ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
41 ಕೃತಿ: ಎಳೆಯರಿಗಾಗಿ ಮಾರ್ಕ್ಸ್ ವಾದ
ಮಲಯಾಳಂ ಮೂಲ ಲೇಖಕ : ಪಿ.ಟಿ.ಭಾಸ್ಕರಪಣಿಕ್ಕರ್
ಕನ್ನಡಕ್ಕೆ ಅನುವಾದ : ಕೆ.ಚಂದ್ರಹಾಸ
ಮೂಲತಃ ಮಲಯಾಳಂ ಭಾಷೆಯಲ್ಲಿ ಬರೆದವರು ಪಿ.ಟಿ.ಭಾಸ್ಕರ ಪಣಿಕ್ಕರ್. ನಂತರ ಕನ್ನಡ ಭಾಷೆಗೆ ಅನುವಾದ ಮಾಡಿದವರು ಖ್ಯಾತ ಅನುವಾದ ಲೇಖಕ ಕೆ.ಚಂದ್ರಹಾಸ. ಅದೇಕೋ ಏನೋ ಅದ್ಯಾವ ಕಾಲದಲ್ಲೋ ಯಾರಿಗೂ ಇಷ್ಟವಾಗದ ಮತ್ತು ಅನುಸರಿಸಲು ಕಷ್ಟವಾದ ಮಾರ್ಕ್ಸ್ ವಾದ ಭಾರತದಲ್ಲಿ ಅಸ್ತ್ವಿತ್ವಕ್ಕೆ ಬಂದುದೇ ದುರದೃಷ್ಟಕರ?!
‘ಎಳೆಯರಿಗಾಗಿ ಮಾರ್ಕ್ಸ್ ವಾದ ‘ ಮೂಲ ಮಲಯಾಳಮ್ ಕೃತಿಯ ಕನ್ನಡಾನುವಾದ. ಇದರಲ್ಲಿನ ಒಟ್ಟು ಹತ್ತು ಅಧ್ಯಾಯಗಳಲ್ಲಿ ಮಾರ್ಕ್ಸ್ ವಾದ ಬಗ್ಗೆ ಎಲ್ಲವನ್ನು ಮಕ್ಕಳಿಗೆ ಸರಳವಾಗಿ ನಿರೂಪಿಸಲಾಗಿದೆ. ಬಾಲಕರಿಗೆಂದು ಬರೆದ ಈ ಪುಸ್ತಕದಲ್ಲಿ ಅಡಕಗೊಳಿಸಲಾದ ರಾಜಕೀಯ ಪಕ್ಷದ ಚರಿತ್ರೆಯು ಅದೆಷ್ಟರ ಮಟ್ಟಿಗೆ ಎಳೆಯರಿಗೆ; ಅಗತ್ಯ ಅನಿವಾರ್ಯ ಎಂಬುದೇ ಯಕ್ಷಪ್ರಶ್ನೆ? “ಬಾಲಸಾಹಿತ್ಯವೆಂದರೆ ಕೇವಲ ಕತೆ ಪದ್ಯ ಎಂಬ ಭಾವನೆ ಇರುವ ಇವತ್ತಿನ ದಿನಗಳಲ್ಲಿ ಮಕ್ಕಳಲ್ಲು ರಾಜಕೀಯ ಪ್ರಜ್ಞೆ ಮೂಡಿಸಲು ಇಂಥ ಪುಸ್ತಕ ನೆರವಾಗುತ್ತದೆ”ಎಂಬುದು ಕೃತಿಯ(ಲೇಖಕ-ಅನುವಾದಕ-ಪ್ರಕಾಶಕ-ಮಾರಾಟಗಾರ) ಸೃಷ್ಟಿಕರ್ತರೆಲ್ಲರ ಅ-ಸಮರ್ಥನಾ ಅಭಿಪ್ರಾಯ. ಆದರೆ, ವಿದ್ಯಾವಂತ ಜಾಗರೂಕ ಪೋಷಕರ ದೃಷ್ಟಿಯಲ್ಲಿ ಹಾಗೂ ಪ್ರಜ್ಞಾವಂತ ಶಾಲಾಶಿಕ್ಷಕರ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಇದು ಸರಿ ಮತ್ತು ಅದೆಷ್ಟು ಸಹಕಾರಿ?!
(1.12.1983 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)
- ಕೃತಿ: ಆಯುರ್ವೇದಕುಟುಂಬ ಕೈಪಿಡಿ
ಲೇಖಕ : ಅಭಿನವ ಸುಶ್ರುತ
ಅನುದಿನ ನಮ್ಮ ಜೀವನದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಖಾಯಿಲೆಗಳಿಗೆ ನಮ್ಮ ಪರಿಸರದ ಸುತ್ತಮುತ್ತ ದೊರಕುವಂಥ ಅಥವ ಬೆಳೆದಿರುವಂಥ ಗಿಡಮೂಲಿಕೆ- ಮರಗಳಿಂದ ಚಿಕಿತ್ಸೆ ಮಾಡಿಕೊಳ್ಳುವುದು ಹೇಗೆ? ಎಂಬ ವಿವರಗಳು ‘ಆಯುರ್ವೇದ ಕುಟುಂಬ ಕೈಪಿಡಿ’ ಪುಸ್ತಕದಲ್ಲಿ ದೊರಕುತ್ತವೆ.
‘ಮನೆಯ ಮದ್ದು’ ಖ್ಯಾತಿಯ ಲೇಖಕ ಅಭಿನವ ಸುಶ್ರುತರು ‘ಹಿತ್ತಲಗಿಡ ಮದ್ದಲ್ಲ’ ನಾಣ್ಣುಡಿಯು ಸುಳ್ಳು ಎಂಬುದನ್ನು ಪ್ರತಿಪಾದಿಸಿ ಅನೇಕ ಆಯುರ್ವೇದ ಔಷಧಗಳ ಉಪಯೋಗ ಮತ್ತು ಅವುಗಳಿಂದಾಗುವ ಉಪಶಮನದ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಮ್ಮ ಕೃತಿಯ ಮೂಲಕ ಮಾರ್ಗದರ್ಶನ ಮಾಡಿದ್ದಾರೆ.
ಇಂದಿನ ಕಲಬೆರಕೆ ಮಿಶ್ರಣ ರಾಸಾಯನಿಕ ಮೂಲ ಆಹಾರದಿಂದ ಪ್ರತಿನಿತ್ಯ ಪ್ರತಿಕುಟುಂಬದಲ್ಲಿ ಮಾಮೂಲಾಗಿ ಕಂಡುಬರುವ ಸಣ್ಣಪುಟ್ಟ ರೋಗಗಳಿಗೆ ತಾತ್ಕಾಲಿಕ ಉಪಶಮನ ನೀಡುವ ಕೈಪಿಡಿ ಇದಾಗಬಹುದು. ಆಯುರ್ವೇದ ಔಷಧ ಉಪಯೋಗಿಸುವ ವಿಧಾನವನ್ನು ಹಂತಹಂತವಾಗಿ ಬಿಡಿಸಿ ಅತ್ಯಂತ ಜಾಣ್ಮೆಯಿಂದ ಸುಲಭವಾಗಿ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆದಿದ್ದಾರೆ. ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳಲು ಅರ್ಹವಾದ ಆರೋಗ್ಯ ಮಾಹಿತಿಯ ಪುಟ್ಟ ನಿಘಂಟು!
(ನವೆಂಬರ್1983 ‘ಗ್ರಂಥಲೋಕ’ ಮಾಸಪತ್ರಿಕೆಯಲ್ಲಿ ಪ್ರಕಟಿತ)
43 ಕೃತಿ: ಪಾದೋದಕ
ಕರ್ತೃ: ಪಂ.ನಾಗಭೂಷಣಶಾಸ್ತ್ರಿ
ನಾಡಿನ ವೀರಶೈವ ವಿದ್ವಾಂಸರೂ ಖ್ಯಾತಿವೆತ್ತ ಕನ್ನಡ ಪಂಡಿತರೂ ಆದ ನಾಗಭೂಷಣಶಾಸ್ತ್ರಿಯವರು ಕರ್ನಾಟಕ ರಾಜ್ಯದಾದ್ಯಂತ “ಪಾದೋದಕ” ಕುರಿತು ತಾವು ಮಾಡಿದ ಭಾಷಣವನ್ನು ಹೊತ್ತಗೆಯ ರೂಪದಲ್ಲಿ ಪ್ರಕಟಿಸಿದ್ದಾರೆ. ತಾವೇ ರಚಿಸಿದ? ಕೆಲವಾರು ಭಕ್ತಿಗೀತೆಗಳನ್ನೂ ಸಹ ಅಲ್ಲಲ್ಲಿ ಪುಸ್ತಕದ ಸಾರಾಂಶವನ್ನಾಗಿ ಸೇರಿಸಿದ್ದಾರೆ! ಇದಂತೂ ಇಲ್ಲಿ ಅಪ್ರಸ್ತುತ ಎನಿಸುತ್ತದೆ?. ಒಂದು ಉದಾಹರಣೆಗೆ ಹೀಗಿದೆ :-
“ಮಹಾದೇವ ರೂಪಂ……. ” ಮತ್ತು
“ಮೂಲ ನಿರಂಜನ……” ಮುಂತಾದ ಪದ್ಯಗಳು ಶಿವಭಕ್ತರಿಗೂ, ದೈವವನ್ನು ನಂಬುವಂಥವರಿಗೂ, ಆಧ್ಯಾತ್ಮಿಕ ಅಥವ ವೈರಾಗ್ಯವಂತ ಭಾವುಕರಿಗೂ ಪ್ರಿಯ ಎನಿಸಬಹುದು.
ಪಂಡಿತ್ ನಾಗಭೂಷಣ ಶಾಸ್ತ್ರಿಯವರ ಬಹುತೇಕ ಕೃತಿಗಳು ಈ ಬಗೆಯದ್ದಾಗಿರುತ್ತವೆ ಎಂಬುದೇ ಕೆಲವರಿಗೆ ಅಲರ್ಜಿ. ಜತೆಗೇ “ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ರಚನೆಯೆ ಶ್ರೇಷ್ಠ” ಎಂಬ ಸ್ವಪ್ರತಿಷ್ಟೆಯನ್ನು ಎಲ್ಲರೂ ಒಪ್ಪಲೇಬೇಕಿಲ್ಲ, ಇದನ್ನೆ ಲೇಖಕ ನಿರೀಕ್ಷಿಸುವುದೂ ಸರಿಯಲ್ಲ. ಒಟ್ಟಾರೆ ಯಾರೋ ನೀಡಿದ ಭಾಷಣ, ಪ್ರವಚನ, ಇತ್ಯಾದಿ ಆಧಾರಿತವಾದ ಇಂತಹ ಪುಸ್ತಕಗಳು ಜನಪ್ರಿಯತೆ ಕಾಣುವುದು ಕಠಿಣ, ಮಾರಾಟ ಆಗುವುದು ವಿರಳ.
(ನವೆಂಬರ್ 1983’ಗ್ರಂಥಲೋಕ’ ಮಾಸಪತ್ರಿಕೆಯಲ್ಲಿ ಪ್ರಕಟ)
44 ಕೃತಿ: ನಕ್ರ ಹಾಗೂ ನಾನು(ಕಥಾಸಂಕಲನ)
ಕರ್ತೃ : ಹಾಡ್ಲಹಳ್ಳಿ ನಾಗರಾಜ್
ಹಾಡ್ಲಹಳ್ಳಿ ನಾಗರಾಜರ 2ನೇ ಕಥಾ ಸಂಕಲನವಾದ ಇದರಲ್ಲಿ ಒಟ್ಟು ಏಳು ಕತೆಗಳಿವೆ. ಈತ, ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ಯುವ ಲೇಖಕರಲ್ಲೊಬ್ಬ ಮಾತ್ರವಲ್ಲ, ಓರ್ವ ಗ್ರಾಮೀಣ ಪ್ರತಿಭಾವಂತ ಕತೆಗಾರನೂ ಹೌದು! ಗದ್ಯ-ಪದ್ಯ ಎರಡೂ ಪ್ರಾಕಾರಗಳಲ್ಲಿ ಹಿಡಿತ ಹೊಂದಿರುವ ಸೃಜನಶೀಲ ಸಾಹಿತಿ. ಇದೇ ಗಟ್ಟಿತನದ ಗುಣಮಟ್ಟವನ್ನು ವೇಗವಾಗಿ ಮುಂದುವರೆಸಿದಲ್ಲಿ, ಸಾವಕಾಶವಾಗಿ ಆದರೆ ನಿಶ್ಚಯ ವಾಗಿ ಕನ್ನಡದ ಸಾಹಿತ್ಯ ಸಾಧಕ ಆಗುವಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಆದರ್ಶವಾದಿ ಕತೆಗಾರನೊಬ್ಬ ತನ್ನ ಹೆತ್ತವರಿಗೋಸ್ಕರ ತನಗಿಷ್ಟವಿಲ್ಲದ ಹುಡುಗಿಯನ್ನ ಮದುವೆಯಾಗುವನು. ಆ ನಂತರ ಅವನಿಗೊಂದು ಉದ್ಯೋಗ ಲಭ್ಯವಾಗುತ್ತದೆ. ಆದರೂ ನಿರುದ್ಯೋಗಿ ಆಗಿದ್ದಾಗ ಇದ್ದಂಥ ನೆಮ್ಮದಿಯನ್ನು ನೀಡುವುದಿಲ್ಲ! ಇದಕ್ಕೆ ಪ್ರಮುಖ ಕಾರಣವೆಂದರೆ ತನ್ನವಳಲ್ಲಿ ಇರದ ‘ಸ್ಫೂರ್ತಿ’ಯನ್ನು ನಿರಂತರವಾಗಿ ಹುಡುಕುತ್ತಾ ಹೋಗಿ ಕೊನೆಗೆ ಸೋಲನ್ನು ಒಪ್ಪಿಕೊಳ್ಳುತ್ತಾನೆ.
‘ತೀಟೆ’ ಎಂಬ ಕತೆಯಲ್ಲಿ ರತಿಯಂಥ ಹೆಂಡತಿ, ಷಂಡನಂಥ ಗಂಡ. ಈ ಶ್ರೀಮಂತ ದಂಪತಿಯು ತಮ್ಮ ವಂಶದ ಕುಡಿಗಾಗಿ ಬಹಳ ಆಸೆ ಪಡುತ್ತಿದ್ದರೂ ಸಮಾಜದ ಕಣ್ಣಿಗೆ ನಿಸ್ವಾರ್ಥರಂತೆ, ಸ್ವಾಭಿಮಾನಿಗಳಂತೆ ನಟನೆ ಮಾಡುತ್ತಿರುತ್ತಾರೆ. ಕ್ರಮೇಣ ಒಬ್ಬ ಮುಗ್ಧ ವಿದ್ಯಾರ್ಥಿಯನ್ನು ಮೋಹದ ಬಲೆಗೆ ಬೀಳಿಸಿಕೊಂಡು ತಮ್ಮ ಸ್ವಾರ್ಥ-ಕಾರ್ಯ ಸಾಧಿಸಿಕೊಳ್ಳುತ್ತಾರೆ. ಆದರೆ, ದಿಢೀರ್ ಪುರಸ್ಕಾರ-ತಿರಸ್ಕಾರಗಳ ಘರ್ಷಣೆಗೆ ಒಳಗಾದ ಸದರಿ ವಿದ್ಯಾರ್ಥಿಯ ವಿದ್ಯಾರ್ಥಿಜೀವನವು ವಿನಾಕಾರಣ ಹಾಳಾಗುತ್ತದೆ. ಹೀಗೆ ವಿವಿಧ ಬಗೆಯ ಸಾಮಾಜಿಕ ನೋವು ನಲಿವು ಮುಂತಾದವು ಇಲ್ಲಿನ ಕತೆಗಳಲ್ಲಿ ಸುಂದರವಾಗಿ ಚಿತ್ರಿತಗೊಂಡಿವೆ.
ಉದಯೋನ್ಮುಖ ಬರಹಗಾರ ನಾಗರಾಜ್ ತಮ್ಮದೇ ಆದ ಹೊಸ ಜಾಡಿನತ್ತ ಮುನ್ನಡೆದಿದ್ದಾರೆ. ಇಷ್ಟಾದರೂ ಅಲ್ಲಲ್ಲಿ ಕಂಡುಬರುವ ಅಸಮರ್ಪಕ ವಾಕ್ಯಗಳು ಹಾಗೂ ಪುನರಾವರ್ತನೆಗಳು ಓದುಗರಿಗೆ ತುಸು ಬೇಸರ ತರಿಸುತ್ತವೆ. ಆದರೂ ಇದೊಂದು ಗಮನಾರ್ಹ ಕತೆಗಳುಳ್ಳ ಗಣನೀಯ ಪುಸ್ತಕ.
(ನವೆಂಬರ್1983ರ ಗ್ರಂಥಲೋಕ ಮಾಸಿಕದಲ್ಲಿ ಪ್ರಕಟಿತ ವಿಮರ್ಶೆ)
45 ಕೃತಿ:ಎಲ್ಲರೂ ಅಂಥವ್ರss…. (ನಾಟಕ)
ರಚನೆ : ಜಿ.ಶೌಕತ್ ಅಲಿ
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಖ್ಯಾತರಾದ ಎಂ.ಅಕಬರಅಲಿ, ಕೆ.ಎಸ್.ನಿಸಾರಅಹ್ಮದ್ ಮುಂತಾದ ಕವಿಗಳೂ ಹೆಚ್ಚಿನ ಸಂಖ್ಯೆ ಯಲ್ಲಿರುವ ವರ್ಗದಲ್ಲಿ ಅಪರೂಪಕ್ಕೆ ಓರ್ವ ನಾಟಕ ಕಾರನಾಗಿ ಶೌಕತಅಲಿ ಕಾಣಿಸಿಕೊಂಡಿರುವುದು ಆಶ್ಚರ್ಯ ಎನಿಸಿದರೂ, ಸ್ವಾಗತಾರ್ಹ.
ಒಂದು ನಗರಸಭೆಯ ಆಡಳಿತದ ತಿರುಳು ಹೊಂದಿರುವ ನಾಟಕವಿದು. “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ” ಆಳ್ವಿಕೆ ನಡೆಸುವುದರ ಒಳಾರ್ಥವನ್ನು ಖಾರವಾಗಿ ತೋರಿಸುತ್ತದೆ. ಹುಚ್ಚ ಮತ್ತು ಅಧ್ಯಕ್ಷ ಎಂಬ ಎರಡೂ ಪಾತ್ರಗಳು ಮೇಲುಗೈ ಪಡೆಯುತ್ತವೆ. ಇನ್ನುಳಿದ ಬಹುತೇಕ ಎಲ್ಲ ಪಾತ್ರಗಳೂ ಮುಗ್ಗರಿಸಿವೆ. ಯಶಸ್ವೀ ಪಾತ್ರಗಳು ಕಡಿಮೆಯಿದ್ದು ವಿಫಲ ಪಾತ್ರಗಳೇ ಹೆಚ್ಚಾಗಿವೆ.
ರಾಜಕಾರಣಿಗಳ ಆಶ್ವಾಸನೆ, ಕೊಳಕು ರಾಜಕೀಯ, ಸಾಮಾಜಿಕ ಶೋಷಣೆ, ಒಣ ಆಡಂಬರ, ಮುಂತಾದವುಗಳಿಂದ ಉಂಟಾಗುವ ಶ್ರೀಸಾಮಾನ್ಯನ ಅಧೋಗತಿ, ದೇಶದ ಅವನತಿ, ಇತ್ಯಾದಿಗಳನ್ನು ಪ್ರತಿಬಿಂಬಿಸುವ ಪಾತ್ರ-ದೃಶ್ಯಗಳುಳ್ಳ ಸಾರಾಂಶ ಇಡೀ ನಾಟಕದ ಸಾರ. ಮಾಲಿನ್ಯವನ್ನು ತೊಳೆಯುವ, ತಾರತಮ್ಯವನ್ನು ತೊಡೆದುಹಾಕುವ, ಉತ್ಕೃಷ್ಟ ನಾಯಕನಿಗಾಗಿ ಕಾತರಿಸುವ, ಉನ್ನತ ಅಭಿವೃದ್ಧಿಗಾಗಿ ಕಾಯುವ ಹಾಗೂ ಪ್ರಜೆಗಳ ಪರಿಸ್ಥಿತಿಯನ್ನು ಚಿತ್ರಿಸುವ ಮೂಲಕ ನಾಟಕ ಮುಕ್ತಾಯಗೊಳ್ಳುತ್ತದೆ.
ಒಮ್ಮೆ ಓದಬಹುದಾದ ಆದರೆ, ಪದೇಪದೇ ಪ್ರಯೋಗ ಮಾಡಬಹುದಾದ ಅಲಿಯವರ ‘ಎಲ್ಲರೂ ಅಂಥವ್ರ’ ನಾಟಕವನ್ನು ಅಲ್ಲಲ್ಲಿ ಆಗಾಗ್ಗೆ ಹೆಚ್ಚೆಚ್ಚು ಪ್ರದರ್ಶನ ಮಾಡುವುದರ ಜತೆಗೆ ಇಂಥ ನಾಟಕಗಳನ್ನು ಮಾಡುವವರೂ ದೇಶಾದ್ಯಂತ ಹುಟ್ಟಿಕೊಂಡರೆ ಸಾಮಾಜಿಕವಾಗಿ ಒಳಿತಾಗಬಹುದು, ರಾಜಕೀಯವಾಗಿ ದುಷ್ಠ ಕೂಟಗಳ ಅಂತ್ಯಕಾಣಬಹುದು?!
(ನವೆಂಬರ್ 1983 ” ಗ್ರಂಥಲೋಕ ” ಮಾಸಪತ್ರಿಕೆಯಲ್ಲಿ ಪ್ರಕಟಿತ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-8








