ArticlesLatest

ನೀವು ನವದಂಪತಿಗಳೇ…. ಹಾಗಿದ್ದರೆ ಚಾಮರಾಜನಗರದಲ್ಲಿ ನಡೆಯುವ ಆಷಾಢದ ಜಾತ್ರೆಗೆ ತಪ್ಪದೆ ಬನ್ನಿ!

ಚಾಮರಾಜನಗರ: ಇದು ಚಾಮರಾಜನಗರದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಜಾತ್ರೆ.. ಬಹುಶಃ ಇಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಇಂತಹದೊಂದು ಜಾತ್ರೆಯನ್ನು ನೋಡಲು ಸಾಧ್ಯವಿಲ್ಲ.. ಅದರಲ್ಲೂ ಈ ಜಾತ್ರೆಯಲ್ಲಿ ನವದಂಪತಿಗಳೇ ನೆರೆದು ರಥಕ್ಕೆ ಹಣ್ಣು ದವನ ಎಸೆದು ಹರಕೆ ತೀರಿಸುವುದು ಮತ್ತೊಂದು ವಿಶೇಷವಾಗಿದೆ.

ಪ್ರತಿ ವರ್ಷವೂ ಆಷಾಢದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವಕ್ಕೆ ಚಾಮರಾಜನಗರ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೆರೆ ರಾಜ್ಯ ತಮಿಳುನಾಡಿನಿಂದಲೂ ಭಕ್ತರು ಆಗಮಿಸುವುದು ವಿಶೇಷವಾಗಿದೆ. ಈ ಬಾರಿ ಜುಲೈ 28ರಂದು ರಥೋತ್ಸವ ನಡೆಯುತ್ತಿದೆ.

ಒಂದು ಕಾಲದಲ್ಲಿ ಮೈಸೂರಿನೊಂದಿಗೆ ವಿಲೀನಗೊಂಡಿದ್ದ ಚಾಮರಾಜನಗರ  ಬಳಿಕ ಜಿಲ್ಲೆಯಾಗಿ ರೂಪುಗೊಂಡಿದೆ. ಇವತ್ತು ಚಾಮರಾಜನಗರ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಗಮನಸೆಳೆಯುತ್ತದೆ. ಚಾಮರಾಜೇಶ್ವರ ರಥೋತ್ಸವದ ಬಗ್ಗೆ ಹೇಳುವ ಮುನ್ನ ಚಾಮರಾಜನಗರದ ಇತಿಹಾಸದ ಬಗ್ಗೆ ಮೆಲುಕು ಹಾಕಬೇಕಾಗುತ್ತದೆ’ ಚಾಮರಾಜನಗರದ ಮೊದಲ ಹೆಸರು ಅರಿಕುಠಾರ… ಚಾಮರಾಜನಗರವಾಗಿ ಬದಲಾಗಿದ್ದು 1818ರಲ್ಲಿ…

01ಮಾರ್ಚ್ 1774 ರಂದು ಖಾಸ ಚಾಮರಾಜ ಒಡೆಯರ್ ಜನಿಸಿದ ನೆನಪಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು 1818ರಲ್ಲಿ ಚಾಮರಾಜನಗರ ಎಂದು ನಾಮಕರಣ ಮಾಡಿದರು. ಕಾಲ ನಂತರ1826 ರಲ್ಲಿ ಖಾಸ ಚಾಮರಾಜ ಒಡೆಯರ ಸವಿನೆನಪಿಗಾಗಿ ರಾಜತ್ವ – ಈಶ್ವರತ್ತ ಇರುವ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಿರುವುದು ವಿಶೇಷವಾಗಿದೆ.

ಈ ದೇವಾಲಯದ ಬಗ್ಗೆ ಹೇಳುವುದಾದರೆ ಇದು ಶೈವಾಗಮ ದ್ರಾವಿಡ ಶೈಲಿಯಲ್ಲಿದ್ದು, ದೇಗುಲದ ಈಶ್ವರನ ಗುಡಿಯ ಇಕ್ಕೆಲಗಳಲ್ಲಿ ಮೈಸೂರು ಅರಸರ ಕುಲ ದೇವತೆಯಾದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಕೆಂಪನಂಜಾಂಬ ಹೆಸರಿನ ಅಮ್ಮನವರ ಗುಡಿ ಇದೆ. ಶ್ರೀ ನಾರಾಯಣಸ್ವಾಮಿ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ಪ್ರಸನ್ನ ನಂಜರಾಜೇಶ್ವರ (ಮುಮ್ಮಡಿ ಕೃ?ರಾಜರ ನೆನಪಿಗಾಗಿ), ಶ್ರೀ ಸಹಸ್ರ ಲಿಂಗೇಶ್ವರ, ಶ್ರೀ  ಅರ್ಧನಾರೀಶ್ವರ, ಶ್ರೀ ಮಾಕಾಂಡೇಶ್ವರ, ಶ್ರೀ ಲಿಂಗೋದ್ಭವಮೂರ್ತಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇನ್ನು ಪೂರ್ವ ಭಾಗದ ಕಡೆಗೆ ಎಲ್ಲ  ಈಶ್ವರನ ಶಿವಲಿಂಗಗಳು ಮತ್ತು ಉತ್ತರ ಕಡೆಯ ಸಾಲುಗುಡಿಯಲ್ಲಿ ಈಶ್ವರನ ವಿವಿಧ ಲೀಲಾಮೂರ್ತಿಗಳು, ಬೃಹದಾಕರದ ನಂದಿ, ಬೃಹದಾಕಾರದ ಮಹಾದ್ವಾರವುಳ್ಳ ಮುಂಛಾವಣಿ, ಮುಖಮಂಟಪವುಳ್ಳ ಪಂಚಕಳಶಗಳ ದ್ರಾವಿಡ ಶೈಲಿಯ ರಾಜಗೋಪುರ ಮುಂದೆ ಏಕಶಿಲಾ ನಂದಿಕಂಬವಿದೆ. ದೇವಾಲಯದ ಪ್ರಾಕಾರದ ದಕ್ಷಿಣಾಭಾಗದಲ್ಲಿ 63 ಶೈವ ಪುರಾತನರ ಸಾಲುಗಳಿವೆ.

ಪಶ್ಚಿಮದ ದಿಕ್ಕಿನ ಸಾಲು ಗುಡಿಗಳಲ್ಲಿ ಮುದ್ದಾದ ವಿವಿಧ ಶಿವಲಿಂಗಗಳು, ಉತ್ತರ ಭಾಗದ ಸಾಲುಗುಡಿಗಳಲ್ಲಿ ಶಿವನ 25ಲೀಲೆಗಳು, ಕಲ್ಲಿನ ಕಂಬಗಳು ಅವುಗಳ ಮೇಲೆ ಉಬ್ಬು ಶಿಲ್ಪಗಳು, ಭವ್ಯವಾದ ದ್ವಾರಪಾಲಕರ ಶಿಲ್ಪಗಳಿವೆ. ಮುಖ್ಯ ಮುಖಮಂಟಪದಲ್ಲಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಪತ್ನಿಯರ ವಿಗ್ರಹಗಳು, ಉತ್ತಮ ಶಿಲಾನ್ಯಾಸ ಹಾಗೂ ದೇವಾಲಯದ ಹೊರಭಾಗದಲ್ಲಿನ ದೇವರ ಗೂಡುಗಳು, ಉತ್ತರದ ಕಡೆಗೆ ಇರುವ ಹೊರಭಾಗದಲ್ಲಿ ಗಣಪತಿಯ ವಿವಿಧ ಲೀಲೆಗಳ ಅವತಾರಗಳುಳ್ಳ ದೇವಕೋಷ್ಟಕಗಳು ದೇವಾಲಯದ ಇತಿಹಾಸಕ್ಕೆ ಇನ್ನಷ್ಟು ಮೆರುಗು ನೀಡುವಂತಿವೆ.

ಶ್ರೀ ಚಾಮುಂಡೇಶ್ವರಿ ವಿಗ್ರಹ ಧಾರವಾಡದ್ದು, ಶ್ರೀ ನಾರಾಯಣಸ್ವಾಮಿ ವಿಗ್ರಹ ಶ್ರೀರಂಗಪಟ್ಟಣದ ಬಳಿ ಇರುವ ಬಲಮುರಿಯದು, ಶ್ರೀ ಪಾರ್ವತಿಯ ವಿಗ್ರಹ ಮೈಸೂರಿನದು, ಮುಖ್ಯ ಶಿವಲಿಂಗ ಶೃಂಗೇರಿ ಮಠದ್ದು ಹಾಗೂ ಕೆಲವು ವಿಗ್ರಹಗಳು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯದಾಗಿರುವುದರಿಂದ ಈ ದೇವಾಲಯ ಕರ್ನಾಟಕವನ್ನು ಪ್ರತಿನಿಧಿಸುವಂತೆ ಭಾಸವಾಗುತ್ತದೆ.

ಒಟ್ಟಾರೆ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ದೇವಾಲಯವು ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದು, ಇಲ್ಲಿ ನಡೆಯುವ ಜಾತ್ರೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿ ಗಮನಸೆಳೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

 

B M Lavakumar

admin
the authoradmin

Leave a Reply