ArticlesLatestSports

“ರಾಷ್ಟ್ರೀಯ ಓಟ”ಕ್ಕೆ ಸಜ್ಜಾಗೋಣ… ಓಡೋದ್ರ ಹಿಂದಿದೆ ನೀವರಿಯದ ರಹಸ್ಯ!

ಬನ್ನಿ ಓಡೋಣ.. ಓಡುತ್ತಲೇ ಇರೋಣ...

ಜೂನ್-3ರ ವಿಶೇಷತೆ ಏನಪ್ಪಾ? ಅಂಥ ಯೋಚಿಸುತ್ತಿದ್ದೀರಾ? ಅವತ್ತಿನ ದಿನವನ್ನು ರಾಷ್ಟ್ರೀಯ ಓಟದ ದಿನವನ್ನಾಗಿ ಮಾಡಲಾಗಿದೆ.. ನಿಜ ಹೇಳಬೇಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಓಡುತ್ತಲೇ  ಇದ್ದೇವೆ..  ಹೀಗಾಗಿ ಓಟದ ಬಗ್ಗೆ ಹೇಳುತ್ತಾ ಹೋದರೆ ಮುಗಿಯದಷ್ಟಿದೆ.. ಇಲ್ಲಿ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಓಟದ ಬಗ್ಗೆ ಒಂದಷ್ಟು ಮಾಹಿತಿಯನ್ನು ನಮ್ಮ ಮುಂದಿಟ್ಟಿದ್ದಾರೆ… ಓದಿ ಕಾಮೆಂಟ್ ಮಾಡಿ…

ಸಾಮಾನ್ಯವಾಗಿ ಓಡುವಿಕೆ, ಓಟದ ಸ್ಪರ್ಧೆ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ.  ಆದರೆ, ಜೂನ್ 3 “ರಾಷ್ಟ್ರೀಯ ಓಟದ ದಿನ” ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯವಾಗಿರಬಹುದು. ನಮ್ಮ ಜೀವನ ಶೈಲಿಯಲ್ಲಿ ವರ್ಚುಯಲ್ ಓಟಗಾರ ಇರಲೀ ಯಾಕ್ಚುಯಲ್ ಓಟಗಾರನಿರಲೀ ಓಟವು ಹಾಸು ಹೊಕ್ಕಾಗಿದೆ. ಬೆಳಗ್ಗೆ ಏಳುವುದರಿಂದ ಮೊದಲ್ಗೊಂಡು ರಾತ್ರಿ ಮಲಗುವವರೆಗೂ ಆಬಾಲವೃದ್ಧ ಆದಿಯಾಗಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಓಡುವುದು ಅಗತ್ಯ, ಕರ್ತವ್ಯ, ಇತ್ಯಾದಿಯ ಬದುಕಿನ ತೆರನಾಗಿದೆ.

ಬೊಜ್ಜು ಅಥವಾ ತೂಕ ಕರಗಿಸಲು ಪಾರ್ಕಲ್ಲಿ ಬೆಳ್ಳಂಬೆಳಗಿನ ಜಾಗಿಂಗ್ ಓಟ. ರಾಜ್ಯ ರಾಷ್ಟ್ರ ಅಂತರ್‍ರಾಷ್ಟ್ರ ಮಟ್ಟದ ಕ್ರೀಡಾಕೂಟ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪದಕ ಗಳಿಸುವ ಧ್ಯೇಯದಿಂದ ಬೆಳಗ್ಗೆ ಸಂಜೆ ಎರಡೂ ಹೊತ್ತಿನ ಸತತ ಓಟ. ಪ್ರತಿದಿನ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರಿಂದ ವಿದ್ಯಾರ್ಥಿ ಗಳಿಗೆ ವ್ಯಾಯಾಮ-ಆಟೋಟ ಪೀರಿಯಡ್ ನಲ್ಲಿ ಬರುವ ತರಬೇತಿಓಟ. ಗೆಳೆ(ಯ)ತಿ, ಲವರ್ಸ್ ಪರಸ್ಪರ ಮೀ(ಡೇ)ಟಿಂಗ್ ಇತ್ಯಾದಿ ಉದ್ದೇಶದ ಭೇಟಿಗೆ ಓ(ಡೋ)ಡಿ ಹೋಗುವ ಆ(ಕಾ)ತುರದ ಓಟ. ಠಕ್ಕಬಿಟ್ರೆಸಿಕ್ಕ ಎಂದು ಓಡುವ ಕಳ್ಳನನ್ನು ಹಿಡಿಯಲು ಪೊಲೀಸ್ ಮಾಮನ ದಭಾ ದಭಾ ಓಟ.

ರಸ್ತೆ, ಉದ್ಯಾನ, ಮೈದಾನ, ಮಾಲ್, ಬಿಗ್‍ ಬಜಾರ್, ಮದುವೆಮನೆ, ಪ್ರವಾಸ, ಮುಂತಾದಕಡೆ ಹೋದಾಗ ಕೈ ಬಿಡಿಸಿಕೊಂಡು ಓಡುವ ತಮ್ಮ ಮಕ್ಕಳನ್ನು ಹಿಡಿಯಲು ಓಡುವ ಪೋಷಕರ ಗಾಬರಿ ಓಟ. ಮಾಂಗಲ್ಯಸರ ಅಥವ ಹಗ್ಗದ ಚೈನ್ ಕಿತ್ತುಕೊಂಡು ಓಡುವ ಕಳ್ಳನನ್ನು ಹಿಡಿದೇ ತೀರುತ್ತೇನೆಂದು ಅವನನ್ನು ಹಿಂಬಾಲಿಸಿ ಓಡುವ ದಮ್  ಕಟ್ಟಿದ ಓಟ. ಅಗ್ನಿಅವಗಢ,  ಭೂಕಂಪನ, ಅಗ್ನಿಪರ್ವತ ಸ್ಫೋಟ, ಯುದ್ಧದ ಬಾಂಬ್ ಸ್ಫೋಟ, ಮುಂತಾದ ಅನಿರೀಕ್ಷಿತ,  ಅನಿಶ್ಚಿತತೆಯ ಅನಿವಾರ್ಯ ಸಂದರ್ಭದ ಪ್ರಾಣ ಉಳಿಸಿಕೊಳ್ಳಲು ಓಟ.

ಬೆಟ್ಟಗುಡ್ಡ ಟ್ರೆಕ್ಕಿಂಗ್ ಅಥವ ಈಜುಕೊಳ ನದಿ ಸಮುದ್ರ  ನೀರಿನಲ್ಲಿ ಅಮೂಲ್ಯ ವಸ್ತು ಅಥವ ವ್ಯಕ್ತಿ ಜಾರಿದಾಗ ಯಾವುದನ್ನೂ ಲೆಕ್ಕಿಸದೇ ಓಡುವ ಉಸಿರುಗಟ್ಟಿಸುವ ಓಟ. ಚಲಿಸುವ ಬಸ್ಸು ರೈಲು ಹತ್ತಲು ಪ್ರಯಾಣಿಕರ ಅಪಾಯಕರ ಓಟ. ಸ್ನೇಹಿತರು ಹಠ ಪಂದ್ಯ ಪ(ಹ)ಣ ಕಟ್ಟಿ ನಿಗಧಿತ ಸ್ಥಳ ತಲುಪಲು ಬೆಟ್ಟಿಂಗ್ಓಟ. ಸ್ಕೇಟಿಂಗ್ ಕಲಿಯುವಾಗ, ಕಲಿಸುವಾಗ ಸ್ಕೇಟರ್ ಓಟ. ಸ್ಲೋ-ಫಾಸ್ಟ್(ಮೋಟಾರ್) ಸೈಕಲ್ ರೇಸ್ ನಿಯಮ ಪಾಲಿಸುವಾಗ ರೆಫರೀಗಳ ಓಟ.

ಅನಿರೀಕ್ಷಿತವಾಗಿ ಇದ್ದಕ್ಕಿದ್ದಂತೆ ದಿಢೀರೆಂದು ಪ್ರಾರಂಭವಾಗುವ ಅಕಾಲಿಕ(ಹುಚ್ಚು) ಮಳೆ ಅಥವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೆರಳಿಗೆ ಅಥವ ಸೂರಿನೆಡೆಗೆ ಓಟ. ಕೆಸರುಗದ್ದೆಯಲ್ಲಿ ಕೋಣಗಳೊಡನೆ ಕಂಬಳದ ಓಟ. ಫುಟ್ಬಾಲ್, ಹಾಕಿ, ಕ್ರಿಕೆಟ್ ಮುಂತಾದ ಕ್ರೀಡೆಗಳಲ್ಲಿನ ಓಟ.  ರಣರಂಗದಲ್ಲಿ ಸೋತಾಗ ಶತ್ರುವಿನಿಂದ ತಪ್ಪಿಸಿಕೊಳ್ಳುವ ಓಟ, ಗೆದ್ದಾಗ ಜೈತ್ರ ಯಾತ್ರೆಯ ಓಟ.

ಸಂತ ಓಶೋರವರ “ರನ್ನಿಂಗ್ ಕ್ಯನ್ ಆಲ್ಸೊ ಬಿ ಎ ಮೆಡಿಟೇಶನ್” ಸೇರಿದಂತೆ ನೂರಾರು ಬಗೆಯ ಅನಿವಾರ್ಯ ಓಟಗಳಿದ್ದರೂ ಆಧುನಿಕ ಬದುಕಿನ ಅತ್ಯಾಧುನಿಕ ಆರೋಗ್ಯಕ್ಕೆ ಹತ್ತಾರು ರೀತಿಯಲ್ಲಿ ಉಪಯೋಗಕಾರಿ ಓಟಗಳಿದ್ದೇ ಇರುತ್ತವೆ. ಪ್ರಪಂಚದಲ್ಲಿ ಮಾನವನು ಜನಿಸಿದಾಗಿನಿಂದ ಇಂದಿನವರೆಗೂ ಓಡುತ್ತಲೇ ಬಂದಿದ್ದಾನೆ, ಮುಂದೆಯೂ ಓಡುತ್ತಲೇ ಇರುತ್ತಾನೆ. ಓಟವು ಮಾನವನ ಅವಿಭಾಜ್ಯ ಅಂಗವಾಗಿದೆ.

ಕ್ರೀಡಾಲೋಕದಲ್ಲಿ… ‘ಅಥ್ಲೆಟಿಕ್ಸ್’ ಎಂಬುವ ಓಟದ ಸ್ಫರ್ಧೆಯ ಮುಖ್ಯ ವಿಭಾಗದಲ್ಲಿನ ವಿವಿಧ ಓಟದ ಸ್ಪರ್ಧೆಗಳೆಂದರೆ: 100 ಮೀ. ಓಟ, 100 ಮೀ.ಹರ್ಡಲ್ಸ್, 400ಮೀ. ಓಟ, 100×4 ಮೀ. ರಿಲೇ, 400×4 ಮೀ. ರಿಲೇ, ಸ್ಪ್ರಿಂಟ್. ಜತೆಗೆ 5ಕಿ.ಮೀ., 10ಕಿ.ಮೀ., 25ಕಿ.ಮೀ., 50ಕಿ.ಮೀ. ಹೀಗೆ ಅನೇಕ ಬಗೆಯ ಮ್ಯಾರಥಾನ್, ವಾಕಥಾನ್, ಕ್ರಾಸ್ಕಂಟ್ರಿ, ಇತರೆ ಓಟಗಳಿರುತ್ತವೆ. ವಿಶ್ವದ ಖ್ಯಾತ ಮ್ಯಾರಥಾನ್ ಓಟಗಾರನೂ, ಅನೇಕ ಕ್ರೀಡಾ ಪುಸ್ತಕದ ಬರಹಗಾರನೂ ಆದ ಜಪಾನ್ ದೇಶದ ಮುರಾಕಾಮಿ ಬರೆದಿರುವ “ವೆನ್ ಐ ಟಾಕ್ ಅಬೌಟ್ ರನ್ನಿಂಗ್” ಎಂಬ ಪುಸ್ತಕದ ಓದಿನಿಂದ ಲಕ್ಷಾಂತರ ಮಂದಿ ಪುಳಕಿತರಾಗಿ ಓಡುವುದನ್ನು ಅಭ್ಯಾಸ ಮಾಡಿಕೊಂಡರು.

ಇವತ್ತಿಗೂ ಜಗತ್ತಿನಾದ್ಯಂತ ಪ್ರತಿದಿನವು ಒಂದಿಲ್ಲೊಂದು ಬಗೆಯಲ್ಲಿ ಸಾವಿರಾರು ಓಟಗಾರರು ಶಾಲಾ, ಕಾಲೇಜು, ತಾಲೂಕ್, ಜಿಲ್ಲಾ, ವಲಯ, ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರ, ಒಲಂಪಿಕ್ಸ್ ಮಟ್ಟದಲ್ಲಿ ಭಾಗವಹಿಸಿ ಬಹುಮಾನ, ಪ್ರಶಸ್ತಿ ಗೆಲ್ಲುವ ಸಲುವಾಗಿ ಓಡುತ್ತಲೇ ಇದ್ದಾರೆ.

ಆರೋಗ್ಯಕ್ಕಾಗಿ, ಆಯುಷ್ಯಕ್ಕಾಗಿ, ಆನಂದಕ್ಕಾಗಿ, ಹಣಕ್ಕಾಗಿ, ಕೀರ್ತಿಗಾಗಿ, ಓಡುವ ಜನರು ಯಾವಾಗಲೂ ಇರುವಾಗ ‘ಓಟ’ ಎನ್ನುವುದು ನಿರಂತರ ಮತ್ತು ಅಮರ ಎನ್ನುವುದರಲ್ಲಿ ಲವಲೇಶವು ಸಂಶಯವಿಲ್ಲ. ಇಂಥ ಅಪರಿಮಿತ ಓಟದ ಸ್ಮರಣಾರ್ಥವಾಗಿ ಪ್ರತಿ ವರ್ಷ ಜೂನ್ ತಿಂಗಳಿನ ಪ್ರಥಮ ಬುಧವಾರ ಆಚರಿಸುವ “ಜಾಗತಿಕ ಓಟದಿನ” ಆಚರಣೆಯು ಕಳೆದ ಹಲವಾರು ವರ್ಷಗಳಿಂದ ಪ್ರತೀತಿಯಲ್ಲಿದ್ದು,  ಕಾಲಕ್ರಮೇಣ ಭಾರತದಲ್ಲಿ ಜಾರಿಗೆ ಬಂದಿದೆ.

ಭಾರತದಲ್ಲಿ ಅಪೂರ್ವ ಎನಿಸುವ ಓಟದ ದಿನಾಚರಣೆ ಕೈಗೊಳ್ಳುವಲ್ಲಿ ಅರ್ಥವಿದೆ ಸಾರ್ಥಕತೆಯೂ ಇದೆ. ಹೀಗಾಗಿ, ಬನ್ನಿರಿ ನಾವು ಕೂಡ ಓಡೋಣ? ಎಲ್ಲರೂ ಜತೆಗೂಡಿ ಓಡುವ ಮೂಲಕ ಓಟದ ದಿನ ಆಚರಣೆಯನ್ನು ಅಕ್ಷರಶಃ ಕಾರ್ಯಗತ ಮಾಡೋಣ. ತತ್ಪರಿಣಾಮ ಲಭಿಸುವ ಆರೋಗ್ಯ ಆಯುಷ್ಯ ಗಳಿಸೋಣ! ಏನಂತೀರಾ…

ಕುಮಾರಕವಿ ನಟರಾಜ್ ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

admin
the authoradmin

Leave a Reply

Translate to any language you want