CinemaLatest

ಮಿನುಗುತಾರೆ ಕಲ್ಪನಾ… ಎಂದೂ ಮರೆಯದ, ಯಾವತ್ತೂ ಮಾಸದ ಬೆಳ್ಳಿ ನಕ್ಷತ್ರ

ಜುಲೈ 18, ಮಿನುಗುತಾರೆ ಕಲ್ಪನಾರ ಜನ್ಮದಿನ….

ಕನ್ನಡದ ಬೆಳ್ಳಿ ತೆರೆಯನ್ನು ಬೆಳಗಿದ ಮಿನುಗು

ತಾರೆ ಅಲ್ಪಳೆ ಕಲ್ಪನಾ? ರಸಿಕ ಜನ ಮನದ

ಭಿತ್ತಿಯಲಿ ಎಂದಿಗೂ ರಾರಾಜಿಸುವ ವರ್ಣ

ಚಿತ್ರ; ಹೃನ್ಮಂದಿರದ ಸ್ವರ್ಣಪುತ್ಥಳಿ, ಅಲ್ಲ,

ಜೀವಂತ ಮೂರ್ತಿ! ಕೀರ್ತಿಯ ವೈಜಯಂತಿ ಜಯ

ಜಯಕಾರ ಸಹಿತ ಹಾರಾಡಿತ್ತು ನಾಡಿನಲಿ

ಹಾಡು ಹರಿದಿತ್ತು ಹೊನಲಾಗಿ ಮೋಡಿಯನೆಸಗಿ

ಮರೆಯಬಹುದೇನು? ಆದರೆ ವಿಧಿಗೆ ಮತ್ಸರದ

ಹುಟ್ಟುಗುಣ! ವತ್ಸರಗಳಿದ್ದುವೆಷ್ಟೋ? ಮುಂದೆ……..

ಥಟ್ಟನೊಡೆಯಿತು ಮುತ್ತು; ಛಿದ್ರವಾಯಿತು ಭದ್ರ

ಕಲೆಯ ಸಂಪ;ತ್ತು! ಆಹ! ನೋಡ ನೋಡುತ ಮೋಡ

ದಂತೆ ಕರಗಿತು ಕಲ್ಪನೆಯ ಸ್ವಪ್ನ ಪತಾಕೆ.

ಇದು 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಸಾಹಿತ್ಯ ದಿಗ್ಗಜ, ಖ್ಯಾತ ಕವಿ ಡಾ.ಸಿಪಿಕೆ ಅವರು ಮಿನುಗತಾರೆ ಕಲ್ಪನಾ ಅವರನ್ನು ಕುರಿತು ಬರೆದಿರುವ ಕಾವ್ಯನುಡಿಗಳು. ಸಿಪಿಕೆ ಅವರಂತಹ ವಿದ್ವಾಂಸರ ಲೇಖನಿಯಿಂದ ಇಂಥ ಕಾವ್ಯಶಿಲ್ಪವನ್ನು ಕೆತ್ತಿಸಿಕೊಂಡ ಕನ್ನಡ ಚಿತ್ರರಂಗದ ಏಕೈಕ ಅಭಿನೇತ್ರಿ ಮಿನುಗುತಾರೆ ಕಲ್ಪನಾ! ಇದೊಂದು ಪುಟ್ಟ ಕವಿತೆ ಸಾಕು ಕಲ್ಪನಾ ಎಂಥಾ ಮಹದದ್ಭುತ ಕಲಾವಿದೆ ಎಂಬುದನ್ನು ಅರಿಯಲು….

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೆ.ಶಿವರಾಮಕಾರಂತರ ನಿರ್ದೇಶನದ ಒಂದೇ ಒಂದು ವಾಕ್ಚಿತ್ರ ‘ಮಲಯ ಮಕ್ಕಳು’ ಚಿತ್ರದಲ್ಲಿ ಅದರ ಹೃದಯವೇ ಆಗಿದ್ದ ಕೆಂಪಿ ಪಾತ್ರದಲ್ಲಿ ಬಹುಭಾವಪೂರ್ಣವಾಗಿ ಅಭಿನಯಿಸಿ, ಬಹುನಿಷ್ಟೂರವಾದಿ ವ್ಯಕ್ತಿತ್ವದ ಕಾರಂತರಿಂದಲೇ ಭೇಷ್ ಎನಿಸಿಕೊಂಡ ಪ್ರತಿಭಾಪೂರ್ಣ ಕಲಾವಿದೆ ಕಲ್ಪನಾ. ಕಾರಂತರೇ ಮೆಚ್ಚಿಕೊಂಡ, ಒಪ್ಪಿಕೊಂಡ ಕಲಾವಿದೆಯೆಂದರೆ ಇದಕ್ಕಿಂತ ಇನ್ಯಾವ ಸರ್ಟಿಫಿಕೆಟ್ ಬೇಕು?

ಇಷ್ಟೇ ಅಲ್ಲ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಕಾದಂಬರಿಕಾರ ಚದುರಂಗ ಅವರು ದಿಗ್ಧರ್ಶಿಸಿದ ‘ಸರ್ವಮಂಗಳ’ ಚಿತ್ರದಲ್ಲಿನ ಇವರ ಸಹಜಾಭಿನಯ ಕಂಡು ಸ್ವತಃ ಚದುರಂಗ ಅವರೇ ಮೂಕವಿಸ್ಮತರಾಗಿ ಕಲ್ಪನಾ ಅವರಿಗೆ ಕೈಮುಗಿದಿದ್ದರಂತೆ.  ಹಾಗೆಯೇ ‘ಎರಡು ಕನಸು’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕಲ್ಪನಾ ಅಭಿನಯಿಸುತ್ತಿದ್ದ ರೀತಿ ಕಂಡು ಆ ಚಿತ್ರದಲ್ಲಿ ನಾಯಕನಟರಾಗಿ ಅವರೆದುರು ನಟಿಸಿದ್ದ ವರನಟ ಡಾ. ರಾಜ್‌ಕುಮಾರ್ ಅವರೇ ಚಪ್ಪಾಳೆ ತಟ್ಟಿ ತಮ್ಮೆರಡೂ ಕೈಗಳನ್ನು ಮೇಲೆತ್ತಿ  ಕೈಮುಗಿದಿದ್ದರಂತೆ.

ಇದನ್ನು ಕಂಡು ವಿಚಲಿತರಾದ ಕಲ್ಪನಾ ನೀವು ನನಗೆ ಕೈಮುಗಿಯುವುದೇ? ಎಂದು ಸಂಕೋಚದ ಮುದ್ದೆಯಾಗಿ ಡಾ. ರಾಜ್ ಅವರನ್ನು ನೋಡಿದಾಗ, ನಿನಗಲ್ಲಮ್ಮಾ ನಾನು ಕೈಮುಗಿದದ್ದು, ನಿನ್ನಲ್ಲಿ ತಾಂಡವವಾಡುತ್ತಿರುವ ಕಲಾದೇವಿಗೆ ಎಂದಿದ್ದರಂತೆ. ಅಂತೆಯೇ ‘ಹಣ್ಣೆಲೆ ಚಿಗುರಿದಾಗ’ ಚಿತ್ರದಲ್ಲಿನ ಕಲ್ಪನಾ ಅವರ ಅಮೋಘ ಅಭಿನಯ ಕಂಡು ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ವಿ.ಶಾಂತಾರಾಂ ಅವರು ಗಳಗಳನೆ ಅತ್ತು ಕಣ್ಣೀರಧಾರೆಯಲ್ಲೇ ಕಲ್ಪನಾ ಅವರೊಳಗಿನ ಕಲಾಸರಸ್ವತಿಗೆ ಮನದುಂಬಿ ವಂದಿಸಿದ್ದರಂತೆ. ಹಿಂದಿಯ ಪ್ರಸಿದ್ದನಟಿ ಶರ್ಮಿಳಾ ಠಾಕೂರ್ ಕೂಡ ‘ಶರಪಂಜರ’ ಚಿತ್ರ ವೀಕ್ಷಿಸಿ, ನಾನು ಕಲ್ಪನಾ ಅವರಂತೆ ನಟಿಸಲು ಸಾಧ್ಯವೇ? ಎಂದು ಅಚ್ಚರಿಯಿಂದ ಬಾಯ್ಮೇಲೆ ಬೆರಳಿಟ್ಟುಕೊಂಡು ಮುಕ್ತಕಂಠದಿಂದ ಕಲ್ಪನಾ ಅವರ ನಟನೆಯನ್ನು ಕೊಂಡಾಡಿದ್ದರಂತೆ.

ಹೀಗೆ ಸಿಪಿಕೆ, ಕಾರಂತ, ಚದುರಂಗ ಅವರಂಥ ಘಟಾನು ಘಟಿ ಸಾಹಿತಿಗಳಿಂದ, ಡಾ.ರಾಜ್‌ಕುಮರ್, ವಿ.ಶಾಂತಾರಾಂ, ಶರ್ಮಿಳಾ ಠಾಕೂರ್ ಅವರಂತಹ ಬೆಳ್ಳಿ ತೆರೆಯ ಮಹಾನ್ ದಿಗ್ಗಜರಿಂದ ಕೈಮುಗಿಸಿಕೊಳ್ಳುವಷ್ಟರ ಮಟ್ಟಿಗೆ ತನ್ಮೊಳಗಿನ ಕಲಾವಿದೆಯನ್ನು ಬೆಳ್ಳಿತೆರೆಯಲ್ಲಿ ಮೆರೆಸಿದ್ದ ಮಿನುಗುತಾರೆ ಕಲ್ಪನಾ ಅವರಿಗೆ ಸಮ ಮತ್ತೊಬ್ಬರ ಹೆಸರನ್ನು ಹೇಳುವುದು ಕಷ್ಟ. ಕನ್ನಡ ನಾಡು ಕಂಡ ಅಂಥ ಅಭೂತಪೂರ್ವತಾರೆ ಕಲ್ಪನಾ ರಂಗನಟಿಯಾಗಿಯೂ ಮಿಂಚಿದ ರಂಗಭೂಮಿಯ ನಕ್ಷತ್ರವೂ ಹೌದು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಪಟ್ಟ ಅಲಂಕರಿಸಿದ ಅಪ್ರತಿಮ ಸಾಧಕಿ ತಾರೆ ಜಯಮಾಲಾ

ಅದಾವ ಘಳಿಗೆಯಲ್ಲಿ ಕನ್ನಡ ಚಿತ್ರರಂಗ  ಇವರಿಗೆ ‘ಮಿನುಗುತಾರೆ’ ಎಂಬ ಬಿರುದನ್ನು ಅಭಿಮಾನದಿಂದ         ನೀಡಿತೋ  ಏನೋ ಅದಕ್ಕೆ ಅನ್ವರ್ಥವಾಗಿ ಬದುಕಿದ್ದಾಗಲೂ ಬೆಳ್ಳಿತೆರೆಯಲ್ಲಿ ಭರ್ಜರಿಯಾಗಿ ಮಿನು ಮಿನುಗುತ್ತಲೇ ಇದ್ದರು. ಹಾಗೆಯೇ ಭೌತಿಕವಾಗಿ ಅವರು ಇಲ್ಲವಾಗಿದ್ದರೂ ಸಹ ಕನ್ನಡಿಗರ ಭಾವಪ್ರಪಂಚದಲ್ಲಿ ಇಂದಿಗೂ ಮಿನು ಮಿನುಗುತ್ತಲೇ ಇದ್ದಾರೆ. ಕಲ್ಪನಾ ಕಣ್ಮರೆಯಾಗಿ ನಾಲ್ಕು ದಶಕಗಳೇ ಸಮೀಪಿಸುತ್ತಿದೆ. ಆದರೆ ಅವರು ಬಿಟ್ಟು ಹೋದ ಜಾಗವನ್ನು ತುಂಬಬಲ್ಲ  ನಟಿ ಇನ್ನೂ ಜನಿಸಿಲ್ಲ! ಜನಿಸುವುದೂ ಇಲ್ಲವೆನ್ನಿ. ಹಾಗಾಗಿ ಮಿನುಗುತಾರೆಯ ಜಾಗ ಚಿತ್ರರಂಗದಲ್ಲಿ ಖಾಲಿಯಾಗಿಯೇ ಉಳಿದಿದೆ. ಕಲ್ಪನಾ ಮಾತ್ರ ತನ್ನ ಅಜರಾಮರ ಅಭಿನಯದಿಂದ ಚಿರಸ್ಥಾಯಿಯಾಗಿಯೇ ಉಳಿದಿದ್ದಾರೆ.

ಇವತ್ತಿಗೂ  ಕಲ್ಪನಾ ಎಂದ ತಕ್ಷಣ ಬೆಳ್ಳಿಮೋಡ, ಶರಪಂಜರ, ಗೆಜ್ಜೆಪೂಜೆ, ಕಪ್ಪು ಬಿಳುಪು, ನಾಂದಿ, ಉಯ್ಯಾಲೆ, ಬಂಗಾರದ ಹೂವು, ಮಣ್ಣಿನ ಮಗ, ಸರ್ವಮಂಗಳ, ಸಾಕುಮಗಳು, ಕರುಳಿನ ಕರೆ, ಹಣ್ಣಲೆ ಚಿಗುರಿದಾಗ, ಗಂಧದಗುಡಿ ದಾರಿತಪ್ಪಿದ ಮಗ, ಬಯಲು ದಾರಿ,  ಕನ್ನಿಕಾಪರಮೇಶ್ವರಿ, ಎರಡು ಕನಸು, ಮುಕ್ತಿ, ಮಲೆಯ ಮಕ್ಕಳು, ಮುಂತಾದ ಕಲ್ಪನಾ ಅಭಿನಯದ ಚಿತ್ರ ರತ್ನಗಳು ಕಣ್ಪರದೆಯ ಮೇಲೆ ತೇಲಿ  ಬರುತ್ತವೆ. ಹೀಗೆ ಕಲ್ಪನಾ ಅಭಿನಯಿಸಿದ ಒಂದೊಂದು ಚಿತ್ರಗಳೂ ಅವರ ಮೇರು ಪ್ರತಿಭೆಯಿಂದಾಗಿ ಕನ್ನಡ  ಚಿತ್ರಲೋಕವನ್ನು ಬೆಳಗಿವೆ.

ಇತರ ಭಾಷಿಕರೂ ಇತ್ತ ತಿರುಗಿ ನೋಡುವಂತೆ ಮಾಡಿವೆ. ವಿಶೇಷವಾಗಿ ಕನ್ನಡದ ಮೇರುನಟ ಡಾ.ರಾಜ್ ಜೋಡಿಯಾಗಿ ೧೯ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಹೊಂದಿರುವ ಕಲ್ಪನಾ ಅವರು ಡಾ.ರಾಜ್ ಜೊತೆ ನಟಿಸಿರುವ ‘ಬಂಗಾರದ ಹೂವು’ ಹಾಗೂ ‘ಮಣ್ಣಿನಮಗ’ ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರವ್ಯಾಪಿಗೊಳಿಸಿವೆ. ಹಾಗೆಯೇ ಡಾ. ರಾಜ್ ಜೊತೆಗಿನ ‘ಹಣ್ಣೆಲೆ ಚಿಗುರಿದಾಗ’ ಮತ್ತು ‘ಬಂಗಾರದ ಹೂವು’ ಚಿತ್ರಗಳ ಉತ್ತಮ ನಟನೆಗಾಗಿ ಕರ್ನಾಟಕ ಸರ್ಕಾರದಿಂದ ಎರಡು ಬಾರಿ ಕಲ್ಪನ ಅವರಿಗೆ ‘ಶ್ರೇಷ್ಠನಟಿ ರಾಜ್ಯ ಪ್ರಶಸ್ತಿ’ ಲಭಿಸಿದೆ.

ಒಂದು ಕಾಲದಲ್ಲಿ ರಾಜ್-ಕಲ್ಪನಾ ಜೋಡಿ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ‘ಅರಗಿಣಿ’ಯ ಶತಮಾನದ ಶ್ರೇಷ್ಠರು ಜನಾಭಿಪ್ರಾಯ ಸಂಗ್ರಹದಲ್ಲಿ ರಾಜ್-ಕಲ್ಪನಾ ಜೋಡಿ ಮೊದಲಿಗರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ ಈ ಜೋಡಿ ನಟಿಸಿದ್ದ ‘ಉಯ್ಯಾಲೆ’ ಚಿತ್ರ ಎಪ್ಪತ್ತರ ದಶಕದಲ್ಲೇ ವಿದೇಶಗಳಲ್ಲಿ ಪ್ರದರ್ಶಿಸಲ್ಪಟ್ಟು ಜನಮೆಚ್ಚುಗೆ ಗಳಿಸಿದ ಹಿರಿಮೆಗೆ ಪಾತ್ರವಾಗಿತ್ತು.

ಜಗವೇ ಹೇಳುತೈತೆ ‘ಅಪ್ಪು’ನೀನೇ ನಮ್ಮ ರಾಜಕುಮಾರ… ಎಂದೆಂದಿಗೂ ಮರೆಯಲಾಗದ ಜೀವ…

ಕಲೆಯ ರಸಗಂಗೆಯಲ್ಲಿ ಮಿಂದೆದ್ದು, ಸೌಂದರ್ಯವಲ್ಲಿಯಾಗಿ ಕಂಗೊಳಿಸುತ್ತ ಬಣ್ಣದ ಲೋಕಕ್ಕೆ ತಮ್ಮಿಡೀ ಜೀವ-ಜೀವನವನ್ನೆಲ್ಲಾ ಸಮರ್ಪಿಸಿಕೊಂಡಿದ್ದ ಕಲಾಚೇತನ ಕಲ್ಪನಾ ತಾಯಿ ಭುವನೇಶ್ವರಿಯ ಕೊರಳ ಮಾಲೆಯಂತಿದ್ದವರು. ಅಭಿನಯರಂಗದಲ್ಲಿ ಹಲವು ಹತ್ತು ಮೊದಲುಗಳನ್ನು ತಮ್ಮದಾಗಿಸಿಕೊಂಡವರು. ಕರ್ನಾಟಕ ಸರ್ಕಾರದಿಂದ ಮೊಟ್ಟಮೊದಲಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಹೆಗ್ಗಳಿಕೆ. ಒಂದಲ್ಲ ಎರಡಲ್ಲ ಮೂರು ಬಾರಿ ಶ್ರೇಷ್ಠನಟಿ ರಾಜ್ಯ ಪ್ರಶಸ್ತಿಗಳಿಸಿದ ಹಿರಿಮೆ, ಫಿಲಂಪೇರ್ ಪ್ರಶಸ್ತಿ ಪಡೆದ ಪ್ರಪ್ರಥಮ ಕನ್ನಡ ನಟಿ ಎಂಬ ಗರಿಮೆ.

ಅಚ್ಚರಿಯೆಂದರೆ ಎಪ್ಪತ್ತರ ದಶಕದಲ್ಲೇ ರಾಜಧಾನಿ ಬೆಂಗಳೂರಿನ ಮುಖ್ಯ ರಸ್ತೆಯೊಂದಕ್ಕೆ ಮಿನುಗುತಾರೆ ಕಲ್ಪನಾ ಹೆಸರನ್ನು ನಾಮಕರಣ ಮಾಡಲಾಗಿದೆ. ಇಂಥ ನಾಗರೀಕ ಗೌರವ ಪಡೆದ ಮೊದಲ ಕನ್ನಡ ಚಿತ್ರನಟಿ ಕಲ್ಪನಾ ಎಂಬ ಹೆಚ್ಚುಗಾರಿಕೆ ಕೂಡ ಇವರ ಕೀರ್ತಿಕಳಶದಲ್ಲಿದೆ. ಇವೆಲ್ಲಕ್ಕೂ ಚಿನ್ನದ ತೋರಣ ಕಟ್ಟಿದಂತೆ ಬರಗೂರು ರಾಮಚಂದ್ರಪ್ಪನವರ ಮುನ್ನುಡಿಯೊಡನೆ ಒಂದು ಸಾವಿರದ ನೂರು ಪುಟಗಳುಳ್ಳ ಬೃಹತ್ ಸಂಸ್ಮರಣಗ್ರಂಥವೊಂದು ಇವರ ಗೌರವರ್ಥ ಪ್ರಕಟಗೊಂಡಿದ್ದು, 2014 ಜುಲೈ 18ರಂದು ಲೋಕಾರ್ಪಣೆಗೊಂಡಿದೆ.  ಇಂಥ ಬೃಹತ್ ಸಂಸ್ಮರಣ ಗ್ರಂಥ ಸಮರ್ಪಣೆಯ ಗೌರವಕ್ಕೆ ಪಾತ್ರರಾದ ಕನ್ನಡ ಚಿತ್ರರಂಗದ, ಅಷ್ಟೇ ಏಕೆ ಭಾರತೀಯ ಚಿತ್ರರಂಗದ, ಇನ್ನೂ ಹೇಳಬೇಕೆಂದರೆ ವಿಶ್ವಚಿತ್ರರಂಗದ ಮೊಟ್ಟಮೊದಲ ಅಭಿನೇತ್ರಿ ಎಂಬ ಖ್ಯಾತಿಕೂಡ ಇವರದ್ದೇ ಆಗಿದೆ.

ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…

ಕನ್ನಡನಾಡಿನ ರಸಿಕರ ಮನವ ಸೂರೆಗೊಂಡು ಕನ್ನಡ ಚಿತ್ರಜಗತ್ತಿನ ಅನಭಿಷಿಕ್ತ ಸಾಮ್ರಾಜ್ಞೆಯಾಗಿ ಮೆರೆದ ಮಿನುಗುತಾರೆ ಕಲ್ಪನಾ ಜನಿಸಿದ್ದು 1943 ಜುಲೈ 18. ಸ್ಥಳ ದಕ್ಷಿಣದ ಸಿರಿನಾಡು ಮಂಗಳೂರು. ಮರಣಿಸಿದ್ದು 1979ಮೇ 12. ಜೀವಿಸಿದ್ದದ್ದು ಕೇವಲ 36 ವರ್ಷಗಳು. ಬೆಳ್ಳಿತೆರೆಗೆ ಬಂದದ್ದು 1963. ಮೊದಲ ಚಿತ್ರ ‘ ಸಾಕುಮಗಳು’. ಕೊನೆಯ ಚಿತ್ರ ‘ಮಲೆಯ ಮಕ್ಕಳು’ (1978). ಒಟ್ಟಾರೆ ಬಣ್ಣದ ಲೋಕದಲ್ಲಿದ್ದದ್ದು 15ವರ್ಷಗಳು ಮಾತ್ರ.

ಈ ಅವಧಿಯಲ್ಲಿ ಕಲ್ಪನಾ ಅಭಿನಯಿಸಿದ ಒಟ್ಟು ಚಿತ್ರಗಳ ಸಂಖ್ಯೆ 78. ಅದರಲ್ಲಿ ಕನ್ನಡ 69. ತಮಿಳು 4. ತೆಲಗು 1. ಮಲೆಯಾಳಂ 2, ತುಳು 3. ಕಲ್ಪನಾ ಚಿತ್ರಗಳನ್ನು ನಿರ್ದೇಶಿಸಿದ ಒಟ್ಟು ನಿರ್ದೇಶಕರ ಸಂಖ್ಯೆ 51. ಅತ್ಯಲ್ಪ ಅವಧಿಯಲ್ಲಿ ಕನ್ನಡ ಚಿತ್ರರಂಗವಿರುವತನಕವೂ ಶಾಶ್ವತವಾಗಿರುವಂತಹ ಅದ್ಭುತ ಸಾಧನೆಯನ್ನು ಮಾಡಿ ಮತ್ತೆ ಬಾರದ ಲೋಕದತ್ತ ಹೊರಟು ಹೋದ ಮಿನುಗುತಾರೆ ಕಲ್ಪನಾ ಎಂದೂ ಮರೆಯದ, ಯಾವತ್ತೂ ಮಾಸದ ಬೆಳ್ಳಿ ನಕ್ಷತ್ರವಾಗಿದ್ದಾರೆ.

ಶರತ್ ಲತಾ ಚಂದನವನದ ಕಲ್ಪನಾಳಾಗಿ ಮಿನುಗಿದ್ದು ಹೇಗೆ? ಹುಟ್ಟು-ಬದುಕು-ಸಾವು ಎಲ್ಲವೂ ದುರಂತಮಯ!

 

admin
the authoradmin

Leave a Reply