪೂಜೆಗೂ ಹಣ ಸುಲಿಗೆಯನ್ನು ಮಾಡುತ್ತಾರೆ. ಆದರೆ ಈ ದೇವಾಲಯವು ಇದಕ್ಕೆ ತದ್ವಿರುದ್ಧವಾಗಿದ್ದು ಮೂಲ ಸ್ಥಾನಕ್ಕೆ ಕುಂದು ಬರದಂತೆ ಸರಳವಾಗಿ ಪೂಜೆ ಮತ್ತು ಉತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿರುವುದು ನಿಜಕ್ಕೂ ಸೋಜಿಗವಾಗಿದೆ. ಯಾವುದೇ ಆಸ್ತವೆಸ್ತವಿಲ್ಲದೆ, ಗದ್ದಲವಿಲ್ಲದೆ, ಪೊಲೀಸರ ಕಾಟವಿಲ್ಲದೆ, ಪೂಜಾರಿಗಳ ಕಾಟವಿಲ್ಲದೆ, ಶಾಂತಿಯಿಂದ ದೇವಸ್ಥಾನದ ಆವರಣದಲ್ಲೇ ಭಕ್ತರ ಕಾಲಿಗೆ ಮುತ್ತಿಕ್ಕಿ ಬಾವಲಿ ನದಿ ಹರಿಯುತ್ತದೆ.
ಹಾಗಾಗಿ ಭಕ್ತರು ಕೂಡ ಆ ತಣ್ಣಗಿನ ನೀರಲ್ಲಿ ಹೆಜ್ಜೆ ಹಾಕುತ್ತಾ ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಸರ್ವರಿಗೂ ಧರ್ಮದರ್ಶನವೇ ಆಗಿರುತ್ತದೆ ವಿಶೇಷವಾದ ದರ್ಶನ ಯಾರಿಗೂ ಇರುವುದಿಲ್ಲ. ಅಂದರೆ ವಿಐಪಿ ಸಂಸ್ಕೃತಿಗೆ ತಿಲಾಂಜಲಿಯನ್ನು ಇಡಲಾಗಿದೆ. ಈ ದೇಗುಲವು ಪ್ರಕೃತಿ, ದೇವರು, ಮಾನವನು ಒಂದಾಗು ವಂತಹ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಒಟ್ಟಿನಲ್ಲಿ ಈ ಕ್ಷೇತ್ರವು ಭೂಲೋಕದ ಸ್ವರ್ಗದಂತಿದೆ ಎಂದರೆ ತಪ್ಪಾಗಲಾರದು ಅಂತಹ ಅದ್ಭುತವಾದಂತಹ ರೋಮಾಂಚನಗೊಳಿಸುವಂತಹ ಪುಣ್ಯ ಮತ್ತು ಪವಿತ್ರ ಪುರಾತನ ಧಾರ್ಮಿಕ ಹಿಂದು ಕ್ಷೇತ್ರವಾಗಿದೆ.

ಈ ದೇವಾಲಯವು ಮೇ 29 ರಿಂದ ಜೂನ್ 24, 2026ರ ವರೆಗೆ 28 ದಿನಗಳು ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಮಹಿಳೆಯರಿಗೆ ಮೇ 31 ರಿಂದ ಜೂನ್ 20ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೊನೆಯ ಐದು ದಿನಗಳು ಮಹಿಳೆಯರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಜೂನ್ 24 ರಂದು ವೈಶಾಖ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮನವಿ
ಈ ಕ್ಷೇತ್ರಕ್ಕೆ ಪ್ರತಿದಿನವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಒಂದು ಕೆಟ್ಟ ಚಾಳಿ ಏನೆಂದರೆ ಪವಿತ್ರವಾದ ಬಾವಲಿ ನದಿಯಲ್ಲಿ ಸ್ನಾನ ಮಾಡಿ ತಮ್ಮ ಬಟ್ಟೆಗಳು, ಶಾಂಪು ಮತ್ತು ನದಿಯ ದಡದಲ್ಲಿ ಬಿಸಾಕುತ್ತಾರೆ. ಇಷ್ಟೇ ಅಲ್ಲದೆ ಪ್ಲಾಸ್ಟಿಕ್ ಲೋಟ, ತಟ್ಟೆ ನೀರಿನ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಇದಲ್ಲದೆ ಕೆಲವರು ಧೂಮಪಾನ ಮಾಡುತ್ತಾರೆ. ಇನ್ನು ಕೆಲವರು ಎಲ್ಲಂದರಲ್ಲಿ ಉಗುಳುತ್ತಾರೆ. ದಯವಿಟ್ಟು ಇಲ್ಲಿಗೆ ಆಗಮಿಸುವ ಭಕ್ತರಲ್ಲಿ ನನ್ನದೊಂದು ಮನವಿ ಸ್ವಚ್ಛತೆಯನ್ನು ಕಾಪಾಡಿ. ದಟ್ಟವಾದ ಅರಣ್ಯದ ಮಾರ್ಗದದ್ದಕ್ಕೂ ಕಾಡು ಪ್ರಾಣಿಗಳು ಎದುರಾಗುತ್ತವೆ ಅವುಗಳನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಿ ಆದರೆ ಅವುಗಳಿಗೆ ತೊಂದರೆಯನ್ನು ಕೊಡಬೇಡಿ. ಪ್ರಕೃತಿಯ ಸೌಂದರ್ಯವನ್ನು ಆನಂದದಿಂದ ಸವಿಯಿರಿ. ಪರಿಸರದಲ್ಲಿ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೊಟ್ಟಿಯೂರು ಮಹದೇವನು ಸಕಲರಿಗೂ ಒಳಿತನ್ನು ಮಾಡಲಿ.

ಕ್ಷೇತ್ರಕ್ಕೆ ಹೋಗುವುದು ಹೇಗೆ ಗೊತ್ತಾ?
ಬೆಂಗಳೂರಿಂದ 270 ಕಿ.ಮೀ ಪ್ರಯಾಣವಾಗುತ್ತದೆ. ಮೈಸೂರಿನಿಂದ 130 ಕಿ.ಮೀ ದೂರವಿದ್ದು ಮೂರು ಮಾರ್ಗದಲ್ಲಿ ತೆರಳಬಹುದು. ಒಂದು ಮೈಸೂರು, ನಂಜನಗೂಡು. ಗುಂಡ್ಲುಪೇಟೆ ಮಾರ್ಗ. ಎರಡನೆಯದು ಮೈಸೂರು, ಹ್ಯಾಂಡ್ ಪೋಸ್ಟ್, ಮಾನಂದವಾಡಿ, ಬಾವಲಿ ಮಾರ್ಗ, ಮೂರನೆಯದು ಮೈಸೂರು, ಹುಣಸೂರು, ಗೋಣಿಕೊಪ್ಪ, ಇರಿಟಿ ಮಾರ್ಗದಲ್ಲಿ ಪ್ರಯಾಣ ಬೆಳೆಸಿ ಶ್ರೀಕ್ಷೇತ್ರಕ್ಕೆ ತಲುಪಬಹುದು.
ದೇವರ ಸೇವೆ ಇನ್ನಿತರ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…







