ಕೆ.ಆರ್.ನಗರ(ಸಂಘಟನೆ ಮಂಜುನಾಥ್): ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು 2028ರ ವಿಧಾನಸಭಾ ಚುನಾವಣೆಯಲ್ಲಿ ಸಮಿಶ್ರ ಸರ್ಕಾರವನ್ನು ಆಡಳಿತಕ್ಕೆ ತಯಾರಾಗಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಕೆಲಸ ಕೆ. ಆರ್. ನಗರದಿಂದಲೇ ಪ್ರಾರಂಭವಾಗಲಿ ಎಂದು ಹೇಳಿದ್ದಾರೆ.
ಕೆ.ಆರ್.ನಗರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಬಂಡಹಳ್ಳಿ ಕುಚೇಲ ಕುಟುಂಬಸ್ಥರು ಪ್ರಾರಂಭಿಸಿರುವ ಪೆಟ್ರೋಲ್ ಬಂಕ್ ಉದ್ಘಾಟನೆ ಮಾಡಿ ಮಾತನಾಡಿ, ಇದು ಖಾಸಗಿ ಕಾರ್ಯಕ್ರಮ ಇಲ್ಲಿ ರಾಜಕೀಯ ಮಾತನಾಡಬಾರದು ಅಂದುಕೊಂಡಿದ್ದೆ ಆದರೆ ಅನಿವಾರ್ಯವಾಗಿ ಜನರೇ ಪ್ರಶ್ನೆ ಮಾಡುತ್ತಿರುವುದರಿಂದ ಉತ್ತರ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ. ಈ ಭಾಗದಲ್ಲಿ ರಾಗಿಯ ಬೆಂಬಲ ಬೆಲೆಯ ಹಣವನ್ನು ರೈತರಿಗೆ ನೀಡಿಲ. ಅಲ್ಲಿ ಮಾವು ಬೆಲೆಕುಸಿತದಿಂದ ಹೋರಾಟ ಮಾಡುತ್ತಿರುವ ರೈತರಿಗೆ ಸ್ಪಂದಿಸಲು ಸಚಿವ ಶಾಸಕರು ಭೇಟಿ ನೀಡಿಲ್ಲದಿರುವುದು ನೋಡಿದರೆ ಸರ್ಕಾರದ ಕಾರ್ಯ ವೈಖರಿ ಏನು ಎಂಬುದು ತಿಳಿಯುತ್ತದೆ. ಸರ್ಕಾರದಲ್ಲಿ ಹಣವಿಲ್ಲದೆ ರೈತರು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸದ ಸರ್ಕಾರ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ ಎಂದು ಆಕ್ರೋಶ ಹೊರಹಾಕಿದರು.
ರೈತರ ಭೂಮಿಯನ್ನು ಕಸಿದುಕೊಳ್ಳುವುದು ಈ ಸರ್ಕಾರದ ಉದ್ದೇಶ. ಅಧಿಕಾರದಲ್ಲಿರುವಷ್ಟು ದಿನ ಸಿಕ್ಕಿದಷ್ಟು ದೋಚುವುದು ರಾಜ್ಯವನ್ನು ದಿವಾಳಿಯುತ್ತ ಕೊಂಡೊಯ್ಯುವುದು ಇವರ ಮುಖ್ಯ ಉದ್ದೇಶವಾಗಿದ್ದು, ಈ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಲು ಈಗಿನಿಂದಲೇ ತಯಾರಾಗಿರಿ ಎಂದು ಕರೆ ನೀಡಿದರು.

ಉಚಿತ ಗ್ಯಾರಂಟಿಗಳ ನೆಪದಲ್ಲಿ ಈಗಾಗಲೇ ಕರ್ನಾಟಕದ ಜನತೆಗೆ ಮಂಕು ಬೂದಿ ಎರಚಿದ್ದಾರೆ. ಮರು ಪರಿಶೀಲನೆಯ ನೆಪದಲ್ಲಿ ಗೃಹಲಕ್ಷ್ಮಿ ಹಣವನ್ನು ನಿಲ್ಲಿಸಿದ್ದಲ್ಲದೆ, ಸಂಧ್ಯಾ ಸುರಕ್ಷಾ ವೇತನವನ್ನು ಆದಾಯದ ಮಿತಿಯ ಹೆಸರಿನಲ್ಲಿ ನಿಲ್ಲಿಸಿ ಬಡವರ ಜೀವನಕ್ಕೆ ಆಧಾರವಾಗಿದ್ದ ವೇತನವನ್ನು ನಿಲ್ಲಿಸಿದ್ದಾರೆ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಮರೆತಿರುವ ಈಗಿನ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೊನೆಯ ಸರ್ಕಾರ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಕೆ. ಆರ್. ನಗರದಿಂದಲೇ ಪ್ರಾರಂಭವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು 2028ರ ವಿಧಾನಸಭಾ ಚುನಾವಣೆಯಲ್ಲಿ ಸಮಿಶ್ರ ಸರ್ಕಾರವನ್ನು ಆಡಳಿತಕ್ಕೆ ತಯಾರಾಗಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ ಸಾ.ರಾ. ಮಹೇಶ್ ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಅಶ್ವಿನ್ ಕುಮಾರ್, ಪಿರಿಯಾಪಟ್ಟಣದ ಮಾಜಿ ಶಾಸಕ ಮಹದೇವ್, ಪೆಟ್ರೋಲ್ ಬಂಕ್ ಮಾಲಿಕ ಮತ್ತು ಎಪಿಎಂಸಿ ಮಾಜಿ ನಿರ್ದೇಶಕ ಬಂಡಳ್ಳಿ ಕುಚೇಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಕುಚೇಲ, ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನ ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಹಂಪಾಪುರದ ಕುಮಾರ ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ ಎನ್ ಬಸಂತ್ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ. ಜಿ. ದ್ವಾರಕಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಿದ್ದಾಪುರದ ತ್ಯಾಗರಾಜ್, ಹೊಸಹಳ್ಳಿ ಪುಟ್ಟರಾಜ್, ಹರದನಹಳ್ಳಿ ರಮೇಶ್, ಹುಣಸೂರು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗೋವಿಂದೇಗೌಡ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಸಾರಾ ಸ್ನೇಹ ಬಳಗದ ಕಾರ್ಯದರ್ಶಿ, ಸಿ.ಜೆ. ಆನಂದ್ ಕಾರ್ಯಕರ್ತರು ಭಾಗವಹಿಸಿದ್ದರು.








