ವ್ಯವಹಾರದಲ್ಲಿ ಕನ್ನಡ ಭಾಷೆಯನ್ನೇ ಬಳಸಿ.. ವಿದ್ಯಾರ್ಥಿಗಳಿಗೆ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸಲಹೆ

ಮೈಸೂರು: ಇಂಗ್ಲಿಷ್ ಭಾಷೆಯನ್ನೂ ಕಲಿಯಿರಿ, ವ್ಯವಹಾರಕ್ಕೆ ಕನ್ನಡ ಭಾಷೆಯನ್ನೇ ಬಳಸಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸಲಹೆ ನೀಡಿದರು.
ಅವರು ಆಲನಹಳ್ಳಿ ಬಡಾವಣೆಯ ಲಲಿತ ಮಹಲ್ ನಗರದಲ್ಲಿರುವ ವಿವೇಕು ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ತರಗತಿಯಲ್ಲಿ ಅಥವಾ ಹೊರಗೆ ಗೆಳೆಯರೊಡನೆ ಕನ್ನಡದಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳುವುದಲ್ಲದೆ, ಕನ್ನಡ ಕಾದಂಬರಿಗಳನ್ನು, ಕನ್ನಡ ಸಾಹಿತಿಗಳು ಹಾಗೂ ಕವಿಗಳ ಆತ್ಮಚರಿತ್ರೆ ಹಾಗೂ ಕನ್ನಡ ದಿನಪತ್ರಿಕೆಗಳನ್ನು ಓದುವಂತೆ ತಿಳಿಸಿದರು.
ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಮಾತನಾಡಿ, ನಾವು ಆಚರಿಸುವ ಕನ್ನಡ ರಾಜ್ಯೋತ್ಸವದ ಹಿಂದೆ ಅನೇಕ ಮಹನೀಯರ ತ್ಯಾಗ, ಶ್ರಮ, ಕೊಡುಗೆಗಳಿವೆ. ಕನ್ನಡ ಏಕೀಕರಣಕ್ಕಾಗಿ ಅನೇಕರು ಶ್ರಮಿಸಿದ್ದಾರೆ. ಹಳಗನ್ನಡ ಸಾಹಿತಿಗಳಿಂದ ಇಂದಿನ ಸಾಹಿತಿಗಳವರೆಗೂ ಸಾಹಿತ್ಯ ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹ ಶ್ರೇಷ್ಠ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕಾದದ್ದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ವ್ಯವಹಾರಿಕವಾಗಿ ದಿನನಿತ್ಯ ಕನ್ನಡವನ್ನೇ ಬಳಸಿ, ಮೊಬೈಲ್ ನಲ್ಲಿಯೂ ಕನ್ನಡವನ್ನೇ ಬಳಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಲಯದ ಅಧ್ಯಕ್ಷ ಕೆ.ಎಚ್. ಸಂಜೀವ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಜೆ. ನಾರಾಯಣ್, ಉದಯಗಿರಿ ಕನ್ನಡ ಸಂಘದ ಕಾರ್ಯದರ್ಶಿ ಜಯಕುಮಾರ್, ವಿಜಯನಗರ ರೋಟರಿ ಕ್ಲಬ್ ಕಾರ್ಯದರ್ಶಿ ರೋ.ಎಸ್. ಸೇತುರಾಮ್, ಕನ್ನಡ ಪರಿಚಾರಕ ಜಿ.ಲೋಕೇಶ್ ರಾವ್, ಮುಖಂಡರಾದ ಪಾರ್ಥಸಾರಥಿ, ಸಿದ್ದಪ್ಪಾಜಿ, ಉಪಸ್ಥಿತರಿದ್ದರು.
ಕುರುಹಿನ ಶೆಟ್ಟಿ ವಿಚಾರ ವೇದಿಕೆ ಕಾರ್ಯಕಾರಿ ಸಮಿತಿ ಸದಸ್ಯರಾದ ರೋ.ನಾಗರಾಜು, ಕುಮಾರ್, ಶ್ರೀನಿವಾಸ ರಾಜು, ಗೋಪಾಲ್ ರಾಜೇ ಅರಸ್, ಮುಖ್ಯ ಶಿಕ್ಷಕಿ ಪಲ್ಲವಿ ಹಾಗೂ ಶಿಕ್ಷಕರು, ಶಿಕ್ಷಕಿಯರು ಹಾಜರಿದ್ದರು. ವಿದ್ಯಾರ್ಥಿಗಳು ಕನ್ನಡದ ಮಹಾನ್ ಸಾಹಿತಿಗಳ ಛದ್ಮ ವೇಷ ಧರಿಸಿ ಗಮನ ಸೆಳೆದರಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.







