CrimeLatestPolitical

ತಿ.ನರಸೀಪುರ ಇನ್ಸ್ ಪೆಕ್ಟರ್ ಧಮ್ಕಿ… ಶುರುವಾಯ್ತು ರಾಜಕೀಯ ಆಟ.. ಹರಾಜಾಯಿತು ಮಾನ

ಮೈಸೂರು ಜಿಲ್ಲೆಯ ತಿ.ನರಸೀಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಧನಂಜಯ್ ಆಡಿದ ಅದೊಂದು ದರ್ಪದ ಮಾತು ಇದೀಗ ಇಡೀ ಕರ್ನಾಟಕದಲ್ಲಿ ಸಂಚಲವನ್ನುಂಟು ಮಾಡಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ… ಜತೆ ಜತೆಗೆ ಈ ಹಿಂದೆ ಮಾಡಿದ ಎಡವಟ್ಟುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ.. ಗ್ರಹಚಾರ ಬಿಡಿಸ್ತೇನೆ ಎಂದ ಇನ್ಸ್ ಪೆಕ್ಟರ್ ಗೆ ಗ್ರಹಚಾರ ಸುತ್ತಿಕೊಂಡಿದೆ.  ಹಿಂದೂ ಸಂಘಟನೆಗಳು ಸವಾಲ್ ಆಗಿ ಸ್ವೀಕರಿಸಿ ಬೃಹತ್ ಶೋಭಾಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ… ಅದಕ್ಕೆ ಬಿಜೆಪಿ ಕೈಜೋಡಿಸುತ್ತಿದೆ… ಇದೆಲ್ಲ ಬೇಕಿತ್ತಾ?

ಇನ್ಸ್ ಪೆಕ್ಟರ್ ಧನಂಜಯ ಮಾಡಿದ ಎಡವಟ್ಟಿನಿಂದಾಗಿ  ಆತನ ಮಾನ ಮಾತ್ರ  ಹರಾಜು ಆಗುತ್ತಿಲ್ಲ ಸರ್ಕಾರಕ್ಕೆ ತಲೆನೋವು, ಪೊಲೀಸ್ ಇಲಾಖೆಗೆ ಮುಜುಗರ,  ಬಿಜೆಪಿಗೆ ರಾಜಕೀಯ ಲಾಭ… ಹೀಗೆ ಎಲ್ಲವೂ ಏಕಕಾಲದಲ್ಲಿ ಆಗುವುದರೊಂದಿಗೆ ತಿ.ನರಸೀಪುರ ರಾಜ್ಯದಾದ್ಯಂತ ಸುದ್ದಿಯಾಗಿದೆ.

ಹಬ್ಬಹರಿದಿನಗಳು ಬಂದಾಗ ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲದೆ ಸಾಮಾನ್ಯವಾಗಿ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಸರ್ವ ಜನಾಂಗದ ಮುಖಂಡರನ್ನು ಕರೆಯಿಸಿ ಶಾಂತಿಯುತವಾಗಿ ಹಬ್ಬದ ಆಚರಣೆ ನಡೆಸುವಂತೆ ಮನವಿ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಮತ್ತು ಅದನ್ನು ಸಾರ್ವಜನಿಕವಾಗಿ ಮನದಟ್ಟು ಮಾಡುವ  ರೀತಿ ನೀತಿಗಳು ಇರುತ್ತವೆ.

ಆದರೀಗ ತಿ.ನರಸೀಪುರ ಇನ್ಸ್ ಪೆಕ್ಟರ್ ಈ ವಿಚಾರದಲ್ಲಿ ನಡೆದುಕೊಂಡ ರೀತಿ ಸಾರ್ವಜನಿಕರು, ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಗಣೇಶೋತ್ಸವ ಸಮಿತಿಗಳ ಆಕ್ರೋಶಕ್ಕೆ ಕಾರಣವಾಗುವಂತೆ ಮಾಡಿ ಬಿಟ್ಟಿದೆ. ಅಷ್ಟೇ ಅಲ್ಲದೆ ರಾಜಕೀಯಕ್ಕೆ ತಿರುಗಿ  ಕೊನೆಗೆ ಹಿಂದೂ ವಿರೋಧಿ ಸರ್ಕಾರ ಎಂಬ ಕಳಂಕವನ್ನು ಮೈಮೇಲೆ ಎಳೆದುಕೊಳ್ಳುವಷ್ಟರ ಮಟ್ಟಿಗೆ ಬಂದು ತಲುಪಿದೆ.

ಇವತ್ತಿನ ಸೋಷಿಯಲ್ ಮೀಡಿಯಾ ಕಾಲದಲ್ಲಿ ಪ್ರತಿಯೊಬ್ಬರೂ ಏನಾದರೊಂದು ಕಂಟೆಂಟ್ ಹುಡುಕುವ ಕಾಲದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಅದು ಆತನಿಗೆ ಕುತ್ತು ತಂದು ಬಿಡುತ್ತದೆ. ಇಲ್ಲಿಯೂ ಅದೇ ಆಗಿದೆ. ಇನ್ಸ್ ಪೆಕ್ಟರ್ ಧನಂಜಯ್  ಏನು ಹೇಳಬೇಕಾಗಿತ್ತೋ ಅದನ್ನು ಹೇಳುವ ರೀತಿಯಲ್ಲಿ ಹೇಳಿದ್ದರೆ ಇವತ್ತು ವಿವಾದಕ್ಕೆ, ಹೋರಾಟಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನಕ್ಕೆ ಕಾರಣವಾಗುತ್ತಿರಲಿಲ್ಲ. ಆದರೆ ಗಣೇಶನನ್ನು ಪ್ರತಿಷ್ಠಾಪಿಸುವ ಒಂದಷ್ಟು ಹುಡುಗರನ್ನು ಕರೆಯಿಸಿ ಮುಂದೆ ನಡೆದುಕೊಂಡ ರೀತಿ ದರ್ಪದ ಮಾತು… ಇದನ್ನು ನೋಡುವ ಯಾರೂ ಕೂಡ ಒಪ್ಪಿಕೊಳ್ಳುವ ಸಾಧ್ಯವಿಲ್ಲ. ಅದು ಥೇಟ್ ಕಳ್ಳರ ಮುಂದೆ ನಡೆಸುವ ವರ್ತನೆಯಂತೆ ಇತ್ತು.

ಇಲ್ಲಿ ಮುಖ್ಯವಾಗಿ ಹಿಂದೂ ಸಂಘಟನೆಗಳು ರೊಚ್ಚಿಗೇಳಲು ಕಾರಣವಾಗಿರುವುದು ಮಸೀದಿ ಮುಂದೆ ಗಣೇಶನ ಮೆರವಣಿಗೆ ಹೋದ್ರೆ ‘ಗ್ರಹಚಾರ ಬಿಡಿಸ್ತೀನಿ’ ಎಂಬ ವಾರ್ನಿಂಗ್.. ಇದೇ ವಿಚಾರ ಇವತ್ತು ಹಿಂದೂ ಸಂಘಟನೆಗಳನ್ನು, ಬಿಜೆಪಿ ನಾಯಕರನ್ನು ರೊಚ್ಚಿಗೇಳುವಂತೆ ಮಾಡಿದೆ. ಬಹುಶಃ ಇಂತಹದೊಂದು ಮಾತನ್ನು ಆಡದೆ ಹೋಗಿದ್ದರೆ ಮತ್ತು ಇನ್ಸ್ ಪೆಕ್ಟರ್ ಎಲ್ಲ ಪೊಲೀಸ್ ಅಧಿಕಾರಿಗಳಂತೆ ಸಲಹೆ ಸೂಚನೆ ಜತೆಗೆ ಒಂದಷ್ಟು ಎಚ್ಚರಿಕೆಯನ್ನು ನೀಡಿ ಕಳಿಸಿದ್ದರೆ ಇಲ್ಲಿ ಇಷ್ಟೊಂದು ವಿವಾದಕ್ಕೆ ಕಾರಣವಾಗುತ್ತಿರಲಿಲ್ಲ. ಆದರೆ ಈಗ ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿವೆ. ಸಂವಿಧಾನದಲ್ಲಿ ಮಸೀದಿ ಮುಂದೆ ಹೋಗಬಾರದು, ಪಟಾಕಿ ಹೊಡೆಯಬಾರದು ಎಂದು ಎಲ್ಲಿಯಾದರೂ ಬರೆದಿದೆಯಾ? ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ.

ಇದುವರೆಗೆ ತಿ.ನರಸೀಪುರದಲ್ಲಿ ಶಾಂತಿಯುತವಾಗಿಯೇ ಗಣೇಶೋತ್ಸವ ಆಚರಣೆಗಳು  ನಡೆಯುತ್ತಿದ್ದವು. ಬಹುಶಃ ಹಾಗೆಯೇ ಈ ಬಾರಿಯೂ ನಡೆಯುತ್ತಿತ್ತು. ಆದರೀಗ ಇನ್ಸ್ ಪೆಕ್ಟರ್ ಧನಂಜಯ್ ಹಚ್ಚಿದ ಕಿಡಿ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂಬ ಆತಂಕವನ್ನು ತಂದೊಡ್ಡಿದೆ.  ವಿಧಾನಸಭಾ ಎಲೆಕ್ಷನ್ ಗೆ ಬಾಕಿ ಇರುವುದು ಒಂದೂವರೆ ವರ್ಷ ಮಾತ್ರ.. ಹೀಗಾಗಿ ಆಡಳಿತ ನಡೆಸುವ ನಾಯಕರು ತಾವು ಕಾಂಗ್ರೆಸ್ ಪಕ್ಷದ ನಾಯಕರಂತೆ ವರ್ತಿಸ ಬಾರದು. ಸಾರ್ವಜನಿಕವಾಗಿ ಎಚ್ಚರದಿಂದ ವರ್ತಿಸಬೇಕಾಗುತ್ತದೆ. ಇಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಮತ್ತು ಅದಕ್ಕೆ ಅನಿವಾರ್ಯವೂ ಆಗಿದೆ. ಆದರೆ ಸರ್ಕಾರ ನಡೆಸುವ ಗೃಹಸಚಿವರು ಇಂತಹ ಸಂದರ್ಭದಲ್ಲಿ  ಕಾಂಗ್ರೆಸ್ ನಾಯಕರಂತೆ ಹೇಳಿಕೆ ಕೊಡುವುದನ್ನು ಬಿಟ್ಟು ಈ ರಾಜ್ಯದ ಪ್ರತಿನಿಧಿಗಳಾಗಿ ಹೇಳಿಕೆ ನೀಡುವುದನ್ನು ಕಲಿಯ ಬೇಕಾಗಿದೆ. ಇಲ್ಲದೆ ಹೋದರೆ ರಾಜಕೀಯ ಕೆಸರೆರಚಾಟಕ್ಕೆ ಜನ ಬಲಿಯಾಗಬೇಕಾಗುತ್ತದೆ.

ಈಗಾಗಲೇ ಇನ್ಸ್ ಪೆಕ್ಟರ್ ಧನಂಜಯ ವರ್ತನೆಯನ್ನು ಖಂಡಿಸಿ ಸೆಪ್ಟಂಬರ್ 13ರಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ತಿ.ನರಸೀಪುರದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಲ್ಲದೆ, ಇನ್ಸ್ ಪೆಕ್ಟರ್ ನ ಅಮಾನತು ಮಾಡಬೇಕು ಎಂಬ ಗಡುವನ್ನು ನೀಡಲಾಗಿದ್ದು, ಇಲ್ಲದೆ ಹೋದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಈ ನಡುವೆ ತಿ.ನರಸೀಪುರದಲ್ಲಿನ ಮಸೀದಿ ರಸ್ತೆಗೆ ಗಣಪತಿ ಮೆರವಣಿಗೆ ಹೋಗಲು ನಮ್ಮ ಅಭ್ಯಂತರ ಇಲ್ಲ ಎಂದು ಮೈಸೂರು ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟಪಡಿಸಿದ್ದಾರೆ.

ಗೃಹಸಚಿವ ಪ್ರಿಯಾಂಕ ಖರ್ಗೆ ಮಾತ್ರ ಬಿಜೆಪಿ ಆಗ್ರಹಿಸಿದಂತೆ ಇನ್ಸ್​ಪೆಕ್ಟರ್​ ಧನಂಜಯ್​ನನ್ನು ಅಮಾನತು ಮಾಡೋಕ್ಕಾಗಲ್ಲ. ಎಸ್ ಪಿಯಿಂದ ವರದಿ ಕೇಳಿದ್ದೇನೆ. ಅದು ಬರಲಿ ಅಂತಿಮವಾಗಿ ನಾನು ತೀರ್ಮಾನ ಕೈಗೊಳ್ಳಬೇಕು. ಈ ಹಿಂದೆ ಅಶೋಕ್ ಗೃಹ ಸಚಿವರಾಗಿದ್ದಾಗಲೂ ಸಭೆ ಮಾಡಿಲ್ವಾ, ಸೂಚನೆ ಕೊಟ್ಟಿಲ್ವಾ? ಅಶೋಕ್​ ಇದ್ದಾಗ ಏನು ನಿಯಮ ಇತ್ತೋ ಈಗಲೂ ಅದೇ ನಿಯಮ ಎಂದು ಹೇಳುವ ಮೂಲಕ ಇನ್ಸ್ ಪೆಕ್ಟರ್ ನ್ನು ಸಮರ್ಥಿಸಿಕೊಂಡಿದ್ದಾರೆ.

ಇದೆಲ್ಲ ಬೆಳವಣಿಗೆ ನಡುವೆ ಗಣೇಶೋತ್ಸವ ಮಾಡುವವರಿಗೆ ಗ್ರಹಚಾರ ಬಿಡಿಸ್ತೀನಿ ಎಂದು  ಧಮ್ಕಿ ಹಾಕಿ ಫೋಸ್ ಕೊಟ್ಟ ಇನ್ಸ್ ಪೆಕ್ಟರ್ ಧನಂಜಯ ತನ್ನ. ಪೊಲೀಸ್ ಖದರ್ ನ್ನು ಎಲ್ಲಿ ಯಾವಾಗ ತೋರಿಸಬೇಕಿತ್ತೋ ಅಲ್ಲಿ ತೋರಿಸಿದ್ದರೆ ಸರಿ ಹೋಗುತ್ತಿತ್ತೇನೋ ಆದರೆ ಸಾರ್ವಜನಿಕ ಗಣಪತಿ ಉತ್ಸವದ ಸಮಿತಿ ಸದಸ್ಯರ ಮುಂದೆ ತೋರಿಸಿ ಈಗ ತನ್ನ ಗ್ರಹಚಾರವೇ ಸರಿಯಿಲ್ಲ ಎಂದು ಸಾಬೀತು ಮಾಡಿಕೊಂಡಂತಾಗಿದೆ.

ಬಿಜೆಪಿ ಆಗ್ರಹಕ್ಕೆ ಮಣಿದು ಸರ್ಕಾರ ಅಮಾನತು ಮಾಡುತ್ತದೆಯೋ ಗೊತ್ತಿಲ್ಲ ಆದರೆ ಈ ಪ್ರಕರಣದ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವಿನ ರಾಜಕೀಯ ಸಮರವಾಗಿ ಮಾರ್ಪಾಡಾಗುವುದಂತು ನಿಜ.  ಒಂದು ವೇಳೆ ಇನ್ಸ್ ಪೆಕ್ಟರ್ ನ ಅಮಾನತು ಮಾಡಿದರೆ ಆಗ ಸರ್ಕಾರ ತಲೆಬಾಗಿದಂತೆ ಆಗುತ್ತದೆ. ಇದು ಹಿನ್ನಡೆಯಾಗುತ್ತದೆ. ಹೀಗಾಗಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಹರಿಹಾಯುತ್ತಿರುವ ಪ್ರಿಯಾಂಕ್ ಖರ್ಗೆ ಇನ್ಸ್ ಪೆಕ್ಟರ್ ನ ಅಮಾನತು ಮಾಡಲು ಒಪ್ಪಲ್ಲ. ಇದನ್ನು ಬಿಜೆಪಿ ರಾಜಕೀಯವಾಗಿ ತುಂಬಾ ಚೆನ್ನಾಗಿ ಬಳಸಿಕೊಂಡರೂ ಅಚ್ಚರಿಯಿಲ್ಲ. ಅತ್ತ ರಾಜಕೀಯವಾಗಿ ಏನೇನು ಬೆಳವಣಿಗೆಯಾಗುತ್ತೋ ಗೊತ್ತಿಲ್ಲ. ಆದರೆ ಇತ್ತ ಇನ್ಸ್ ಪೆಕ್ಟರ್ ಧನಂಜಯ ಮಾನವಂತು ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಹರಾಜಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಇನ್ಸ್ ಪೆಕ್ಟರ್ ಧನಂಜಯ ವಿರುದ್ಧ ಮತ್ತು ಪರ ಅಭಿಯಾನಗಳು ಆರಂಭವಾಗಿವೆ. ಇದರ ನಡುವೆ ಕಾಮ(ಕರ್ಮ)ಕಾಂಡಗಳು ಮುನ್ನಲೆಗೆ ಬರುತ್ತಿವೆ. ಇಷ್ಟಕ್ಕೂ ಇನ್ಸ್ ಪೆಕ್ಟರ್ ಧನಂಜಯ ಮಾಡಿದ್ದಾದರೂ ಏನು? ಎಂಬುದನ್ನು ನೋಡಿದ್ದೇ ಆದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೌಟುಂಬಿಕ ಕಲಹದ ವಿಚಾರವಾಗಿ ನಾಲ್ವರು ದಲಿತ ಯುವಕರನ್ನು ಠಾಣೆಗೆ ಕರೆಸಿಯಿಸಿ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಮನಬಂದಂತೆ ಥಳಿಸಿದ್ದರು ಎಂಬ ಗಂಭೀರ ಆರೋಪವಿದೆ.

ಈ ಬಗ್ಗೆ ನೊಂದ ಯುವಕರು ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಇನ್ಸ್‌ಪೆಕ್ಟರ್ ದರ್ಪ ಮಾತ್ರ ಕಡಿಮೆಯಾಗಿರಲಿಲ್ಲ. ವಿಚಾರಣೆಗೆ ಕರೆಸಿದವರನ್ನು ಹಿಗ್ಗಾಮುಗ್ಗಾ ಥಳಿಸಲೆಂದೇ ಠಾಣೆಯಲ್ಲಿ ವಿಶೇಷವಾಗಿ ಮಾಡಿಸಲಾಗಿದ್ದ ಬೆಲ್ಟ್ ರೂಪದ ಬ್ಯಾಟ್ ಹಾಗೂ ಮರದ ತುಂಡುಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಇನ್ನು ಈತನ ಕಾಮಕಾಂಡಗಳು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗುತ್ತಿದ್ದು, ಸುಮಾರು 12 ವರ್ಷಗಳ ಹಿಂದೆ, ಅಂದರೆ 2014ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಇವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಪಬ್‌ವೊಂದರಲ್ಲಿ ಪರಿಚಯವಾದ ದೆಹಲಿ ಮೂಲದ ಯುವತಿಗೆ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ಸಂಬಂಧ ಬೆಳೆಸಿದ್ದರು ಎನ್ನಲಾಗಿದೆ.

ಸತ್ಯ ತಿಳಿದು ಯುವತಿ ದೆಹಲಿ ನ್ಯಾಯಾಲಯದ ಮೊರೆ ಹೋದಾಗ, ಕೋರ್ಟ್ ಆದೇಶದಂತೆ ಅತ್ಯಾಚಾರ ಕೇಸ್ ದಾಖಲಾಗಿತ್ತು. ಅಚ್ಚರಿಯೆಂದರೆ, ಈ ಕೇಸ್ ದಾಖಲಾಗುತ್ತಿದ್ದಂತೆ ಧನಂಜಯ್ ತಮ್ಮ ಸರ್ವಿಸ್ ರಿವಾಲ್ವರ್ ಹಾಗೂ ವಾಕಿಟಾಕಿ ಸಮೇತ ಬರೋಬ್ಬರಿ 8 ದಿನಗಳ ಕಾಲ ನಾಪತ್ತೆಯಾಗಿದ್ದರು ಎಂಬ ವಿಚಾರವೂ ಈಗ ಭಾರೀ ಸುದ್ದಿ ಮಾಡುತ್ತಿದೆ.

ಧನಂಜಯ ತಿ.ನರಸೀಪುರ ಠಾಣೆಗೆ ಬಂದು 2 ವರ್ಷ 8 ತಿಂಗಳು ಆಗಿವೆ. ಮೇ 10ರಂದು ಮೈಸೂರು ದಕ್ಷಿಣ ಠಾಣೆಗೆ ವರ್ಗಾವಣೆಯಾಗಿತ್ತು. ಆದರೆ ವರ್ಗಾವಣೆ ಆದೇಶ ಬಂದ 24 ಗಂಟೆಯಲ್ಲೇ ರದ್ದು ಮಾಡಿಸಿಕೊಂಡಿದ್ದರು. 2 ವರ್ಷ ಕಾರ್ಯನಿರ್ವಹಿಸಿದ ಬಳಿಕವೂ ಜಾಗ ಖಾಲಿ ಮಾಡದೇ ಇದೇ ತಿ ನರಸೀಪುರ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ. ಹಾಗಾದರೆ ಇವರನ್ನು ಇಲ್ಲಿಯೇ ಉಳಿಸಿಕೊಂಡವರು ಯಾರು? ಇವರಿಗೆ ಯಾರ  ಅಭಯವಿದೆ ಎಂದು ಜನ ಕೇಳುತ್ತಿದ್ದಾರೆ.

ಒಂದೆಡೆ ಇನ್ಸ್ ಪೆಕ್ಟರ್ ಧನಂಜಯನ ಮಾನ ಹರಾಜಾಗುತ್ತಿದ್ದರೆ, ಮತ್ತೊಂದೆಡೆ ಆಡಳಿತ ಮತ್ತು ವಿಪಕ್ಷಗಳ ನಡುವ ರಾಜಕೀಯ ಫೈಟ್ ಆರಂಭವಾಗಿದೆ. ಇದು ಗಣೇಶೋತ್ಸವ ಮುಗಿದರೂ ರಾಜಕೀಯ ಅಸ್ತ್ರವಾಗಿ ಮುಂದಿನ ಎಲೆಕ್ಷನ್ ತನಕವೂ ಮುಂದುವರೆದರೆ ಅಚ್ಚರಿಯಿಲ್ಲ.  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಅವರು 2018ರ ಚುನಾವಣೆಯಲ್ಲಿ ಸೋಲಲು ಹಿಂದೂವಿರೋಧಿ ಸರ್ಕಾರವೆಂದು ಬಿಜೆಪಿ ಬಿಂಬಿಸಿದ್ದೇ ಕಾರಣವಾಯಿತು ಎನ್ನುವುದು ಸುಳ್ಳೇನಲ್ಲ.  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್ ವಿರುದ್ಧ ಬಂದಿರುವ ಹಿಂದೂ ವಿರೋಧಿ ಹಣೆಪಟ್ಟಿಯನ್ನು ಕಳಚಲು ಸರ್ವ ರೀತಿಯಲ್ಲಿ ಯತ್ನಿಸುತ್ತಿದ್ದರೂ ಇದೀಗ ಇನ್ಸ್ ಪೆಕ್ಟರ್ ವರ್ತನೆ ಮತ್ತೆ ತಲೆನೋವು ತಂದಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

B M Lavakumar

admin
the authoradmin

ನಿಮ್ಮದೊಂದು ಉತ್ತರ