CrimeLatest

ಹುಣಸೂರಿನಲ್ಲಿ ಚಿನ್ನಾಭರಣ, ನಗದು ಕದ್ದ ಕಳ್ಳ ಬಿಯರ್ ಕುಡಿದು ಪರಾರಿ… ಏನಿದು ಘಟನೆ?

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಯಾರೂ ಇಲ್ಲದನ್ನು ಗಮನಿಸಿ ರಾತ್ರಿ ವೇಳೆ   ಮನೆಯ ಬೀಗವನ್ನು ಮೀಟಿ ಬಾಗಿಲು ತೆರೆದು ಒಳನುಗ್ಗಿದ ಕಳ್ಳನೊಬ್ಬ 149 ಗ್ರಾಂ ಚಿನ್ನಾಭರಣ ಹಾಗೂ ಬೀರುವಿನಲ್ಲಿಟ್ಟಿದ್ದ 5.35 ಲಕ್ಷ ರೂ ಕಳ್ಳತನ ಮಾಡಿದ್ದಲ್ಲದೆ, ಫ್ರಿಡ್ಜ್ ನಲ್ಲಿಟ್ಟಿದ್ದ ಕಿಂಗ್ ಫಿಶರ್ ಬಿಯರ್ ಕುಡಿದು ಎಸ್ಕೇಪ್ ಆಗಿರುವ ಘಟನೆ ನಗರದ ಎನ್ ಇ ಎಸ್ ಕಾಲೋನಿಯಲ್ಲಿ ನಡೆದಿದೆ.

ಎನ್ ಇ ಎಸ್ ಕಾಲೋನಿಯ ನಿವಾಸಿ ಸಚ್ಚಿನ್ ಪ್ರಕಾಶ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು ನಗದು ಮತ್ತು ಚಿನ್ನಾಭರಣ ಕಳೆದುಕೊಂಡಿರುವ ಅವರು ಇದೀಗ ಕಂಗಾಲಾಗಿದ್ದಾರೆ.  ಇವರು ಶನಿವಾರ ಸಂಜೆ ಕುಶಾಲನಗರದಲ್ಲಿರುವ  ಸಂಬಂಧಿಕರ ಮದುವೆಗೆ ತೆರಳಿದ್ದರು.

ಇದನ್ನು ಗಮನಿಸಿದ ಕಳ್ಳ ಮನೆಗೆ ಕನ್ನ ಹಾಕಿ ಹಣ ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ. ಅಂದು ರಾತ್ರಿ ಸಚ್ಚಿನ್ ಪ್ರಕಾಶ್ ಅವರ ಪುತ್ರ ಆರ್ಯನ್ ತನ್ನ ಸ್ನೇಹಿತನೊಂದಿಗೆ ಬೆಂಗಳೂರಿನಿಂದ 2.30 ರ ವೇಳೆಯಲ್ಲಿ ಮನೆಗೆ  ಬಂದಿದ್ದಾರೆ. ಈ ವೇಳೆ ಮನೆ ಎದುರಿನ ಪಾರ್ಕ್ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಬಿಯರ್ ಕುಡಿಯುತ್ತಿದ್ದುದ್ದನ್ನು ಗಮನಿಸಿದ್ದಾರೆ. ಆ ನಂತರ ತಮ್ಮ ಮನೆಗೆ ತೆರಳಿದ ವೇಳೆ  ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಅನುಮಾನದಿಂದಲೇ ಒಳ ಪ್ರವೇಶಿಸಿದಾಗ ಮನೆಯ ಫ್ರಿಡ್ಜ್ ಬಾಗಿಲು ತೆರೆದಿತ್ತು. ಕೊಠಡಿಯ ಕಬೋಡ್ ಓಪನ್ ಆಗಿದ್ದನ್ನು ಕಂಡು ಆತಂಕಗೊಂಡು ತಕ್ಷಣವೇ ತಂದೆಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೆ  ಹೊರಗೆ ಬಂದು ನೋಡುವಷ್ಟರಲ್ಲಿ ಪಾರ್ಕ್ ನಲ್ಲಿ ಕುಳಿತಿದ್ದ ವ್ಯಕ್ತಿ ಪರಾರಿಯಾಗಿದ್ದನು

ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಎ.ಎಸ್.ಐ. ರವಿ.  ಅಪರಾಧ ವಿಭಾಗದ ಎಸ್.ಐ. ನಾಗಯ್ಯ.ಎ.ಎಸ್.ಐ.ಅಂತೋಣಿ ಕ್ರೂಸ್ ಅವರು ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸ್ಥಳಕ್ಕೆ ಶ್ವಾನದಳ. ಬೆರಳಚ್ಚು ತಜ್ಞರನ್ನು ಕರೆಯಿಸಿ ಮಹಜರು ನಡೆಸಿದ್ದಾರೆ. ಈ ಘಟನೆಯಲ್ಲಿ ಮನೆಯ ಬೀರುವಿನಲ್ಲಿದ್ದ 149 ಗ್ರಾಂ. ಚಿನ್ನಾಭರಣ ಹಾಗೂ 5.35 ಲಕ್ಷರೂ ನಗದು ಕಳ್ಳತನವಾಗಿರುವ ಬಗ್ಗೆ ಸಚ್ಚಿನ್ ಪ್ರಕಾಶ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನ ಹಾಕಿದ ಕಳ್ಳ ಪಾರ್ಕ್ ನಲ್ಲಿ ಓಡಾಡಿರುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು. ಆರೋಪಿ ಬಂಧನಕ್ಕೆ  ತಂಡ ರಚಿಸಲಾಗಿದೆ ಎಂದು ಡಿವೈಎಸ್ ಪಿ ರವಿ ತಿಳಿಸಿದ್ದಾರೆ.

admin
the authoradmin

Leave a Reply