LatestMysore

ದಲಿತರ ರಾಜಕೀಯ ಪ್ರಾತಿನಿಧ್ಯಕ್ಕೆ ಧ್ವನಿಯಾಗದ ಶಾಸಕರಿಂದ ರಾಜಕೀಯ ಮೈಲೇಜ್ ಪಡೆಯುವ ಪ್ರಯತ್ನ: ಜೆ. ಮಹದೇವ

ಹುಣಸೂರು(ಮನುಕುಮಾರ್): ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿಗೆ ಪರಿಶಿಷ್ಟ ಜಾತಿಗೆ ಮೀಸಲಾತಿ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ, ಕ್ಷೇತ್ರವನ್ನು ಮರುಸ್ಥಾಪಿಸಲು ಸ್ಥಳೀಯ ಶಾಸಕ ಜಿ.ಡಿ. ಹರೀಶ್ ಗೌಡ ಅವರು ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಯಾವುದೇ ಪರಿಣಾಮಕಾರಿ ಪ್ರಯತ್ನ ನಡೆಸದೆ, ದಲಿತರ ಪರವಾಗಿ ಸಹಾನುಭೂತಿ ತೋರಿಸುವ ಮೂಲಕ ರಾಜಕೀಯ ಮೈಲೇಜ್ ಪಡೆಯಲು ಮುಂದಾಗಿದ್ದಾರೆ ಎಂದು ಸೋಶಿಯಲ್ ಜಸ್ಟಿಸ್ ಫೋರಂ ಜಿಲ್ಲಾ ಅಧ್ಯಕ್ಷ ಜೆ. ಮಹದೇವ ಆರೋಪಿಸಿದರು.

ನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದೆ. ಹುಣಸೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಯಾವುದೇ ಕ್ಷೇತ್ರ ಮೀಸಲಿಡದಿರುವುದು ದಲಿತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಸಂಬಂಧ ಪ್ರತಿಭಟನೆಗಳೂ ನಡೆದಿವೆ ಎಂದರು.

ದಲಿತರ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿ, ಸಮುದಾಯದ ಪರವಾಗಿ ಧ್ವನಿ ಎತ್ತಿದ್ದ ಶಾಸಕರು, ಇದೀಗ ಪ್ರಜಾಸತ್ತಾತ್ಮಕ ಹಾಗೂ ಆಡಳಿತಾತ್ಮಕ ಹಂತದಲ್ಲಿ ಕ್ಷೇತ್ರ ಮರುಸ್ಥಾಪನೆಗೆ ಪ್ರಯತ್ನಿಸುವ ವಿಚಾರದಲ್ಲಿ ಮೌನವಾಗಿದ್ದಾರೆ. ಪ್ರತಿಭಟನೆಗಳಲ್ಲಿ ಭಾಗವಹಿಸುವುದಷ್ಟೇ ದಲಿತರ ಪರ ಕಾಳಜಿಯಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕರು ಸರ್ಕಾರದೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸಿ, ಕಾನೂನುಬದ್ಧವಾಗಿ ದಲಿತರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಶಾಸಕರಿಗೆ ನಿಜವಾಗಿಯೂ ದಲಿತರ ರಾಜಕೀಯ ಹಕ್ಕುಗಳ ಬಗ್ಗೆ ಕಾಳಜಿ ಇದ್ದರೆ, ಕೇವಲ ಸಾರ್ವಜನಿಕ ಪ್ರತಿಭಟನೆಗಳಿಗೆ ಸೀಮಿತವಾಗದೆ, ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದಲಿತರ ಪರವಾಗಿ ಮಾತನಾಡುತ್ತಲೇ ಕ್ಷೇತ್ರ ಮರುಸ್ಥಾಪನೆಗೆ ಅಗತ್ಯ ಪ್ರಯತ್ನ ನಡೆಸದಿರುವುದು ಅವರ ಇಬ್ಬಗೆ ನಿಲುವನ್ನು ತೋರಿಸುತ್ತದೆ. ಈ ವಿಚಾರವನ್ನು ಪ್ರಜ್ಞಾವಂತ ದಲಿತರು ಅರ್ಥಮಾಡಿಕೊಳ್ಳಬೇಕು ಎಂದು ಮಹದೇವ ಟೀಕಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಕೈತಪ್ಪಿರುವ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮರುಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಮೀಸಲಾತಿ ವಿಚಾರವಾಗಿ ಈಗಾಗಲೇ ಗ್ರಾಮೀಣಾಭಿವೃದ್ಧಿ ಸಚಿವರು, ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ಚುನಾವಣಾ ಆಯುಕ್ತರನ್ನು ನಿರಂತರವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಹುಣಸೂರು ತಾಲೂಕಿನಲ್ಲಿ ಕನಿಷ್ಠ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡುವಂತೆ ಶ್ರಮಿಸುತ್ತಿರುವ ಅವರ ಪ್ರಯತ್ನವನ್ನು ಅಭಿನಂದಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹುಣಸೂರು ತಾಲೂಕು ಅಧ್ಯಕ್ಷ ವೇಣುಕುಮಾರ್ ಹಾಗೂ ಅಹಿಂದ ಜನಜಾಗೃತಿ ವೇದಿಕೆ ಅಧ್ಯಕ್ಷ ಡೇವಿಡ್ ರತ್ನಪುರಿ ಉಪಸ್ಥಿತರಿದ್ದರು

admin
the authoradmin

ನಿಮ್ಮದೊಂದು ಉತ್ತರ