LatestMysore

ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ… ಆಸ್ಪತ್ರೆ ಅಭಿವೃದ್ಧಿಗೆ ಬದ್ಧ ಎಂದ ಶಾಸಕ ಡಿ.ರವಿಶಂಕರ್

 ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಕಳೆದ ಕೆಲ ದಶಕಗಳಿಂದ ಹಲವು ಸೌಲಭ್ಯದ ಕೊರತೆಯಿಂದಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಹಿಡಿಶಾಪಕ್ಕೊಳಗಾಗಿದ್ದ ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಿ.ರವಿಶಂಕರ್ ಕಾಯಕಲ್ಪ ನೀಡಿದ ಪರಿಣಾಮ ಉತ್ತಮ ಸೌಲಭ್ಯ ಸಿಗುವಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಆಸ್ಪತ್ರೆಯ ಆವರಣ ಮಳೆ ಬಂದ ನಂತರ ಕೆಸರಿನಿಂದ ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತಲ್ಲದೆ, ರಾತ್ರಿ ವೇಳೆ ವಿದ್ಯುತ್‌ ದೀಪಗಳಿಲ್ಲದೆ ಕತ್ತಲೆಯಲ್ಲಿ ಮುಳುಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ವ್ಯಕ್ತವಾದ ಹಿನ್ನಲೆಯಲ್ಲಿ  ಆರೋಗ್ಯ ರಕ್ಷಾ ಸಮಿತಿ ಮತ್ತು ವೈದ್ಯರ ತಂಡ ಶಾಸಕರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲವಾಗುವಂತೆ ಆವರಣದಲ್ಲಿ ನಾಲ್ಕು ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ.

ಇದರ ಜತೆಗೆ  ಆಸ್ಪತ್ರೆಯ ಒಳಾವರಣದಲ್ಲಿ ರೋಗಿಗಳ ಸಂಬಂಧಿಕರು ವಿಶ್ರಾಂತಿ ಪಡೆಯಲು ಪಡಸಾಲೆ ನಿರ್ಮಾಣ ಮಾಡಿದ್ದು ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಟಿವಿ ಅಳವಡಿಸಿರುವುದು ಗಮನಾರ್ಹವಾಗಿದೆ. ಇದರಿಂದ ಆಸ್ಪತ್ರೆಗೆ ಬರುವವರಿಗೆ ಅನುಕೂಲವಾಗಿದೆ ಅಷ್ಟೇ ಅಲ್ಲದೆ, ಆಸ್ಪತ್ರೆಯಲ್ಲಿ  ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇನ್ನು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯವರು ಅಭಿವೃಧಿಗೆ ಪೂರಕವಾಗಿ ಕೆಲಸ ಮಾಡಲು ಶಾಸಕರ ಸಹಕಾರ ಕಾರಣವಾಗಿದೆ.

ಸರ್ಕಾರಿ ಆಸ್ಪತ್ರೆ ಕುರಿತಂತೆ ಶಾಸಕ ಡಿ.ರವಿಶಂಕರ್ ಮಾತನಾಡಿ, ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವುದರ ಜತೆಗೆ ನಾಗರೀಕ ಮೂಲಭೂತ ಸೌಲಭ್ಯಗಳು ದೊರೆಯಬೇಕೆಂಬುದು ನನ್ನ ಅಭಿಲಾಷೆಯಾಗಿದ್ದು ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ಶಾಸಕರಿಗೆ ನೀಡಿದ 25 ಕೋಟಿ ಅನು ದಾನದಲ್ಲಿ ಮೊದಲ 1 ಕೋಟಿ ಹಣವನ್ನು ಆಸ್ಪತ್ರೆಯ ಅಭಿವೃದ್ಧಿಗೆ ನೀಡಿದ್ದು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು ಭವಿಷ್ಯದಲ್ಲಿ ಮತ್ತಷ್ಟು ಉತ್ತಮ ಸವಲತ್ತುಗಳನ್ನು ಕೊಡಿಸಲು ನಾನು ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.

ಆಸ್ಪತ್ರೆ ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಪತ್ರಕರ್ತ ಹೊಸೂರು ಹೆಚ್.ಎಸ್.ಮಂಜುನಾಥ್, ದಶಕಗಳಿಂದ ಮೂಲಭೂತ ಸವಲತ್ತುಗಳಿಲ್ಲದೆ ಸೊರಗುತ್ತಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕರಾದ ಡಿ. ರವಿಶಂಕರ್ ಅವರು ಕಾಯಕಲ್ಪ ನೀಡಿದ್ದು ಇದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಹೆಚ್ಚು ಅನುಕೂಲವಾಗಿದೆ. ಇಂತಹ ಉತ್ತಮ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಅವರಿಗೆ ಸಾರ್ವಜನಿಕರ ಸಹಕಾರ ಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ತಾಲೂಕು ಕೇಂದ್ರವಾಗಿರುವ ಕೆ.ಆರ್.ನಗರದಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವ ಸರ್ಕಾರಿ ಆಸ್ಪತ್ರೆ ಅಗತ್ಯವಿದ್ದು ಇದರಿಂದ ಬಡವರಿಗೆ ಅನುಕೂಲವಾಗಿ ಆ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ಅಗತ್ಯವಾಗಿದೆ.

admin
the authoradmin

Leave a Reply

Translate to any language you want