ಶಿಕ್ಷಕರು, ಪಾಲಕರು, ಸಮಾಜದ ಪ್ರಭಾವದಿಂದ ಮಕ್ಕಳು ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ: ಎಸ್.ಬಸವರಾಜು

ಮೈಸೂರು: ವ್ಯಕ್ತಿತ್ವವನ್ನು ಬಾಲ್ಯ ನಿರ್ಧಾರ ಮಾಡುತ್ತದೆ. ಮಕ್ಕಳ ಸುತ್ತಮುತ್ತಲಿರುವ ಶಿಕ್ಷಕರು, ಪಾಲಕರು ಹಾಗೂ ಸಮಾಜದ ಪ್ರಭಾವದಿಂದ ಆತ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆ ಎಂದು ಬಸವಮಾರ್ಗ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಬಸವಮಾರ್ಗ ಫೌಂಡೇಷನ್‌ನ ಬಾಲಕರ ಉಚಿತ ನಿಲಯದಲ್ಲಿ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಪ್ರತಿಭಾನ್ವಿತ ಮಕ್ಕಳಿಗಾಗಿ ಕಳೆದ ನಾಲ್ಕ ವರ್ಷಗಳಿಂದ ಉಚಿತವಾಗಿ ವಸತಿ ನಿಲಯ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ನಮ್ಮ ಉಚಿತ ವಸತಿ ನಿಲಯಕ್ಕೆ ಬಂದ ಬಳಿಕ ಅವರ ಗುಣದೋಷದಲ್ಲಿ ಹಲವಾರು ಬದಲಾವಣೆಗಳಾಗಿವೆ. ಸಂಸ್ಕಾರ ಕಲಿತಿದ್ದಾರೆ. ನಮ್ಮ ವಸತಿ ನಿಲಯದಲ್ಲಿ ಮಕ್ಕಳಿಗೆ ಪ್ರತಿನಿತ್ಯ ಟ್ಯೂಷನ್ ಹೇಳಿಕೊಡಲಾಗುತ್ತದೆ ಜೊತೆಗೆ ವಾಲಿಬಾಲ್ ತರಬೇತಿಯನ್ನೂ ಕೊಡಿಸಲಾಗುತ್ತಿದೆ.
ಪ್ರತಿ ಶನಿವಾರ ಮತ್ತು ಭಾನುವಾರ ಚೆಸ್ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಮ್ಮ ಈ ಸಮಾಜ ಸೇವೆಯನ್ನು ಮನಗಂಡು ಹಲವಾರು ದಾನಿಗಳು ಹಾಸಿಗೆ, ಮಕ್ಕಳಿಗೆ ಶಾಲೆ ಶೂ, ಕ್ರೀಡೆ ಶೂ, ಸೈಕಲ್, ಟೈ, ಬೆಲ್ಟ್, ಬ್ಯಾಡ್ಜ್ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಬರಿ ಶಿಕ್ಷಣವೊಂದೆ ಸಿಕ್ಕರೆ ಸಾಲದು ಅದರ ಜೊತೆಗೆ ತಂದೆ, ತಾಯಿಯ ಪ್ರೀತಿ, ಕಾಳಜಿಯೂ ಬೇಕು. ಸುಭದ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕ ವಾತಾವರಣವೂ ಬೇಕು. ಈ ನಿಟ್ಟಿನಲ್ಲೇ ಆ ವಾತಾವರಣವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ನಮ್ಮ ಸಂಸ್ಥೆಯಿಂದ ಪ್ರತಿ ತಿಂಗಳು ಪಾಲಕರ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ಮಕ್ಕಳ ಪ್ರಗತಿ, ವಿದ್ಯಾಭ್ಯಾಸ, ಬದಲಾವಣೆ, ಹವ್ಯಾಸದ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಲಾಗುತ್ತದೆ.

ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪಾಲಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ ಪಾಲಕರಿಂದ ಬರುವ ಸಲಹೆ, ಸೂಚನೆಗಳನ್ನು ಮಾರ್ಪಾಡುಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಕುಕ್ಕರಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರು ಮಾತನಾಡಿ, ಬಸವಣ್ಣ ಅವರು ನಮ್ಮ ಶಾಲೆಯನ್ನು ದತ್ತು ತೆಗೆದುಕೊಂಡ ಮೇಲೆ ನಮ್ಮ ಶಾಲೆಯ ಚಿತ್ರಣವೇ ಬದಲಾಗಿದೆ. ಕಳೆದ ಮೂರು ವರ್ಷಗಳಿಂದ 67 ಲಕ್ಷಕ್ಕೂ ಅಧಿಕ ಸೌಲಭ್ಯಗಳನ್ನು ಬಸವಣ್ಣ ಅವರು ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ನಿಲಯವನ್ನು ತೆರೆಯುವುದರೊಂದಿಗೆ ದೂರದೂರುಗಳಿಂದ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ನಮ್ಮ ಶಾಲೆಗೆ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದರು.
ಪಾಲಕರು ಮಾತನಾಡಿ, ಬಸವಮಾರ್ಗ ಉಚಿತ ವಸತಿ ನಿಲಯಕ್ಕೆ ನಮ್ಮ ಮಕ್ಕಳನ್ನು ಸೇರಿಸಿದ ಮೇಲೆ ಅವರಲ್ಲಿ ಹಲವಾರು ಬದಲಾವಣೆ ಆಗಿದೆ. ಈ ಹಿಂದೆ ಮನೆಯಲ್ಲಿ ಇದ್ದಾಗ ಹೇಳಿದ ಮಾತು ಕೇಳುತ್ತಿರಲಿಲ್ಲ. ಸದಾ ಮೊಬೈಲ್, ಟವಿ ಎಂದು ಓದಿನ ಕಡೆ ಗಮನ ಕೊಡುತ್ತಿರಲಿಲ್ಲ. ತಂದೆ-ತಾಯಿ, ಹಿರಿಯರು ಎನ್ನುವುದನ್ನು ನೋಡದೆ ಅಗೌರರವಾಗಿ ಮಾತನಾಡುತ್ತಿದ್ದರು. ಆದರೆ ಈಗ ಅವರನ್ನು ನೋಡಿದರೆ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಾಸ್ಟೆಲ್ ವಾರ್ಡನ್, ರಮೇಶ್, ಸಿಬ್ಬಂದಿ ರಾಘವೇಂದ್ರ, ಅಭಿ ಇತರರು ಇದ್ದರು.







