Editor choiceLatest

ಕುಮಾರಕವಿ ಬಿ.ಎನ್. ನಟರಾಜ್ ಸರ್.. ನಿಮಗೊಂದು ಸಲ್ಯೂಟ್ … ಏಕೆ ಗೊತ್ತಾ?

ಬರವಣಿಗೆಯೇ ಹಾಗೆ…  ಬರೀಬೇಕು ಅಂಥ ಹೊರಟ ಮೇಲೆ ಏನಾದರೊಂದು ಬರೆಯುತ್ತಲೇ ಇರಬೇಕು.. ಇಲ್ಲದೆ ಹೋದರೆ ಏನೋ ಕಳೆದುಕೊಂಡ ಅನುಭವವಾಗುತ್ತದೆ…  ಹೆಚ್ಚು, ಹೆಚ್ಚು ಖಾಲಿತನ ಕಾಡುತ್ತದೆ…  ಇವತ್ತು ಬರೆಯೋದಕ್ಕೆ ಮತ್ತು ಓದೋದಕ್ಕೆ ಸಾಮಾಜಿಕ ಜಾಲತಾಣಗಳಿವೆ.. ಇಲ್ಲಿ ಯಾರು ಬೇಕಾದರೂ ಏನನ್ನು ಬೇಕಾದರೂ ಬರೀಬಹುದು… ಹಾಗೆಯೇ ಓದೋರಿಗೂ… ಆದರೆ ಒಂದೆರಡು ದಶಕಗಳ ಹಿಂದೆ ಹಾಗಿರಲಿಲ್ಲ…

ಅವತ್ತು ಬರೆಯಬೇಕಾದರೆ ಪತ್ರಿಕೆಗಳಿಗೆ ಬರೆಯಬೇಕಾಗಿತ್ತು.. ಹಾಗೊಂದು ವೇಳೆ ಬರೆದರೂ ಅದನ್ನು ತೂಗಿ ಅಳೆದು ನೋಡುವ  ಜವಬ್ದಾರಿಯುತ ಸಂಪಾದಕೀಯ ವಿಭಾಗವಿರುತ್ತಿತ್ತು. ಅಲ್ಲಿ ಪರಿಶೀಲಿಸಿ ಪ್ರಕಟಿಸಬಹುದು ಎಂಬ ಹಸಿರು ನಿಶಾನೆ ತೋರಿದರೆ ಮಾತ್ರ ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗುತ್ತಿದ್ದವು. ಆ ದಿನಗಳಲ್ಲಿ ಪತ್ರಿಕೆಗೆ ಬರೆಯುವುದು ಮತ್ತು ಅದು ಪ್ರಕಟವಾಗಿ ಬಂದಾಗ ಆಗುತ್ತಿದ್ದ ಸಂತೋಷ ಅದನ್ನು ಅನುಭವಿಸಿದ ಬರಹಗಾರರಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕಿಂತ ಹೆಚ್ಚಾಗಿ ನಾವು ಬರೆಯುವುದರಿಂದ ಆರಂಭವಾಗಿ ಪತ್ರಿಕೆಯಲ್ಲಿ ಪ್ರಕಟವಾಗಿ ನಮ್ಮ ಕೈಸೇರುವ ತನಕದ ಅಂತರದ ಸಮಯಗಳು ಒಂಥರಾ ಗಜಪ್ರಸವವೇ…

ಇವತ್ತು ಎಲ್ಲವೂ ಬದಲಾಗಿದೆ..  ಆದರೂ ಹಿಂದಿನ ಆ ನೆನಪುಗಳು ಹಸಿರಾಗಿವೆ.. ಬರಹಗಾರರ ಬಳಗ ಸಿಕ್ಕಾಗ ನೆನಪಿಸಿಕೊಂಡಾಗ ಮಜಾ ಸಿಗುತ್ತದೆ. ನಮ್ಮದೇ ಬರಹದ ಹಳೆಯ ಪತ್ರಿಕೆ ಕಂಡಾಗ ಒಮ್ಮೊಮ್ಮೆ ಹಳೆಯ ನೆನಪುಗಳು ಕಣ್ಮುಂದೆ ಹಾದು ಹೋಗುತ್ತವೆ..ಇವತ್ತು ಬರಹಗಾರರು ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳಬೇಕಾಗಿದೆ… ಮೊದಲೆಲ್ಲ ಕೈನಲ್ಲಿ ಬರೆದು ಅಂಚೆ ಮೂಲಕ ಕಳಿಸುತ್ತಿದ್ದೆವು. ಈಗ ಇಮೇಲ್, ವಾಟ್ಸಾಪ್ ಬಂದಿದೆ. ಕೈಬರಹ ಮರೆಯಾಗಿದೆ.. ಟೈಪ್ ಮಾಡಿಯೋ, ಮಾಡಿಸಿಯೋ ಕಳಿಸಿದರೆ ಮಾತ್ರ ಆದ್ಯತೆ…

ಬರವಣಿಗೆ ಮತ್ತು ಬದಲಾವಣೆ ಬರಹಗಾರನಿಗೆ ಅನಿವಾರ್ಯ ಅದು ಆಗದೆ ಹೋದರೆ ಬರಹಗಾರ ಬರಹಗಾರನಾಗಿ ಉಳಿಯಲಾರನು… ನಾವೀಗ ಕಾಲದ ಜೊತೆಗೆ ಓಡಲೇ ಬೇಕಾಗಿದೆ. ಕೆಲವು ಹಿರಿಯರು ಬರವಣಿಗೆಯನ್ನು ನಿಲ್ಲಿಸಿದಂತೆ ಕಾಣಿಸುತ್ತಿದೆ. ಹೀಗಿರುವಾಗಲೇ ನನಗೆ ಇಳಿವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿ ಕಾಣುವುದು ಕುಮಾರಕವಿ ನಟರಾಜ್ ಅವರು..

ನಮ್ಮ ವೆಬ್ ಸೈಟ್ ಆರಂಭದ ದಿನದಿಂದ ಇಲ್ಲಿ ತನಕ ಲೇಖನಗಳನ್ನು ಕಳಿಸುತ್ತಲೇ ಇದ್ದಾರೆ ಮತ್ತು ಅವರಲ್ಲಿ ಯಾವತ್ತೂ ಉತ್ಸಾಹ ಕಡಿಮೆಯಾಗಿಲ್ಲ. ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು ಅದರ ಮೂಲಕ ಬರವಣಿಗೆಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಇದನ್ನು ನೋಡಿದಾಗ ಖುಷಿಯಾಗುತ್ತದೆ… ವಿಶ್ರಾಂತಿ ಜೀವನ ಬೋರ್ ಎಂದು ಹೇಳುವವರಿಗೆ ಇವರು ಟಾನಿಕ್ ಆಗುತ್ತಾರೆ.

ಅವರ ಲೇಖನಗಳನ್ನು ಓದುವಾಗ ಮತ್ತು ಅವರಲ್ಲಿರುವ ಉತ್ಸಾಹ ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗದಲ್ಲಿದ್ದವರು 2015ಕ್ಕೆ ನಿವೃತ್ತರಾಗಿದ್ದಾರೆ. ಆ ನಂತರ ವಿಶ್ರಾಂತಿ ಜೀವನವನ್ನು ಆರಾಮಾಗಿ ಕಳೆಯ ಬಹುದಿತ್ತು. ಆದರೆ ಅವರನ್ನು ನೋಡಿದರೆ ಅವರು ಆರಾಮಾಗಿ ಇರುವಂತೆ ಕಾಣುತ್ತಿಲ್ಲ. ಚಟುವಟಿಕೆಯ ವ್ಯಕ್ತಿ ಎನ್ನುವುದು ಅವರು ಬರೆಯುವ ಲೇಖನಗಳಿಂದಲೇ ಗೊತ್ತಾಗಿ ಬಿಡುತ್ತದೆ. ಏಕೆಂದರೆ ಎಲ್ಲ ಕ್ಷೇತ್ರಗಳನ್ನು ತಮ್ಮ ಬರಹಗಳ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಸಿನಿಮಾ. ವೈದ್ಯಕೀಯ, ಕ್ರೀಡೆ ಎಲ್ಲ ಕ್ಷೇತ್ರಗಳಲ್ಲೂ ಕೈಚಳಕ ತೋರಿರುವುದು ಇವರ ಬರವಣಿಗೆಯ ಬದುಕಿಗೆ ಹಿಡಿದ ಕೈಕನ್ನಡಿಯಾಗಿದೆ.

ಕುಮಾರಕವಿ ನಟರಾಜ್ ಅವರ ಲೇಖನಗಳು ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಹಿಂದಿನಿಂದಲೂ ಪ್ರಕಟವಾಗುತ್ತಾ ಬಂದಿದೆ. ಈಗಲೂ ಪ್ರಕಟವಾಗುತ್ತಲೇ ಇವೆ. ಇದರಾಚಗೆ ಡಿಜಿಟಲ್ ಮೀಡಿಯಾದಲ್ಲಿಯೂ ಗಮನಸೆಳೆಯುತ್ತಿದ್ದಾರೆ.  ಹೊಸತನದ ಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನ ಎಲ್ಲವನ್ನೂ ಜತೆ ಜತೆಗೆ ಅಭ್ಯಸಿಸುತ್ತಾ ಮುನ್ನಡೆಯುತ್ತಾ ಬರುತ್ತಿರುವ ಅವರ ಬಗ್ಗೆ ಹೇಳುತ್ತಾ ಹೋದರೆ ದೊಡ್ಡದಾದ ಪಟ್ಟಿಯೇ ಇದೆ. ಅವರ ಬರಹಗಳನ್ನು ಜನಮನಕನ್ನಡದಲ್ಲಿ ಓದಿ ಲೇಖನಗಳ ಕೆಳಗೆ ಓದುಗರು ಅದಕ್ಕಿಂತ ಹೆಚ್ಚಾಗಿ ಬರಹಗಾರರು ಹಾಕುತ್ತಿರುವ ಕಾಮೆಂಟ್ ಗಳು ಸಾಕ್ಷಿಯಾಗಿವೆ.

ನಿಜವಾದ ಬರಹಗಾರನಿಗೆ ಅದಕ್ಕಿಂತ ಹೆಚ್ಚಿನ ಯಾವ ಸನ್ಮಾನಗಳು ಬೇಕಾಗುವುದಿಲ್ಲ.  ಬರವಣಿಗೆ ಮತ್ತು ಉಪನ್ಯಾಸದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿರುವ ಅವರ ಬಗ್ಗೆ ಅಖಿಲ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಅಸೋಷಿಯೇಷನ್  ಮೈಸೂರು  ನೀಡಿದ ಭಿನ್ನವತ್ತಳೆಯಲ್ಲಿ ಬರೆಯಲಾದ ಸಾಲುಗಳನ್ನು ಓದಿದಾಗ ಹೆಮ್ಮೆಯಾಗುತ್ತದೆ.. ಅದೇನು? ಇಲ್ಲಿದೆ ನೋಡಿ..

‘ಆಯುಶ್’ ಸಾಹಿತ್ಯ ಪ್ರಪಂಚದಲ್ಲಿ ’ಕುಮಾರಕವಿ ನಟರಾಜ್’ ಹೆಸರನ್ನು ಕೇಳಿರದ ವೈದ್ಯರೇ ಇಲ್ಲವೆನ್ನಬಹುದು.  ಮೈಸೂರಿನ ಆಯುರ್ವೇದ ಕಾಲೇಜು ಮತ್ತು ಮಹಾರಾಜ ಸಂಸ್ಕೃತ ಮಹಾಪಾಠಶಾಲೆ ಮುಂತಾದ ಕಡೆಗಳಲ್ಲಿ 1980ರ ದಶಕದಲ್ಲಿ ’ಮನೆಮದ್ದು’ ’ಹಿತ್ತಲಗಿಡಮದ್ದಲ್ಲ್ಲ’ ’ಹೆಲ್ತ್‌ಟಿಪ್ಸ್’ ’ಸರಳವೈದ್ಯ’ ’ಅಜ್ಜಿಲೇಹ್ಯ’ ಮುಂತಾದ ವಿಶೇಷೋಪನ್ಯಾಸ ನೀಡಿ ಜನಪ್ರಿಯರಾಗಿದ್ದಾರೆ.  ಬಿ.ಎನ್.ನಟರಾಜ್‌ರವರು ಸಮಯ ಸಂದರ್ಭ ಸಂಸ್ಥೆ ಸ್ಥಳ ಇವುಗಳಿಗೆ ತಕ್ಕಂತೆ ನೀಡುವ ಉಪನ್ಯಾಸ, ಬೋಧನೆ, ತಿಳುವಳಿಕೆ, ಮನವರಿಕೆ, ವ್ಯದ್ಯರಿಗಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ರೋಗಿಗಳಿಗೆ ಹಾಗೂ ಶ್ರೀಸಾಮಾನ್ಯನಿಗೂ ಪ್ರಯೋಜನಕಾರಿ ಆಗುವಂತೆ ಇರುತ್ತದೆ

ಆಯುರ್ವೇದ ವೈದ್ಯಕೀಯ ವಿಜ್ಞಾನದ ಬಗ್ಗೆಯೂ ಇವರು ಅನೇಕ ಲೇಖನ ಬರೆದಿದ್ದಾರೆ, ಹಲವಾರು ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ, ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ರಾಜ್ಯದಾದ್ಯಂತ ಪ್ರಕಾಶನಗೊಳ್ಳುತ್ತಿರುವ ’ವೈದ್ಯವಾರ್ತೆ, ವೈದ್ಯತರಂಗಿಣಿ, ವೈದ್ಯರತ್ನ, ವೈದ್ಯಲೋಕ’ ಮುಂತಾದ ಹಲವಾರು ಸಾಪ್ತಾಹಿಕ/ ಮಾಸಿಕ ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟಗೊಂಡಿದೆ. ಇವರ ಬರವಣಿಗೆ ಶ್ರೀಸಾಮಾನ್ಯನಿಗೂ ಮನಮುಟ್ಟುವಂತಿದೆ ಮತ್ತು ಇವರ ಉಪನ್ಯಾಸಗಳು ಅವಿದ್ಯಾವಂತನಿಗೂ ಅರ್ಥವಾಗುವಂತಿದೆ.

ಬದ್ಧತೆ, ಬುದ್ಧತೆ ಪ್ರಭುದ್ಧತೆ ಹಾಗೂ ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಇದ್ದು ಎಂಥವರನ್ನೂ ಹಿಡಿದಿಡುವ ಆಕರ್ಷಣೆ ಇವರಲ್ಲಿದೆ. ಸಾಹಿತ್ಯ ಪ್ರವೃತ್ತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕನ್ನಡ ಸಾಹಿತ್ಯದಲ್ಲಿ ಇವರು ಕೈ ಆಡಿಸದ ಪ್ರಾಕಾರ ಅಥವಾ ವಿಭಾಗ ಇಲ್ಲ ಎಂದು ಧಾರಾಳವಾಗಿ ಹೇಳಬಹುದು!  ಇದಿಷ್ಟು ಓದಿದರೆ ಸಾಕು ಕುಮಾರಕವಿ ನಟರಾಜ್ ಅವರ ಬಗ್ಗೆ ಇನ್ನೇನು ಹೇಳುವುದು ಬೇಡ… ಸರ್ ಹೀಗೆ ಬರೆಯುತ್ತಿರಿ.. ಆರೋಗ್ಯವಾಗಿರಿ..  ಸಲ್ಯೂಟ್ ಸರ್…

ಬಿ.ಎಂ.ಲವಕುಮಾರ್

admin
the authoradmin

1 Comment

  • ಲವ ಸರ್ ನಮಸ್ಕಾರ
    ನಿಮ್ಮಂಥ ಪ್ರತಿಭಾವಂತ ಯುವಮಿತ್ರ ದೊರಕಿದ್ದು ಸಹ ನನ್ನ ಸೌಭಾಗ್ಯ. ನಿಮಗೆ ನಾನು ಅನವರತ ಆಭಾರಿ, ಅನಂತಾನಂತ ಧನ್ಯವಾದಗಳು ಸರ್. ಕುಮಾರಕವಿ ಬೋ.ನಾ.ನಟರಾಜ, ಮೈಸೂರು/ಬೆಂಗಳೂರು

Leave a Reply