ArticlesLatest

ಪತ್ರಿಕಾ ನೀತಿಜ್ಞ ಕಲ್ಯಾಟಂಡ.ಬಿ.ಗಣಪತಿ ಅವರಿಗೆ ಬರಹ ಗೊತ್ತಿತ್ತು- ವ್ಯವಹಾರ ಗೊತ್ತಿರಲಿಲ್ಲ

ಆ ದಿನಗಳ ಮೆಲುಕು..2

ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್  ದಿನ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ. ಬಿ. ಗಣಪತಿ ಅವರು ನಿಧನರಾಗಿ  ವರ್ಷವಾಯಿತು. ಇದರ ನಿಮಿತ್ತ ಅಂದು  ಲೇಖಕ ಎಸ್.ಪ್ರಕಾಶ್ ಬಾಬು  ಅವರು  ಬರೆದಿದ್ದ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಗುತ್ತಿದೆ…ಓದಿ, ಅಭಿಪ್ರಾಯಿಸಿ….

ಸಮಯ ಪಾಲನೆಯಲ್ಲಿ  ಕೆ.ಬಿ.ಗಣಪತಿ ಅವರಷ್ಟು ನಿಖರವಾಗಿ ಪಾಲಿಸುವವರನ್ನ ನನ್ನ ಜೀವಮಾನದಲ್ಲಿ ಕಂಡೇ ಇಲ್ಲ. ಕಚೇರಿಗೆ ಬರುವುದು ಯಾವತ್ತೂ ತಡ ಮಾಡುವುದೇ ಇಲ್ಲ. ಬೆಳಿಗ್ಗೆ 8.20ಕ್ಕೆ ಅಂದ್ರೆ ಒಂದು ನಿಮಿಷವೂ ಆಚೀಚೆ ಆಗುತ್ತಿರಲಿಲ್ಲ. ಮನೆಗೆ ಹೋಗುವುದು ಮಾತ್ರ ಹೆಚ್ಚು-ಕಡಿಮೆಯಾಗುತ್ತಿತ್ತು. ಅವರ ಚೇಂಬರ್‌ನಲ್ಲಿ  ಯಾವಾಗಲೂ ಪೆನ್ನು ಪೇಪರ್ ಹಿಡಿದು ಬರೆಯುತ್ತಲೇ ಇದ್ದರು. ಬರೆಯುವುದರಲ್ಲಿ ಅವರಿಗೆಷ್ಟು ತಾದಾತ್ಮ್ಯತೆ ಇತ್ತೆಂದರೆ, ಬರಹದೊಳಗೆ ಮುಳುಗಿದಾಗ ಇಹಪರ ಎಲ್ಲವನ್ನೂ ಮರೆಯುತ್ತಿದ್ದರು.

ಅವರಿಗೆ ಪತ್ರಿಕೆ ಮತ್ತು ಸುದ್ದಿ ಇವಿಷ್ಟೇ ಪ್ರಪಂಚವಾಗಿತ್ತು. ಮಿಕ್ಕ ವಿಚಾರಗಳು ಅವರಿಗೆ ಅಪಥ್ಯವಾಗಿತ್ತು. ವಯಸ್ಸಿನ ಕಾರಣಕ್ಕೋ-ಜ್ಞಾನದ ಭಾರಕ್ಕೋ ಕೆಬಿಜಿ ಜ್ಞಾಪಕ ಶಕ್ತಿ ಸ್ವಲ್ಪ ಕ್ಷೀಣವಾಗಿತ್ತು. ನಾನು ಗಮನಿಸಿದಂತೆ, ಅವರ ನೆನಪಿನ ಶಕ್ತಿ ಮಹತ್ತರವಾದ ವಿಚಾರಕ್ಕಷ್ಟೆ ಮೀಸಲಾಗಿತ್ತು. ಸಣ್ಣಪುಟ್ಟ ವಿಚಾರಗಳು-ಬೇಡದ ಉಸಾಬರಿಗಳಿಗೆ ಅವರ ಮಸ್ತಿಷ್ಕದಲ್ಲಿ ಜಾಗವಿರಲಿಲ್ಲ.

ಹೀಗಾಗಿ ಅವರಿಗೆ ಬರಹದಲ್ಲಿರುವಷ್ಟು ನಿಪುಣತೆ, ಹಣಕಾಸಿನ ವ್ಯವಹಾರದಲ್ಲಿರಲಿಲ್ಲ. ಇದು ಕಚೇರಿಯೊಳಗಿನ ಚಾಣಾಕ್ಷರಿಗೆ ದುಡ್ಡು ನುಂಗಲು ಸುಲಭವಾಗಿತ್ತು. ಕೆಬಿಜಿ ಅದೆಷ್ಟು ಉದಾರಿ ಮನಸ್ಸಿನ ಹೃದಯವಂತರೆAದರೆ, ತಮ್ಮ ಕೆಲಸಗಾರನೊಬ್ಬ ಕಾರು ಕೊಂಡರೆ, ಚೆನ್ನಾಗಿ ಮನೆ ಕಟ್ಟಿಸಿದರೆ ತುಂಬಾ ಖುಷಿ ಪಡುತ್ತಿದ್ದರು. ಇದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರಲ್ಲಿದ್ದ ಉದಾರಿ ಮನಸ್ಸಿನ ಗುಣ ಕೆಬಿಜಿಗೆ ಸಿದ್ದಿಸಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ತಮ್ಮ ಆಸ್ಥಾನದ ಅಧಿಕಾರಿಗಳು ಹಣಕಾಸಿನ ಅವ್ಯವಹಾರ ನಡೆಸಿ ಬೃಹತ್ ಬಂಗಲೆ ಕಟ್ಟಿಸಿಕೊಂಡಿದ್ದಾರೆಂದು ಯಾರಾದರೂ ದೂರು ಕೊಟ್ಟರೆ ಬೇಸರಿಸುತ್ತಿರಲಿಲ್ಲ. ಆ ಮನೆ ಮೈಸೂರು ನಗರಕ್ಕೆ ಶೋಭೆ ತರುವಂತಿದೆ ಅನ್ನುತ್ತಿದ್ದರಂತೆ. ಅರಮನೆ ಹಣ ದುರುಪಯೋಗ ಮಾಡಿ ಉದ್ಯಮ ನಡೆಸುತ್ತಿದ್ದಾರೆ ಎಂದು ದೂರು ಕೊಟ್ಟಾಗಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತಾರು ಜನಕ್ಕೆ ಉದ್ಯೋಗ ಸಿಕ್ಕಂತಾಗಿದೆ ಹೋಗಲಿ ಬಿಡಿ ಎನ್ನುತ್ತಿದ್ದರಂತೆ. ಅದೇ ಉದಾರ ಗುಣ ಕೆಬಿಜಿ ಅವರಲ್ಲಿತ್ತು.

ವೃತ್ತಿಪರ ಪತ್ರಕರ್ತನಿಗೆ ಇರಬೇಕಾದ ಮೂರು ಪ್ರಮುಖ ಅಂಶಗಳೆಂದರೆ ಶಿಸ್ತು-ಶ್ರದ್ಧೆ-ಸಂಯಮ. ಈ ಮೂರೂ ಮೈಗೂಡಿಸಿಕೊಂಡ ಯಾವುದೇ ವೃತ್ತಿಪರ ಕೆಲಸಗಾರ ಅಥವ ಉದ್ಯಮಿ ಯಶಸ್ವಿ ಆಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಅನುಗುಣವಾಗಿ ಬದುಕು-ಬರಹ ಮುಂದುವರೆಸಿದವರು ಕೆಬಿಜಿ. ಹೀಗಾಗಿ ಮರಳುಗಾಡಿನಲ್ಲಿ ನೀರು ಬಸಿಯುವ ಬರಡು ಉದ್ಯಮ ಎಂದೇ ಖ್ಯಾತವಾದ ಪತ್ರಿಕೋದ್ಯಮದಲ್ಲಿ, ಅದರಲ್ಲೂ ಮರುಭೂಮಿಯಂಥ ಸಣ್ಣಪತ್ರಿಕೋದ್ಯಮದಲ್ಲಿ ಓಯೆಸಿಸ್ ಕಂಡರು. ಯಶಸ್ವಿ ಪತ್ರಕರ್ತರಾದರು-ಯಶಸ್ವಿ ಪತ್ರಿಕೋದ್ಯಮಿಯೂ ಆದರು.

ಹೀಗೇ ಸಾಧನೆಯ ಶಿಖರವೇರಿದ ನಂತರ ತಮ್ಮ ಶಿರ ಗರ್ವದಿಂದ ಬೀಗದೆ ಸ್ಥಿತಪ್ರಜ್ಞೆ ಕಾಪಿಟ್ಟುಕೊಳ್ಳುವ ಗುಣವೂ ಅವರಿಗೆ ಸಿದ್ದಿಸಿತ್ತು. ಹೀಗಾಗಿ ಅವರು ನಾಲ್ಕೂವರೆ ದಶಕದ ಮೈಸೂರಿನ ಪತ್ರಿಕೋದ್ಯಮದಲ್ಲಿ ಅಜಾತಶತ್ರುವಾಗಿದ್ದರು. ದೊಡ್ಡವರು-ಸಣ್ಣವರು ಎಂಬ ಭೇದವಿಲ್ಲದೆ ಬೆರೆಯುವ ಅವರ ಸರಳ ನಡವಳಿಕೆ ಉನ್ನತ ಸ್ಥಾಯಿಯಾಗಿ ನಿಲ್ಲಿಸಿತ್ತು. ಬಹುಶಃ ಇದೇ ಕಾರಣಕ್ಕೆ ನನ್ನ ಸಹಿತ ಯಾವೊಬ್ಬರು ಅವರನ್ನು ದೂಷಿಸುವುದನ್ನು ನಾನು ಕೇಳಿಲ್ಲ.

ಕೆಬಿಜಿ ಸಾಧನೆ ಹಿಂದಿನ ಶಕ್ತಿ ಕೆ.ಕೆ.ದೇವಮ್ಮ…

ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಜೀವಂತ ಸಾಕ್ಷಿ ಕೆ.ಕೆ.ದೇವಮ್ಮ. 1976ರಲ್ಲಿ ಕೆ.ಬಿ.ಗಣಪತಿ ವಿವಾಹವಾದಾಗ ಕೆ.ಕೆ.ದೇವಮ್ಮ ಮೈಸೂರು ಸಂಸ್ಥಾನದ ಮೊದಲ ಕಾಲೇಜಾದ ‘ಮಹಾರಾಜ ಜೂನಿಯರ್ ಕಾಲೇಜ್’ನಲ್ಲಿ ಉಪನ್ಯಾಸಕಿಯಾಗಿದ್ದರು. ಇದರಿಂದಾಗಿ ಕೆ.ಬಿ.ಗಣಪತಿ ಮುಂಬೈ ಬಿಟ್ಟು ಮೈಸೂರನ್ನು ಕರ್ಮಭೂಮಿಯಾಗಿಸಿಕೊಂಡರು. ಆಧುನಿಕ ಮೈಸೂರಿನ ಪತ್ರಿಕೋದ್ಯಮಕ್ಕೆ ಅಂಕಿತ ಹಾಕಿದರು.

ಸದಾ ಹಸನ್ಮುಖಿಯಾದ ಪತ್ನಿ ಕೆ.ಕೆ.ದೇವಮ್ಮರ ಸಹಕಾರ ಇಲ್ಲದಿದ್ದರೆ ಕೆಬಿಜಿ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವೂ ಆಗುತ್ತಿರಲಿಲ್ಲ. ಸಂಸಾರದ ಭಾರವನ್ನು ಪತಿಗೆ ಹೊರಿಸದೆ, ಅವರ ಹೊಸ ಸಾಹಸಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದವರು ನಮಗೆಲ್ಲ ಕೆಕೆಡಿ ಎಂದೇ ಪರಿಚಿತರಾದ ಅಚ್ಚುಮೆಚ್ಚಿನ ಶಿಕ್ಷಕಿ ಕೆ.ಕೆ.ದೇವಮ್ಮ (ಈಗ ಅವರು ರ‍್ಯಾಲಿ ಗಣಪತಿ ಆಗಿದ್ದಾರೆ)

ಕೆ.ಬಿ.ಗಣಪತಿ ಅವರಿಗೆ ಆರಂಭದಲ್ಲಿ ಮೈಸೂರಿನಲ್ಲಿ ಮೊದಲಿಗೆ “ಸ್ಟಾರ್ ಆಫ್ ಮೈಸೂರು” ನಂತರ “ಮೈಸೂರು ಮಿತ್ರ” ಪತ್ರಿಕೆ ಆರಂಭಿಸಿದಾಗ ಸುಲಭವಾಗೇನೂ ಇರಲಿಲ್ಲ. 1973ರಲ್ಲಿ ಯಾರೋ ನಡೆಸುತ್ತಿದ್ದ “ಸ್ಟಾರ್ ಆಫ್ ಮೈಸೂರ್” ಎಂಬ ಇಂಗ್ಲೀಷ್ ದಿನಪತ್ರಿಕೆಯನ್ನು ಖರೀದಿಸಿ 1978ರಲ್ಲಿ ಆರಂಭಿಸಿದಾಗ ಮತ್ತು 1979ರಲ್ಲಿ ಮೈಸೂರಿನ ಮೊಟ್ಟ ಮೊದಲ ಬೆಳಗಿನ ದಿನ ಪತ್ರಿಕೆಯಾಗಿ “ಮೈಸೂರು ಮಿತ್ರ” ಆರಂಭಿಸಿದಾಗ ಬಹಳ ಕಷ್ಟಪಟ್ಟರು.

1979ರಲ್ಲಿ “ಮೈಸೂರು ಮಿತ್ರ ಬೆಳಗಿನ ದಿನ ಪತ್ರಿಕೆ ಕೊಂಡು ಓದಿ” ಅಂತ ಮೈಸೂರು ನಗರದ ಹಲವೆಡೆ ಪೋಸ್ಟರ್ ಅಂಟಿಸಿದ್ದನ್ನು ಕಣ್ಣಾರೆ ನಾನು ಕಂಡಿದ್ದೆ. ಹೀಗೇ ಆರಂಭದಲ್ಲೇ ಒಳ್ಳೇ ಪ್ರಚಾರದ ಜಾಡು ಹಿಡಿಯಲು ಕೆ.ಬಿ.ಗಣಪತಿ ಅವರು ಮುಂಬೈನಲ್ಲಿ ಜಾಹೀರಾತು ಏಜೆನ್ಸಿ ನಡೆಸುತ್ತಿದ್ದ ಅನುಭವ ಕಾರಣವಾಗಿರಬಹುದು. ಆಗ ಮೈಸೂರಿನಲ್ಲಿದ್ದ ನೂರಕ್ಕೂ ಹೆಚ್ಚು ಸಣ್ಣ ಪತ್ರಿಕೆಗಳೆಲ್ಲ ಸಂಜೆ ಹೊತ್ತು ಬರುತ್ತಿದ್ದವು. ಒಂದು ಪುಟದ ಎ-4 ಕ್ರೌನ್ ಸೈಜಿನ ಪತ್ರಿಕೆಗೆ 5ಪೈಸೆ ಇದ್ದರೆ, ಎರಡು ಪುಟದ ಎ-4 ಕ್ರೌನ್ ಸೈಜಿನ “ಮೈಸೂರು ಮಿತ್ರ” ಬೆಳಗಿನ ಪತ್ರಿಕೆಗೆ 10ಪೈಸೆ ಇತ್ತು.

ವೋಚರ್ ಕಾಪಿಗಳಂತಿದ್ದ ಮೈಸೂರಿನ ಸಣ್ಣ ಪತ್ರಿಕೆಗಳ ಮಧ್ಯೆ “ಮೈಸೂರು ಮಿತ್ರ” ವಿರಾಜಮಾನವಾಗಿ ರಾರಾಜಿಸುತ್ತಿತ್ತು. ಸಿ.ಚಿಣ್ಣಪ್ಪ ಮತ್ತಿತರ ಪಾಲುದಾರರ ಸಹಕಾರದಲ್ಲಿ ಸರಸ್ವತಿಪುರಂನಲ್ಲಿ “ಅಕಾಡೆಮಿ ನ್ಯೂಸ್ ಪೇಪರ್ ಪ್ರೈವೇಟ್ ಲಿಮಿಟೆಡ್” ಅಡಿ ಆರಂಭಿಸಿದ ಈ ಎರಡೂ ಪತ್ರಿಕೆಗಳು 1981ರ ಹೊತ್ತಿಗೆ ಮೈಸೂರಿನ ನಂಬರ್ ಒನ್ ಜನಪ್ರಿಯ ಪತ್ರಿಕೆಗಳಾದವು. ಇದರಿಂದ ಉತ್ತೇಜಿತರಾದ ಕೆ.ಬಿ.ಜಿ ಅಂದು ರಾಷ್ಟçಮಟ್ಟದಲ್ಲಿ ಜನಪ್ರಿಯವಾಗಿದ್ದ “ಬ್ಲಿಟ್ಜ್” ಇಂಗ್ಲಿಷ್ ವಾರಪತ್ರಿಕೆ ಮಾದರಿಯಲ್ಲಿ 1983ರಿಂದ “ದಿ ಮೈಸೂರ್ ಮಾನಿಟರ್” ಎಂಬ ಇಂಗ್ಲಿಷ್ ವಾರಪತ್ರಿಕೆ ಆರಂಭಿಸಿದರು. ನಾನು ಕಂಡಂತೆ 16ಕ್ಕೂ ಹೆಚ್ಚು ಪುಟಗಳ “ದಿ ಮೈಸೂರ್ ಮಾನಿಟರ್” ಪ್ರತಿಭಾನುವಾರ ಬೆಳಿಗ್ಗೆ ಮಾರುಕಟ್ಟೆಗೆ ಬರುತ್ತಿತ್ತು. ಉತ್ತಮವಾಗಿ ಬರುತ್ತಿದ್ದ “ದಿ ಮೈಸೂರ್ ಮಾನಿಟರ್” ಮೈಸೂರಿನಂಥ ಸಣ್ಣ ನಗರಿಯಲ್ಲಿ ಜಾಹೀರಾತು ನಂಬಿ ನಡೆಸುವುದು ಕಷ್ಟವಾಗಿ ಕೆಲ ತಿಂಗಳಲ್ಲೇ ನಿಂತು ಹೋಯಿತು.

ಪತ್ರಿಕಾ ನೀತಿಜ್ಞ ಕೆ.ಬಿ.ಜಿ….

ಗೌರವಾನ್ವಿತ ಪ್ರಜಾಪ್ರೇಮಿ ರಾಜಕಾರಣಿಯನ್ನು ‘ರಾಜ ನೀತಿಜ್ಞ’ (ಸ್ಟೇಟ್ಸ್ಮನ್) ಎಂದು ಕರೆಯಲಾಗುತ್ತೆ. ಪತ್ರಿಕಾಕ್ಷೇತ್ರದಲ್ಲಿ ಧೀಮಂತಿಕೆ ತಂದ ಕೆ.ಬಿ.ಗಣಪತಿ ಅವರನ್ನು ‘ಪತ್ರಿಕಾನೀತಿಜ್ಞ’ ಎಂದು ಕರೆದರೆ ಅತಿಶಯೋಕ್ತಿ ಆಗಲಾರದು. ಮೈಸೂರಿನ ಸಣ್ಣ ಪತ್ರಿಕೆಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೆ.ಬಿ.ಜಿ ನಿಜಾರ್ಥದಲ್ಲಿ ಮೈಸೂರಿನ ಸಾಕ್ಷಿ ಪ್ರಜ್ಞೆಯಾಗಿದ್ದರು. ಭ್ರಷ್ಟ ರಾಜಕಾರಣಿ ಮತ್ತು ಅಧಿಕಾರಿಗಳಿಂದ ಮೈಸೂರು ನಗರ ಹಾಳಾಗುವುದನ್ನು ಕಂಡಾಗಲೆಲ್ಲ ಆಕ್ರೋಶಭರಿತರಾಗುತ್ತಿದ್ದರು. ಅದಕ್ಕೆ ಸಾಕಷ್ಟು ಉದಾಹರಣೆಗಳಿದ್ದರೂ. ಅದರಲ್ಲಿ ಎರಡು ಘಟನೆಗಳನ್ನು ಮಾತ್ರ ನಾನು 1991ರಲ್ಲಿ ಕಂಡದ್ದನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ.

ಮೈಸೂರು ನಗರ ದುರಾಸೆ ಜನರ ದಾಳಿಗೆ ಆಹುತಿಯಾಗದಂತೆ ಕಾವಲುಗಾರರಾಗಿದ್ದರು. ಇದಕ್ಕಾಗಿ ತಮ್ಮ ಪತ್ರಿಕೆಯನ್ನು ಅಸ್ತ್ರವಾಗಿ ಕೆಬಿಜಿ ಬಳಸುತ್ತಿದ್ದರು. ಮೈಸೂರು ನಗರ ತನ್ನ ಪಾರಂಪರಿಕ ಕಳೆ ಕಳೆದುಕೊಳ್ಳದೆ ಆಧುನಿಕವಾಗಿ ಬೆಳೆಯಬೇಕೆಂಬ ಅವರ ಹಂಬಲಕ್ಕೆ ರಾಜಕಾರಣಿಗಳು- ಅಧಿಕಾರಿಗಳ ದುರಾಸೆ ಅಡ್ಡಿಯಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನ2 ಕಿ.ಮೀ. ವ್ಯಾಪ್ತಿಯನ್ನು ಖಾಸಗಿ ಜನ ಕಬಳಿಸ ಬಾರದು ಅಂತ ಬಹಳ ಹೋರಾಟ ನಡೆಸಿದರು. ಆದರೆ, ಕೆಬಿಜಿ ಹೋರಾಟವೆಲ್ಲಾ ಭ್ರಷ್ಟರು ಮತ್ತು ನಿರ್ಲಿಪ್ತ ಜನರ ದೆಸೆಯಿಂದ ವ್ಯರ್ಥವಾಯಿತು. ಇಂದು ಚಾಮುಂಡಿ ಬೆಟ್ಟದ ತಪ್ಪಲು ಅನ್ಯಾಕ್ರಮಣದಿಂದ ಸರಿಪಡಿಸಲಾರದಷ್ಟು ಹಾಳಾಗಿ ಹೋಗಿದೆ.

ಮೈಸೂರಿನ ಪತ್ರಿಕೋದ್ಯಮಕ್ಕೆ ಆಧುನಿಕ ಆಯಾಮ ನೀಡಿದ ಪತ್ರಿಕಾ ನೀತಿಜ್ಞ ಕೆ.ಬಿ.ಗಣಪತಿ

admin
the authoradmin

Leave a Reply