LatestNews

ಕುಶಾಲನಗರದಲ್ಲಿ  ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ತರಬೇತಿ ಶಿಬಿರಕ್ಕೆ ಚಾಲನೆ

ಕುಶಾಲನಗರ (ಆರ್ ಹೆಚ್): ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ, ರಾಷ್ಟ್ರ ಭಕ್ತಿ, ಉತ್ತಮ ನಾಯಕತ್ವ ಗುಣ, ಸಹನೆ, ತಾಳ್ಮೆಯ ಶಕ್ತಿಯನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದು ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಹೇಳಿದರು.

ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಕುಶಾಲನಗರ ಸ್ಥಳೀಯ  ಸಂಸ್ಥೆಯ ವತಿಯಿಂದ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಏರ್ಪಡಿಸಿರುವ ಏಳು ದಿನಗಳ  ಸ್ಕೌಟ್ಸ್,ಗೈಡ್ಸ್, ರೋವರ್ಸ್  ಮತ್ತು ರೇಂಜರ್ಸ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ರಾಜ್ಯದಲ್ಲಿ 8.5 ಲಕ್ಷ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಾಗಿರಿಸಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸೇವಾ ಮನೋಭಾವವುಳ್ಳ ಶಿಸ್ತುಬದ್ಧ ಸಮಾಜ ನಿರ್ಮಿಸುವುದು. ಅಭಿವೃದ್ಧಿಯನ್ನು ಎಲ್ಲೆಡೆ ಪಸರಿಸುವುದು ನಮ್ಮ ಗುರಿಯಾಗಬೇಕು. ಈ ದಿಸೆಯಲ್ಲಿ ಸ್ಕೌಟ್ಸ್,ಗೈಡ್ಸ್, ರೋವರ್ಸ್  ಮತ್ತು ರೇಂಜರ್ಸ್ ತರಬೇತಿ ನಿರತ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ವಿದ್ಯಾರ್ಥಿ ಸಮುದಾಯದಲ್ಲಿ ಶಿಸ್ತು, ಪ್ರಾಮಾಣಿಕತೆ, ಉತ್ತಮ ನಾಯಕತ್ವ ಹಾಗೂ ರಾಷ್ಟ್ರೀಯ ಪ್ರಜ್ಞೆ ಬೆಳೆಸುವಲ್ಲಿ ವಿಶೇಷ ಗಮನಹರಿಸಬೇಕು ಎಂದು ಪಿ.ಜಿ.ಆರ್.ಸಿಂಧ್ಯ ಹೇಳಿದರು.

ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದಾಗಬೇಕು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಲು ತುಂಬಾ ಸಹಕಾರಿಯಾಗಿವೆ. ಶಿಸ್ತಿಗೆ ಹೆಸರಾದ ಕೊಡಗಿನಲ್ಲಿ  ಸೇನಾ ಕ್ಷೇತ್ರದ ದಿಗ್ಗಜರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾದುದು ಎಂದರು.

ರಾಜ್ಯ ಸಂಸ್ಥೆಯ ಸ್ಕೌಟ್ ವಿಭಾಗದ  ಸಹಾಯಕ ಆಯುಕ್ತ ಬಿ.ಕೆ.ಬಸವರಾಜ್ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಶಿಸ್ತು ಹಾಗೂ ಭಾವೈಕ್ಯ ಕಲಿಸುವುದೇ ಮುಖ್ಯ.  ಶಿಕ್ಷಕರು ಶಾಲೆಗಳಲ್ಲಿ  ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ  ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್  ಸಂಸ್ಥೆಯ ಘಟಕಗಳನ್ನು ಸ್ಥಾಪಿಸುವ ಮೂಲಕ  ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ಮತ್ತು ಉತ್ತಮ ಜೀವನ ಕೌಶಲ್ಯಗಳನ್ನು ಬೆಳೆಸಲು ಇಂತಹ ಶಿಬಿರಗಳು  ಸಹಕಾರಿಯಾಗಿವೆ ಎಂದರು.

ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ, ತರಬೇತಿಗಳ ಮೂಲಕ ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿ ಸಮುದಾಯದಲ್ಲಿ ಉತ್ತಮ ವ್ಯಕ್ತಿತ್ವ ಮತ್ತು ನಾಯಕತ್ವ  ಗುಣ ಬೆಳೆಸಲಾಗುತ್ತಿದೆ ಎಂದರು.

ಈ ಸಂದರ್ಭ ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ,ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ, ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಜಿಲ್ಲಾ ಸ್ಕೌಟ್ಸ್ ನ ಆಯುಕ್ತ ಜಿಮ್ಮಿ ಸಿಕ್ವೇರಾ,ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್

ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಕೋಶಾಧಿಕಾರಿ ಟಿ.ಎಂ.ಮುದ್ದಯ್ಯ, ಸ್ಕೌಟ್ಸ್ ನ ಆಯುಕ್ತ ಕೆ.ಯು.ರಂಜಿತ್, ರೋವರ್ಸ್ ಲೀಡರ್ ಬಾಲಕೃಷ್ಣ ನಾಯ್ಡು, ಗೈಡ್ ಲೀಡರ್ ಪಿ.ಎಚ್.ಅಲೀಮ, ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತರಾದ ಸಿ.ಎಂ.ಸುಲೋಚನಾ, ಕೆ.ಬಿ.ಗಣೇಶ್,ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಮತ್ತು ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಧನಂಜಯ, ಕಾರ್ಯದರ್ಶಿ ಕೆ.ಬಿ. ಉಷಾರಾಣಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಇಂದಿರಾ, ಖಜಾಂಚಿ ಎನ್.ಎಸ್. ನರೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಪಾಲ್ಗೊಂಡಿದ್ದರು.

ಕೆ.ಯು.ರಂಜಿತ್  ಸ್ವಾಗತಿಸಿದರು. ಯು.ಸಿ.ದಮಯಂತಿ ವಂದಿಸಿದರು.  ಪಿ.ಎಚ್.ಅಲೀಮ ನಿರ್ವಹಿಸಿದರು.

admin
the authoradmin

Leave a Reply