CrimeLatest

ಶ್ರೀ ಹುಲಿಕುರ ವೇಣುಗೋಪಾಲಸ್ವಾಮಿ ದೇವಸ್ಥಾನದ ಹುಂಡಿಗೆ ಕನ್ನ…80ಸಾವಿರ ದೋಚಿ ಪರಾರಿ.. ಭಕ್ತರ ಆಕ್ರೋಶ

ಸರಗೂರು(ದಾಸೇಗೌಡ): ತಾಲೂಕಿನ ಸಮೀಪದ ಹೆಬ್ಬಲಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರೀ ಹುಲಿಕುರ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯರಾತ್ರಿ ದುಷ್ಕರ್ಮಿಗಳು ಕಳ್ಳತನ ನಡೆಸಿರುವ ಘಟನೆ ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದ ಹುಂಡಿಯನ್ನು ಒಡೆದು ಸುಮಾರು ₹80 ಸಾವಿರಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ದೇವಸ್ಥಾನ ಆಡಳಿತ ಸಮಿತಿ ತಿಳಿಸಿದ್ದು, ಈ ಕುರಿತು ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಜಿ. ಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೇವಸ್ಥಾನ ಸಮಿತಿಯ ಮಾಹಿತಿ ಪ್ರಕಾರ, ಇದೇ ದೇವಸ್ಥಾನದಲ್ಲಿ ಈ ಹಿಂದೆಯೂ ಮೂರು ಬಾರಿ ಕಳ್ಳತನ ನಡೆದಿದ್ದು, ಇತ್ತೀಚಿನ ಘಟನೆ ನಾಲ್ಕನೇ ಕಳ್ಳತನವಾಗಿದೆ. ಹಿಂದಿನ ಮೂರನೇ ಕಳ್ಳತನ ಪ್ರಕರಣದ ತನಿಖೆಯಲ್ಲಿ ದೇವಸ್ಥಾನದ ಹುಂಡಿಯ ಕೀಲಿಯ ನಕಲು ಮಾಡಿಕೊಟ್ಟಿದ್ದಾನೆ ಬೀಗದ ರಿಪೇರಿ ಕೆಲಸ ಮಾಡುವ ಖಲೀಲ್ ಎಂಬಾತನಿಂದ ಪೊಲೀಸ್ ಠಾಣೆಯಲ್ಲೇ ಗ್ರಾಮಸ್ಥರ ಸಮ್ಮುಖದಲ್ಲಿ ಹೇಳಿಕೆ ಪಡೆಯಲಾಗಿತ್ತು ಎಂದು ಸಮಿತಿಯವರು ತಿಳಿಸಿದ್ದಾರೆ.

ಅಂದು ಆತ ಹಿಂದಿನ ದೇವಸ್ಥಾನದ ಅರ್ಚಕರಿಗೆ ಮುಂಜಾನೆ ಬಂದು ನಕಲಿ ಕೀಲಿಯನ್ನು ತಯಾರಿಸಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದರೂ, ಆ ಪ್ರಕರಣದಲ್ಲಿ ಪೊಲೀಸರು ನಂತರ ‘ಸಿ’ ರಿಪೋರ್ಟ್ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಮಿತಿಯವರು ಆರೋಪಿಸಿದ್ದಾರೆ.

ಹಿಂದಿನ ಪ್ರಕರಣದ ಸಂಪೂರ್ಣ ತನಿಖೆ ನಡೆಸದೆ ಮುಕ್ತಾಯಗೊಳಿಸಿರುವುದರಿಂದ ನಿಜವಾದ ಆರೋಪಿಗಳು ಪತ್ತೆಯಾಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಾರಿಯ ಕಳ್ಳತನವನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ದೇವಸ್ಥಾನಕ್ಕೆ ನ್ಯಾಯ ಒದಗಿಸಬೇಕು ಎಂದು ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಘಟನೆ ನಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳವನ್ನು ಕರೆಸಿ ವೈಜ್ಞಾನಿಕ ತನಿಖೆ ಕೈಗೊಳ್ಳಲಾಯಿತು. ಶ್ವಾನದಳದ ‘ಮೈನಾ’ ಕಳ್ಳರ ಚಲನವಲನವನ್ನು ಪತ್ತೆಹಚ್ಚುವ ವೇಳೆ ಹೆಬ್ಬಲಗುಪ್ಪೆಗೆ ಹೋಗುವ ಕಾವಲಿ (ನಾಲೆ) ಭಾಗದವರೆಗೆ ತೆರಳಿ ಸುಳಿವು ನೀಡಿರುವುದಾಗಿ ತಿಳಿದುಬಂದಿದೆ. ಆ ದಿಕ್ಕಿನಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಶ್ರೀ ಹುಲಿಕುರ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂತಹ ಧಾರ್ಮಿಕ ಕ್ಷೇತ್ರದಲ್ಲೇ ಪದೇ ಪದೇ ಕಳ್ಳತನ ನಡೆಯುತ್ತಿರುವುದು ಭಕ್ತರಲ್ಲಿ ಭದ್ರತೆ ಕುರಿತು ಆತಂಕ ಮೂಡಿಸಿದೆ.

ದೇವಸ್ಥಾನದಲ್ಲಿ ಸಿಸಿ ಟಿವಿ ವ್ಯವಸ್ಥೆ ಅಳವಡಿಸಿದ್ದರು ಇದರ ಸಿ.ಸಿ ಟಿವಿಯ ಡಿ.ವಿ ಆರ್ ಅನ್ನು ಕದ್ದೋಯ್ದಿದ್ದಾರೆ. ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸುವುದು ಹಾಗೂ ಶಾಶ್ವತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಚ್.ಡಿ. ಕೋಟೆ ಪೊಲೀಸ್ ಠಾಣೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಜಿ. ಸ್ವಾಮಿ, ಕಾರ್ಯದರ್ಶಿ ಎಚ್.ಪಿ. ಬಾಲಕೃಷ್ಣ, ಖಜಾಂಚಿ ಕೆ. ಮೋಹನ್ ರಾಜ್, ಗೌರವಾಧ್ಯಕ್ಷ ಬಿ.ಸಿ. ಬಸಪ್ಪ, ಕೆ. ಚಿಕ್ಕವೀರನಾಯಕ, ಎಚ್.ಎಲ್. ನಂಜೇಗೌಡ, ನಿರ್ದೇಶಕರಾದ ವೇಣುಗೋಪಾಲ್,  ಗೋಪಯ್ಯ, ಚಿನ್ನಪುಟ್ಟಯ್ಯ, ದೇವಸ್ಥಾನದ ಅರ್ಚಕ ಬಾಲಕೃಷ್ಣ, ಎಚ್.ಎಲ್. ನಂಜುಂಡಸ್ವಾಮಿ, ವೆಂಕಟನಾಯಕ, ತುಂಬಸೋಗೆ ಸತ್ಯ, ಎಚ್.ಎಂ.ರಾಜು ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

 

admin
the authoradmin

Leave a Reply