ಗಾಯಕಿ ಎಸ್ ಜಾನಕಿಯವರಿಗೂ ಮೈಸೂರಿಗೂ ಅದೆಂತಹ ನಂಟಿತ್ತು ಎಂದರೆ ಅವರು ಮೈಸೂರನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಅಭಿಮಾನಿಯೊಬ್ಬ ಅವರನ್ನು ಆಹ್ವಾನಿಸಿದಾಗ ಅವರು ದೂರದ ಚೆನ್ನೈನಿಂದ ಬಂದಿದ್ದರು. ಹಾಗೆ ಬಂದವರು ಬರುತ್ತಲೇ ಇದ್ದರು. ತಮ್ಮ ಸಂಧ್ಯಾಕಾಲವನ್ನು ಮೈಸೂರಿನಲ್ಲಿಯೇ ಕಳೆದಿದ್ದು ಮತ್ತು ಇಲ್ಲಿಯೇ ತಮ್ಮ ಬದುಕಿಗೆ ವಿದಾಯ ಹೇಳಿದ್ದು ಎಲ್ಲವೂ ಅವರಿಗೆ ಮೈಸೂರು ಅಚ್ಚುಮೆಚ್ಚಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಅದೊಂದು ಘಟನೆಯನ್ನು ಲೇಖಕ ಎಸ್ ಪ್ರಕಾಶ್ ಬಾಬು ನೆನಪು ಮಾಡಿಕೊಂಡಿದ್ದಾರೆ.

ಯಾವ ಮೋಹನ ಮುರಳಿ ಕರೆಯಿತೋ, ದೂರ ತೀರಕ್ಕೆ ನಿನ್ನನು…
ಎಂಬ ಕವಿ ಡಾ. ಗೋಪಾಲ ಕೃಷ್ಣ ಅಡಿಗರ ಹಾಡಿನಂತೆ ಭಾರತದ ಗಾನ ಕೋಗಿಲೆ ಎಸ್. ಜಾನಕಮ್ಮ ಮೈಸೂರಿನ ಎನ್.ಆರ್.ಮೊಹಲ್ಲಾದ ನವೀನ್ ಎಂಬ ಅಭಿಮಾನಿಯೊಬ್ಬರು ಒಂದು ಬಾರಿ ಮನೆಗೇ ಕರೆದಿದ್ದಕ್ಕೆ, ದೂರದ ಚೆನ್ನೈ ನಿಂದ ಮಗನ ಮನೆಗೇ ಬಂದಂತೆ ಕಳೆದ ಎರಡೂ ದಶಕಗಳಿಂದ ಬರುತ್ತಿದ್ದರು.
ಭಾರತದ ಗಾನ ಕೋಗಿಲೆ ಜಾನಕಮ್ಮ, ಅದೆಷ್ಟು ಆ ಅಭಿಮಾನಿ ಮನೆಯವರೊಂದಿಗೆ ಹೊಂದಿಕೊಂಡಿದ್ದರೆಂದರೆ, ತಿಂಗಳು ಗಟ್ಟಲೆ ಅವರ ಮನೆಯಲ್ಲೇ ನೆಂಟರಂತೆ ಇರುತ್ತಿದ್ದರು. ಆ ಅಭಿಮಾನಿ ನವೀನ್ ಮೈಸೂರಿನ ಬೋಗಾದಿ ರಸ್ತೆಯಲ್ಲಿ ಜಾನಕಮ್ಮನ ಹೆಸರಿನಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲೇ ಸಮೀಪ ನವೀನ್ ತೋಟ ಇದೆ. ಅಲ್ಲೇ ಈಗ ಜಾನಕಮ್ಮನ ಅಂತ್ಯ ಕ್ರಿಯೆ ನಡೆಯುತ್ತಿದೆ. ಇದೆಲ್ಲಾ ಯಾವ ಋಣಾನುಬಂಧವೋ ಯಾರೂ ಬಲ್ಲರು.

ಹೀಗೇ ಆ ಮೈಸೂರಿನ ಅಭಿಮಾನಿ ನವೀನ್ ಮನೆಯಲ್ಲಿ ಇತ್ತೀಚಿಗೆ ಜಾನಕಮ್ಮ ಬಂದು ಇರುವಾಗಲೇ ಅವರ ಕಾಲಿಗೆ ಆದ ಗಾಯ ಗ್ಯಾಂಗ್ರಿನ್ ರೂಪ ತಾಳಿ, ಚಿಕಿತ್ಸೆ ಪಡೆಯುತ್ತಿದ್ದರು. ದೇಹಾರೋಗ್ಯದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ , ಮೈಸೂರಿನ ಅಪೋಲೋ ಆಸ್ಪತ್ರೆಗೇ ದಾಖಲಿಸಿದರೂ, ಪ್ರಯೋಜನವಾಗದೆ ನಿಧನ ರಾಗಿದ್ದಾರೆ. ಅವರ ಭೌತಿಕ ಶರೀರ ಅಳಿಯಬಹುದು. ಆದರೇ ಅವರು ದನಿ ನೀಡಿರುವ 48ಸಾವಿರಕ್ಕೂ ಹೆಚ್ಚಿನ ಹಾಡಿನಲ್ಲಿ ಅವರ ಶಾರೀರ ಮಾತ್ರ ಯಾವತ್ತೂ ಜೀವಂತವಾಗಿರುತ್ತಾರೆ. ಹೋಗಿ ಬನ್ನಿ ಅಮ್ಮ ನಿಮ್ಮ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ..









