ArticlesLatestLife style

ಕಾವೇರಿ ಕಣ್ಣೀರು… ಕಾವೇರಿ ನದಿಯನ್ನು ಸಂರಕ್ಷಿಸದಿದ್ದರೆ ನಮ್ಮ ಪೂಜೆಗೆ ಯಾವ ಅರ್ಥವೂ ಇರಲಾರದು!

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-20

ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಸೇರುವ ತನಕ ಕಾವೇರಿ ಕೋಟ್ಯಂತರ ಜನಕ್ಕೆ ಜೀವಜಲವಾಗಿದ್ದಾಳೆ.. ಆದರೀಗ ಆಕೆಯ ತವರಿನಲ್ಲಿ ಆಗುತ್ತಿರುವ ಬೆಳವಣಿಗೆಗಳು ಆಕೆ ಕಣ್ಣೀರಿಡುವಂತೆ ಮಾಡಿದೆ.. ಅದರ ಪರಿಣಾಮಗಳನ್ನು ಪ್ರಕೃತಿ ಮೂಲಕವೇ ಎದುರಿಸುವಂತಾಗಿದೆ… ಹಾಗಾದರೆ ಕಾವೇರಿ ಏಕೆ ಕಣ್ಣೀರು ಹಾಕುತ್ತಿದ್ದಾಳೆ ಎಂಬ ಪ್ರಶ್ನೆಗೆ ಲೇಖಕ ಕಾಯಪಂಡ ವಿಷ್ಣು  ನಾಚಪ್ಪ ಅವರ ಈ ಬರಹ ಉತ್ತರವಾಗಿದೆ…

ಕೊಡಗಿನಲ್ಲಿ ಒಂದು ದೊಡ್ಡ ಕುಟುಂಬ ಇತ್ತು. ಆ ಕುಟುಂಬದ ತಾಯಿ ಕಾವೇರಿ ಮಾತೆ. ಕೊಡಗಿನ ಕುಲದೇವತೆ ಆಕೆಯೇ. ಆಕೆಯ ಮಕ್ಕಳು ಬೆಟ್ಟ, ಕಾಡು, ಮಳೆ, ಮಣ್ಣು, ಗಾಳಿ, ನಂಬಿಕೆ ಮತ್ತು ಕೊಡಗಿನ ಜನತೆ. ಒಮ್ಮೆ ಎಲ್ಲರೂ ಒಟ್ಟಿಗೆ ಇದ್ದಾಗ ತಾಯಿ ಕಾವೇರಿ ಹೆಮ್ಮೆಯಿಂದ ಹೇಳುತ್ತಿದ್ದಳು, “ನನ್ನ ಮಕ್ಕಳು ನನ್ನ ಜೊತೆ ಇರುವವರೆಗೆ ನನ್ನಲ್ಲಿ ನೀರು ಬತ್ತೋದಿಲ್ಲ. ನನ್ನ ಮನಸ್ಸು ತಿಳಿಯಾಗಿದ್ದರೆ ಕೊಡಗಿನ ಎಲ್ಲಾ ಮಕ್ಕಳಿಗೂ ಸುಖ ಶಾಂತಿ ಕೊಡುತ್ತೇನೆ……

ಆದರೆ ಕಾಲ ಬದಲಾಯಿತು. ನಾವು ಕಾವೇರಿ ತಾಯಿಯನ್ನು ಮರೆತುಬಿಟ್ಟೆವು. ಬೆಟ್ಟದ ಎದೆಗೆ ಗಾಯ ಮಾಡಿದೆವು. ಕಾಡನ್ನು ಕಡಿದು ಮಾರಿದೆವು. ಮಣ್ಣಿನ ಮೇಲೆ ಕಾಂಕ್ರೀಟ್ ಹಾಸಿದೆವು. ತಾಯಿ ಕಾವೇರಿಗೆ ಅನ್ನ ಕೊಡುವ ಬದಲು ಪ್ಲಾಸ್ಟಿಕ್, ಕೊಳಚೆ ನೀರು, ರಾಸಾಯನಿಕಗಳನ್ನು ಕೊಟ್ಟೆವು.  ಒಂದು ವಿಷಯ ಇಲ್ಲಿ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು.

ಕಾವೇರಿ ಸಂಕ್ರಮಣದ ದಿನ ನಮ್ಮ ಕೊಡಗಿನ ಜನತೆ ಕಾವೇರಿ ಮಾತೆಯ ಉಗಮ ಸ್ಥಾನದಲ್ಲಿ ಅತ್ಯಂತ ಪೂಜ್ಯ ಭಾವದಿಂದ, ಭಯ-ಭಕ್ತಿಯಿಂದ ಪೂಜಿಸುತ್ತಾರೆ.  ಕೊಡಗು ಶಿಸ್ತಿನ ಸಿಪಾಯಿಗಳ ನಾಡು. ನಮ್ಮ ಜನತೆ ಕಸವನ್ನು ಅಲ್ಲಿ ಬಿಸಾಕುವುದಿಲ್ಲ.  ಆದರೆ ನಿಜವಾದ ಸಂಕಟ ಬೇರೆಯದ್ದಾಗಿದೆ. ಅತಿಯಾದ ಆಧುನಿಕರಣ, ಪ್ರಕೃತಿಯ ಮೇಲಿನ ದೌರ್ಜನ್ಯ. ಕೆಲವು ಕಡೆ ನಗರಗಳಿಂದ ಬರುವ ಚರಂಡಿಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ.

ಪ್ರತಿ ದಿನ ಸಾವಿರಾರು ಲೀಟರ್ ಕೊಳಚೆ ನೀರು ಶುದ್ಧೀಕರಣ ಇಲ್ಲದೆ ತಾಯಿ ಕಾವೇರಿಗೆ ಸೇರುತ್ತಿದೆ. ಇದೇ ಕಾವೇರಿ ತಾಯಿಗೆ ಆಗುತ್ತಿರುವ ಅತಿ ದೊಡ್ಡ ಗಾಯ. ತಾಯಿಯ ನೀರು ಕಲುಷಿತವಾಗುತ್ತಿದೆ. ಕಾವೇರಿ ಮಾತೆಯನ್ನು ಪೂಜಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ತಾಯಿ ಕಾವೇರಿಯ ನೀರನ್ನು ಶುದ್ಧವಾಗಿಡುವುದು ನಮ್ಮೆಲ್ಲರ ದಿನನಿತ್ಯದ ಪರಮ ಕರ್ತವ್ಯ. ಇಲ್ಲದಿದ್ದರೆ ನಮ್ಮ ಪೂಜೆಗೆ ಯಾವ ಅರ್ಥವೂ ಇಲ್ಲ.

ಇತ್ತೀಚಿನ ದಿನಗಳಲ್ಲಿ ಒಂದು ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕೊಡಗಿನಲ್ಲಿ ಅಕಾಲಿಕ ಮರಣಗಳು ಹೆಚ್ಚಾಗುತ್ತಿವೆ. ಅಪಘಾತಗಳು, ಆತ್ಮಹತ್ಯೆಗಳ ಸುದ್ದಿ ನಮ್ಮನ್ನು ಕಳವಳಕ್ಕೆ ತಳ್ಳುತ್ತಿದೆ. ಇದೆಲ್ಲವೂ _ಕಾವೇರಿ ಮಾತೆಯ ಕಣ್ಣೀರಿನ ಫಲವಲ್ಲವೇ???_ ನಾವು ಪ್ರಕೃತಿಯ ಸಮತೋಲನ ಹಾಳು ಮಾಡಿದಾಗ, ಅದರ ಪರಿಣಾಮ ನಮ್ಮ ಬದುಕಿನ ಮೇಲೂ ಬೀಳುತ್ತದೆ. ತಾಯಿಯ ಮನಸ್ಸು ನೊಂದಾಗ ಒಂದು ನಾಡಿನ ಮನಸ್ಸೂ ನೊಂದಿರುತ್ತದೆ. ಇವತ್ತು ಕೊಡಗಿನ ಬಹುತೇಕ ಜನ ಆತಂಕದಲ್ಲಿದ್ದಾರೆ. ಸಾಕಷ್ಟು ಕಡೆ ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದಾರೆ. ಬೆಟ್ಟ ಕುಸಿಯುತ್ತಿದೆ, ಮಳೆಗಾಲ ತಪ್ಪುತ್ತಿದೆ, ನೀರಿನ ಮೂಲಗಳು ಬತ್ತುತ್ತಿವೆ.

ಒಂದು ದಿನ ಕಾವೇರಿ ತಾಯಿ ತುಂಬಾ ದುರ್ಬಲಳಾಗಿ ಕೇಳಿದಳು, “ಮಕ್ಕಳೇ ನನ್ನನ್ನು ಯಾಕೆ ಹೀಗೆ ಮಾಡಿದ್ರಿ? ನನ್ನ ಮನಸ್ಸಿಗೆ ನೋವಾಗುತ್ತಿದೆ.” ಆಗ ಮೂಲೆಯಲ್ಲಿದ್ದ ನಂಬಿಕೆ ಮಗು ಅತ್ತು ಹೇಳಿತು,  “ಅಮ್ಮ ನಾವು ನಿನ್ನ ಮಹತ್ವವನ್ನು ಮರೆತಿದ್ದೇವೆ. ನಿನ್ನನ್ನು ದೇವಿ ಅಂತ ಪೂಜಿಸುತ್ತೇವೆ. ಆದರೆ ತಾಯಿ ಅಂತ ಸೇವೆ ಮಾಡೋದೇ ಇಲ್ಲ.” ಕೊಡಗಿನ ನಾಗರಿಕರೇ, ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಲ್ಲವೇ???  ನಾವು ಎಲ್ಲಿಗೆ ಹೋಗುತ್ತಿದ್ದೇವೆ? ತಾಯಿ ಕಾವೇರಿಯನ್ನು ಉಳಿಸದೆ ನಾವು ಹೇಗೆ ಬದುಕುತ್ತೇವೆ?

ಕಾವೇರಿ ಮಾತೆ ಕೇವಲ ನದಿಯಲ್ಲ.

ಕಾವೇರಿ ತಾಯಿ ನಮ್ಮ ತಾಯಿ.

ತಾಯಿ ಕಾವೇರಿ ನಮ್ಮ ಸಂಸ್ಕೃತಿ. ನಮ್ಮ ಜೀವನ. ನಮ್ಮ ಉಸಿರು.

ಕಾವೇರಿ ಮಾತೆ ನಮ್ಮ ಕುಲದೇವತೆ. ನಮ್ಮ ಗುರುತು. ನಮ್ಮ ಇತಿಹಾಸ ಮತ್ತು ಭವಿಷ್ಯ. ಬೆಳಿಗ್ಗೆ ಕುಡಿಯುವ ನೀರಿನಿಂದ ಹಿಡಿದು ನಮ್ಮ ಮಕ್ಕಳು ನಾಳೆ ಕುಡಿಯುವ ನೀರಿನವರೆಗೆ ಎಲ್ಲವೂ ಆಕೆಯ ಕೃಪೆಯ ಮೇಲೆಯೇ ನಿಂತಿದೆ.

ಕಾವೇರಿ ತಾಯಿ ಅತ್ತರೆ ಇಡೀ ಕೊಡಗು ಅಳುತ್ತದೆ.

ತಾಯಿ ಕಾವೇರಿ ನಗಿದರೆ ಇಡೀ ಕೊಡಗು ಹಬ್ಬ ಮಾಡುತ್ತದೆ.

ಆಕೆ ಬತ್ತಿದರೆ ನಾವು ಬತ್ತುತ್ತೇವೆ. ಆಕೆ ಬದುಕಿದರೆ ನಾವು ಬದುಕುತ್ತೇವೆ.

ಕಾವೇರಿ ಮಾತೆಯ ಅಪಾರ ಮಹತ್ವ… ಕಾವೇರಿ ಮಾತೆ ಅತ್ಯಂತ ಶಕ್ತಿಯುತವಾದ ದೇವತೆ.  ಆಕೆಯನ್ನು ಅತ್ಯಂತ ಭಯ-ಭಕ್ತಿ ಮತ್ತು ಪೂಜನೀಯ ಭಾವದಿಂದ ಆರಾಧಿಸಿದರೆ ನಮ್ಮ ಎಲ್ಲಾ ಇಚ್ಛಾಶಕ್ತಿಗಳು ಈಡೇರುತ್ತವೆ.  ಕಾವೇರಿ ತಾಯಿಯನ್ನು ಮನಸಾರೆ ಪೂಜಿಸುವುದರಿಂದ ಜೀವನದ ಎಲ್ಲಾ ಕಷ್ಟಗಳಿಗೆ ಮುಕ್ತಿ ದೊರೆಯುತ್ತದೆ. ಆಕೆ ಕೇವಲ ನೀರು ಕೊಡುವ ತಾಯಿ ಅಲ್ಲ. ಆಕೆ ನಮ್ಮ ಪಾಪ-ಕರ್ಮವನ್ನು ತೊಳೆಯುವ ತಾಯಿ. ತಾಯಿ ಕಾವೇರಿಯ ಆಶೀರ್ವಾದ ಇದ್ದರೆ ಮನೆಯಲ್ಲಿ ರೋಗ ಇರಲ್ಲ, ಹೊಲದಲ್ಲಿ ಬೆಳೆ ಇಳಿಯುತ್ತೆ, ಮನಸಿನಲ್ಲಿ ನೆಮ್ಮದಿ ಇರುತ್ತೆ. ಕಾವೇರಿ ಮಾತೆಯ ಕೃಪೆ ಇದ್ದರೆ ಯಾವುದೇ ಅವಘಡವೂ ನಮ್ಮನ್ನು ತಾಕೋದಿಲ್ಲ.

ಭರವಸೆಯ ಕಿರಣ…  “””ತಿಂಗಕ್ಕೋರ್ ಮೊಟ್ಟ್ ಕಾವೇರಿಕ್””  ಎಂಬ ಆಂದೋಲನ ಕಳೆದ ಹಲವು ವರ್ಷಗಳಿಂದ ಪ್ರತಿ ತಿಂಗಳು ಕಾವೇರಿ ಉಗಮ ಸ್ಥಾನಕ್ಕೆ ಹೋಗುತ್ತಿದೆ. ಅಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಿದೆ. ಕೊಡಗಿನ ಜನತೆಗಾಗಿ ವಿಶೇಷವಾದ ಪೂಜೆಯನ್ನು ಸಹ ಸಲ್ಲಿಸುತ್ತಾ ಬಂದಿದೆ.

ಇದು ಕೇವಲ ಸ್ವಚ್ಛತೆ ಅಲ್ಲ.

ಇದು ಕಾವೇರಿ ಮಾತೆಯ ಮೇಲಿನ ಪ್ರೀತಿ.

ಇದು ನಮ್ಮ ಸಂಸ್ಕೃತಿಯನ್ನು ಉಳಿಸುವ ಹೋರಾಟ.

ಕೊಡಗಿನ ಜನತೆಗೆ ನನ್ನ ವಿನಂತಿ… ನಾವು ಇನ್ನಷ್ಟು ಇಚ್ಛಾಶಕ್ತಿಯಿಂದ ಈ ಕೆಲಸವನ್ನು ಮುಂದುವರಿಸಬೇಕು. ಕಾವೇರಿ ಮಾತೆಯನ್ನು ಕುಲದೇವತೆಯಾಗಿ ಪೂಜಿಸುವ ಪ್ರತಿಯೊಬ್ಬರೂ ಒಗ್ಗಟ್ಟಾಗಿ ತಿಂಗಳಿಗೊಮ್ಮೆ ತಾಯಿ ಕಾವೇರಿಯ ಉಗಮ ಸ್ಥಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ವಿಶೇಷವಾದ ಪೂಜೆಯನ್ನು ಮಾಡಿದರೆ… ಕೊಡಗು ಸಂಪೂರ್ಣ ಸಮಸ್ಯೆಗಳಿಂದ ಮತ್ತು ಅವಘಡಗಳಿಂದ ಮುಕ್ತಿ ಪಡೆಯಲು ಇದು ದೊಡ್ಡ ಹೆಜ್ಜೆಯಾಗಬಹುದು.

*ಕೊಡಗಿನ ಮಣ್ಣು – ಕಾವೇರಿ ಮಾತೆಯ ಪುಣ್ಯಭೂಮಿ.. ಕೊಡಗು ಅಂದರೆ ಕಾವೇರಿ ತಾಯಿಯ ಮಣ್ಣು. ನೋವಿನಿಂದ ಒಂದು ಮಾತು ಹೇಳಲೇಬೇಕು. ನಮ್ಮ ತಾಯಿಯ ದೇಹದ ತುಂಡುಗಳನ್ನೇ, ನಮ್ಮ ಮಣ್ಣನ್ನೇ ತೆಗೆದು ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೇವೆ.

ತಾಯಿ ಕಾವೇರಿ ಅಳುತ್ತಾ ಕೇಳುತ್ತಾಳೆ  “ಮಕ್ಕಳೇ, ನಿಮ್ಮ ಮನಸಿಗೆ ನೋವಾಗುವುದಿಲ್ಲವೇ?? ನನ್ನನ್ನು ಇಷ್ಟೊಂದು ಯಾಕೆ ನೋಯಿಸುತ್ತಿದ್ದೀರ?? ನನಗೆ ನೋವು ಕೊಟ್ಟು ನಿಮಗೆ ಏನು ಸುಖ ಸಿಗುತ್ತದೆ?? ಎಷ್ಟು ದಿನ ದುಡ್ಡು ನಿಮ್ಮ ಕೈಯಲ್ಲಿರುತ್ತೆ, ಆದರೆ ನನ್ನ ನೋವು ನಿಮಗೆ ಶಾಪವಾಗುವುದಿಲ್ಲವೇ??”

ಕೊಡಗಿನ ಮಣ್ಣು ಕೊಡಗಿನಲ್ಲೇ ಇರಬೇಕು. ಅದು ನಮ್ಮ ತಾಯಿಯ ಆಸ್ತಿ. ದಯವಿಟ್ಟು ಕೊಡಗಿನ ಮಣ್ಣನ್ನು ಕೊಡಗಿನಿಂದ ಬೇರೆಡೆಗೆ ಮಾರಾಟ ಮಾಡಬೇಡಿ. ಈಗಾಗಲೇ ಮಾರಾಟವಾಗಿರುವ ಜಾಗವನ್ನು ಸಾಧ್ಯವಾದರೆ ಮತ್ತೆ ಖರೀದಿಸಿ ನಮ್ಮಲ್ಲೇ ಉಳಿಸಿಕೊಳ್ಳೋಣ. ಇದು ನಮ್ಮ ತಾಯಿಯ ಮೇಲಿನ ನಿಜವಾದ ಪ್ರೀತಿ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಕೊಡುಗೆ ಆದ್ದರಿಂದ ಇಂದಿನಿಂದ ನಮ್ಮ ಪ್ರತಿಜ್ಞೆ ….

ಚರಂಡಿಗಳ ತ್ಯಾಜ್ಯ ನೀರನ್ನು ನದಿಗೆ ಬಿಡುವುದನ್ನು ಕೂಡಲೇ ನಿಲ್ಲಿಸಬೇಕು. ಪ್ರತಿ ಪಟ್ಟಣ, ಹಳ್ಳಿಗಳಲ್ಲಿ ಶುದ್ಧೀಕರಣ ಘಟಕ ಕಡ್ಡಾಯವಾಗಬೇಕು.  ಕಾಡನ್ನು ಮತ್ತೆ ಬೆಳೆಸಬೇಕು. ಬೆಟ್ಟವನ್ನು ಬೋಳು ಮಾಡುವುದನ್ನು ನಿಲ್ಲಿಸಬೇಕು. ಕಾವೇರಿ ಸಂಕ್ರಮಣದ ದಿನ ಗಿಡ ನೆಡೋಣ.   ಸರ್ಕಾರ ಕಾವೇರಿ ನದಿಯಿಂದ 200 ಮೀ ಒಳಗೆ ಕಟ್ಟಡ ಕಟ್ಟುವುದನ್ನು ನಿಲ್ಲಿಸಲಿ. ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ತಾಯಿ ಕಾವೇರಿಯ ಮನಸ್ಸು ನಿರ್ಮಲವಾಗಿದ್ದರೆ ಆಕೆ ಪ್ರತಿಯೊಬ್ಬರಿಗೂ ಉತ್ತಮ ಆಶೀರ್ವಾದ ಕೊಡುತ್ತಾಳೆ. ಕೊಡಗಿನಲ್ಲಿ ಆಗುತ್ತಿರುವ ಅವಘಡಗಳನ್ನು ತಪ್ಪಿಸುತ್ತಾಳೆ. ಎಲ್ಲರೂ ಒತ್ತಡದಿಂದ ಮುಕ್ತರಾಗಿ ನೆಮ್ಮದಿಯಿಂದ ಬದುಕುತ್ತಾರೆ.

ತಾಯಿ ಉಳಿದರೆ ಮನೆ ಉಳಿಯುತ್ತದೆ.

ಕಾವೇರಿ ಮಾತೆ ಉಳಿದರೆ ಕೊಡಗು ಉಳಿಯುತ್ತದೆ.

ಕಾವೇರಿ ತಾಯಿಯನ್ನು ಕಳೆದುಕೊಂಡರೆ ನಾವೆಲ್ಲರೂ ಅನಾಥರಾಗುತ್ತೇವೆ…..

ನಾನು -ನನ್ನ ಹಿರಿಯರು ಕಲಿತ ಶಾಲೆ.. ಮುಂದಿನ ತಲೆಮಾರುಗಳಿಗೂ ಹೆಮ್ಮೆಯಾಗಿ  ಉಳಿಯಲಿ…

admin
the authoradmin

Leave a Reply