LatestMysore

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-14

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

66-ಕೃತಿ: ನಿಮ್ಮಕಣ್ಣುಗಳು(your eyes) ಮತ್ತು ಬೊಜ್ಜು(obesity)

 ಕರ್ತೃ : ಬೆ.ಗೋ.ರಮೇಶ

ಈ ಮೊದಲು ಇದೇ ಲೇಖಕರು ಪ್ರಕಟಿಸಿದ್ದ “ಕಣ್ಣುಗಳ ಸಂರಕ್ಷಣೆ” ಎಂಬ ಕೃತಿಯ ಪರಿಷ್ಕೃತ ರೂಪಾಂತರವೆ ಪ್ರಸ್ತುತ ಪುಸ್ತಕ. ಬೆ.ಗೋ.ರಮೇಶ್ ರಿಗೆ ಬರವಣಿಗೆ ಶಕ್ತಿಯು ಯಥೇಚ್ಛ ವಾಗಿದ್ದರೂ ‘ವೈದ್ಯಕೀಯ ವಿಜ್ಞಾನ’ ಕ್ಷೇತ್ರದಲ್ಲಿ ಇರಬೇಕಾದ ಸ್ವಂತ ಅನುಭವ ಅಷ್ಟಾಗಿ ಇಲ್ಲ ಎಂಬ ಸತ್ಯವನ್ನು ಸ್ವಯಂ ಲೇಖಕರೆ ಒಪ್ಪಿಕೊಂಡಿದ್ದಾರೆ. ಇವರ ಪ್ರಾಮಾಣಿಕತೆಗೆ ಧನ್ಯವಾದ ಹೇಳೋಣ.

ನಿಮ್ಮ ಕಣ್ಣುಗಳು(your eyes): ಭಾರತದ ಹೆಸರಾಂತ ನೇತ್ರತಜ್ಞ ಹಾಗು ಜನಪ್ರಿಯ ಲೇಖಕ ಡಾಕ್ಟರ್ ಜೆ.ಅಗರವಾಲ್ ಬರೆದಿರುವ ‘care of eyes’ ಎಂಬ ಪುಸ್ತಕವೂ ಸೇರಿದಂತೆ ಇತರೆ ನಾಲ್ಕೈದು ಇಂಗ್ಲಿಷ್ ಗ್ರಂಥಗಳನ್ನ ಆಧಾರವಾಗಿಸಿಕೊಂಡು ಸಂಪಾದಿಸಿದ ಅನುವಾದ ಕೃತಿ ಎಂದಷ್ಟೆ ಘೋಷಿಸಬಹುದು. ಇದರಲ್ಲಿರುವ ಲೇಖನಗಳು: ದೃಷ್ಟಿದೋಷ, ನೇತ್ರಶಿಕ್ಷಣ-ಸಲಹೆ, ಕನ್ನಡಕಗಳು, ಗಾದೆಗಳಲ್ಲಿ ಕಣ್ಣು, ಮುಂತಾದ ವಿಚಾರಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತವೆ.

ಕಣ್ಣು ಮತ್ತು ಕಣ್ಣಿನ ರಕ್ಷಣೆ ಬಗ್ಗೆ ಸಾಮಾನ್ಯಜನರು ಹೇಗೆಲ್ಲ ಎಚ್ಚರಿಕೆ ವಹಿಸಬೇಕು, ಸಣ್ಣಪುಟ್ಟ ನೋವು ಹಾನಿಗಳಿಗೆ ಪ್ರಥಮ ಚಿಕಿತ್ಸೆಗೆ ಏನು ಮಾಡಬೇಕು-ಯಾರಲ್ಲಿ ಹೋಗಬೇಕು? ಎಂಬುವ ಬಗ್ಗೆ ಸರಳವಾದ ಸಾಮಾನ್ಯ ತಿಳುವಳಿಕೆಯನ್ನು ಸುಲಭವಾಗಿ ಅರ್ಥವಾಗುವಂತೆ ಬರೆಯಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಮಧ್ಯಮ ವರ್ಗದ ಪ್ರತಿಯೊಂದು ಕುಟುಂಬಕ್ಕೆ ಸಂಗ್ರಹಯೋಗ್ಯ ಪುಸ್ತಕ ಇದಾಗಬಹುದು.

ಬೊಜ್ಜು(obesity):  ಸಾಮಾನ್ಯವಾಗಿ ಎಲ್ಲಕಾಲಕ್ಕು ಎಲ್ಲೆಡೆಯು ಎಲ್ಲರನ್ನು ದೈಹಿಕವಾಗಿ-ಮಾನಸಿಕವಾಗಿ ಕಾಡುತ್ತಿರುವ ಸಮಸ್ಯೆ ಬೊಜ್ಜು. ಇದನ್ನು ಹೋಗಲಾಡಿಸಲು ಅಥವ ಕಡಿಮೆ ಆಗಿಸಲು ಅಗತ್ಯವಾದ ಒಂದೆರಡು ಸರಳ ಪರಿಹಾರ/ಉಪಾಯ ದೊರಕದ ದುರ್ಲಭ ಸ್ಥಿತಿಯಲ್ಲಿ ಇಂತಹ ಪುಸ್ತಕಗಳು ಒಂದಿಷ್ಟು ನೆರವು ನೀಡಬಹುದು ಉಪಯುಕ್ತವೂ ಆಗಬಹುದು.

ಬೊಜ್ಜು ಎಂದರೇನು?, ಕಾರಣಗಳು, ಹೃದ್ರೋಗಗಳು, ರಕ್ತದೊತ್ತಡ, ಧೂಮಪಾನ ಹಾಗೂ ಸ್ಥೂಲಕಾಯತೆ ಬಗ್ಗೆ ವಿಶ್ಲೇಷಣೆಯು ಚೆನ್ನಾಗಿದೆ. ಕ್ಲಿನಿಕ್, ಆಸ್ಪತ್ರೆ, ವೈದ್ಯರು, ವ್ಯಾಪಾರಿ ಇವರೆಲ್ಲರಲ್ಲೂ ಸುಲಭವಾಗಿ ಸಿಗುವಂಥ ಸಾರ್ವಜನಿಕ ಹಿತಾಸಕ್ತಿಯ *ಸರಾಸರಿಅಳತೆ  *ವಯಸ್ಸು  *ತೂಕ -ಈ ಮೂರು ಕೋಷ್ಟಕಗಳನ್ನೂ ಇದರಲ್ಲಿ ಅಡಕ ಮಾಡಲಾಗಿದೆ.

ಜನವರಿ 1983″ಗ್ರಂಥಲೋಕ” ಮಾಸಿಕದ  ‘ಗ್ರಂಥಲೋಕದಮೂಸೆಯಲ್ಲಿ’ ಶೀರ್ಷಿಕೇಲಿ ಪ್ರಕಟ

67. The Negotiable Instruments Act ಇಂಗ್ಲಿಷ್ ಮೂಲ: ವರ್ಗಾವಣೆ ಲಿಖಿತಗಳ ಕಾನೂನು1881

ಕನ್ನಡಕ್ಕೆ : ಎನ್.ಎಸ್.ಸಂಗೊಳ್ಳಿ

ಮೂಲತಃ ಇಂಗ್ಲಿಷ್ ಭಾಷೆಯ ಕೃತಿಯಾದ “The Negotiable Instruments Act,1881” ಪುಸ್ತಕದ ಕನ್ನಡ ಅವತರಣಿಕೆ. ಲೇಖಕ ಎನ್.ಎಸ್.ಸಂಗೊಳ್ಳಿ ತಮ್ಮ ಹೆಸರಲ್ಲು ಹುಟ್ಟೂರಿನ ಹೆಸರನ್ನೆ ಪ್ರಧಾನ ಆಗಿಸಿರುವುದಲ್ಲದೆ ತಮ್ಮ ಪುಸ್ತಕಕ್ಕೂಸಹ ‘ವರ್ಗಾವಣೆಯ ಲಿಖಿತಗಳ ಕಾನೂನು’ ಎಂಬ ತಪ್ಪು ಶೀರ್ಷಿಕೆ ನೀಡಿ ಮಹತ್ತರ ಅಕಾರ್ಯ ಎಸಗಿದ್ದಾರೆ. ಕಾನೂನಾತ್ಮಕ ಕೃತಿಗಳನ್ನು ಮಾತೃಭಾಷೆಗೆ ಅನುವಾದಿಸುವಾಗ ತುಸು ಎಚ್ಚರಿಕೆಯಿಂದ ಭಾಷಾಂತರ ಕೆಲಸವನ್ನ ಮಾಡಬೇಕು.

ಹೇಗೋ ಇದ್ದರಾಯಿತು ಎಂಬ ಉಡಾಫೆ ಮನೋಭಾವ ಉತ್ತಮ ಸಾಹಿತಿಯ ಲಕ್ಷಣವಲ್ಲ. ಹಾಗಾಗಿ ಪುಸ್ತಕದ ಶೀರ್ಷಿಕೆಯು: ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ, 1881 ಎಂದಿರಬೇಕಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಲೇಖಕರು ರಾಜ್ಯದ ನ್ಯಾಯಾಧೀಶ ಅವರುಗಳಲ್ಲೊಬ್ಬರು.

ಕಾನೂನು ವಿಭಾಗದಲ್ಲಿ ಹಲವಾರು ಕೃತಿಗಳನ್ನ ರಚಿಸುವ ಮೂಲಕ “ಕನ್ನಡದ ಕಾನೂನು ಕಿಂಕರ” ಎಂಬ ಪ್ರಶಂಸೆಗೆ ಪಾತ್ರ ರಾಗಿದ್ದಾರೆ. ಈಗಾಗಲೆ ಹಲವು ಬಿರುದು ಬಹುಮಾನ ಪಡೆದು ಸಾಕಷ್ಟು ಜನಪ್ರಿಯರಾಗಿರುವ ಈ ಲೇಖಕರ 10ನೇ ಕೃತಿಯಾದ ಇದು “The Negotiable Instruments Act,1881” ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ.

ಕನ್ನಡದಲ್ಲಿ ಕಾನೂನನ್ನು ಅರ್ಥಮಾಡಿಕೊಳ್ಳಬಯಸುವ ಪ್ರತಿಯೊಬ್ಬರಿಗೆ, ಅದನ್ನು ಸರಿಯಾಗಿ ಅರಿಯಲಿಚ್ಚಿಸುವ ಎಲ್ಲರಿಗೆ, ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ಕಾನೂನು ವಿಷಯ ಅಧ್ಯಾಪಕ/ಬೋಧಕ ವರ್ಗದವರಿಗೆ ಇದೊಂದು ಉತ್ತಮ ಕೃತಿ. ಜತೆಗೆ ಕನ್ನಡ ಓದು-ಬರಹ ಬಲ್ಲ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಈ ಪುಸ್ತಕವು ಬೇಕಾದಷ್ಟು ಸಹಾಯ ಮಾಡಬಲ್ಲದು?!

(ನವೆಂಬರ್ 1982 ‘ಗ್ರಂಥಲೋಕ’ ಮಾಸಿಕ ‘ಗ್ರಂಥಲೋಕದ ಮೂಸೆಯಲ್ಲಿ’ ಪ್ರಕಟಿತ)

68 ಕೃತಿ: ಸ್ವಾಗತ-ಪ್ರಾರ್ಥನಾ ಮಾಲೆ

 ಕರ್ತೃ: ಹೆಚ್.ಸೀತಾರಾಮರಾವ್

ಸ್ವಾಗತ ಮತ್ತು ಪ್ರಾರ್ಥನಾಮಾಲೆ ಪುಸ್ತಕದ ಲೇಖಕ ಹೆಚ್.ಸೀತಾರಾಮರಾವ್ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಮ್ಮ ಗಮಕ ಗಾಯನ ಕಾರ್ಯಕ್ರಮ ನೀಡುವ ಮೂಲಕ ಸಾಕಷ್ಟು ಹೆಸರು ಗಳಿಸಿದ್ದಾರೆ. ತತ್ಪರಿಣಾಮವಾಗಿ ಕನ್ನಡ ಸಾಹಿತ್ಯದ ಹಲವಾರು ಕವಿಗಳಿಗೆ ಮತ್ತು ವಿದ್ವಾಂಸರಿಗೆ ಚಿರಪರಿಚಿತರೂ ಆಗಿದ್ದಾರೆ. ಪ್ರಸಕ್ತ ವರ್ಷದಿಂದ ತಾವೂ ಸಹ ಓರ್ವ ಕವಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.

ಸೀತಾರಾಮರಾಯರು ಅಂದಾಜು 25 ವರ್ಷ ಪರ್ಯಂತ ತಾವೇ ಹಾಡಿದಂತಹ ತಮ್ಮದೇ ಆದ ನೂರಾರು ಸ್ವರಚಿತ ಸ್ವಾಗತ ಪದ್ಯಗಳಲ್ಲಿ ಹಲವು ಆಯ್ದ ಪದ್ಯಗಳ ಸಂಗ್ರಹವೆ ಪ್ರಸ್ತುತ ಪುಸ್ತಕ. 1976ರ ಶಿವಮೊಗ್ಗದಲ್ಲಿ ಜರುಗಿದ ಅಖಿಲ ಭಾರತ 49ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಹಾಡಿದ ಗೀತೆಯು ಸೇರಿದಂತೆ ಒಟ್ಟು 30ಗೀತೆಗಳು ಇದರಲ್ಲಿವೆ. ಕೆಲವಂತೂ ವಿಶೇಷ ರೀತಿಯ ಭಾಷೆ-ಭಾವ  ಶುದ್ಧಿಗಳಿಂದ ಅಡಕವಾಗಿದ್ದು ನವ್ಯಛಂದಸ್ಸುಗಳಲ್ಲಿ ಎದ್ದುಕಾಣುತ್ತ, ವಾದ್ಯ ನುಡಿಸುವವರಿಗೆ ಮತ್ತು ಸಂಗೀತ ಹಾಡುವವರಿಗೆ ಪ್ರಿಯವೆನಿಸುತ್ತವೆ.

ಅನುಚಿತವಾದ ಯಾವುದೆ ಗೀತೆಯನ್ನು ಸೇರಿಸಲಾಗಿಲ್ಲ. ಬಲು ಹಿತ-ಮಿತವಾದ ದೇವರನಾಮ-ದೇವತಾಸ್ತುತಿ ಸಂದರ್ಭೋಚಿತ ವಸ್ತುಗಳ ಪ್ರಸ್ತಾಪ ಮಾತ್ರವಿಲ್ಲಿ ಎದ್ದುಕಾಣುವ ಅಂಶಗಳು. ಸ್ವಾಗತ ಪದ್ಯಗಳ ಮಾಲಿಕೆಯೂ ಕಾವ್ಯದ ಗುಂಪಿಗೆ ಸೇರತಕ್ಕದ್ದೆಂದು ಈ ಕೃತಿಯ ಮೂಲಕ ಸಾಬೀತು ಪಡಿಸಿರುವ ಲೇಖಕರು, ಭವಿಷ್ಯತ್ಕಾಲದಲ್ಲಿ ಇನ್ನೂ ಮಹತ್ವಪೂರ್ಣ ಕಾವ್ಯ ರಚಿಸುವಂಥ ಕುರುಹು ತೋರಿಸಿದ್ದಾರೆ. ಕಾವ್ಯಲೋಕದಲ್ಲಿ ಹೊಸಹೊಸ ಪ್ರಯತ್ನ ಮಾಡುವ ಇವರಂತಹ ದಿಟ್ಟ-ದಿಟ ಕನ್ನಡ ಕವಿಗಳಿಗೆ ಪ್ರಪಂಚದಾದ್ಯಂತ ಓದುಗರು ಸರ್ವತೋಮುಖ ಪ್ರೋತ್ಸಾಹ ನೀಡುವುದು ಸರಿ.

( ನವೆಂಬರ್ 1982ಗ್ರಂಥಲೋಕ ಮಾಸಪತ್ರಿಕೆ ಗ್ರಂಥಲೋಕದ ಮೂಸೆಯಲ್ಲಿ ಪ್ರಕಟಿತ)

69 .ಕೃತಿ: ಬೆಟಗೇರಿಕೃಷ್ಣಶರ್ಮರ ಸಾಹಿತ್ಯದರ್ಶನ

 ಕರ್ತೃ: ಹ.ಶಿ.ಭೈರನಟ್ಟಿ

ಕನ್ನಡದ ಶ್ರೇಷ್ಠ ಹಾಗು ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಡಾ.ಬೆಟಗೇರಿ ಕೃಷ್ಣಶರ್ಮ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಬಗ್ಗೆ ಕಿರು ಪರಿಚಯವನ್ನು ಲೇಖಕ ಹ.ಶಿ.ಭೈರನಟ್ಟಿ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಇದರ ಪ್ರಕಾಶಕರು ಹೇಳಿರುವಂತೆ “ಅವರ ಸಾಹಿತ್ಯಕ ಕೃತಿಗಳ ಒಟ್ಟು ದರ್ಶನವನ್ನು ಕ್ರಮ ಬದ್ಧವಾಗಿ ಮಾಡಿಕೊಡುವುದು ಈ ಪುಸ್ತಕದ ಮೂಲ ಉದ್ದೇಶ” ಎಂಬ ಪ್ರಕಾಶಕರ ಮಾತುಗಳು ಹೆಚ್ಚುಕಡಿಮೆ ಸಮಂಜಸವಾಗಿಯೇ ಇದೆ.

‘ಬೆಟಗೇರಿಕೃಷ್ಣಶರ್ಮರ ಸಾಹಿತ್ಯದರ್ಶನ’ ಕೃತಿಯ ಕರ್ತೃ ಹ.ಶಿ.ಭೈರನಟ್ಟಿರವರು ‘ಪ್ರಕಟಣಾ ಕ್ರಮ’ ಅಥವ ‘ಅಕಾರಾದಿ ಕ್ರಮ’ ಅನುಸರಿಸಿ ಬೆಟಗೇರಿ ಕೃಷ್ಣಶರ್ಮರ ಕಥೆ ಕಾದಂಬರಿ ಕಾವ್ಯ/ಕಥನಕವನ ಪ್ರಬಂಧ ಹಾಗೂ ರೂಪಕ – ಈ ಐದೂ ಸಾಹಿತ್ಯ ಪ್ರಾಕಾರದ ವಿವಿಧ ವಿಭಾಗಳಲ್ಲಿ ಬರುವಂತಹ ಸಮಗ್ರ ಪಟ್ಟಿಯನ್ನು ತಯಾರು ಮಾಡಿಕೊಂಡು ನಂತರ ಪ್ರತಿಯೊಂದು ವಿಭಾಗದ ಅವಲೋಕನ ಕಾರ್ಯವನ್ನು ಸರಳ ಹಾಗೂ ಸೂಕ್ಷ್ಮವಾಗಿ ನಡೆಸಿದ್ದರೆ ಹೆಚ್ಚು ಯಶಸ್ವಿಯಾಗುತ್ತಿದ್ದರು.

ಪುಸ್ತಕ ಇನ್ನೂ ಚೆನ್ನಾಗಿ ಮೂಡಿಬರ್ತಿತ್ತು ಎನಿಸಿದರೂ ಲೇಖಕರ ಉತ್ಸುಕತೆ ಮೆಚ್ಚುವಂತಾದ್ದು. ಏಕೆಂದರೆ ಪ್ರಸ್ತುತ ಪಡಿಸುವ ರೀತಿ ಹಿತಕರವಾಗಿದ್ದು ಇವರ ವಿಶೇಷ ಆಸಕ್ತಿ, ಪ್ರಾಮಾಣಿಕ ಪರಿಶ್ರಮ, ಶ್ಲಾಘನೀಯ. ಕನ್ನಡ ಸಾಹಿತ್ಯಾಸಕ್ತರು ಸಮಾಧಾನಕರವಾಗಿ ಒಂದುಸಲ ಓದಬಹುದಾದ ಆಕರ್ಷಕ ಹೊತ್ತಗೆ.

(ನವೆಂಬರ್ 1982ರ ಗ್ರಂಥಲೋಕ ಮಾಸಪತ್ರಿಕೆ ‘ಗ್ರಂಥಲೋಕದ ಮೂಸೆಯಲ್ಲಿ’ ಶೀರ್ಷಿಕೆಯಲ್ಲಿ ಪ್ರಕಟಿತ)

70 ಕೃತಿ : ಸಜ್ಜಲಗುಡ್ಡ ಶರಣಮ್ಮನವರು

 ಕರ್ತೃ : ಗಿರಿರಾಜ ಹೊಸಮನಿ

ವೀರಶೈವ ಪುಣ್ಯಪುರುಷ ಸಾಹಿತ್ಯ ರತ್ನಮಾಲೆ” ಸರಣಿ ಪ್ರಕಟಣೆಯ 53ನೇ ಕಾಣಿಕೆಯ ಕಿರುಪುಸ್ತಕ.  ಕನ್ನಡ ಸಾಹಿತ್ಯ ಪ್ರಪಂಚದ ವಿಶೇಷವಾಗಿ ವೀರಶೈವ ಪುಣ್ಯಪುರುಷರ ಸಾಹಿತ್ಯ ವಿಭಾಗದಲ್ಲಿ ಅನುಭವಿ ಲೇಖಕರಾದ ಗಿರಿರಾಜ ಹೊಸಮನಿ ಅವರಿಂದ ಸತ್ವಪೂರ್ಣವಾಗಿ ಮೂಡಿಬಂದಿದೆ. ಕುರುಬ ಜನಾಂಗದ ಸಜ್ಜಲಗುಡ್ಡ ಶರಣಮ್ಮ ಎಂಬ ಶಿವಶರಣೆಯೊಬ್ಬಳ ಜೀವನ ಚರಿತ್ರೆ. ಬಸವಣ್ಣನವರ ಧಾರ್ಮಿಕ ಚಿಂತನೆ ಸರಮಾಲೆ ಪುಸ್ತಕಗಳಂತೆ ಇದೂಸಹ ಓದುಗರನ್ನು ಆಧ್ಯಾತ್ಮದ ಕಡೆಗೆ ಕೊಂಚ ದೂರ ಕರೆದೊಯ್ಯುತ್ತದೆ.

ಶರಣಮ್ಮನವರು, ಮತೀಯ ಭಿನ್ನಾಭಿಪ್ರಾಯ ತೊಡೆದು ಹಾಕಿ ಸಮಾಜ ಕಲ್ಯಾಣದ ನಿಜಾರ್ಥವನ್ನು ತಮ್ಮ ನಡೆ-ನುಡಿ ಮೂಲಕ ಅರಿವು ಮಾಡಿಕೊಟ್ಟರು. ಸರ್ವಮತೀಯರ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸತ್ಕಾರ್ಯಗಳನ್ನ ಸಾಧಿಸಿದರು. ತಮ್ಮ ಉಸಿರಿನ ಅಂತಿಮ ಕ್ಷಣದವರೆಗು ಸತ್ಸಂಗ-ಸನ್ಮಾರ್ಗ ಬಿಟ್ಟುಕೊಡದೇ ಬದುಕಿದ್ದರು. ಅಮಾಯಕರಿಗೆ, ಅವಿದ್ಯಾವಂತರಿಗೆ ಸರಿಯಾದ ಮಾರ್ಗದರ್ಶನ ಮಾಡಿ ದೈವಾಧೀನರಾದರು. ಶತಾಯುಷಿ ಮಹಿಳೆಯ ಸಾರ್ಥಕ ಜೀವನವು ಸಾಮಾಜಿಕ ದೃಷ್ಟಿಯಿಂದಲು ಮೆಚ್ಚುವಂಥದ್ದು.

ಅಸಾಧಾರಣ ಶಿವಶರಣೆಯ ಜೀವನದ ಬಗ್ಗೆ ಮನ ಮುಟ್ಟುವಂತೆ, ತನು ತಟ್ಟುವಂತೆ ಸಂಕ್ಷಿಪ್ತವಾಗಿ ಬರೆದ ಈ ಪುಸ್ತಕವು ಕುರುಬ, ವೀರಶೈವರ ಕೃಪೆಗೆ ಮಾತ್ರವಲ್ಲದೆ ಶಿವಶರಣರ ಒಲುಮೆಗೂ ಪಾತ್ರವಾಗಬಹುದು. ಎಂದಿನಂತೆ ಕರುನಾಡ ಪುಣ್ಯಪುರುಷರ ಬಗೆಗಿನ ಮತ್ತೊಂದು ಕೃತಿಯನ್ನು ಲೋಕಾರ್ಪಣೆಗೈದ ಲೇಖಕ ಮತ್ತು ಪ್ರಕಾಶಕರಿಗೆ ಕನ್ನಡಿಗರ ಮತ್ತು ಶರಣರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

(1982 ನವೆಂಬರ್ ‘ಗ್ರಂಥಲೋಕ’ ಮಾಸಪತ್ರಿಕೆ ‘ಗ್ರಂಥಲೋಕದ ಮೂಸೆಯಲ್ಲಿ’ ಶೀರ್ಷಿಕೆಯಡಿ ಪ್ರಕಟಿತ)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-13

admin
the authoradmin

Leave a Reply