ಮೈಸೂರು: ನಗರದ ರಾಮಕೃಷ್ಣನಗರದಲ್ಲಿರುವ ಸ್ವರಾಲಯ ಸಂಗೀತ ಸಂಸ್ಥೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಇತ್ತೀಚೆಗೆ ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಭಾಂಗಣದಲ್ಲಿ ಸ್ವರಾಲಯ ಸಾಂಸ್ಕೃತಿಕ ಸಂಭ್ರಮ 2026 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ, ನಂತರ ಮಾತನಾಡಿದ ಸಂಗೀತ ಶಿಕ್ಷಕಿ ವಿದುಷಿ ಶ್ರೀಮತಿ ಪದ್ಮ ಅನಂತ್ ಅವರು ಚಿಕ್ಕ ವಯಸ್ಸಿನಿಂದ ತಮ್ಮ ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಕೊಡುತ್ತೇವೆಯೋ ದೊಡ್ಡವರಾದ ಮೇಲೆ ಅದು ತಮ್ಮ ಮಕ್ಕಳಲ್ಲಿ ಪ್ರತಿಬಿಂಬಿಸುತ್ತದೆ ಎಂದರು.

ಈ ಸಂಸ್ಥೆಗೆ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಬಂದು ತರಬೇತಿ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಹಾರೈಸಿದರು.

ಯಾವುದೇ ಸಂಸ್ಥೆ ಕಟ್ಟುವುದು ಸುಲಭದ ಕೆಲಸ ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಸವಾಲಿನ, ಪೈಪೋಟಿಯ ಕೆಲಸ ಎಂದು ತಿಳಿಸಿದ ಅವರು ಈ ನಿಟ್ಟಿನಲ್ಲಿ ಸ್ವರಾಲಯ ಸಂಗೀತ ಸಂಸ್ಥೆಯ ಅಧ್ಯಕ್ಷೆ ವಿದುಷಿ ಡಾ.ಸುಮ ಹರಿನಾಥ್ ಅವರು ಹಲವಾರು ವರ್ಷಗಳಿಂದ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಿಟೀಲು ಶಿಕ್ಷಕ ವಿದ್ವಾನ್ ದಿನೇಶ್ ಅವರು ಮಾತನಾಡಿ, ಸಂಗೀತ ಎನ್ನುವುದು ಅದ್ಭುತವಾದ ಕಲೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವುದಕ್ಕೆ ಗುರು-ಶಿಷ್ಯರ ಸಂಪರ್ಕ ಬೇಕೇ ಬೇಕು. ಇದು ನಮ್ಮ ಸಂಸ್ಥೆ, ಇದು ನಮ್ಮ ಶಾಲೆ ಎನ್ನುವ ಭಾವನೆಯನ್ನು ನಾವು ಜೀವನದಲ್ಲಿ ರೂಢಿಸಿಕೊಂಡರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು

ವಿದುಷಿ ಸುಮ ಹರಿನಾಥ್ ಅವರು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉಪಯುಕ್ತವಾಗುವಂತಹ ಸ್ತೋತ್ರಗಳು, ದೇವರ ನಾಮ, ವಿಷ್ಣು ಪಾರಾಯಣ, ಲಲಿತಾ ಸಹಸ್ರನಾಮ ಇತ್ಯಾದಿ ಹಾಡುಗಳನ್ನು ಹಾಡಲು ತರಬೇತಿ ನೀಡುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಡಾ.ಸುಮ ಹರಿನಾಥ್ ಅವರು ಇತ್ತೀಚೆಗೆ ಇಹಲೋಕ ತ್ಯಜಿಸಿದ ಗಾನ ಗಂದರ್ವೆ ಎಸ್.ಜಾನಕಿಯವರು ಹಾಡಿರುವ ’ಬೆಳ್ಳಿಮೋಡ’ ಚಲನಚಿತ್ರದ ’ಮೂಡಲ ಮನೆಯ’ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಹೆಮ್ಮೆಯ ವೇದಿಕೆ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾಸರ ಪದಗಳ ಗಾಯನವನ್ನು ಶ್ರೀಮತಿ ಶಿಲ್ಪಶ್ರೀ ಜಯರಾಂ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಇವರಿಗೆ ಪಕ್ಕವಾದ್ಯದಲ್ಲಿ ಮೃದಂಗದಲ್ಲಿ ವಿದ್ವಾನ್ ವಿ.ಶ್ಯಾಂ, ವಯೋಲಿನ್‌ನಲ್ಲಿ ವಿದ್ವಾನ್ ಸಿ.ಚೇತನ್ ಸಹಕಾರ ನೀಡಿದರು. ಶ್ರೀಮತಿ ರೂಪ ನರಸಿಂಹನ್ ತಂಡದವರು ’ಹಾಡುವ ಜನಪದವ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದಾದ ನಂತರ ಶ್ರೀಮತಿ ವೈಷ್ಣವಿ ನರಸಿಂಹನ್ ಹಾಗೂ ಶ್ರೀಮತಿ ಸೀಮಾ ವರದರಾಜ್ ಅವರು ದ್ವಂದ್ವ ಭರತನಾಟ್ಯ ಪ್ರಸ್ತುತಪಡಿಸಿದರು. ಸ್ವರಾಲಯ ಸಂಸ್ಥೆ ತಂಡದವರು ವಿದುಷಿ ಸುಮ ನಿರ್ದೇಶನದ ’ಆಲಯ ಸ್ವರಾಲಯ’ ಎಂಬ ಸಾಮೂಹಿಕ ಗಾಯನ ಪ್ರಸ್ತುತಪಡಿಸಿದರು.

ಕಾರ್ಯಕ್ರಮಕ್ಕೆ ಕುಮಾರಿ ರಾಘವಿ ರ್ಥಿಸಿದರೆ, ಕಾರ್ಯದರ್ಶಿ ಶ್ರೀಮತಿ ಹೆಚ್.ಎಸ್.ಶ್ರೀಕಾಂತಾಮಣಿ ಎಲ್ಲರನ್ನೂ ಸ್ವಾಗತಿಸಿ, ನಿರೂಪಿಸಿದರು.












