ಮೈಸೂರು : ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ನಮಗೆ ಪ್ರಜಾಪ್ರಭುತ್ವದ ಸಮೃದ್ಧ ಭಾರತ ದೇಶದ ಬದುಕು ಲಭಿಸಿದೆ. ವೈವಿಧ್ಯತೆಯ ದೇಶದ ಜೀವಾಳವಾಗಿದೆ. ಈ ಜೀವ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವನ್ನು ವಿದ್ಯಾರ್ಥಿಗಳು ಗೌರವಿಸುತ್ತ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಾಹಿತಿ ಹಾಗೂ ಶಿಕ್ಷಕ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ 80ನೆಯ ಸ್ವಾತಂತ್ರ್ಯ ದಿನಾಚರಣೆಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಪಾಕೃತಿಕ ಸಂಪತ್ತು, ಮಾನವ ಸಂಪತ್ತು, ಸಾಂಸ್ಕೃತಿಕ ಸಂಪತ್ತು ನಮ್ಮ ದೇಶದ ಹಿರಿಮೆಯನ್ನು ಜಗತ್ತಿಗೆ ಸಾರಿದೆ ಎಂದರು.
ಸಂವಿಧಾನ ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವೆಂದು ಸಾರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಶಿಕ್ಷಣಕ್ಕೆ ಒತ್ತು ನೀಡಿವೆ. ಮಕ್ಕಳಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸುತ್ತಿವೆ. ಶಾಲಾ ಕಲಿಕೆಯ ಮೂಲಕ ವಿದ್ಯಾರ್ಥಿಗಳು ಅರಿವು ಮೂಡಿಸಿಕೊಂಡು, ಉತ್ತಮ ನಾಗರಿಕರಾಗುವ ಕಡೆಗೆ ಸಾಗಬೇಕು ಎಂದು ನುಡಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಮೇಲೆ ಪ್ರಯೋಗಿಸಿದ ಅಹಿಂಸೆ, ಮುಷ್ಕರ, ಉಪವಾಸ, ಸತ್ಯಾಗ್ರಹ, ಪ್ರಬಲ ಆಯುಧಗಳಾಗಿದ್ದವು. ಆಧುನಿಕ ಶಸ್ತ್ರಾಸ್ತ್ರಗಳಿದ್ದರೂ ಬ್ರಿಟಿಷರು ಗಾಂಧೀಜಿಯವರ ಅಹಿಂಸತ್ಮಾಕ ಹೋರಾಟದ ಮುಂದೆ ಸೋಲಬೇಕಾಯಿತು. ಗಾಂಧಿಮಾರ್ಗ ಯುವಜನರಿಗೆ ಪ್ರೇರಣೆಯಾಗಬೇಕು ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಂಚಪ್ಪ ಧ್ವಜಾರೋಹಣ ನೆರವೇರಿಸಿದರು. ಸಮಿತಿಯ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾಸ ಶಿವು ಮತ್ತು ಶಿಲ್ಪ, ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಬಳಿಕ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.








