ಹುಣಸೂರು(ಹಿರಿಕ್ಯಾತನಹಳ್ಳಿಸ್ವಾಮಿಗೌಡ): ಜಾಗತಿಕ ತಂಬಾಕು ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ಪರಿಸರ ಸ್ನೇಹಿ ಬೇಸಾಯ ಪದ್ಧತಿಗಳಿಗೆ ಒತ್ತು ನೀಡುವುದರಿಂದ ರೈತರು ಗುಣಮಟ್ಟದ ತಂಬಾಕು ಉತ್ಪಾದಿಸಬೇಕಾಗಿದೆ ಎಂದು ತಂಬಾಕು ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ನೆಲ್ಲೂರು ಪಾಲ ಗ್ರಾಮದಲ್ಲಿ ಐಟಿಸಿ ಕಂಪನಿ ಆಯೋಜಿಸಿದ್ದ ತಂಬಾಕಿನಲ್ಲಿ ಸುಸ್ಥಿರ ಕೃಷಿ ಪದ್ಧತಿ ಕುರಿತ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ಮೈಸೂರು ಪ್ರದೇಶದ ತಂಬಾಕು ಬಹುತೇಕ ರಪ್ತು ಉದ್ಯಮದ ಮೇಲೆ ಮಾರುಕಟ್ಟೆ ಅವಲಂಭಿತವಾಗಿದ್ದು, ರೈತರು ಎಷ್ಟು ಗುಣಮಟ್ಟದ ತಂಬಾಕು ಉತ್ಪತ್ತಿ ಮಾಡುತ್ತೀರೋ ಅಷ್ಟು ಆರ್ಥಿಕ ಲಾಭ ನಿಮ್ಮದಾಗಲಿದೆ.
ತಂಬಾಕು ಉತ್ಪತ್ತಿ ಮಾಡುವ ಹಂತದಲ್ಲಿ ತಂಬಾಕು ಸಂಶೋಧನ ಇಲಾಖೆ ವಿಜ್ಞಾನಿಗಳು ನೀಡುವ ಸಲಹೆಯನ್ನು ತಪ್ಪದೆ ಪಾಲಿಸುವುದರಿಂದ ಆರೋಗ್ಯ ಮತ್ತು ಔಷಧ ಮುಕ್ತ ತಂಬಾಕು ಉತ್ಪತ್ತಿ ಮಾಡಲು ಸಾಧ್ಯ. ಹಳೆ ಮೈಸೂರು ಪ್ರದೇಶದಲ್ಲಿ ಬೆಳೆಯುವ ತಂಬಾಕು ಬಹುತೇಕ ಹೊರ ರಾಷ್ಟ್ರಕ್ಕೆ ರಪ್ತಾಗುವುದುರಿಂದ ಔಷಧಿ ಮತ್ತು ರಾಸಾಯನಿಕ ಅಂಶಗಳು ಕಡಿಮೆ ಇದ್ದಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದರು.
ತಂಬಾಕು ಬೆಳೆಗಾರರು ಸುಸ್ಥಿರ ಕೃಷಿ ಬೇಸಾಯಕ್ಕೆ ಒತ್ತು ನೀಡುವುದರಿಂದ ತಂಬಾಕು ಮಾರುಕಟ್ಟೆಯಲ್ಲಿ ಏರುಪೇರಾದರೂ ಅದನ್ನು ನಿಗ್ರಹಿಸುವ ಆರ್ಥಿಕ ಶಕ್ತಿ ಹೊಂದಿರಬೇಕು. ಈ ಸಾಲಿನ ಮಾರುಕಟ್ಟೆ ಆರಂಭದಲ್ಲಿ ಕಂಡ ದರ ನಂತರದಲ್ಲಿ ಸಿಗದೆ ರೈತರು ಹತಾಶರಾಗಿದ್ದರು. ಈ ಹಂತದಲ್ಲಿ ಸುಸ್ಥಿರ ಕೃಷಿ ಪದ್ಧತಿ ರೈತನನ್ನು ಕಾಪಾಡಲಿದೆ ಎಂದರು.

ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ.ರಾಮಕೃಷ್ಣನ್ ಮಾತನಾಡಿ,ತಂಬಾಕು ಮಾರುಕಟ್ಟೆ ಹಲವು ವರ್ಷಗಳಿಂದ ಬೇಡಿಕೆ ಆಧಾರಿತವಾಗಿದ್ದು, ಬೇಡಿಕೆ ಎಷ್ಟು ಇದೆ ಎಂಬುದನ್ನು ರೈತರು ಅರಿತು ಅದಕ್ಕೆ ತಕ್ಕಂತೆ ಉತ್ಪಾದಿಸುವುದರಿಂದ ನಷ್ಟದ ಪ್ರಮಾಣ ತಗ್ಗಿಸಬಹುದಾಗಿದೆ. ಇತ್ತೀಚಿನ ದಿನದಲ್ಲಿ ವಿಶ್ವದಲ್ಲಿ ತಂಬಾಕು ಬೆಳೆಯುವ ದೇಶಗಳಲ್ಲಿ ಗುಣಮಟ್ಟಕ್ಕೆ ಒತ್ತು ನೀಡುತ್ತಿದ್ದು ವ್ಯಾಪಾರಗಾರರು ಗುಣಮಟ್ಟದ ತಂಬಾಕು ಖರೀದಿಗೆ ಒತ್ತು ನೀಡುತ್ತಿದ್ದಾರೆ. ಭಾರತದಲ್ಲಿ ಆಂಧ್ರ ಮತ್ತು ಕರ್ನಾಟಕದಲ್ಲಿ ತಂಬಾಕು ಉತ್ಪತ್ತಿ ಮಾಡುತ್ತಿದ್ದು, ಈ ಭಾಗದ ರೈತರು ವೈಜ್ಞಾನಿಕವಾಗಿ ಬೆಳೆದು ಹದಗೊಳಿಸಿದಲ್ಲಿ ಗುಣಮಟ್ಟದ ಸೊಪ್ಪು ಪಡೆಯಲು ಸಹಕಾರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಐಟಿಸಿ ಕಂಪನಿಯ ಪ್ರವೀಣ್ ಕುಮಾರ್ ಮಾತನಾಡಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎದುರಾಗಿರುವ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ವಿವರಿಸಿದರು. ಕಾರ್ಯಗಾರದಲ್ಲಿ ಸಮಗ್ರ ಕೃಷಿ ಪದ್ಧತಿ, ಕೀಟ ಮತ್ತು ರೋಗ ನಿರ್ವಹಣೆ, ಪರಿಸರ ಸ್ನೇಹಿ ಕೃಷಿ,ಮಾನವ ಹಕ್ಕುಗಳ ಸಂರಕ್ಷಣೆ, ತಂಬಾಕು ಕಟಾವು ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.
ಹುಣಸೂರು ತಾಲ್ಲೂಕಿನಲ್ಲಿ ಉತ್ತಮ ತಂಬಾಕು ಬೆಳೆದ 50 ಯುವ ಪ್ರಗತಿಪರ ರೈತರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ, ವರ್ಜೀನಿಯ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಪರಮೇಶ್, ಐಟಿಸಿ ಕಂಪನಿಯ ವಿವಿಧ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.








