LatestMysore

ವಚನ ಸಾಹಿತ್ಯ ಮನದ ಮಲಿನ ತೊಳೆದು ಬದುಕಿಗೆ ಹೊಸ ಬೆಳಕು ನೀಡುತ್ತದೆ: ಸುಧಾ ಮೃತ್ಯುಂಜಯಪ್ಪ

ಸರಗೂರು: ವಚನ ಸಾಹಿತ್ಯ ಮನದ ಮಲಿನವನ್ನು ತೊಳೆದು ಬದುಕಿಗೆ ಹೊಸ ಬೆಳಕು ನೀಡುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಡಾ. ಸಿ. ಎನ್. ಮೃತ್ಯುಂಜಯಪ್ಪ ಅವರ ದತ್ತಿಯ ಅಂಗವಾಗಿ ಸರಗೂರು ತಾಲ್ಲೂಕು ಬಿ. ಮಟಕೆರೆ ಗ್ರಾಮದಲ್ಲಿ ಆಯೋಜಿಸಿದ್ದ 31ನೇ ವಚನ ಗ್ರಾಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗೆ ಆತ್ಮಶಾಂತಿ ಮತ್ತು ಸನ್ಮಾರ್ಗದ ದಾರಿಯನ್ನು ತೋರಿಸುವ ಅಪೂರ್ವ ಶಕ್ತಿ ವಚನ ಸಾಹಿತ್ಯಕ್ಕಿದೆ‌ ಎಂದರು.

ಹನ್ನೆರಡನೆಯ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಜಾತಿ, ಲಿಂಗ ಮತ್ತು ವರ್ಣಭೇದಗಳನ್ನು ಮೀರಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನೆಯನ್ನು ಸಮಾಜಕ್ಕೆ ನೀಡಿದರು. ಸಾಮಾಜಿಕ ನ್ಯಾಯ, ಸಮಾನತೆ, ಮಾನವೀಯತೆ ಮತ್ತು ಕಾಯಕ-ದಾಸೋಹ ತತ್ವಗಳನ್ನು ವಚನಗಳ ಮೂಲಕ ಜನಮಾನಸದಲ್ಲಿ ಬಿತ್ತಿದ ಮಹತ್ವದ ಕಾರ್ಯವನ್ನು ಶರಣರು ಮಾಡಿದ್ದಾರೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಕತ್ತಲೆಯ ಮನೆಯಲ್ಲಿ ಹಾವು, ಚೇಳು ಹಾಗೂ ಇತರ ವಿಷಕಾರಿ ಜೀವಿಗಳು ಆಶ್ರಯ ಪಡೆಯುವಂತೆ, ಅಜ್ಞಾನದ ಕತ್ತಲೆಯಿಂದ ತುಂಬಿದ ಮನಸ್ಸಿನಲ್ಲಿ ಅರಿಷಡ್ವರ್ಗಗಳು ನೆಲೆಸಿ ಮಾನವನನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತವೆ. ಮಾನವನ ಅಂತರಂಗವನ್ನು ಜ್ಞಾನದ ಬೆಳಕಿನಿಂದ ಪ್ರಕಾಶಮಾನಗೊಳಿಸಿ, ಸತ್ಯ-ಧರ್ಮದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಶಕ್ತಿ ವಚನ ಸಾಹಿತ್ಯಕ್ಕಿದೆ. ವಚನಗಳು ಬದುಕಿನ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು, ಮೌಲ್ಯಯುತ ಹಾಗೂ ಆದರ್ಶ ಜೀವನ ನಡೆಸಲು ಮಾರ್ಗದರ್ಶನ ನೀಡುವ ಅಮೂಲ್ಯ ಜೀವನದರ್ಶನಗಳಾಗಿವೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ವಚನಗಳು ಜ್ಞಾನದ ಸಂಕೇತವಾಗಿದ್ದು, ಅವುಗಳ ಸಾರ ಪ್ರತಿಯೊಂದು ಮನೆಗೂ ತಲುಪಬೇಕೆಂಬ ಉದ್ದೇಶದಿಂದ ಶರಣು ವಿಶ್ವವಚನ ಫೌಂಡೇಷನ್ ಗ್ರಾಮಗಳಿಗೆ ತೆರಳಿ ಮನೆ ಮನೆಗೆ ವಚನ ಸಾಹಿತ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಿದೆ.

ವಚನ ಪುಸ್ತಕಗಳನ್ನು ಕೇವಲ ಸಂಗ್ರಹಿಸಿಡುವುದಲ್ಲ, ಅವುಗಳಲ್ಲಿರುವ ವಚನಗಳನ್ನು ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ವಚನಗಳ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ, ಸಮಾನತೆ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಕರ್ನಾಟಕ ಪಬ್ಲಿಕ್ ಶಾಲೆ ಅಧ್ಯಕ್ಷ  ಬಾಡಗ ಮಾದಪ್ಪ ಮಾತನಾಡಿ, ವಚನ ಸಾಹಿತ್ಯವು ಸಮಾಜದಲ್ಲಿರುವ ವೈಷಮ್ಯಗಳನ್ನು ದೂರ ಮಾಡಿ, ಪರಸ್ಪರ ಪ್ರೀತಿ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸುತ್ತದೆ. ವಚನಗಳು ಸಮಾಜದಲ್ಲಿ ಸಂಘಟನೆ ಮತ್ತು ಸೌಹಾರ್ದತೆಯನ್ನು ಬಲಪಡಿಸುವುದರ ಜೊತೆಗೆ, ಪ್ರತಿಯೊಬ್ಬರನ್ನೂ ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ. ಮನೆ ಮನೆಗೆ ವಚನ ಸಾಹಿತ್ಯವನ್ನು ತಲುಪಿಸುವ ವಚನ ಗ್ರಾಮ ಕಾರ್ಯಕ್ರಮವು ಈ ಮೌಲ್ಯಗಳನ್ನು ಜನಜೀವನದಲ್ಲಿ ಬಿತ್ತುವ ಮಹತ್ವದ ಸಾಮಾಜಿಕ ಚಳವಳಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸರಗೂರು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ. ಎಸ್. ವೀರಭದ್ರಪ್ಪ, ಗ್ರಾಮದ ಮುಖಂಡ ಅಣ್ಣಯ್ಯಸ್ವಾಮಿ, ಸರಗೂರು ತಾಲ್ಲೂಕು ಬಸವಬಳಗ ಅಧ್ಯಕ್ಷ ಹಂಚೀಪುರ ಗಣಪತಿ,  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುಣಪಾಲ್, ಉಪಾಧ್ಯಕ್ಷ ಕೆ.ಎ ರಾಜಪ್ಪ, ನಿರ್ದೇಶಕ ಶಿವನಂಜಪ್ಪ, ಗೌಡಿಕೆ ರವಿಕುಮಾರ್, ಪದ್ಮರಾಜ್, ಸೋಮಶೇಖರ್, ಸರಗೂರಿನ ಸ್ನೇಹ ಬಳಗದ ಸೀಮಾ ಮೋಹನ್, ಉಮಾ ಪ್ರತಾಪ್, ಶೀಲಾ ದಯಾನಂದ್, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಹಾಗೂ ಉಪಾಧ್ಯಕ್ಷ ಶಿವಪುರ ಉಮಾಪತಿ ಸೇರಿದಂತೆ ಹಲವಾರು ಗಣ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

admin
the authoradmin

Leave a Reply