ArticlesLatestLife style

ಒಂದು ಹನಿ ರಕ್ತ, ಒಂದು ಜೀವದ ಉಸಿರು… ರಕ್ತದ ಬಂಧಕ್ಕೆ ಜಾತಿಯಿಲ್ಲ, ಮತವಿಲ್ಲ. ಮಿಡಿಯುವ ಹೃದಯಗಳಿವೆ

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-13

“ಮನುಷ್ಯನ ಮೈಲಿ ಹರಿಯೋ ರಕ್ತ ಒಂದೇ” ಎಂಬ ಸತ್ಯವನ್ನು ನಾವು ಮರೆತರೆ, ಮಾನವೀಯತೆಯೇ ಉಸಿರು ಚೆಲ್ಲುತ್ತದೆ. ನಿಮ್ಮ ಒಂದು ಯೂನಿಟ್ ರಕ್ತ ಮೂರು ಮನೆಗಳ ದೀಪ ಉರಿಸುತ್ತದೆ… ರಕ್ತದಾನದ ಬಗ್ಗೆ ಕಾಯಪಂಡ  ವಿಷ್ಣು ನಾಚಪ್ಪ ಇಲ್ಲಿ ಬರೆದಿದ್ದಾರೆ.

ರಕ್ತದ ಬಂಧಕ್ಕೆ ಜಾತಿಯಿಲ್ಲ, ಮತವಿಲ್ಲ. ಅಲ್ಲಿ ಬರೀ ಮಿಡಿಯುವ ಹೃದಯಗಳಿವೆ. ಇದು ಕೇವಲ ಆಸ್ಪತ್ರೆಯ ಮಾತಲ್ಲ. ಇದು ಪ್ರತಿ ಬೀದಿಯ, ಪ್ರತಿ ಮನೆಯ, ಪ್ರತಿ ಮನುಷ್ಯನ ಉಸಿರಿನ ಮಾತು. ಹೆರಿಗೆ ಮಂಚದಲ್ಲಿ ಸಾವಿನೊಂದಿಗೆ ಹೋರಾಡುವ ತಾಯಿಗೆ, ರಸ್ತೆ ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಸಹೋದರನಿಗೆ, ಕ್ಯಾನ್ಸರ್‌ ಕಾಯಿಲೆಯ ನೋವಲ್ಲಿ ನರಳುವ ಮಗುವಿಗೆ ನಮ್ಮ ರಕ್ತವೇ ಕೊನೆಯ ಭರವಸೆ. “ಮನುಷ್ಯನ ಮೈಲಿ ಹರಿಯೋ ರಕ್ತ ಒಂದೇ” ಎಂಬ ಸತ್ಯವನ್ನು ನಾವು ಮರೆತರೆ, ಮಾನವೀಯತೆಯೇ ಉಸಿರು ಚೆಲ್ಲುತ್ತದೆ.

ನಿಮ್ಮ ಒಂದು ಯೂನಿಟ್ ರಕ್ತ ಮೂರು ಮನೆಗಳ ದೀಪ ಉರಿಸುತ್ತದೆ ಎಂದರೆ ಅದು ದಾನ ಅಲ್ಲ, ಅದು ಸಾಕ್ಷಾತ್ ದೇವರೇ ನಿಮ್ಮ ಕೈಯಲ್ಲಿ ಮಾಡುವ ಪವಾಡ. ವಿಜ್ಞಾನ ಚಂದ್ರನಿಗೆ ಹೋದರೂ ರಕ್ತವನ್ನು ತಯಾರಿಸಲಾರದು. ಅದು ಕೇವಲ ನಿಮ್ಮ ಎದೆಯ ಕರುಣೆಯ ಗಣಿಯಲ್ಲಿ ಮಾತ್ರ ಸಿಗುವ ಅಮೂಲ್ಯ ರತ್ನ.

ದಾನ ನಮ್ಮ ರಕ್ತದಲ್ಲಿದೆ, ರಕ್ತದಾನ ನಮ್ಮ ಉಸಿರಲ್ಲಿರಲಿ. ಅತಿಥಿ ದೇವೋಭವ ಎಂದಷ್ಟೇ ಸಾಲದು, ರೋಗಿಯೂ ದೇವರೇ ಎಂಬ ಭಾವ ಬೆಳೆಯಬೇಕು. ನಮ್ಮ ಆಸ್ಪತ್ರೆಗಳ ರಕ್ತನಿಧಿಯಲ್ಲಿ ಪ್ರತಿದಿನ ಕೇಳುವ “ರಕ್ತ ಇಲ್ಲ” ಎಂಬ ಮಾತು ನಮ್ಮೆಲ್ಲರ ತಲೆಯನ್ನು ತಗ್ಗಿಸುತ್ತದೆ. ಆರೋಗ್ಯವಂತ ಯುವಕ-ಯುವತಿಯರು ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಎರಡರಿಂದ ಮೂರು ಸಲ ರಕ್ತ ಕೊಟ್ಟರೆ, ನೂರಾರು ಕುಟುಂಬಗಳ ಶಾಪ ತಪ್ಪಿಸಬಹುದು.

ಯುವಶಕ್ತಿಯೇ ಈ ನಾಡಿನ ಭವಿಷ್ಯ. ಮಾದಕ ಲೋಕದ ಡ್ರಗ್ಸ್ ಎಂಬ ಮರಣದ ಬಾಗಿಲು ಮುಚ್ಚಿ. ಅದು ನಿಮ್ಮ ಕನಸುಗಳನ್ನು, ನಿಮ್ಮ ಕುಟುಂಬದ ನಗುವನ್ನು, ಸಮಾಜದ ನೆಮ್ಮದಿಯನ್ನು ನುಂಗಿ ಹಾಕುತ್ತದೆ. ಬದಲಾಗಿ ತುರ್ತು ಸಮಯದ ರಕ್ತದಾನಿಗಳಾಗಿ ಹೊಸ ಇತಿಹಾಸ ಬರೆಯಿರಿ. ನೆನಪಿರಲಿ, ಡ್ರಗ್ಸ್ ಸೇವಿಸಿದವರ ರಕ್ತವನ್ನು ಯಾವ ಆಸ್ಪತ್ರೆಯೂ ಸ್ವೀಕರಿಸುವುದಿಲ್ಲ. ನಿಮ್ಮ ರಕ್ತ ಶುದ್ಧವಾಗಿದ್ದರೆ ಮಾತ್ರ ಅದು ಇನ್ನೊಬ್ಬರಿಗೆ ಗಂಗಾಜಲ. ಆದ್ದರಿಂದ ನಶೆಯ ಅಮಲನ್ನು ತೊರೆದು, ಜೀವ ಉಳಿಸುವ ಹಂಬಲವನ್ನು ಮೈಗೂಡಿಸಿಕೊಳ್ಳಿ.

ತುರ್ತು ಕರೆಯಲ್ಲಿ ಓಡುವ ಕಾಲುಗಳೇ ದೇವರ ಪಾದ. ನಿಯಮಿತ ರಕ್ತದಾನ ಮಾಡುವುದು ಪುಣ್ಯವಾದರೆ, ತುರ್ತು ಸಂದರ್ಭದಲ್ಲಿ ರಕ್ತ ಕೊಡುವುದು ಮಹಾಪುಣ್ಯ. ಓಪನ್ ಹಾರ್ಟ್ ಸರ್ಜರಿಯ ಆಪರೇಷನ್ ಥಿಯೇಟರ್‌ನಲ್ಲಿ ವೈದ್ಯರು ರೋಗಿಯ ಎದೆ ಬಗೆದಾಗ, ಒಮ್ಮೆಲೇ 4-5 ಯೂನಿಟ್ ರಕ್ತ ಬೇಕಾಗುತ್ತದೆ. ಭೀಕರ ರಸ್ತೆ ಅಪಘಾತದಲ್ಲಿ ರಕ್ತ ಸೋರಿ ಹೋಗುತ್ತಿರುವ ವ್ಯಕ್ತಿಗೆ ಮುಂದಿನ ಐದು ನಿಮಿಷವೇ ನಿರ್ಣಾಯಕ. ಆ ಕ್ಷಣದಲ್ಲಿ ನಿಮ್ಮ ಒಂದು ಫೋನ್ ಕಾಲ್, ನಿಮ್ಮ ಒಂದು ಹೆಜ್ಜೆ ಒಂದು ಜೀವ ಉಳಿಸುತ್ತದೆ.

ಕ್ಯಾನ್ಸರ್, ಡೆಂಗ್ಯೂ, ಥಲಸ್ಸೆಮಿಯಾ ರೋಗಿಗಳಿಗೆ ಬೇಕಾದ ಸಿಂಗಲ್ ಡೋನರ್ ಪ್ಲೇಟ್‌ಲೆಟ್ ಕೊಡಲು ಒಬ್ಬ ದಾನಿ 2-3 ಗಂಟೆ ಯಂತ್ರದ ಮುಂದೆ ಕೂರಬೇಕಾಗುತ್ತದೆ. ಅದು ತ್ಯಾಗದ ಪರಮಾವಧಿ. ಮೊಬೈಲ್‌ನಲ್ಲಿ “ತುರ್ತು O-ನೆಗೆಟಿವ್ ರಕ್ತ ಬೇಕು” ಎಂಬ ಸಂದೇಶ ಬಂದಾಗ ನಮ್ಮ ರಕ್ತ ಹೆಪ್ಪುಗಟ್ಟಬಾರದು, ಬದಲಾಗಿ ಕುದಿಯಬೇಕು. ಏಕೆಂದರೆ ಜೀವದಾನಕ್ಕಿಂತ ಮಿಗಿಲಾದ ದಾನ ಈ ಜಗತ್ತಿನಲ್ಲಿ ಇನ್ನೊಂದಿಲ್ಲ.

ಸಂಸ್ಥೆಗಳ ಸೇವೆ, ಸಮಾಜದ ಶಕ್ತಿ: ಈ ಮಹಾಕಾರ್ಯದಲ್ಲಿ ನಮ್ಮ ಬೆನ್ನೆಲುಬಾಗಿ ನಿಂತಿರುವ ಸಂಸ್ಥೆಗಳನ್ನು ನಾವು ಮರೆಯುವಂತಿಲ್ಲ. ಯುದ್ಧ, ಪ್ರಕೃತಿ ವಿಕೋಪ, ಅಪಘಾತ ಎಲ್ಲಿ ಸಂಭವಿಸಿದರೂ ಅಲ್ಲಿ ಮೊದಲು ಧಾವಿಸುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ನಿಸ್ವಾರ್ಥ ಸೇವೆಯ ಪ್ರತೀಕ. ದೇಶಾದ್ಯಂತ ಲಕ್ಷಾಂತರ ಯೂನಿಟ್ ರಕ್ತವನ್ನು ಸಂಗ್ರಹಿಸಿ, ಅಗತ್ಯವಿರುವವರಿಗೆ ತಲುಪಿಸುವ ಅವರ ಕೈಂಕರ್ಯಕ್ಕೆ ನಮ್ಮದೊಂದು ನಮನ.

ಅದೇ ರೀತಿ, ಸ್ಥಳೀಯವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಹಗಲು-ರಾತ್ರಿ ಎನ್ನದೆ ತಮ್ಮ ಅಮೂಲ್ಯ ಸಮಯವನ್ನು ಕಷ್ಟದಲ್ಲಿರುವವರ ಪರವಾಗಿ ಮುಡಿಪಾಗಿಟ್ಟ ಸಂಸ್ಥೆಗಳು ನಮ್ಮ ಹೆಮ್ಮೆ. ಸೇವಾ ಭಾರತಿ ರಕ್ತದಾನ ಗ್ರೂಪ್ ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರು. ಜಾತಿ, ಮತ, ಪಂಥ ಎಲ್ಲವನ್ನೂ ಮೀರಿ ‘ಸೇವೆಯೇ ಧರ್ಮ’ ಎಂಬ ತತ್ವದಲ್ಲಿ ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ಹಾಗೆಯೇ ರಕ್ತದಾನಕ್ಕಾಗಿ ತುರ್ತುಸ್ಪಂದನೆ – ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ ನಂತಹ ಸಂಸ್ಥೆಗಳು ತುರ್ತು ಕರೆ ಬಂದ ತಕ್ಷಣ ಡೊನೇಟರ್‌ಗಳನ್ನು ಜೋಡಿಸಿ, ಆಸ್ಪತ್ರೆಯವರೆಗೆ ಕರೆದುಕೊಂಡು ಹೋಗಿ ರಕ್ತ ಕೊಡಿಸುವವರೆಗೂ ಜೊತೆಯಾಗಿರುತ್ತಾರೆ. ಇವರ ಶ್ರಮದಿಂದಲೇ ಇಂದು ಸಾವಿರಾರು ಜೀವಗಳು ಉಳಿದಿವೆ. ಇವರೆಲ್ಲರೂ ಸಮಾಜದ ನಿಜವಾದ ಹೀರೋಗಳು. ಇವರನ್ನು ನಾವು ಬೆಂಬಲಿಸಬೇಕು, ಇವರ ಜೊತೆ ಕೈಜೋಡಿಸಬೇಕು.

ನಮ್ಮ ಹೊಸ ಪ್ರಯತ್ನ: ರಕ್ತದಾನವನ್ನು ಇನ್ನಷ್ಟು ವ್ಯವಸ್ಥಿತವಾಗಿ, ಇನ್ನಷ್ಟು ವೇಗವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ನಾವು ಎಂಟು ರಕ್ತ ಗುಂಪುಗಳಿಗೆ ಪ್ರತ್ಯೇಕ ಪ್ರತ್ಯೇಕ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿದ್ದೇವೆ. A+, A-, B+, B-, AB+, AB-, O+, O- ಹೀಗೆ ನಿಮ್ಮ ರಕ್ತದ ಗುಂಪಿಗೆ ಅನುಗುಣವಾದ ಗ್ರೂಪ್‌ಗೆ ನೀವು ಸೇರಿಕೊಳ್ಳಿ. ತುರ್ತು ಬೇಡಿಕೆ ಬಂದಾಗ ಆಯಾ ಗ್ರೂಪ್‌ನ ಸದಸ್ಯರಿಗೆ ತಕ್ಷಣ ಮಾಹಿತಿ ತಲುಪುತ್ತದೆ. ಇದರಿಂದ ಸಮಯ ಉಳಿಯುತ್ತದೆ, ಜೀವ ಉಳಿಯುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ನಾಗರಿಕರು ರಕ್ತದಾನಿಗಳಾಗಬೇಕು ಎಂಬುದೇ ನಮ್ಮ ಕಳಕಳಿಯ ಕೋರಿಕೆ.

ರಕ್ತದಾನದಲ್ಲಿ ಎಲ್ಲರೂ ಮುಂಚೂಣಿಯಲ್ಲಿರಲಿ..

ನಾವೆಲ್ಲರೂ ಒಂದು ಪ್ರಮಾಣ ಮಾಡೋಣ. ನಮ್ಮ ರಕ್ತದಿಂದ ಇನ್ನೊಂದು ಹೃದಯ ಬಡಿಯಲಿ. ಇನ್ನೊಂದು ತಾಯಿಯ ಮಡಿಲು ಕೂಸಿನಿಂದ ತುಂಬಲಿ. ಇನ್ನೊಂದು ಕುಟುಂಬದ ಕಣ್ಣೀರು ಒರೆಸಲಿ. ರಕ್ತದಾನ ಮಾಡಿ, ಮಹಾದಾನಿಯಾಗಿ. ಮಾನವೀಯತೆ ಮೆರೆಯಿರಿ. ಇದು ಒಂದು ದಿನದ ಮಾತಲ್ಲ, ಪ್ರತಿದಿನದ ಕರ್ತವ್ಯ. ನಿಮ್ಮ ನೆರೆಮನೆಯವರು, ನಿಮ್ಮ ಸಹೋದ್ಯೋಗಿ, ನಿಮ್ಮ ಊರಿನ ಅಪರಿಚಿತರು ಯಾರಿಗಾದರೂ ತುರ್ತು ಬೇಕಾಗಬಹುದು. ರಕ್ತ ಕೊಡಲು ಯಾವಾಗಲೂ ಸಿದ್ಧರಿರಿ. ರೆಡ್ ಕ್ರಾಸ್‌ನಂತಹ ರಾಷ್ಟ್ರೀಯ ಸಂಸ್ಥೆಗಳು, ಸೇವಾ ಭಾರತಿಯಂತಹ ಸೇವಾ ಸಂಸ್ಥೆಗಳು, ತುರ್ತುಸ್ಪಂದನೆ ಟ್ರಸ್ಟ್‌ನಂತಹ ಸ್ಥಳೀಯ ತಂಡಗಳು ನಿಮ್ಮ ಕರೆಯನ್ನು ಕಾಯುತ್ತಿವೆ.

 

ಕೊಡಗಿನ ಹಾಕಿಯಿಂದ ನಾಟಿ ಓಟದವರೆಗೆ… ಹಳ್ಳಿ ಆಟಕ್ಕೆ ವೇದಿಕೆ ಬೇಕಾಗಿದೆ… ಬಾಲ್ಯದ ದಿನಗಳು ಮರುಕಳಿಸಲಿ…

admin
the authoradmin

Leave a Reply