LatestMysore

ಜು.17, 24,  31, ಆ.6 ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಂಭ್ರಮ.. ವ್ಯವಸ್ಥೆ ಹೇಗಿರಲಿದೆ?

ಮೈಸೂರು: ಪ್ರತಿ ವರ್ಷದಂತೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜಾ ಕೈಂಕರ್ಯಗಳು ಈ ಬಾರಿ ಜು.17, 24,  31, ಆ.6 ಈ ನಾಲ್ಕು ಶುಕ್ರವಾರ ಮತ್ತು ಆ.4ರಂದು ವರ್ಧಂತ್ಯೋತ್ಸವ ನಡೆಯಲಿದೆ.  ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಕೇವಲ ಶುಕ್ರವಾರ ಮಾತ್ರವಲ್ಲದೆ, ವಾರಾಂತ್ಯದ ದಿನಗಳಲ್ಲಿಯೂ ಭಕ್ತರು ಆಗಮಿಸುವುದರಿಂದ ಜನ ಮತ್ತು ವಾಹನ ದಟ್ಟಣೆಯಾಗಲಿದ್ದು, ಇದನ್ನು ತಡೆಯುವ ಸಲುವಾಗಿ ಹತ್ತು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ ಭಕ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.

300ರೂ ಟಿಕೆಟ್ ರದ್ದು 2000 ಟಿಕೆಟ್ ಮಾತ್ರ.. ವಾರಾಂತ್ಯದ 3 ದಿನ ವಾಹನಗಳಿಗೆ ಪ್ರವೇಶವಿಲ್ಲ

ಆಷಾಢ ಶುಕ್ರವಾರದಂದು ತಾಯಿಯ ದರ್ಶನ ಮಾಡಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ. ಧರ್ಮ ದರ್ಶನ ಹಾಗೂ 2000 ರೂ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.  ಉಳಿದಂತೆ ಈ ಬಾರಿ 300 ರೂ ಟಿಕೆಟ್ ರದ್ದು ಮಾಡಲಾಗಿದೆ. ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಪ್ರವೇಶವಿದೆ. ಇವರನ್ನು ಹೊರತು ಪಡಿಸಿ ಶುಕ್ರವಾರ ಶನಿವಾರ, ಭಾನುವಾರದಂದು ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ, ಬೆಟ್ಟದಲ್ಲಿ ವಾಸ ಮಾಡುವ ಜನರು ಗುರುತಿನ ಪತ್ರ ತೋರಿಸಿ ಓಡಾಡಬಹುದಾಗಿದೆ.

ಎಲ್ಲಿಂದ ಬಸ್ ಹತ್ತಬೇಕು? ಟಿಕೆಟ್ ಎಲ್ಲಿ ಪಡೆಯುವುದು?

ಲಲಿತ್ ಮಹಲ್ ಪ್ಯಾಲೇಸ್ ಮೈದಾನದಲ್ಲೇ ದರ್ಶನದ ಟಿಕೆಟ್‌ಗಳನ್ನು ನೀಡಲಾಗುತ್ತದೆ. 2 ಸಾವಿರ ರೂ ಮೌಲ್ಯದ ಟಿಕೆಟ್ ಪಡೆದವರನ್ನು ಹಾಗೂ ಧರ್ಮ ದರ್ಶನ ಪಡೆಯುವ ಭಕ್ತರನ್ನು ನಿಲ್ದಾಣದಿಂದಲೇ ಪ್ರತ್ಯೇಕವಾದ ಬಸ್‌ಗಳಲ್ಲಿ ಕರೆ ತರಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಾಲುಗಳನ್ನು ಮಾಡಲಾಗುತ್ತದೆ. ಬೆಟ್ಟದ ಮೇಲೆ ಬರುವ ಬಸ್ಸುಗಳು ಧರ್ಮ ದರ್ಶನ ಪಡೆಯುವ ಭಕ್ತರನ್ನು ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಇಳಿಸುತ್ತವೆ. ಅಲ್ಲಿಂದ  ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುತ್ತದೆ. 2000 ರೂ ಟಿಕೆಟ್ ಪಡೆದುಕೊಂಡಿರುವವರು ಮಹಿಷಾಸುರ ಪ್ರತಿಮೆಯ ಮುಂಭಾಗದಿಂದ ದೇವಸ್ಥಾನ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರು ಲಲಿತ್ ಮಹಲ್ ಪ್ಯಾಲೇಸ್ ಬಳಿ ಬಸ್ ಹತ್ತುವಾಗಲೇ ತಮ್ಮ ಪಾದರಕ್ಷೆಗಳನ್ನು ಬಿಡಬೇಕು. ಇದಕ್ಕಾಗಿ ಕೌಂಟರ್ ತೆರೆಯಲಾಗುತ್ತದೆ.

ಧರ್ಮದರ್ಶನ, ಮೆಟ್ಟಿಲು ಹತ್ತಿ ಬರುವವರಿಗೆ ಉಚಿತವಾಗಿ ಡ್ರೈಫ್ರೂಟ್ಸ್, ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಕೆಲವು ಕಡೆ ಶೌಚಾಲಯಗಳನ್ನು ತೆರೆಯಲಾಗುವುದು. ದೇವಿಯ ದರ್ಶನ ಪಡೆಯುವ ಎಲ್ಲ ಭಕ್ತರಿಗೂ ಕುಂಕುಮ ಪ್ರಸಾದ, ಮುತ್ತೈದೆಯರಿಗೆ ಮಡಿಲಕ್ಕಿ ಪ್ಯಾಕೆಟ್‌ಗಳನ್ನು ಉಚಿತವಾಗಿ ಚಾಮುಂಡೇಶ್ವರಿ  ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುತ್ತದೆ.

1000 ಸಾವಿರ ಮೆಟ್ಟಿಲು ಹತ್ತಿ ಬಂದವರಿಗೆ ಪ್ರತ್ಯೇಕ ಸಾಲು

ಸಾವಿರ ಮೆಟ್ಟಿಲು ಹತ್ತಿಕೊಂಡು ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ನೇರ ದರ್ಶನದ ಅವಕಾಶ ಕಲ್ಪಿಸಲಾಗುತ್ತದೆ. ಮೆಟ್ಟಿಲು ಬಳಿಯಿಂದಲೇ ಬ್ಯಾರಿಕೇಡ್ ಅಳವಡಿಸಿ, ಪ್ರತ್ಯೇಕ ಸರತಿ ಸಾಲನ್ನು ಮಾಡಲಾಗಿದೆ. ಇಲ್ಲಿಂದ ಭಕ್ತರು ದೇವಾಲಯವನ್ನು ಪ್ರವೇಶ ಮಾಡಿ, ದೇವಿಯ ದರ್ಶನ ಪಡೆಯಲು ಅವಕಾಶ ಇರುತ್ತದೆ.

ಚಾಮುಂಡಿ ಬೆಟ್ಟದಲ್ಲಿ ಪಾಸ್ಟಿಕ್ ಬ್ಯಾನ್ ಮಾಡಲಿದ್ದು, ಡಸ್ಟ್ ಬಿನ್ ವ್ಯವಸ್ಥೆ. ಸ್ವಚ್ಛತೆ ಕಾಪಾಡಬೇಲು ಸೂಚಿಸಲಾಗುತ್ತಿದೆ. ಬೆಟ್ಟದಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ತೊಂದರೆ ಆಗದಂತೆ ಅವರ ಆಧಾರ್ ಕಾರ್ಡ್ ನೋಡಿ ಪ್ರವೇಶದ ವ್ಯವಸ್ಥೆ ಮಾಡಲಾಗುತ್ತದೆ. ಬೆಟ್ಟದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ದಿನದ 24 ಗಂಟೆ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳ ವ್ಯವಸ್ಥೆ ದೇವಸ್ಥಾನದ ಬಳಿಯಲ್ಲಿ 3 ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಚೆಸ್ಕಾ ವತಿಯಿಂದ ಪಾರ್ಕಿಂಗ್ ಸ್ಥಳ ಹಾಗೂ ಬೆಟ್ಟಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.

ನಗರ ಪಾಲಿಕೆಯ ವತಿಯಿಂದ ಅಗತ್ಯ ಸಂಖ್ಯೆಯ ಪೌರ ಕಾರ್ಮಿಕರನ್ನು ನಿಯೋಜನೆ,  ಸಂಚಾರಿ ಶೌಚಾಲಯಗಳ ವ್ಯವಸ್ಥೆ, ಸೂಕ್ತ ಭದ್ರತೆಗೆ ಅಗತ್ಯ ಸಂಖ್ಯೆಯ ಸಿಸಿ ಟಿವಿಗಳನ್ನು ಅಳವಡಿಕೆ ಮಾಡಲಾಗುತ್ತಿದ್ದು, ಬಿಗಿಪೊಲೀಸ್ ಬಂದೋಬಸ್ತ್  ಮಾಡಲಾಗುತ್ತದೆ.

admin
the authoradmin

Leave a Reply