ಹಾಡು ನಿಲ್ಲಿಸಿದ ಗಾನ ಕೋಗಿಲೆ… ಅಗಲಿದ ಮಹಾಗಾಯಕಿಗೆ ಕಂಬನಿ ಮಿಡಿದ ಸಂಗೀತ ಪ್ರೇಮಿಗಳು
ಜನನ 23.04.1938 ನಿಧನ 11-07-2026

ಮೈಸೂರು: ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಅವರು ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೈಸೂರಿನ ಬೋಗಾದಿಯಲ್ಲಿದ್ದ ನಿವಾಸಕ್ಕೆ ಪಾರ್ಥೀವ ಶರೀರವನ್ನು ಅಪೋಲೋ ಆಸ್ಪತ್ರೆಯಿಂದ ಶನಿವಾರ ರವಾನಿಸಿ ಭಾನುವಾರ ಮಹಾರಾಜ ಮೈದಾನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೊ ಆಸ್ಪತ್ರೆಗೆ ಮಧ್ಯಾಹ್ನ 12.49 ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ 7.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಹಾಗೂ ಅವರ ಮೊಮ್ಮಗಳು ಅಪ್ಸರಾ ವೈದ್ಯುಲ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅವರು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಜಾನಕಿ ಅಮ್ಮನವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಕೋಟ್ಯಂತರ ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ಚಲನಚಿತ್ರ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದ ಜಾನಕಿ ಅಮ್ಮ, ಮೈಸೂರಿನ ಪ್ರಶಾಂತ ವಾತಾವರಣದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಅವರ ನಿಧನದಿಂದಾಗಿ ದಕ್ಷಿಣ ಭಾರತದ ಸುಗಮ ಹಾಗೂ ಚಲನಚಿತ್ರ ಸಂಗೀತದ ಸುವರ್ಣ ಯುಗವೊಂದು ಕೊನೆಗೊಂಡಂತಾಗಿದೆ. ಮುಗ್ಧ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಗಾಯನದವರೆಗೆ ಎಲ್ಲವನ್ನೂ ಲೀಲಾಜಾಲವಾಗಿ ಹಾಡುತ್ತಿದ್ದ ಆ ಅಪರೂಪದ ಕಂಠ ಈಗ ಇತಿಹಾಸದ ಪುಟ ಸೇರಿದೆ.

ಎಸ್.ಜಾನಕಿ ಎಲ್ಲೂ ಹೋಗಲ್ಲ… ಸದಾ ನಮ್ಮಲ್ಲೇ ಇರುತ್ತಾರೆ..
ಸುಮಧುರ ಗಾನಸುಧೆಯೊಂದಿಗೆ ನಮ್ಮನ್ನು ತಲೆದೂಗುವಂತೆ ಮಾಡಿದ್ದ ಗಾನಕೋಗಿಲೆ ಎಸ್. ಜಾನಕಿ ಇನ್ನು ಬರೀ ನೆನಪಷ್ಟೆ.. ಆದರೆ ಅವರು ಸದಾ ಹಾಡುಗಳ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ ಎಂಬುದಂತು ನಿಜ… ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿ ಅವರ ಸಾಧನೆ ಅನುಪಮವಾದದ್ದು ಅದಕ್ಕೆ ಅವರೇ ಸಾಟಿ..
ಜಾನಕಿ ಅವರು ಹಾಡಿರುವ ಕನ್ನಡದ ಹಲವಾರು ಗೀತೆಗಳು ಇಂದಿಗೂ ನಮ್ಮ ಮನೆ- ಮನ ತಲುಪುತ್ತಿವೆ ಅವು ನಿತ್ಯ ಹರಿದ್ವರ್ಣದಂತೆ!. ಒಮ್ಮೊಮ್ಮೆ ಕೇಳಿದರೆ ಒಂದೊಂದು ರೀತಿಯ ಭಾವ ನಮ್ಮ ಮನದಲ್ಲಿ ಮೂಡುತ್ತದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ 20ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಇವರು ಸರಾಗವಾಗಿ ಹಾಡುವ ಸಾಮರ್ಥ್ಯವನ್ನು ಹೊಂದಿದ್ದ ಅಪರೂಪದ ಗಾಯಕಿ. ಇವರು 48,000 ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರುವುದು ಒಂದು ದಾಖಲೆಯೇ ಸರಿ!.

ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ ರವರು ವಿವಿಧ ರಾಜ್ಯಗಳಿಂದ 28ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರೆ ಅವರ ಗಾನಲಹರಿಯ ವಿಸ್ತಾರತೆಯ ಅರಿವಾಗುತ್ತದೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ.

23.04.1938 ರಲ್ಲಿ ರೆಪಲ್ಲೇ ಯಲ್ಲಿ (ಗುಂಟೂರು ಜಿಲ್ಲೆ, ಆಂಧ್ರ ಪ್ರದೇಶ.) ಜಾನಕಿ ರವರು ತಮ್ಮ ಮೂರನೆಯ ವಯಸ್ಸಿನಲ್ಲಿ, ಪೈಡಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. 1956 ನೇ ವರ್ಷದಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ್ದೇ ಅವರ ಸಂಗೀತ ಪಯಣಕ್ಕೆ ಹೊಸ ನಾಂದಿಯನ್ನುoಟು ಮಾಡಿತು.
1957 ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ.ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಪ್ರಾರಂಭವಾದುವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾಗಿ ಎಲ್ಲರ ಮನೆ- ಮನಗಳಲ್ಲಿ ನೆಲೆಸುವಂತಾಯಿತು.

ತಮಿಳಿನಲ್ಲಿ 1958ರ ಸುಮಾರಿನಲ್ಲಿ ಅವರು ಹಾಡಿದ ‘ಸಿಂಗಾರವೇಲನೆ ದೇವ’ ಎಂಬ ಮಹಾನ್ ನಾದಸ್ವರ ವಿದ್ವಾನ್ ಅರುಣಾಚಲಂ ಅವರ ನಾದ ಸ್ವರ ದೊಂದಿಗೆ ಮೇಳೈಸಿ ಹಾಡಿದ ಗೀತೆ ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ದೇಶ ಗುರುತಿಸುವಂತೆ ಮಾಡಿತು. ಇದೊಂದು ದಾಖಲೆಯಾಗಿ ಮುನ್ನುಡಿಯಾಯಿತು.

ಕನ್ನಡ ಚಿತ್ರ ‘ಹೇಮಾವತಿ’ಯಲ್ಲಿ ಅವರು ಹಾಡಿರುವ “ಶಿವ ಶಿವ ಎನ್ನದ ನಾಲಿಗೆ ಏಕೆ?” ಎಂಬ ಅನನ್ಯಗೀತೆಯು ಇಡೀ ಭಾರತ ದೇಶದ ಅತ್ಯಂತ ತ್ರಾಸದಾಯಕ ಗೀತೆ ಎನಿಸಿದೆ. ಜಾನಕಿಯವರು ‘ಈ ಹಾಡು ನನ್ನ ಸಂಗೀತ ಜೀವನದಲ್ಲಿ ಭಯಪಟ್ಟು ಹಾಡಿದ ಹಾಡು, ಮತ್ತೆ ಹಾಡಲೂ ಆಗದ ಹಾಡು’ ಎಂದು ಕೂಡಾ ಹೇಳಿದ್ದಾರೆ. ಆ ನಂತರದಲ್ಲಿ ಅವರು ಹಾಡಿದ ಪ್ರತಿಯೊಂದು ಗೀತೆಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೈ- ಮನಗಳಿಗೆ ಮುದ ನೀಡಿವೆ. ಈಗಲೂ ಕೂಡ ಇವರು ಹಾಡಿರುವ ಹಳೆಯ ಚಿತ್ರಗೀತೆಗಳು ರೆಡಿಯೋದಲ್ಲಿ (ಆಕಾಶವಾಣಿಯಲ್ಲಿ) ಪ್ರಸಾರವಾದಾಗ ವರ್ಣಿಸಲಸದಳ ಅನುಭವ ನೀಡುತ್ತವೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಇದು ಅವರ ಹಾಡಿಗಿರುವ ಮಾಧುರ್ಯತೆ

ಒಮ್ಮೆ ಒಂದು ಸಂದರ್ಶನದಲ್ಲಿ ಅವರೊಂದಿಗೆ ಬಹಳಷ್ಟು ವರ್ಷಗಳವರೆಗೆ ಹಾಡುತ್ತ ಬಂದಿರುವ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಹೇಳುತ್ತಿದ್ದರು, “ನಮ್ಮ ಜಾನಕಮ್ಮ ಇದ್ದಾರಲ್ಲ ಅವರು ಯಾವುದೇ ಗೀತೆಯನ್ನಾಗಲೀ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ, ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾನಲಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ ಇದೆಯೆಲ್ಲಾ ಅದೊಂದು ಅಸಾಮಾನ್ಯವಾದ ಸಂಗತಿ” ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು, ಬಿಮ್ಮುಗಳ, ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡಾ ಅವರು ಎಲ್ಲಿಯೂ ಉಂಟು ಮಾಡುವುದಿಲ್ಲ ಎಂಬ ಸತ್ಯವನ್ನು ಅವರನ್ನು ಹತ್ತಿರದಿಂದ ಕಂಡ ಅನೇಕರು ವ್ಯಕ್ತಪಡಿಸುತ್ತಾರೆ.

ಎಸ್. ಜಾನಕಿರವರು ಹೇಳುತ್ತಾರೆ- ‘ನಾನು ಯಾವುದೇ ವಿಶೇಷ ತಯಾರಿಯನ್ನಾಗಲೀ ಆರೈಕೆಯನ್ನಾಗಲಿ ನನ್ನ ಧ್ವನಿಗೆ ಮಾಡಿಕೊಳ್ಳುವುದಿಲ್ಲ.” ಅವರ ಈ ಮಾತು ಅವರ ಎಲ್ಲಾ ಸಾಧನೆಗಳಿಗೆ ಹಿಡಿದ ಕನ್ನಡಿಯಾಗಿದೆ. ಪರಮಾತ್ಮ ಶ್ರೀಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಭಕ್ತರಾದ ಜಾನಕಿಯವರು ಕೇಳುತ್ತಾರೆ “ನಾನು ಹೇಗೆ ಹಾಡುತ್ತೇನೆ ಗೊತ್ತೇ?”, “ಸತ್ಯ ಹೇಳಬೇಕೆಂದರೆ, ನಾನು ಹಾಡುವುದೇ ಇಲ್ಲ. ಶ್ರೀಕೃಷ್ಣ, ಆ ನನ್ನ ಅಂತರಂಗದ ದೈವನಾದ ಆತನ ಕಾಯಕವದು ಎಂದಿದ್ದರು.

ಅವರು ಚಲನಚಿತ್ರಗೀತೆ ಮಾತ್ರವಲ್ಲದೆ ಭಕ್ತಿಗೀತೆಗಳ ಮೂಲಕವೂ ಕ್ರಾಂತಿಯನ್ನುಂಟು ಮಾಡಿದರು. ಭಕ್ತಿ- ಭಾವ ಮೂಡಿಸಿದರು. ಅವರ ಹಾಡುಗಳ ವಿಷಯದ ಬಗ್ಗೆ ಬರೆಯುತ್ತಾ ಹೋದರೆ ಪುಟಗಳು ಸಾಲದು!. ಹಲವು ಸವಿ ಸವಿ ನೆನಪುಗಳನ್ನ ನಮಗೆ ನೀಡಿದ್ದಾರೆ. ಅವರ ಹಾಡುಗಳನ್ನ ಇವತ್ತು ಕೂಡ ಕೇಳಿ ಸಂಭ್ರಮಿಸುವುದೇ ನಮಗೆ ಒದಗಿರುವ ಸೌಭಾಗ್ಯ!. ಅವರ ಹಾಡುಗಳು ಮತ್ತಷ್ಟು ಗಾಯಕಿಯರಿಗೆ ಸ್ಪೂರ್ತಿಯ ಸೆಲೆಯಾಗಿವೆ. ಇವತ್ತಿಗೂ ಕೂಡ ನಿತ್ಯ ನೂತನವಾಗಿ ನಮ್ಮ ಮೈ-ಮನಗಳಿಗೆ ಮುದ ನೀಡುತ್ತಲೇ ಬಂದಿವೆ. ಇವತ್ತು ಅವರು ಹಾಡುವುದನ್ನು ನಿಲ್ಲಿಸಿ ಮೌನಕ್ಕೆ ಜಾರಿದ್ದಾರೆ… ಆದರೆ ಅವರು ಪ್ರತಿ ದಿನವೂ ಪ್ರತಿ ಹಾಡಿನ ಮೂಲಕ ನಮ್ಮೊಂದಿಗೆ ಶಾಶ್ವತವಾಗಿರುತ್ತಾರೆ…
-ಕಾಳಿಹುಂಡಿ ಶಿವಕುಮಾರ್







