CrimeLatest

ಹೆಚ್.ಡಿ.ಕೋಟೆ ಚಕ್ಕೋಡನಹಳ್ಳಿಯಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿದ ಕರಡಿ ಸೆರೆ

ಹೆಚ್.ಡಿ.ಕೋಟೆ:  ಮೇಕೆಗೆ ಸೊಪ್ಪು ತರಲು ಹೋದ ವ್ಯಕ್ತಿಯೊಬ್ಬನ ಮೇಲೆ ಗ್ರಾಮದ ಪೊದೆಯೊಂದರಲ್ಲಿ ಅಡಗಿದ್ದ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೋಕಿನ ಚಕ್ಕೋಡನಹಳ್ಳಿಯಲ್ಲಿ ನಡೆದಿದ್ದು, ತಕ್ಷಣವೇ ಕಾರ್ಯಾಚರಣೆ ನಡೆಸಿ ಕರಡಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಚಕ್ಕೋಡನಹಳ್ಳಿ ಗ್ರಾಮದ ನಿವಾಸಿ ಶಿವಪ್ಪಗೌಡ (50) ಕರಡಿ ದಾಳಿಗೆ ಸಿಲುಕಿ ಗಾಯಗೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದ ಚಕ್ಕೋಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ತಾರಕ ನಾಲೆ ಬಳಿಯ ಪೊದೆಯೊಂದರಲ್ಲಿ ಕರಡಿ ಅಡಗಿಕೊಂಡಿತ್ತು ಎನ್ನಲಾಗಿದೆ.

ಗುರುವಾರ ಮಧ್ಯಾಹ್ನ ಅದೇ  ಸಮಯದಲ್ಲಿ ಶಿವಪ್ಪಗೌಡ ಮೇಕೆಗಳಿಗೆ ಸೊಪ್ಪು ತರುವ ಸಲುವಾಗಿ ಕರಡಿ ಅವಿತಿದ್ದ ಪೊದೆಯತ್ತ ಧಾವಿಸಿ ಸೊಪ್ಪು ಕೊಯ್ಯುತ್ತಿದ್ದಾಗ ಪೊದೆಯಿಂದ ಹಠಾತ್ ಹೊರಬಂದ ಕರಡಿ ಏಕಾಏಕಿ ಅವರ ಮೇಲೆ ದಾಳಿಗೆ ಮುಂದಾಗಿದೆ. ಈ ಸಂದರ್ಭ ಅದರಿಂದ ತಪ್ಪಿಸಿಕೊಂಡು ಬಂದ ಅವರು ಚೀರಾಡಿದ್ದಾರೆ. ಕೂಡಲೇ  ಗ್ರಾಮಸ್ಥರು ಗಾಬರಿಯಿಂದ ಅತ್ತ ಕಡೆಗೆ ಓಡಿದ್ದು, ಜನರನ್ನು ಕಂಡ  ಕರಡಿ ಅಲ್ಲಿಂದ ಓಡಿ ಪೊದೆಯೊಳಗೆ ಅವಿತುಕೊಂಡಿದೆ.

ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ  ಕರಡಿ ಅಲ್ಲಿಂದ ಹೊರಬಾರದಂತೆ ಸುತ್ತುವರೆದು  ಕಾರ್ಯಾಚರಣೆ ನಡೆಸಿದ್ದು, ಅರವಳಿಕೆ ತಜ್ಞರಿಂದ ಕರಡಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಗಾಯಾಳು ಶಿವಪ್ಪಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸೆರೆ ಸಿಕ್ಕ ಕರಡಿಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಾಗರಹೊಳೆ ಅರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

admin
the authoradmin

Leave a Reply