ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಕೆರೆ ಎಂಬುದು ಕೇವಲ ನೀರು ನಿಲ್ಲುವ ಜಾಗ ಅಲ್ಲ. ಅದು ನಮ್ಮ ಗ್ರಾಮೀಣ ಭಾಗದ ಸಕಲ ಜೀವ ರಾಶಿಗಳ ಆಧಾರದ ಒಂದು ಭಾಗವಾಗಿದೆ ಎಂದು ಸಾಲಿಗ್ರಾಮ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ರವಿಕುಮಾರ್ ಹೇಳಿದರು

ತಾಲೂಕಿನ ನರಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಕೊಪ್ಪಲು ಗ್ರಾಮದಲ್ಲಿರುವ ಸುಮಾರು 6 ಎಕರೆ ಪ್ರದೇಶದಲ್ಲಿರುವ ನರಸಿಂಹ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ನಮ್ಮೂರು ನಮ್ಮ ಕೆರೆ ಎಂಬ ಶೀರ್ಷಿಕೆಯಡಿ ಸುಮಾರು 9.62 ಲಕ್ಷ ರೂಗಳ ಅನುದಾನದಲ್ಲಿ ಪುನಶ್ಚೇತನಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆರೆ, ಕಟ್ಟೆ, ಬಾವಿ ಸೇರಿದಂತೆ ಇನ್ನಿತರ ಜಲ ಮೂಲಗಳನ್ನು ನಮ್ಮ ಪೂರ್ವಿಕರು ನಿರ್ಮಾಣ ಮಾಡಿದ್ದು ಅವುಗಳನ್ನು ಸರಕಾರದ ಜೊತೆಗೆ ಇತರ ಸಂಘ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ ನಾಗರಿಕರು ಸಂರಕ್ಷಣೆ ಮಾಡುವುದರಿಂದ ಸಕಲ ಜೀವ ರಾಶಿಗಳ ಜೀವ ಸಂಕುಲಕ್ಕೆ ಅನುಕೂಲ ಮಾಡುವುದರ ಜತೆಗೆ ಮುಂದಿನ ಪೀಳಿಗೆಗೂ ಈ ಜಲ ಮೂಲಗಳು ಉಳಿಯುತ್ತವೆ ಎಂದು ಹೇಳಿದರು.

ಪ್ರಾದೇಶಿಕ ನಿರ್ದೇಶಕ ಯೋಗೇಶ್ ಮಾತನಾಡಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ ಕೆರೆ ಅಭಿವೃದ್ಧಿಗೆ ಡಾ. ವೀರೇಂದ್ರ ಹೆಗ್ಗಡೆಯವರು ಸುಮಾರು 15 ಕೋಟಿ ರೂ.ಗಳ ಅನುದಾನ ನೀಡುವ ಮೂಲಕ ರಾಜ್ಯದಲ್ಲಿ ಒಟ್ಟು 972 ನೇ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದೆ, ಅಲ್ಲದೆ ಮೈಸೂರು ಜಿಲ್ಲೆಯಲ್ಲಿ 35 ಕೆರೆ ಹಾಗೂ ಕೃಷ್ಣರಾಜನಗರ ತಾಲೂಕಿನಲ್ಲಿ 17 ಕೆರಗಳನ್ನು ಪುನಶ್ಚೇತನಗೊಳಿಸುವ ಮೂಲಕ ಕೆರೆಗಳ ಸಂರಕ್ಷಣೆ ಮಾಡಲು ಮುಂದಾಗಿದ್ದು ಸಾರ್ವಜನಿಕರು ಕೂಡ ಈ ಕೆರೆಗಳನ್ನು ಕಲುಷಿತಗೊಳಿಸದೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕಿ ಮಮತಾ ರಾವ್, ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ ಪಿಡಿಒ ಕವಿತಾ, ರೈತ ಸಂಘದ ಶೇಖರ್, ಜನ ಜಾಗ್ರತಿ ವೇದಿಕೆಯ ಮಿರ್ಲೆ ಸಕುಂತಲಾ, ಬಾಲ ಮನೋಹರ್, ಮಿರ್ಲೆ ಲೋಕನಾಥ್, ಬಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಮಹೇಶ್, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ದೇವರಾಜು, ಪುಷ್ಪ ಕಾಂತರಾಜು, ಸಂಸ್ಥೆಯ ಮೇಲ್ವಿಚಾರಕಿ ಸಂಗೀತ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಮಹಿಳೆಯರು ಮತ್ತಿತರರು ಇದ್ದರು.








