LatestNews

ಸೋಮವಾರಪೇಟೆ ರಾಜ್ಯೋತ್ಸವದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ಸೇರಿ ಸಾಧಕರಿಗೆ ಸನ್ಮಾನ

ಸೋಮವಾರಪೇಟೆ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಪಟ್ಟಿಯಲ್ಲಿ, ಕಳೆದ 22 ವರ್ಷಗಳಿಂದ ಸತತವಾಗಿ ಕನ್ನಡಪರ ಹೋರಾಟ ಹಾಗೂ ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು ಪ್ರಮುಖರಾಗಿದ್ದು, ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ನೇತೃತ್ವ ವಹಿಸಿದ್ದ ತಹಶೀಲ್ದಾರರು ಹಾಗೂ ಪ್ರಮುಖ ಗಣ್ಯರು ವೇದಿಕೆಯಲ್ಲಿ ಫ್ರಾನ್ಸಿಸ್ ಡಿಸೋಜ ಹಾಗೂ ಇತರ ಸಾಧಕರಿಗೆ ಹಾರ ಹಾಕಿ, ಶಾಲು ಹೊದಿಸಿ, ಫಲ ಪುಷ್ಪ ಹಾಗೂ ಪುಸ್ತಕ ನೀಡಿ ಅತ್ಯಂತ ಗೌರವಪೂರ್ವಕವಾಗಿ ಭವ್ಯವಾಗಿ ಸನ್ಮಾನಿಸಿದರು. ಪ್ರಾಸಿಸ್ ಡಿಸೋಜ ಅವರು ಬರೋಬ್ಬರಿ 32 ಬಾರಿ ರಕ್ತದಾನ ಮಾಡಿರುವುದಲ್ಲದೆ, ವಿವಿಧೆಡೆ ಬೃಹತ್ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ರಸ್ತೆ ಬದಿಯಲ್ಲಿದ್ದ 400ಕ್ಕೂ ಹೆಚ್ಚು ನಿರ್ಗತಿಕರು ಮತ್ತು ಅನಾಥರನ್ನು ರಕ್ಷಿಸಿ ಆಶ್ರಮಗಳಿಗೆ ಸೇರಿಸಿದ್ದಾರೆ. ಕೋವಿಡ್ ಮಹಾಮಾರಿ ಹಾಗೂ ಕೊಡಗಿನ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ತಿಂಗಳ ಆಹಾರದ ಕಿಟ್ ವಿತರಿಸಿದ್ದಾರೆ. ಬೆಂಗಳೂರಿನ ಟ್ರಸ್ಟ್‌ಗಳ ಸಹಕಾರದೊಂದಿಗೆ ಮನೆ ಕಳೆದುಕೊಂಡ 13 ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ದುರಸ್ತಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನೆರವು ಕಲ್ಪಿಸಿದ್ದಾರೆ.

ಬಡವರ ದಾಖಲೆಗಳನ್ನು ಒದಗಿಸಿ 500ಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಪಿಂಚಣಿ (ಪೆನ್ಷನ್) ದೊರಕಿಸಿಕೊಟ್ಟ ಅಪೂರ್ವ ಸಾಧನೆ ಇವರದ್ದಾಗಿದೆ. ಜೊತೆಗೆ ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಾಗೂ ರಸ್ತೆ ಸುರಕ್ಷತಾ ಕಾರ್ಯಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಹಂಸ ಪಕ್ಷಿಯಂತೆ ಸದಾ ಪಾರದರ್ಶಕ ಹಾಗೂ ಪವಿತ್ರ ಮನಸ್ಸಿನಿಂದ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಫ್ರಾನ್ಸಿಸ್ ಡಿಸೋಜ ಅವರ ಸಮಾಜಮುಖಿ ಸೇವೆಗೆ ಸಂದ ಈ ಗೌರವವು ಅತ್ಯಂತ ಸೂಕ್ತವಾಗಿದೆ

ಈ ಸಂದರ್ಭದಲ್ಲಿ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಮುಖ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಸಾಧಕರಿಗೆ ಶುಭ ಹಾರೈಸಿದರು.

admin
the authoradmin

ನಿಮ್ಮದೊಂದು ಉತ್ತರ