FIFA worldcup FOOTBALL 2026: ವಿಶ್ವಕಪ್ ಫುಟ್‍ಬಾಲ್… ಸಾವಿರಾರು ವರ್ಷಗಳ ವೈಭವದ ಇತಿಹಾಸ!
ಇದು ವಿಶೇಷ ಲೇಖನದ ಭಾಗ-1

ಈಗ ಜಗತ್ತಿನಾದ್ಯಂತ ಫುಟ್ಭಾಲ್ ನ ಜ್ವರ ಶುರುವಾಗಿದೆ.. ಕಾರಣ ಫಿಫ ವರ್ಲ್ಡ್ ಕಪ್ ಫುಟ್ಭಾಲ್… ಜಗತ್ತು ಅತ್ತ ಕಡೆ ಮುಖ ಮಾಡಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಫುಟ್ಭಾಲ್ ಇತಿಹಾಸ ಮತ್ತು ಫಿಫ ಕಪ್ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ.
ಜಗತ್ತಿನ ಅತ್ಯಂತ ಪುರಾತನ ಮತ್ತು ನಂ.1 ಜನಪ್ರಿಯ ಕ್ರೀಡೆ ಫುಟ್ಬಾಲ್ ಅಥವಾ ಸಾಕರ್, ಕನ್ನಡದಲ್ಲಿ ಕಾಲ್ಚೆಂಡಾಟ! ಫುಟ್‍ಬಾಲ್ ಕ್ರೀಡೆಗೆ 3000ಕ್ಕೂ ಅಧಿಕ ವರ್ಷಗಳ ವೈಭವ ಇತಿಹಾಸವಿದೆ! ಗತಕಾಲದಿಂದಲೂ ಯೂರೋಪಿನ ಬಹುತೇಕ ರಾಷ್ಟ್ರಗಳಲ್ಲಿ ದಿನಚರಿ ಆಟವಾಗಿ ಹುಟ್ಟಿಕೊಂಡದ್ದು ಕಾಲಕ್ರಮೇಣ ಬೃಹದಾಕಾರವಾಗಿ ಪ್ರಪಂಚದಾದ್ಯಂತ ಬೆಳೆದು ಇಂದಿನವರೆಗೂ ಅಳಿಯದೇ ಉಳಿದಿರುವಂಥ ಏಕೈಕ ಅಂತಾರಾಷ್ಟ್ರೀಯ ಕ್ರೀಡೆ. ಐರೋಪ್ಯದ ‘ಎಪಿಸ್ಕೊಸ್’ ಮತ್ತು ಗ್ರೀಸ್-ರೋಮ್‍ನ ‘ಹರ್ಪಾಸ್ಟಂ’ ಎಂಬ ಎರಡು ಆಟಗಳ ಮಿಲನದಿಂದಾದ ರೂಪಾಂತರವೆ ‘ಸಾಕರ್’..! 1848ರಲ್ಲಿ ಫುಟ್‍ಬಾಲ್‍ನ ಕ್ರೀಡಾಸಂಕೇತ ಮತ್ತು ನಿಯಮಾವಳಿ ರೂಪುಗೊಂಡು 1857ರಲ್ಲಿ ಶೆಫೀಲ್ಡ್ ಫುಟ್ಬಾಲ್ ಕಪ್ ಟೂರ್ನಮೆಂಟ್ ಪ್ರಾರಂಭವಾಯಿತು.

1863ರಲ್ಲಿ ಫುಟ್ಬಾಲ್ ಒಕ್ಕೂಟವು ಅಸ್ತಿತ್ವಕ್ಕೆ ಬಂದು ಜಾಗತಿಕ ಫುಟ್ಬಾಲ್ ನೀತಿ, ಕಟ್ಟಳೆ ಜಾರಿಗೊಂಡಿತು. 1886ರಲ್ಲಿ ಅಂತರ್ ರಾಷ್ಟ್ರೀಯ ಫುಟ್ಬಾಲ್ ಮಂಡಳಿ ರಚನೆಗೊಂಡು ಐರಿಶ್, ಮ್ಯಾಂಚೆಸ್ಟರ್, ಸ್ಕಾಟ್ಲೆಂಡ್, ವೇಲ್ಸ್ ದೇಶಗಳ ಸಹಯೋಗದಲ್ಲಿ ಪ್ರಪಂಚದ ಅತ್ಯಂತ ಪುರಾತನವಾದ ‘ಎಫ್.ಎ.ಕಪ್’ ಫುಟ್ಬಾಲ್ ಪಂದ್ಯಾವಳಿ ಸ್ಥಾಪನೆಗೊಂಡಿತು. 1872ರಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯವು ಅಧಿಕೃತವಾದ ‘ಪ್ರಪ್ರಥಮ ಅಂತಾರಾಷ್ಟ್ರೀಯ ಫುಟ್ಬಾಲ್ ಸ್ಫರ್ಧೆ’ ಎನಿಸಿ ಫುಟ್ಬಾಲ್ ಕ್ರೀಡಾಇತಿಹಾಸದ ಪುಟಸೇರಿತು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ರಾಜ್ಯ, ರಾಷ್ಟ್ರ ಅಂತರ್ರಾಷ್ಟ್ರ ಮಟ್ಟದ ಪ್ರತಿ ಫುಟ್ಬಾಲ್ ಪಂದ್ಯವು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹುಟ್ಟುಹಾಕಿತು.

ಫೀಫ (FIFA: FEDERATION OF INTERNATIONAL FOOTBALL ASSOCIATION):
1863ರಲ್ಲಿ ಇಂಗೆಂಡ್ನಲ್ಲಿ ಅಂತರ್ರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ[ಪಿಫ] ಸ್ಥಾಪನೆಗೊಂಡಿತು. ಕಾಲಕ್ರಮೇಣ ದಶದಿಕ್ಕುಗಳಲ್ಲಿ ಹರಡುತ್ತಾ ಇಂದು 208 ದೇಶಗಳಲ್ಲಿ ಪ್ರಮುಖ ಕ್ರೀಡೆಯಾಗಿ ಹಬ್ಬಿದೆ. 12.50 ಕೋಟಿ ಆಟಗಾರರಿದ್ದು, 350 ಕೋಟಿಗೂ ಹೆಚ್ಚು ಪ್ರೇಕ್ಷಕರನ್ನು 250 ಕೋಟಿಗೂ ಅಧಿಕ ಅಭಿಮಾನಿಗಳನ್ನು ಹೊಂದಿದೆ. ಪ್ರಪಂಚದಲ್ಲಿ ಅಂದಿನಿಂದ ಇಂದಿನವರೆಗೂ ನೂರಾರು ಬಗೆ ನೂತನ ಕ್ರೀಡೆಗಳು ಹುಟ್ಟಿಕೊಂಡರೂ ಫುಟ್ಬಾಲ್ ಪಂದ್ಯವು ಮಾತ್ರ ಇವತ್ತಿಗೂ ವಿಶ್ವದ ಅತ್ಯಂತ ಜನಪ್ರಿಯ ನಂ.1 ಕ್ರೀಡೆ ಆಗಿ ಉಳಿದುಕೊಂಡಿದೆ. ಪ್ರತಿ 4 ವರ್ಷಕ್ಕೊಮ್ಮೆ ಜರುಗುವ ಫೀಫ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಸಾವಿರಾರು ಕೋಟಿ ಹಣ ಖರ್ಚುವೆಚ್ಚ ತಗುಲಿದರೂ ಹತ್ತುಪಟ್ಟು ಆದಾಯ ಗಳಿಸಿಕೊಡುತ್ತದೆ.
ಪ್ರತಿಯೊಂದು ಅಂತಾರಾಷ್ಟ್ರೀಯ/ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಕನಿಷ್ಠ 15ದಿನ ಮತ್ತು ಗರಿಷ್ಠ 30ದಿನ ಜರುಗಲಿದ್ದು ಪ್ರತಿಸಾರಿಯೂ ಹಲವಾರು ನೂತನ ವಿಶ್ವದಾಖಲೆ ಸೃಷ್ಟಿಯಾಗುತ್ತವೆ. ಹುಚ್ಚು ಅಭಿಮಾನಿಗಳು ತಮ್ಮ ಆಸ್ತಿ ಮನೆ ಕಾರು ಹಣ ಪ್ರಾಣ ಕಳೆದು ಕೊಂಡ ಅನೇಕ ಉದಾಹರಣೆ ಇದೆ.

2026 ಫೀಫ ಫುಟ್ಬಾಲ್ ವಿಶ್ವಕಪ್-2026 ಇದರ ವಿಶೇಷತೆ ಏನು?
ಪ್ರತಿ 4 ವರ್ಷಕ್ಕೊಮ್ಮೆ ಜೂನ್-ಜುಲೈ ತಿಂಗಳಲ್ಲಿ ನಡೆಯಲಿರುವ ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಮೆಂಟ್ ಈ ಬಾರಿ ಇದೇ 2026ರ ಜೂನ್ 11 ಗುರುವಾರದಿಂದ ಪ್ರಾರಂಭವಾಗಿ ಜುಲೈ19 ಭಾನುವಾರದವರೆಗೆ ಜರುಗಲಿದೆ. ಇಡೀ ಪ್ರಪಂಚವೆ ಕಣ್ಣರಳಿಸಿ ಕಾತುರದಿಂದ ಕಾದುನೋಡುವ ಕುತೂಹಲ ರೋಮಾಂಚನ ಅದ್ಭುತ ಅಪೂರ್ವದ ಈ 2026ರ ಟೂರ್ನಿಯು ಉತ್ತರ ಅಮೆರಿಕ ಖಂಡದ 3 ದೇಶಗಳ ಜಂಟಿ ಆಯೋಜನೆ ಮೂಲಕ ಮೆಕ್ಸಿಕೋ ದೇಶದ ಮೆಕ್ಸಿಕೋ ನಗರದಲ್ಲಿ ಜರುಗಲಿದೆ. 11.6.2026ರಂದು ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವೆ ಜರುಗುವ ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟು 104 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯದ ನಂತರ 19.7.2026ರಂದು ಪ್ರಪಂಚದ ತಾರಾಶ್ರೇಷ್ಟರ ಮತ್ತು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಅತ್ಯಂತ ಅದ್ಧೂರಿ ಮತ್ತು ವಿಜೃಂಭಣೆಯಿಂದ ಫಿಫ 2026 ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.
ಭಾರತದ ಫುಟ್‍ಬಾಲ್ ಚರಿತ್ರೆಯ ಮೆಲುಕು ಹಾಕೋಣ
1898ರಿಂದ 1947ರವರೆಗೆ ಭಾರತದ ಅವಿಭಜಿತ ಬಂಗಾಳ, ಮಣಿಪುರ, ಗೋವ ಹಾಗೂ ಕೇರಳ ನಾಲ್ಕು ರಾಜ್ಯಗಳಲ್ಲಿ ಮಾತ್ರ ಫುಟ್ಬಾಲ್ ಕ್ರೀಡೆಯ ಪರಿಚಯ ಇತ್ತು. ಆದರೆ ಕ್ರಿಕೆಟ್‍ಗೆ ಹೆಚ್ಚು ಅವಕಾಶ ನೀಡಿದ ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ಬೆಂಬಲ ನೀಡದೆ ಬೆಳೆಯದಂತೆ ಮಾಡಿತು. ಸ್ವಾತಂತ್ರ್ಯಾನಂತರ 1950ರ ದಶಕದಲ್ಲಿ ಫುಟ್ಬಾಲ್ ಕ್ರೀಡೆಯ ಸುವರ್ಣ ಯುಗ ಭಾರತದಲ್ಲಿ ಪ್ರಾರಂಭವಾಯ್ತು. ಭಾರತೀಯ ತಂಡವು ಸಯ್ಯದ್ ಅಬ್ದುಲ್ ರಹೀಂ ನಾಯಕತ್ವದಲ್ಲಿ ಏಷ್ಯನ್ ಕಪ್ ಕ್ರೀಡಾ ಕೂಟದಲ್ಲಿ ಇಂಡೋನೇಷ್ಯ, ಆಫ್ಘಾನಿಸ್ತಾನ್ ತಂಡಗಳನ್ನು ಸೋಲಿಸುವುದರ ಮೂಲಕ ಮೊದಲ ಬಾರಿಗೆ ಏಷ್ಯಾ ಕಪ್ ಗೆದ್ದು ಇತಿಹಾಸ ಬರೆಯಿತು.

1956ರ ಏಷ್ಯನ್ ಕಪ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಪಂಚದ ಗಮನ ಸೆಳೆಯಿತು. 1966ರಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸಂಸ್ಥೆಯು ಗೋವಾದಲ್ಲಿ ನಡೆಸಿದ ನ್ಯಾಶನಲ್ ಫುಟ್ಬಾಲ್ ಲೀಗ್ ಟೂರ್ನಮೆಂಟ್ ಕ್ರೀಡಾ ಕೂಟದಿಂದ ವಿಶ್ವ ಫುಟ್ಬಾಲ್ ಭೂಪಟದಲ್ಲಿ ಭಾರತವೂ ಕಾಣಿಸಿಕೊಳ್ಳುವಂತೆ ಮಾಡಿ ಕೋಟಿಕೋಟಿ ಭಾರತೀಯರ ಮೆಚ್ಚುಗೆ ಗಳಿಸಿತು. 33ವರ್ಷ ಅಜ್ಞಾತವಾಸದ ನಂತರ 2000ನೇ ಇಸವಿಯಲ್ಲಿ ಮರುಜನ್ಮ ಪಡೆದು ಈವರೆಗೆ ತನ್ನ ಜೈತ್ರಯಾತ್ರೆ ಮುಂದುವರಿಸಿ ಕೊಂಡು ಬರುತ್ತಿರುವುದು ಶ್ಲಾಘನೀಯ.
1950ರಷ್ಟು ಹಿಂದೆ ಭಾರತ ತಂಡವು ಅರ್ಹತೆ ಸುತ್ತಿಗೆ ಕ್ವಾಲಿಫೈ ಆಗಿದ್ದರೂಸಹ ಭಾರತೀಯ ಆಟಗಾರರು ಶೂ ಧರಿಸಿ ಅಥವ ಬರಿಗಾಲಲ್ಲಿ ಆಡಬೇಕೋ ಬೇಡವೋ? ಎಂಬ ದ್ವಂದ್ವ ಜಿಜ್ಞಾಸೆಯ ಸಮಸ್ಯೆಯನ್ನು ಬಗೆಹರಿಸದೆ ಇರುವುದರಿಂದ ಈ ವಿಶ್ವಕಪ್ ಪಂದ್ಯಾವಳಿಯಲ್ಲು ಆಡುವ ಅವಕಾಶ ವಂಚಿತರಾಗಿದ್ದಾರೆ. 2006ರಲ್ಲಿ ವಿದೇಶೀ ಆಟಗಾರ ಬಾಬ್ ಹೂಗ್ಟನ್ ಕೋಚ್‍ಆದ ನಂತರ ಭಾರತ ತಂಡವು ಪುನಶ್ಚೇತನ ಕಂಡಿತು. ನೆಹರೂ ಕಪ್ ಫುಟ್ಬಾಲ್ ಪಂದ್ಯಾವಳಿ 2007ರಲ್ಲಿ ಪ್ರಥಮ ಬಾರಿಗೆ ಸಿರಿಯ ದೇಶವನ್ನು1-0ಗೋಲ್ನಿಂದ ಪರಾಭವಗೊಳಿಸಿದ ಭಾರತ ತನ್ನ ಚೊಚ್ಚಲ ಅಂತರಾಷ್ಟ್ರೀಯ ಕಾಲ್ಚೆಂಡಾಟ ವಿಜಯದ ನವಯುಗಕ್ಕೆ ನಾಂದಿ ಹಾಡಿತು.

ಇದೇ ಜೋಶನ್ನು ಸತತ ಪರಿಶ್ರಮದಿಂದ ಮುಂದು ವರೆಸಿದ್ದೇ ಆದರೆ 2030ರ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ನಿಖರ?!2026 ವಿಶ್ವ ಕಪ್ ಟೂರ್ನಿಯಲ್ಲಿ ಭಾರತೀಯ ತಂಡವೇಕೆ ಆಡುತ್ತಿಲ್ಲ? ಎಂಬ ನೋವನ್ನು ಭಾರತೀಯರಾದ ನಾವು ಅನಿವಾರ್ಯವಾಗಿ ಮರೆತು ಎಲ್ಲಾದಿನ ಈ ಕ್ರೀಡೆಯನ್ನು ಕಣ್ತುಂಬಿ ಕೊಳ್ಳೋಣ! ಮುಂದಿನ 2030ರ ಫೀಫಾ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಲ್ಲಿ ಭಾರತೀಯ ತಂಡವೂ ಭಾಗವಹಿಸಲೆಂದು ದೇವರನ್ನು ಪ್ರಾರ್ಥಿಸೋಣ?

ಜಗತ್ತಿನ ನಂ.1 ಕ್ರೀಡೆ ಫುಟ್ಭಾಲ್…. ಈ ಕ್ರೀಡೆ ಹಿಂದಿನ ನಾವು-ನೀವು ಅರಿಯದ ರೋಚಕ ವಿಚಾರಗಳು ಏನೇನು?







