LatestMysore

ಈ ಪುಟ್ಟ ಪೋರಿ ಅಂತಿಂಥ ಬಾಲಕಿಯಲ್ಲ…ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ ಮಾಡಿದ ಮಹಾಸಾಧಕಿ

ಮೈಸೂರು:  ಮೈಸೂರಿನ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿನಿ ಗಾಯತ್ರಿ.ಎಸ್ ತಮ್ಮ ಅಸಾಧಾರಣ ಗಾಯನ ಕೌಶಲ್ಯದ ಮೂಲಕ ರಾಷ್ಟ್ರ ಮಟ್ಟದ ಅತಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಒಂದೇ ವೇದಿಕೆಯಲ್ಲಿ ಅತ್ಯಂತ ವೇಗವಾಗಿ ಸಂಗೀತದ ವಿವಿಧ ಶೈಲಿಗಳನ್ನು ಬದಲಾಯಿಸಿ ಹಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇವರ ಈ ಅಪ್ರತಿಮ ಪ್ರತಿಭೆಯನ್ನು ಗುರುತಿಸಿರುವ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್-2026ಸಂಸ್ಥೆ, ಐದು ವಿಭಿನ್ನ ಪ್ರಕಾರಗಳ ಹಾಡುಗಳನ್ನು ಪ್ರದರ್ಶಿಸಿದ ಅತ್ಯಂತ ವೇಗವಾಗಿ ಪ್ರಕಾರಗಳನ್ನು ಬದಲಾಯಿಸಿದ ಕಿರಿಯ ಗಾಯಕಿ ಎಂಬ ಶೀರ್ಷಿಕೆಯಡಿ ಇವರ ಹೆಸರನ್ನು ತನ್ನ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದೆ.

ಕೇವಲ 7 ವರ್ಷದ ಪುಟ್ಟ ಬಾಲಕಿ ಗಾಯತ್ರಿ ಒಂದೇ ಪ್ರದರ್ಶನದಲ್ಲಿ ಒಟ್ಟು 25ಕ್ಕೂ ಹೆಚ್ಚು ಹಾಡುಗಳನ್ನು ಸತತವಾಗಿ ಹಾಡಿ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಕೇವಲ ಒಂದು ಸೆಕೆಂಡ್‌ ನ ಅತ್ಯಲ್ಪ ಅವಧಿಯಲ್ಲಿ ಒಂದು ಸಂಗೀತ ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ತಕ್ಷಣವೇ ಧ್ವನಿಯನ್ನು ಬದಲಾಯಿಸಿ ತಡೆರಹಿತವಾಗಿ ಹಾಡುವ ಅದ್ಭುತ ಸಾಮರ್ಥ್ಯ ಪ್ರದರ್ಶಿಸಿ ತೀರ್ಪುಗಾರರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬಾಲಕಿ ಗಾಯತ್ರಿ ಅವರು ತಮ್ಮ ಪ್ರದರ್ಶನದಲ್ಲಿ ಕೇವಲ ಒಂದೆರಡು ಶೈಲಿಗಷ್ಟೇ ಸೀಮಿತವಾಗದೆ, ಸಂಗೀತ ಲೋಕದ ವೈವಿಧ್ಯಮಯ 8 ಪ್ರಕಾರಗಳನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿದ್ದಾರೆ. ಶಾಸ್ತ್ರೀಯ ಸಂಗೀತ ಹಾಗೂ ಚಲನಚಿತ್ರ ಶಾಸ್ತ್ರೀಯ, ಭಾವಗೀತೆ, ಭಕ್ತಿಗೀತೆ ಮತ್ತು ಭಜನೆ, ಜಾನಪದ ಹಾಗೂ ದೇಶಭಕ್ತಿ ಗೀತೆಗಳು, ವೆರೈಟಿ ಫಾಸ್ಟ್ ಬೀಟ್ ಹಾಡುಗಳನನು ಹಾಡಿದ್ದಾರೆ.

ಬಾಲಕಿಯ ಈ ಅಸಾಧಾರಣ ಗಾಯನ ಪ್ರತಿಭೆ, ವೇದಿಕೆಯ ಮೇಲಿನ ಅದ್ಭುತ ಆತ್ಮವಿಶ್ವಾಸ ಮತ್ತು ಸಂಗೀತದ ಮೇಲಿನ ಅಪಾರ ನಿಷ್ಠೆ ಪರಿಗಣಿಸಿ ಈ ರಾಷ್ಟ್ರೀಯ ದಾಖಲೆಯ ಗೌರವ ನೀಡಲಾಗಿದೆ. ಮೈಸೂರಿನ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಈ ಪುಟ್ಟ ಗಾಯಕಿಯ ಸಾಧನೆಗೆ ಸಂಗೀತ ಗಣ್ಯರು ಹಾಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

admin
the authoradmin

Leave a Reply