ಗುರು… ದಿಕ್ಕು ತಪ್ಪಿದ ಬದುಕಿನ ದೀಪಸ್ತಂಭ… ಕತ್ತಲ ಹಾದಿಯಲ್ಲಿ ಮುನ್ನಡೆಸುವ ಮಹಾಬೆಳಕು
ಜುಲೈ 29 ಗುರುಪೂರ್ಣಿಮೆ….

ಇವತ್ತು ನಾವು ಏನಾಗಿದ್ದೇವೆಯೋ ಅದಕ್ಕೆ ನಮ್ಮ ಹೆತ್ತವರು ಕೊಟ್ಟ ಸಂಸ್ಕಾರ.. ಗುರುಗಳು ನೀಡಿದ ಶಿಕ್ಷಣ ಮತ್ತು ಮಾರ್ಗದರ್ಶನ ಕಾರಣವಾಗಿರುತ್ತದೆ… ಅದರಾಚೆಗೆ ನಮ್ಮ ಬದುಕಿನಲ್ಲಿ ಒಂದಷ್ಟು ಮಂದಿ ಬಂದು ಹೋಗಿರುತ್ತಾರೆ. ಆದರೆ ಕೆಲವರು ನಾವು ಜೀವನ ಪೂರ್ತಿ ನೆನಪಿಸಿಕೊಳ್ಳುವ ಮತ್ತು ತೀರಿಸಲಾಗದ ಋಣವನ್ನು ನಮ್ಮ ಮೇಲೆ ಹೇರಿ ಬಿಟ್ಟಿರುತ್ತಾರೆ… ಅವರನ್ನು ನಾವು ಸ್ಮರಿಸದೆ ಹೋದರೆ ಅದು ನಮಗೆ ನಾವು ಮಾಡಿಕೊಳ್ಳುವ ಮಹಾವಂಚನೆಯಾಗಿ ಬಿಡುತ್ತದೆ..
ಗುರುಪೂರ್ಣಿಮೆ ದಿನ ನಿಮ್ಮೆಲ್ಲ ಜಂಜಾಟಗಳ ನಡುವೆ ಒಂದಷ್ಟು ಸಮಯವನ್ನು ಮೀಸಲಿಟ್ಟು ಬಾಲ್ಯದಿಂದ ಇಲ್ಲಿ ತನಕದ ಜೀವನದ ಕ್ಷಣಗಳನ್ನು ಮೆಲುಕು ಹಾಕಿ ನೋಡಿ… ಅಕ್ಷರ ಕಲಿಕೆಯಿಂದ ಬದುಕು ಕಟ್ಟಿಕೊಳ್ಳುವ ತನಕದ ಅಂತರದಲ್ಲಿ ಅದೆಷ್ಟೋ ಜನ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡಿರುತ್ತಾರೆ. ಮತ್ತು ಅವರೀಗ ನಮ್ಮ ಬದುಕಿಗೊಂದು ದೀಪಸ್ತಂಭದಂತೆ ಗೋಚರಿಸುತ್ತಾರೆ…
ನಮ್ಮ ಬದುಕಿನಲ್ಲಿ ಕಷ್ಟದ ದಿನಗಳಲ್ಲಿ ಜತೆಗಿದ್ದವರು ಸುಖದ ದಿನಗಳಲ್ಲಿ ಇಲ್ಲದೆಯೂ ಇರಬಹುದು.. ಆದರೀಗ ಅವರೊಂದಿಗಿದ್ದ ದಿನಗಳನ್ನು ನೆನಪು ಮಾಡುಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರೆ ತಪ್ಪಾಗಲಾರದು.. ಜೀವನದಲ್ಲಿ ಓದಿ ಯಾವುದಾದರೊಂದು ಕೆಲಸ ಹಿಡಿದು ಬದುಕಿನಲ್ಲಿ ಸೆಟ್ಲ್ ಆದವರು ಬಹಳಷ್ಟು ಜನರಿದ್ದಾರೆ.. ಆದರೆ ಪತ್ರಕರ್ತ ರವಿಬೆಳಗೆರೆ ಹೇಳುವಂತೆ ಹೋಟೆಲ್ ನಲ್ಲಿ ಮಾಣಿ ಕೆಲಸ ಮಾಡ್ತಾ.. ಮಾಡ್ತಾ ಹೋಟೆಲ್ ಮಾಲೀಕ ನಾಗೋದು, ಕಟ್ಟಿಗೆ ಕಡಿಯುತ್ತಾ ಒಂದು ದಿನ ಟಿಂಬರ್ ಮರ್ಚೆಂಟ್ ಆಗೋದು ಸುಲಭವಲ್ಲ.. ಅಂಥವರು ಕೆಲವೇ ಕೆಲವು ಜನ ಮಾತ್ರ ಸಿಗುತ್ತಾರೆ… ಮತ್ತು ಅವರು ಎಲ್ಲ ಕ್ಷೇತ್ರದಲ್ಲಿಯೂ ಇರುತ್ತಾರೆ..

ಇವತ್ತು ಪೇಪರ್ ಹಂಚುವ ಹುಡುಗ ನಾಳೆ ಅಬ್ದುಲ್ ಕಲಾಂ ಆಗಬೇಕೆಂದೇನೂ ಇಲ್ಲ… ಆದರೆ ಆತ ಅಂಥಹದ್ದೊಂದು ಗುರಿಯಿಟ್ಟು ಮುನ್ನಡೆಯಬೇಕಷ್ಟೆ… ತುಂಬಾ ಸಲ ನಾವೇನು ಆಗಬೇಕೆಂದು ಕೊಂಡಿದ್ದೇವೆಯೋ ಅದು ಆಗದೆ ಇನ್ನೇನೋ ಆಗಬಹುದು.. ಒಮ್ಮೊಮ್ಮೆ ಬದುಕು ಕೂಡ ಬಿರುಗಾಳಿಗೆ ಸಿಕ್ಕಿ ದಿಕ್ಕು ತಪ್ಪುವ ಹಡಗಿನಂತೆ… ಎಲ್ಲಿಂದ ಇನ್ನೆಲ್ಲಿಗೋ ಕೊಂಡೊಯ್ಯಬಹುದು.. ಆದರೆ ದಿಕ್ಕು ತಪ್ಪಿದ ಹಡಗಿಗೆ ಮಾರ್ಗ ತೋರಿಸೋ ‘ಗೈರೊ ದಿಕ್ಸೂಚಿ’ಯಂತೆ ಯಾರೋ ಒಬ್ಬರು ನಮ್ಮ ಬದುಕಿಗೆ ಬಂದೇ ಬರುತ್ತಾರೆ… ಕತ್ತಲ ಹಾದಿಯಲ್ಲಿ ಮಿಂಚಿನ ಬೆಳಕಂತೆ….
ಹಾಗೆ ಬರುತ್ತಾರಲ್ಲ ಅವರು ಸಂಗಾತಿಯೋ, ಅಪರಿಚಿತರೋ, ಹಿತೈಷಿಗಳೋ, ಗೆಳೆಯ ಗೆಳತಿಯರೋ, ಸಂಬಂಧಿಕರು ಹೀಗೆ ಯಾರೋ ಒಬ್ಬರಾಗಿರುತ್ತಾರೆ.. ಅದಕ್ಕಿಂತ ಹೆಚ್ಚಾಗಿ ನಿಸ್ವಾರ್ಥಿಗಳಾಗಿರುತ್ತಾರೆ. ನಿಸ್ವಾರ್ಥಿಗಳಿಗಷ್ಟೇ ಮತ್ತೊಬ್ಬರ ಬದುಕಿಗೆ ಬೆಳಕಾಗುವ ಶಕ್ತಿಯಿರುವುದು… ಅಂತಹ ಶಕ್ತಿಗಳನ್ನು ನೆನಪಿಸಿಕೊಳ್ಳದೆ ಹೋದರೆ ಗುರುಪೂರ್ಣಿಮೆಗೆ ಅರ್ಥ ಬರುವುದಿಲ್ಲ. ಇಷ್ಟಕ್ಕೂ ಗುರುಪೂರ್ಣಿಮೆ ಬಗ್ಗೆ ಒಂದಷ್ಟು ಹೇಳದೆ ಹೋದರೆ ಹೇಗೆ?

ವೇದವ್ಯಾಸ ಮಹರ್ಷಿಗಳ ಜನ್ಮದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಇದನ್ನು ವ್ಯಾಸ ಪೂರ್ಣಿಮೆ ಎಂದು ಕೂಡ ಕರೆಯಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ ಇದಾಗಿದೆ. ಜ್ಞಾನ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೋಧಿಸಿದ ಗುರುಗಳನ್ನು ಗೌರವಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಮೊದಲೆಲ್ಲ ಶಿಕ್ಷಣ ಗುರುಕುಲದಲ್ಲಿ ಆಗುತ್ತಿತ್ತು. ಹೀಗಾಗಿ ಗುರುಗಳ ಪ್ರಿಯ ಶಿಷ್ಯರಾಗುವುದು ಕೆಲವರಿಂದಷ್ಟೆ ಸಾಧ್ಯವಾಗುತ್ತಿತ್ತು.
ಮಠಗಳು, ಆಶ್ರಮಗಳು ನಮಗೆ ದಾರಿ ದೀಪವಾಗುತ್ತಾ ಬಂದಿವೆ. ಜನರಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ಬಂದಿರುವ ಮತ್ತು ಕಾಲವಾಗಿ ಹೋಗಿರುವ ಸಾವಿರಾರು ಗುರುಗಳು ಸ್ಮರಣೀಯರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮಠಮಾನ್ಯಗಳಿವೆ. ಹಾಗೆಯೇ ಗುರುಗಳ ಸ್ಥಾನಗಳಲ್ಲಿ ನಿಂತವರು ಪರಿಶುದ್ಧರಾಗಿರಬೇಕು. ಇತ್ತೀಚೆಗಿನ ಹಲವು ಘಟನೆಗಳು ಮತ್ತು ವರ್ತನೆಗಳು ಗುರುಗಳ ಗೌರವಕ್ಕೆ ಚ್ಯುತಿ ತರುವಂತೆ ಮಾಡಿದೆ ಎನ್ನುವುದು ಕೂಡ ಅಷ್ಟೇ ಸತ್ಯ.. ಪುರಾಣ ಕಾಲದಿಂದ ಇಲ್ಲಿಯ ತನಕ “ಗುರು ಎಂದರೆ ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕು ನೀಡುವವರು” ಎಂದು ನಂಬಿಕೊಂಡು ಬಂದಿದ್ದೇವೆ. ಹೀಗಿರುವಾಗ ಗುರುಗಳು ಅದನ್ನು ಮರೆಯದಿದ್ದರೆ ಗುರುಪರಂಪರೆಗೆ ಒಳಿತು.
ಅದು ಏನೇ ಇರಲಿ… ಅಕ್ಷರ ಕಲಿಸಿದ ಶಿಕ್ಷಕ, ಶಿಕ್ಷಕಿಯರು, ಬದುಕೋದನ್ನು ಹೇಳಿಕೊಟ್ಟವರು.. ಹೀಗೆ ಪ್ರತಿ ಹಂತದಲ್ಲಿ ಬದುಕಿಗೆ ಮಾರ್ಗದರ್ಶನ ಮಾಡಿದ ಮತ್ತು ಮಾಡುತ್ತಿರುವ ಎಲ್ಲರೂ ನಮ್ಮ ಪಾಲಿನ ಗುರುಗಳೇ ಅವರಿಗೊಂದು ಪ್ರೀತಿಯ ನಮನ ಸಲ್ಲಿಸಿ ಬಿಡೋಣ…. ಮತ್ತೊಮ್ಮೆ ಗುರುಪೂರ್ಣಿಮೆಯ ಶುಭಾಶಯಗಳು…
ಬಿ.ಎಂ.ಲವಕುಮಾರ್







