ArticlesLatestLife style

ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-23

ಕೊಡಗಿನ ಪ್ರಕೃತಿ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ.. ಇದು ಇಲ್ಲಿನ  ಜನರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.. ಹೀಗಿರುವಾಗಲೇ ಅರಣ್ಯ ಸಂಪತ್ತನ್ನು ನಾಶ ಮಾಡಿ ಅದರ ಮೇಲೆ ಜನವಸತಿ ಯೋಜನೆ ನಿರ್ಮಾಣದ ಕಾರ್ಯ ನಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.. ಈ ಕುರಿತಂತೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ನೈಜತೆಯನ್ನು ತೆರೆದಿಟ್ಟಿದ್ದಾರೆ…

ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?

ನೆಲಜಿ. ಆ ಹೆಸರನ್ನು ಕೇಳಿದರೆ ಇಂದಿಗೂ ಕೊಡಗಿನ ಜನರ ಎದೆ ನಡುಗುತ್ತದೆ. ದೇವರ ನೆಲವೆಂದೇ ಕರೆಯುತ್ತಿದ್ದ ಆ ಪವಿತ್ರ ಜಾಗದ ಮಾರಾಟ, ಅಲ್ಲಿನ ಪ್ರಕೃತಿಯ ನಾಶ ನೋಡಿ ಇಡೀ ಕೊಡಗು ಒಂದಾಗಿತ್ತು. ರಸ್ತೆಗೆ ಇಳಿದು, ಸಾಮಾಜಿಕ ಜಾಲತಾಣಗಳ ಮೂಲಕ ದನಿ ಎತ್ತಿ, ಹೋರಾಡಿ ಕೊನೆಗೆ ನ್ಯಾಯ ಗೆದ್ದಿತು.. ಜಾಗವನ್ನು ತೆಗೆದುಕೊಂಡವರು ವಾಪಸ್ ಕೊಡಲು ಒಪ್ಪಿದರು. ಇಂದು ಕೊಡಗಿನ ನಾಗರಿಕರ ಹೋರಾಟದಿಂದ ಆ ಜಾಗವನ್ನು ಉಳಿಸುವ ಎಲ್ಲಾ ತಯಾರಿಗಳು ನಡೆಯುತ್ತಿವೆ.

ನೆಲಜಿ ನಮಗೆ ಒಂದು ದೊಡ್ಡ ಪಾಠ ಕಲಿಸಿತು. ಪ್ರಕೃತಿಯನ್ನು ಮಾರಿದರೆ, ಕೊಡಗಿನ ಜನ ಸುಮ್ಮನಿರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿತು.. ಗಾಯ ಇನ್ನೂ ಹಸಿಯಾಗಿರುವಾಗಲೇ ನಾವು ಮತ್ತೊಂದು ದೊಡ್ಡ ಪ್ರಶ್ನೆಯ ಮುಂದೆ ನಿಂತಿದ್ದೇವೆ.

ಈಗ ಎಲ್ಲರ ದೃಷ್ಟಿ ಮಡಿಕೇರಿಯತ್ತ ನೆಟ್ಟಿದೆ.. ಮಡಿಕೇರಿಯ ಕೆ. ನಿಡುಗಣೆ ಪಂಚಾಯತ್ ವ್ಯಾಪ್ತಿಯಲ್ಲಿ, ಕ್ಲಬ್ ಮಹೀಂದ್ರದ ಹಿಂಭಾಗದಲ್ಲಿ ಒಂದು ಬೃಹತ್ ಬದಲಾವಣೆ ನಡೆಯುತ್ತಿದೆ. ಕರ್ನಾಟಕ ನಗರ ವಸತಿ ಮಂಡಳಿ  ಅವರಿಂದ MUDA ಅನುಮೋದಿತ ಸುಮಾರು 1200 ಸೈಟ್‌ಗಳ ಯೋಜನೆ ಅಲ್ಲಿ ರೂಪುಗೊಳ್ಳುತ್ತಿದೆ. ಆದರೆ ಸ್ಥಳದಲ್ಲಿ ಕಾಣುತ್ತಿರುವುದು ಆತಂಕ ಹುಟ್ಟಿಸುತ್ತದೆ.

ಅಲ್ಲಿ ಕೃಷಿ ಮತ್ತು ತೋಟಗಾರಿಕೆ ಭೂಮಿ ಪರಿವರ್ತನೆಯಾಗುತ್ತಿದೆ. ಒಂದು ಎತ್ತರದ ಗುಡ್ಡವನ್ನೇ ಮಟ್ಟ ಮಾಡಲಾಗಿದೆ. ಈಗಾಗಲೇ 2000ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ ಎಂಬ ಮಾಹಿತಿ ಹೊರಬರುತ್ತಿದೆ. ವರ್ಷಗಳಿಂದ ನಿಂತಿದ್ದ ಮರಗಳು, ಪಕ್ಷಿಗಳ ಆಶ್ರಯ, ಮಣ್ಣನ್ನು ಬಿಗಿದಿಟ್ಟ ಬೇರುಗಳು ಎಲ್ಲವೂ ಯಂತ್ರಗಳ ಕೆಳಗೆ ನಾಶವಾಗಿವೆ.

ನೆಲಜಿಯಲ್ಲಿ ನಾವು ಅನುಭವಿಸಿದ ನೋವೇನು? ಪ್ರಕೃತಿಯ ನಾಶವೇ ಅಲ್ಲವೇ?.. 2018ರಲ್ಲಿ ಕೊಡಗಿನಲ್ಲಿ ಜಲಪ್ರಳಯ, ಭೂಕುಸಿತ, ಅಪಾರ ಪ್ರಮಾಣದ  ಆಸ್ತಿ ಪಾಸ್ತಿ ನಷ್ಟ, ನೂರಾರು ಜನರ ಪ್ರಾಣ ಹರಣ ಇದೆಲ್ಲವನ್ನು ನೋಡಿದ್ದೇವೆ ಅಲ್ಲವೇ!?

ಇಂದು ಮಡಿಕೇರಿಯಲ್ಲಿ ನಡೆಯುತ್ತಿರುವುದು ಅದೇ ದಾರಿಯ ಮೊದಲ ಹೆಜ್ಜೆಯಂತೆ ಇದೆ. ಕೊಡಗಿನ ಮಣ್ಣು ತುಂಬಾ ಸೂಕ್ಷ್ಮ. ಬೆಟ್ಟಗಳನ್ನು ಕಡಿದರೆ, ಕಾಡನ್ನು ಕಡಿದರೆ ಅದರ ಹೊಡೆತ ನೇರವಾಗಿ ಮಡಿಕೇರಿ ಪಟ್ಟಣದ ಮೇಲೆಯೇ ಬೀಳುತ್ತದೆ. ಪರಿಸರ ತಜ್ಞರು ಎಚ್ಚರಿಸುತ್ತಿರುವುದು ಇದನ್ನೇ. ಭೂಕುಸಿತ, ಪ್ರವಾಹದ ಅಪಾಯ ಹೆಚ್ಚಾಗುತ್ತದೆ. ಕಾವೇರಿಯ ಉಗಮಸ್ಥಾನಕ್ಕೆ ಆಗುವ ಹಾನಿ ಕೇವಲ ಕೊಡಗಿಗೆ ಮಾತ್ರವಲ್ಲ, ಕಾವೇರಿ ನೀರನ್ನು ನಂಬಿರುವ ಕೋಟ್ಯಂತರ ಜನರಿಗೂ ತಲುಪುತ್ತದೆ.

ಮುಂದಿನ ತಲೆಮಾರಿಗೆ ನಾವು ಯಾವ ಕೊಡಗನ್ನು ಕೊಡುತ್ತೇವೆ?  ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳು ನಾಶವಾದರೆ ಅದರ ಪರಿಣಾಮವನ್ನು ನಾವು ಮಾತ್ರವಲ್ಲ, ನಮ್ಮ ಮಕ್ಕಳು, ಮೊಮ್ಮಕ್ಕಳು ಅನುಭವಿಸಬೇಕಾಗುತ್ತದೆ. ಮಳೆಗಾಲದಲ್ಲಿ ಭೂಕುಸಿತ ಜಾಸ್ತಿಯಾಗುತ್ತೆ, ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರವಾಗುತ್ತೆ, ಹವಾಮಾನ ಬಿಸಿಯಾಗುತ್ತೆ, ಜೀವ ವೈವಿಧ್ಯ ನಾಶವಾಗುತ್ತೆ. ಇಂದು ನಾವು ಕಡಿಯುವ ಪ್ರತಿಯೊಂದು ಮರವೂ ನಾಳೆ ನಮ್ಮ ಮಕ್ಕಳ ಉಸಿರು, ನೀರು, ಸುರಕ್ಷತೆಯನ್ನು ಕಡಿಯುವುದಕ್ಕೆ ಸಮಾನ. ದೀರ್ಘಾವಧಿಯ ಬಗ್ಗೆ ಯೋಚನೆ ಮಾಡದೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ನಮ್ಮ ಮುಂದಿನ ಪೀಳಿಗೆಗೆ ಸಾಲವಾಗಿ ಉಳಿಯುತ್ತದೆ. ನಾವು ಅವರಿಗೆ ಕಾಂಕ್ರೀಟ್ ಕಾಡನ್ನು ಕೊಡಬೇಕಾ, ಅಥವಾ ಹಸಿರು ಕೊಡಗನ್ನು ಕೊಡಬೇಕಾ?

ಜನಸಂಖ್ಯೆ ಮತ್ತು ಸಂಸ್ಕೃತಿಯ ಪ್ರಶ್ನೆಯೂ ಇದೆ…  1200 ಸೈಟ್‌ಗಳೆಂದರೆ ಕೇವಲ ಜಾಗ ಅಲ್ಲ. ಅದರ ಜೊತೆ ಸಾವಿರಾರು ಹೊಸ ಮನೆಗಳು, ಹೊಸ ಜನ, ಹೊಸ ವಾಹನಗಳು, ಹೊಸ ಬೇಡಿಕೆಗಳು ಬರುತ್ತವೆ. ಕೊಡಗಿನ ಬೆಟ್ಟ-ಕಾಡು-ನೀರಿನ ವ್ಯವಸ್ಥೆ ತಡೆಯುವಷ್ಟು ಜನಸಂಖ್ಯೆ ನಮ್ಮಲ್ಲಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದ ವಸತಿ ಯೋಜನೆಯಿಂದ ಎಲ್ಲಿಂದಲೋ ಜನರು ಇಲ್ಲಿ ನೆಲೆ ನಿಂತರೆ ಜನಸಂಖ್ಯೆ ಸ್ಫೋಟವಾಗುತ್ತದೆ. ನೀರು, ರಸ್ತೆ, ತ್ಯಾಜ್ಯ ನಿರ್ವಹಣೆ ಎಲ್ಲವೂ ಒತ್ತಡಕ್ಕೆ ಸಿಲುಕುತ್ತದೆ.

ಅದಕ್ಕಿಂತ ದೊಡ್ಡ ಆತಂಕ ಏನೆಂದರೆ ನಮ್ಮ ಕೊಡಗಿನ ಸಂಸ್ಕೃತಿ, ಭಾಷೆ, ಬದುಕಿನ ವಿಧಾನ. ಎಲ್ಲರೂ ಬೆರೆತು ಬದುಕುವ ಈ ನೆಲದ ಗುರುತೇ ಬದಲಾಗುವ ಅಪಾಯವಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ನಮ್ಮ ಬೇರುಗಳನ್ನೇ ಕಳೆದುಕೊಂಡರೆ, ಉಳಿಯುವುದು ಕಟ್ಟಡಗಳು ಮಾತ್ರ. ನೆಲ ಉಳಿಯುತ್ತದೆ, ಆದರೆ ಕೊಡಗು ಉಳಿಯುವುದಿಲ್ಲ. ಇದನ್ನು ಮುನ್ನೆಚ್ಚರಿಕೆಯಾಗಿ ಯೋಚಿಸುವ ಅನಿವಾರ್ಯತೆ ಈಗ ನಮಗಿದೆ.

ನೆಲಜಿಯಿಂದ ನಾವು ಗೆದ್ದಿದ್ದು ಹೇಗೆ? ಜನ ಒಕ್ಕೊರಲಿನಿಂದ ಪ್ರಶ್ನಿಸಿದಾಗ. ನಮ್ಮ ಮಣ್ಣು, ನಮ್ಮ ನೀರು, ನಮ್ಮ ಭವಿಷ್ಯದ ಬಗ್ಗೆ ಮಾತಾಡಿದಾಗ. ಇಂದು ಮತ್ತೆ ಅದೇ ಪ್ರಶ್ನೆ ನಮ್ಮ ಮುಂದಿದೆ. ಅಭಿವೃದ್ಧಿ ಬೇಕು. ಆದರೆ ಅದು ನಮ್ಮ ಬೇರುಗಳನ್ನು ಕಡಿದು ಮಾಡುವಂತಿರಬಾರದು. ನಾವು ನೆಲಜಿಯಿಂದ ಏನನ್ನು ಕಲಿತೆವು? ಪ್ರಕೃತಿಯೊಂದಿಗೆ ಚೆಲ್ಲಾಟವಾಡಿದರೆ ಅದರ ಬೆಲೆಯನ್ನು ನಮ್ಮ ಮಕ್ಕಳು ತೆರಬೇಕಾಗುತ್ತದೆ ಎಂದು.

ನೆನಪಿರಲಿ.. ಕೊಡಗು ಉಳಿದರೆ ಮಾತ್ರ ಕಾವೇರಿ ಉಳಿಯುತ್ತದೆ.  ಕಾವೇರಿ ಉಳಿದರೆ ನಮ್ಮೆಲ್ಲರ ಬದುಕು ಉಳಿಯುತ್ತದೆ. ನೆಲಜಿಯಲ್ಲಿ ನಾವು ಒಟ್ಟಾಗಿ ನಿಂತು ತೋರಿಸಿಕೊಟ್ಟೆವು. ಈಗ ಮತ್ತೊಮ್ಮೆ ಯೋಚಿಸುವ, ಮಾತಾಡುವ, ಪ್ರಶ್ನಿಸುವ ಸಮಯ ಬಂದಿದೆ. ಇಲ್ಲದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಜನರಿಂದ ಜನರಿಗಾಗಿ ಜನ ಜಾಗೃತಿಗಾಗಿ ಪರಿಸರದ ಉಳಿವಿಗಾಗಿ ನಾವು ಧ್ವನಿ ಎತ್ತೋಣ..

ನೆಲಜಿಯ ಕಣ್ಣೀರು ಕರೆದಾಗಕೊಡಗು ಎಚ್ಚೆತ್ತುಕೊಳ್ಳುವ ಸಮಯಏನಿದು ಸ್ಟೋರಿ..?

“ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?

admin
the authoradmin

Leave a Reply