LatestMysore

ತಂಬಾಕಿಗೆ ಬದಲಾಗಿ ಅಂಗಾಂಶ ಬಾಳೆ, ಕಂದು ಬಾಳೆ, ತರಕಾರಿ ಬೆಳೆ ಬೆಳೆಯಲು ರೈತರಿಗೆ ಸಹಾಯಧನ

ಕೆ.ರ್.ನಗರ(ಸಂಘಟನೆ ಮಂಜುನಾಥ್)ತಂಬಾಕಿಗೆ ಪರ್ಯಾಯ ಬೆಳೆಯನ್ನು ಬೆಳೆಯುವತ್ತ ರೈತರಿಗೆ ಉತ್ತೇಜನ  ನೀಡುವುದು ಅನಿವಾರ್ಯವಾಗಿದೆ. ಈಗಾಗಲೇ ತಂಬಾಕು ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ದರ ಕುಸಿತದ ಕಾರಣಗಳಿಂದಾಗಿ ಸಾಲಗಾರರಾಗುವ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕಾಗಿದೆ.

ತಂಬಾಕಿಗೆ ಪರ್ಯಾಯವಾಗಿ ಬೇರೆ ಬೆಳೆಗಳನ್ನು ಬೆಳೆಯಲು ತೋಟಗಾರಿಕೆ ಇಲಾಖೆ ಪ್ರೋತ್ಸಾಹ ನೀಡುತ್ತಿದ್ದು, ಸಹಾಯಧನ ನೀಡಲು ರೈತರಿಂದ ಅರ್ಜಿ ಕರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಇದೀಗ 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎಚ್.ಎಲ್. ಗೀತಾ ಹೆಚ್.ಎಲ್ ತಿಳಿಸಿದ್ದಾರೆ.

ರಾಷ್ಟ್ರೀಯ ಎಣ್ಣೆ ತಾಳೆ ಅಭಿಯಾನ ಯೋಜನೆಯಡಿ ಹೊಸದಾಗಿ ಪ್ರದೇಶ ವಿಸ್ತರಣೆ, ನಿರ್ವಹಣೆ ಮತ್ತು ಅಂತರ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಂಬಾಕು ಪರ್ಯಾಯ ಬೆಳೆ ಕಾರ್ಯಕ್ರಮದಲ್ಲಿ ತಂಬಾಕು ಪರವಾನಿಗೆ ಹೊಂದಿರುವ ರೈತರು ತಂಬಾಕಿಗೆ ಬದಲಾಗಿ ಅಂಗಾಂಶ ಬಾಳೆ, ಕಂದು ಬಾಳೆ, ತರಕಾರಿ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು ಎಂದು ಹೇಳಿದ್ದಾರೆ

ರಿಯಾಯಿತಿ ದರದಲ್ಲಿ ಲಘು ಪೋಷಕಾಂಶಗಳನ್ನು ವಿತರಣೆ ಮಾಡಲಾಗುವುದು ಅಲ್ಲದೇ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಪದ್ಧತಿ ಅಳವಡಿಸಲು ಸಹಾಯಧನ ನೀಡಲಾಗುತ್ತದೆ.

ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಹೊಸದಾಗಿ ತೆಂಗಿನ ಸಸಿಗಳನ್ನು ನಾಟಿ ಮಾಡಲಾಗಿರುವ ರೈತರುಗಳಿಗೆ ಒಂದು ಸಸಿಗೆ ರೂ.350 ರಂತೆ ಮೊದಲನೇ ವರ್ಷ ರೂ.175 ಮತ್ತು ಎರಡನೇ ವರ್ಷ ರೂ.175 ರಂತೆ ಸಹಾಯಧನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ರೈತರು ಮಾಹಿತಿಗಾಗಿ ಸಮೀಪದ ತೋಟಗಾರಿಕಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

admin
the authoradmin

Leave a Reply