ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-13

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

 61 ಕೃತಿ :ರಂಗಭೂಮಿಮತ್ತು ಚಲನಚಿತ್ರ

ಮೂಲ : ಸತೀಶ್ ಬಹದ್ದೂರ್,  (ಪುಣೆ ಫಿಲಂ ಇನ್ಸ್ಟಿಟ್ಯೂಟ್)

ಕನ್ನಡಾನುವಾದ: ಕೆ.ವಿ.ಸುಬ್ಬಣ್ಣ

ನೀಲಕಂಠೇಶ್ವರ ನಾಟ್ಯಸೇವಾ ಸಂಘ(ನೀನಾಸಂ) ಸಂಸ್ಥಾಪಕ ರಂಗಕರ್ಮಿ ಲೇಖಕ ಅನುವಾದಕ ನಟ,ನಿರ್ಮಾಪಕ,ನಿರ್ದೇಶಕ, ಸಂಗೀತನಿರ್ದೇಶಕ ಕೆ.ವಿ.ಸುಬ್ಬಣ್ಣ. ತಾವು ಬದುಕಿದ್ದ ೭೩ವರ್ಷದ ಜೀವನದಲ್ಲಿ 40ವರ್ಷಕಾಲ ರಂಗಭೂಮಿ ಸೇವಕನಾಗಿ ದುಡಿದು ತಮ್ಮ ಕಂಪನಿ ಬೆಳೆಸುವುದರ ಜತೆಗೇ ಇತರರನ್ನೂ ಬೆಳೆಸಿದರು.

ಸಾವಿರಾರು ನಟ-ನಟಿಯರಿಗೆ ಬೆಳಕು ನೀಡಿ, ತೆರೆಮರೆಯ ಕಲಾವಿದರ ಬಾಳಿನ ಜ್ಯೋತಿ ಬೆಳಗಿದರು. ಪ್ರಪಂಚದಾದ್ಯಂತ ಕನ್ನಡ ರಂಗಭೂಮಿಯನ್ನು ಪರಿಚಯಿಸಿದ ಕೆ.ವಿ.ಸುಬ್ಬಣ್ಣನವರ ಹೆಸರು ಕೇಳಿರದ ಕಲಾವಿದರು ವಿರಳ. ಇಂತಹ ವಿಖ್ಯಾತ ರಂಗ ಸಾಮ್ರಾಟನಿಂದ ಕನ್ನಡಕ್ಕೆ ಭಾಷಾಂತರಗೊಂಡ ಮೂಲತಃ ಹಿಂದಿ ಲೇಖಕ (ಪುಣೆ ಫಿಲಂ ಇನ್ಸ್ಟಿಟ್ಯೂಟ್) ಸತೀಶ್ ಬಹದ್ದುರ್ ರವರ “ರಂಗಭೂಮಿ ಮತ್ತು ಚಲನಚಿತ್ರ” ಎಂಬ ಈ ಪುಸ್ತಕದಲ್ಲಿ ಗಹನವಾಗಿ ಚರ್ಚೆ ಮಾಡಲ್ಪಟ್ಟ ಎರಡು ಪ್ರಮುಖ ಭಾಗಗಳಿವೆ.

ಪುಸ್ತಕದ ಮೊದಲನೇ ಭಾಗದಲ್ಲಿ..

ರಂಗಭೂಮಿ ಮತ್ತು ಚಿತ್ರರಂಗ ಎಂಬೆರಡು ಬೇರೆಬೇರೆ ವಿಭಾಗದಲ್ಲಿ ಕಂಡುಬರುವ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಕುರಿತಾದ ಕೃತಿ ಇದು. ಏಕೆಂದರೆ, ರಂಗಭೂಮಿಯು ಹಿಂದಿನ ಕಾಲದ ಮನರಂಜನಾ ಅಸ್ತಿತ್ವ ಎನಿಸಿದರೆ, ಚಿತ್ರರಂಗವು ಆ ನಂತರದ ವಿಶಿಷ್ಟ ಮನರಂಜನೆಯ ದಾಖಲಿತ ಸ್ವರೂಪ ಎನಿಸುತ್ತದೆ, ಎಂಬ ವಿಚಾರವನ್ನು ಒತ್ತಿಒತ್ತಿ ಹೇಳಲಾಗಿದೆ.

ಈ ನಿತ್ಯಸತ್ಯ ವಾಸ್ತವ ಅರಿಯದೆ, ಕೇವಲ ರಂಗಭೂಮಿಯನ್ನು ಬೆಳ್ಳಿತೆರೆಯ ಮೇಲೆ ದಾಖಲಿಸಿದ್ರೆ ಸಾಕು…ಸಿನಿಮಾ ಆಗಿಬಿಡುತ್ತೆ, ಎಂಬ ಭ್ರಮೆಗೆ ಸಿಲುಕಿ ಬೇಕಾಬಿಟ್ಟಿಯಾಗಿ ಉಡಾಫೆ ಅಥವಾ ಉದಾಸೀನ ಮನೋಭಾವದಿಂದ ಶೋಕಿಗೋಸ್ಕರ ಚಲನಚಿತ್ರ ತಯಾರಿಸುವವರಿಗೆ ಎಚ್ಚರಿಕೆಯ ಘಂಟೆಯಾಗಿದೆ. ಇದೇ ವಿಷಯವನ್ನ ಮೊದಲ ಭಾಗದಲ್ಲಿ ತುಸು ಗಂಭೀರವಾಗಿಯೇ ಚರ್ಚಿಸಲಾಗಿದೆ.

ಪುಸ್ತಕದ ಎರಡನೇ ಭಾಗದಲ್ಲಿ…

ನಟ-ನಟಿಯರ ಅಭಿನಯ, ಸಂವಹನ ಕ್ರಿಯೆ, ಮುಂತಾದ ಪ್ರಮುಖ ವಿಚಾರಗಳ ಮೂಲಕ ರಂಗಭೂಮಿ ಮತ್ತು ಚಲನಚಿತ್ರ ಇವೆರಡೂ ಬೇರೆಯೇ ಆಗಿರುತ್ತವೆ, ಎಂಬುದನ್ನು ಸಹ ಕೂಲಂಕಷವಾಗಿ ವಿವೇಚಿಸಲಾಗಿದೆ. ಪ್ರತಿಯೊಂದು ಅಂಶವನ್ನು ಓದುಗರಿಗೆ ಮನವರಿಕೆ ಆಗುವಂತೆ ಸುಬ್ಬಣ್ಣ ಅನುವಾದ ಮಾಡಿದ್ದಾರೆ. ಪುಣೆ ಫಿಲಂ ಇನ್ಸ್ಟಿಟ್ಯುಟ್ ನ ಖ್ಯಾತ ಕಲಾವಿದ ಹಾಗೂ ಲೇಖಕ ಸತೀಶ್ ಬಹದ್ದುರ್ ಬರೆದಿರುವ ಮೂಲ ಕೃತಿಯು ಬಹುಶಃ ಭಾಷಾಂತರ ಕೃತಿಗಿಂತಲೂ ಅಮೋಘ ವಾಗಿರಬಹುದು.

(ಜನವರಿ1980’ಗ್ರಂಥಲೋಕ’ಮಾಸಿಕದಲ್ಲಿ ಪ್ರಕಟ)

62 ಕೃತಿ : ಭಾರತದಲ್ಲಿ ಚಲನಚಿತ್ರ ಸಂಸ್ಕೃತಿಯ ಪ್ರಸ್ತುತ ಸನ್ನಿವೇಶ

ಮೂಲಕರ್ತೃ : ಸತೀಶ್ ಬಹಾದೂರ್ (ಪುಣೆ ಫಿಲಂ ಇನ್ಸ್ಟಿಟ್ಯೂಟ್)

ಕನ್ನಡಾನುವಾದ : ಎಸ್.ದಿವಾಕರ

ಐತಿಹ್ಯ ಚಾರಿತ್ರಿಕವಾಗಿ ಚಲನಚಿತ್ರ ಸಂಸ್ಕೃತಿಯು  ಭಾರತದಲ್ಲಿ ಬೆಳೆದು ಬಂದುದನ್ನು ಮೂಲಕರ್ತೃ ಸತೀಶ್ ಬಹಾದುರ್ ಬರೆದಿರುವ ಮೂಲಕೃತಿಯಲ್ಲಿ ವಿಶದವಾಗಿ ಹೇಳಲಾಗಿದೆ. ಇದನ್ನು ಕನ್ನಡ ಭಾಷಾಂತರ ಪುಸ್ತಕದಲ್ಲಿ ಖ್ಯಾತ ಲೇಖಕ-ಅನುವಾದಕ ದಿವಾಕರ್ ತಿಳಿಸಿದ್ದಾರೆ. ಜನಪ್ರಿಯ ಸಿನಿಮಾ, ಕಮರ್ಷಿಯಲ್ ಫಿಲಂ ಹಾಗೂ ಮಾಧ್ಯಮ ನಿಷ್ಠೆಯ ಕಲಾತ್ಮಕ ಅಥವ ಪ್ರಯೋಗಾತ್ಮಕ ಚಲನಚಿತ್ರ: ಇವುಗಳಲ್ಲಿರುವಂಥ ಸೂಕ್ಷ್ಮ ವ್ಯತ್ಯಾಸಗಳನ್ನು ಸರಳ ರೀತಿಯಲ್ಲಿ ಹೇಳಲಾಗಿದೆ. 1950ರ ನಂತರ ಫಿಲಂ ಫೈನಾನ್ಸ್ ಕಾರ್ಪೊರೇಷನ್, ಫಿಲಂ ಇನ್ಸ್ಟಿಟ್ಯೂಟ್ ಹಾಗು ಫಿಲಂ ಸೊಸೈಟಿಗಳ ಮೂಲಕ ಕಂಡಂಥ ಗಮನಾರ್ಹ ಬೆಳವಣಿಗೆಯ ಚಿತ್ರಣವು ಭಾರತದಲ್ಲಿ ಚಲನಚಿತ್ರ ಸಂಸ್ಕೃತಿಯ ಪ್ರಸ್ತುತ ಸನ್ನಿವೇಶ ಕೃತಿಯಲ್ಲಿ ಕಂಡುಬರುತ್ತದೆ.

ಚಲನಚಿತ್ರಕ್ಕೆ ಸಂಬಂಧಿಸಿದ ಐದೂ ಪುಸ್ತಕಗಳ ಪ್ರಕಾಶಕರು; ಕೆ.ವಿ.ಸುಬ್ಬಣ್ಣನವರ ‘ಅಕ್ಷರ ಪ್ರಕಾಶನ’ ಹೆಗ್ಗೋಡು. [1]ಬೈಸಿಕಲ್ ಥೀವ್ಸ್ [2]ನಾಟಕ ಮತ್ತು ಸಿನೆಮಾ [3]ಅಭಿವೃದ್ಧಿಗಾಗಿ ಸಿನೆಮಾ [4]ರಂಗಭೂಮಿ ಮತ್ತು ಚಲನಚಿತ್ರ [5]ಭಾರತದಲ್ಲಿ ಚಲನಚಿತ್ರ ಸಂಸ್ಕೃತಿಯ ಪ್ರಸ್ತುತ ಸನ್ನಿವೇಶ. ಇವುಗಳ ಪೈಕಿ ಕಡೆಯ ೪ ಕೃತಿಗಳು ಭಾರತೀಯ ಸಿನಿಮಾದ ಸ್ಪಷ್ಟನೋಟ ತಿಳಿಸಿಕೊಡುತ್ತವೆ.

ಕೊನೇ 2ಪುಸ್ತಕಗಳು ಪುಣೆ ಫಿಲಂ ಇನ್ಸ್ಟಿಟುಟ್ ಕಲಾವಿದ-ಲೇಖಕ ಸತೀಶಬಹಾದುರ್ ಕೃತಿಗಳು. 3ಕೃತಿಗಳು ಅನುವಾದಗೊಂಡಿದ್ದರೆ, 2ಕೃತಿಗಳನ್ನು ಕೆ.ವಿ.ಸುಬ್ಬಣ್ಣ ಬರೆದಿದ್ದಾರೆ. ಎಲ್ಲ 5ಪುಸ್ತಗಳಲ್ಲು ನಾಟಕ-ಸಿನಿಮಾರಂಗಕ್ಕೆ ಸಂಬಂಧಪಟ್ಟ ಮುಖ್ಯ ವಿಷಯಗಳ ಬಗ್ಗೆ ವಿಸ್ತೃತ ವಿಚಾರಧಾರೆ ಹರಿಸಲಾಗಿದೆ. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಿಗೂ ಉದ್ಯಮಿಗಳಿಗೂ ಈ ಐದೂ ಪುಸ್ತಕಗಳು ಪ್ರಯೋಜನಕಾರಿ ಆಗಿವೆ.

(ಜನವರಿ 1980 ‘ಗ್ರಂಥಲೋಕ’ಮಾಸಪತ್ರಿಕೆಯಲ್ಲಿ ಪ್ರಕಟ)

63 ಕೃತಿ : ಪರಿಸರದ ಜನ

 ಕರ್ತೃ : ರಾಮಲಿಂಗಯ್ಯ ಉಪ್ಪಿನಕೆರೆ

ಕನ್ನಡ ಕಾವ್ಯಲೋಕಕ್ಕೆ ಹೊಸದಾಗಿ ಎಂಟ್ರಿಕೊಟ್ಟ ಕವಿಯೊಬ್ಬನ ಮೊಟ್ಟಮೊದಲ ಕವನ ಸಂಕಲನ “ಪರಿಸರದ ಜನ” ಎಂಬುವ ಈ ಪುಸ್ತಕ. ಗ್ರಾಮೀಣ ಸೊಗಡಿನ ಉಪ್ಪಿನಕೆರೆ ರಾಮಲಿಂಗಯ್ಯ ತುಸುಹೆಚ್ಚಿನ ಧೈರ್ಯಮಾಡಿ ಬರೆದು ಪ್ರಕಟಿಸಿ ಲೋಕಾರ್ಪಣೆ ಗೈದ ಇದರಲ್ಲಿ ಒಟ್ಟು ೨೩ ಕವನಗಳು ಸ್ಥಾನ ಪಡೆದಿವೆ.

ಕಾವ್ಯೇತರ ಕಾರಣಗಳಿಗಾಗಿ ಸೃಷ್ಟಿಯಾದುವೆಂದು ತಮ್ಮ ಮೊದಲ ಮಾತಿನ ಲೇಖಕರ ಪುಟದಲ್ಲಿ ಹೇಳಿಕೊಂಡಿದ್ದಾರೆ. ಕಾವ್ಯತ್ವದ ಮಾಂತ್ರಿಕ ಸ್ಪರ್ಶವಿಲ್ಲದೆ ಬೇರೆಯವರ ಟೀಕೆಗಳಿಗೆ ಉತ್ತರವಾಗಿ ಬರೆದ ಇಂತಹ ರಚನೆಗಳಲ್ಲಿ ಉತ್ಸಾಹವೊಂದೇ ಪ್ರಮುಖ ಕಾರಣ ವಾಗಿರುತ್ತದೆ, ಸಾಧನೆಗಿಂತಲೂ ಮಿತಿಗಳು ಹೆಚ್ಚಿಗೆ ಇರುತ್ತವೆ. ಆದ್ದರಿಂದ ಬಹುತೇಕ ಹೊಸ ಲೇಖಕರಿಗೆ ಇದರ ಅರಿವು ಇದ್ದೇ ಇರುತ್ತದೆ.

ಪ್ರಾರಂಭದಲ್ಲಿ ತನ್ನ ಬರವಣಿಗೆಯ ಕ್ಷೇತ್ರವನ್ನು  ತಿಳಿದುಕೊಳ್ಳುವುದು ಪ್ರತಿಯೊಬ್ಬ ಲೇಖಕನ ಜವಾಬ್ಧಾರಿ ಮಾತ್ರವಲ್ಲ ಆತನನ್ನ ಕಾಡುವ ಸಮಸ್ಯೆಯೂ ಆಗಿಬಿಡುತ್ತದೆ. ಇಂತಹ ಸಮಯದಲ್ಲಿ ರಚಿಸುವ ಕವನಗಳು ಆಕರ್ಷಕವಾಗಿ ಇರುತ್ತವೆ. ಈ ಲೇಖಕರಿಗೂ ತಮ್ಮ ಪ್ರಾಮಾಣಿಕ ಪ್ರಯತ್ನದ ಮಿತಿಯ ಅರಿವು ಸ್ಪಷ್ಟವಾಗಿ ಇರುವುದರಿಂದ ಕಾವ್ಯದ ಹೊರತಾಗಿ ಬೇರೆ ಪ್ರಾಕಾರಗಳ ಸಾಹಿತ್ಯದ ಕೃಷಿಗೂ ಇವರು ಪ್ರಯತ್ನಿಸಬಹುದೆಂದು ವಿಮರ್ಶಕರು ಆಶಿಸಬಹುದು. ೧೨ ಕವನಗಳು ಪರವಾಯಿಲ್ಲ ಎನಿಸಿದರೆ, 6 ಕವನಗಳು ಹಿತಕರವಲ್ಲ ಎನಿಸುತ್ತದೆ.

ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಕ್ಕರೆ ಇವರೂ ಸಹ ಒಂದೊಳ್ಳೆಯ ಕವಿ ಆಗಬಲ್ಲರು ಎಂಬ ಕುರುಹು ತೋರಿಸಿದ್ದಾರೆ. ರಾಮಲಿಂಗಯ್ಯನಂಥ ಹುರುಪಿನ ಹೊಸ ಲೇಖಕರನ್ನು ಎಲ್ಲರು ಬೆಂಬಲಿಸುವುದು ಹಾಗೂ ಇಂಥವರು ಮತ್ತಷ್ಟು ಕೃತಿಗಳನ್ನು ರಚಿಸಲು ಪ್ರೋತ್ಸಾಹ ನೀಡುವುದು ಓದುಗರ ಸಾಹಿತ್ಯಧರ್ಮ ಅಲ್ಲವೇ…?!

(ಜನವರಿ1980 ಗ್ರಂಥಲೋಕ ಮಾಸಿಕದಲ್ಲಿ ಪ್ರಕಟಿತ)

64 ಕೃತಿ : 9ನೇ ಏಶಿಯನ್ ಕ್ರೀಡಾಕೂಟ, ದಿಲ್ಲಿ 1982

 ಕರ್ತೃ : ಎನ್.ಎಸ್.ಪಾಟೀಲ

‘ಅಪ್ಪು’ ಆನೆಯಮರಿ ಸುಂದರ ಚಿತ್ರದ ಹೊದಿಕೆಯುಳ್ಳ ಪುಸ್ತಕ. 1982ಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಜರುಗಿದ 9ನೇ ಏಶಿಯನ್ ಕ್ರೀಡಾಕೂಟ ಆಟೋಟ ಸ್ಫರ್ಧೆಗಳನ್ನು ಕುರಿತಾದ ಕೃತಿ. ಇದನ್ನು ಬರೆದವರು ಕನ್ನಡನಾಡಿನ ಜನಪ್ರಿಯ ಕ್ರೀಡಾ ಲೇಖಕ ಎನ್.ಎಸ್.ಪಾಟೀಲ ಎಂಬುದುದೊಂದೇ ಓದುಗರಿಗೆ ನೀಡುವ ಸಮಾಧಾನಕರ ಸಂಗತಿ. ಶೀರ್ಷಿಕೆ, ಮುಖಪುಟ, ಇತ್ಯಾದಿ ಗಮನಿಸಿದವರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ.

ಪುಸ್ತಕದ ಒಳಗೆ ಇಣುಕಿ ನೋಡಿದಾಗ ಹೊಗಳುವಂಥ ಸಾಧನೆ ಏನೂ ಕಂಡುಬರುವುದಿಲ್ಲ ಎಂಬುದೆ ಇಲ್ಲಿನ ಸೋಜಿಗ! ‘ಏಷಿಯಾಡ್-82’ ಅಂತಾರಾಷ್ಟ್ರೀಯ ಕ್ರೀಡೆಗಳು (ನವೆಂಬರ್ 19 ರಿಂದ -ಡಿಸೆಂಬರ್ 4ರವರೆಗೆ) ಪ್ರಾರಂಭವಾಗುವ ಮುನ್ನವೇ ಈ ಪುಸ್ತಕವು ಆಗಸ್ಟ್ ನಲ್ಲಿ ಬಿಡುಗಡೆ ಆಗಿರುವುದು ಮತ್ತೊಂದು ಆಶ್ಚರ್ಯ! ಸ್ವಯಂ ಪಾಟೀಲರೇ ಸಂಪಾದಕರ ಕೆಲಸವನ್ನೂ ಮಾಡಿದ್ದಾರೆ ಎಂಬುವ ನನ್ನ ಪ್ರಾಮಾಣಿಕ ವಿಮರ್ಶೆ ನಿಷ್ಟೂರಕ್ಕೆ ಎಡೆ ಮಾಡಿಕೊಡಬಹುದು. ಆದರೂ ನಾನಿಲ್ಲಿ ಸತ್ಯ ಬರೆಯುವ ಗತ್ತು ತೋರಿಸಿದ್ದೇನೆ ಅಷ್ಟೇ?!

1951ರಲ್ಲಿ ದಿಲ್ಲಿಯಿಂದಲೇ ಆರಂಭವಾದ ಪ್ರಪ್ರಥಮ ಏಷಿಯನ್ ಕ್ರೀಡಾಕೂಟದಿಂದ ಮೊದಲ್ಗೊಂಡು 1978ರಲ್ಲಿ ಬ್ಯಾಂಕಾಕ್ ನಲ್ಲಿ ಜರುಗಿ ಮುಕ್ತಾಯಗೊಂಡ 8ನೆ ಏಷಿಯನ್ ಕ್ರೀಡಾಕೂಟದವರೆಗೆ ತತ್ಸಂಬಂಧದ ಸುದ್ದಿ ಸಮಾಚಾರ, ಟೀಕೆ ಟಿಪ್ಪಣಿ, ಚಿತ್ರ ಭಾವಚಿತ್ರ, ವರದಿ ಸಂಪಾದಕೀಯ, ಇತ್ಯಾದಿ ಎಲ್ಲವೂ  ಪ್ರಕಟಗೊಂಡ ಕುರಿತಾದ ಮತ್ತು ಎಲ್ಲ ಬಗೆಯ ಪತ್ರಿಕಾ ಮಾಧ್ಯಮ ಸಂಗ್ರಹಗಳನ್ನು ಒಟ್ಟಾರೆ ಕ್ರೋಢೀಕರಿಸಿದ ವರದಿ ಇದರಲ್ಲಿದೆ.

ಯಾವುದೇ ಒಬ್ಬ ಕ್ರೀಡಾಭಿಮಾನಿ ಸಹನೆ ಕಳೆದುಕೊಳ್ಳದೆ ತುಸು ಆಸಕ್ತಿ ತಳೆದು  ಓದಬಹುದಾದ ಈ ಪುಸ್ತಕದಲ್ಲಿ ಹಲವು ಅಂಕಿ-ಅಂಶ ಸೇರಿದಂತೆ ಬಹುತೇಕ ಎಲ್ಲ ವಿವರಣೆಗಳನ್ನು ಯಥಾವತ್ತಾಗಿ ದಾಖಲಿಸಲಾಗಿದೆ. ಕೆಲವು ವಿಮರ್ಶೆಗಳು ಹತ್ತಾರು ಪತ್ರಿಕೆಗಳಿಂದ ಎರವಲು ಪಡೆದವೇ ಆಗಿದ್ದು ಸ್ವಂತಿಕೆಯ ಬರವಣಿಗೆಯು ಬಹಳ ವಿರಳ. ಕ್ರೀಡಾವರದಿಗಳ ಸಂಗ್ರಹ ಪುಸ್ತಕ ಎಂಬಂತೆ ಬರೆಯಲಾಗಿದ್ದರೂ ಇದರಲ್ಲಿರುವ:

*15ನೇ ಏಷಿಯನ್ ಗೇಮ್ಸ್, *ಕಾಮನ್ವೆಲ್ತ್ ಕ್ರೀಡೆಗಳು, *ಒಲಂಪಿಕ್ ಗೇಮ್ಸ್. ಈ ಮೂರೂ ಕ್ರೀಡಾಕೂಟಗಳ ತುಲನಾತ್ಮಕ ಲೇಖನಗಳು ಉಪಯುಕ್ತವಾಗಿದ್ದು ಇದ್ದುದರಲ್ಲಿ ಉತ್ತಮ ಅಧ್ಯಾಯಗಳು ಎಂದು ಧಾರಾಳವಾಗಿ ಹೇಳಬಹುದು.

– ಕುಮಾರಕವಿ ಬಿ.ಎನ್.ನಟರಾಜ್

( 1983 ಜನವರಿ ‘ಗ್ರಂಥಲೋಕ’ ಮಾಸಪತ್ರಿಕೆಯಲ್ಲಿ ಪ್ರಕಟ).

65 ಕೃತಿ : ಕ್ರೀಡಾ ವಿಜ್ಞಾನ (sports as a science)

ಕರ್ತೃ : ಎನ್.ಎಸ್.ಪಾಟೀಲ

ಕ್ರೀಡಾ ಇತಿಹಾಸ’ ಅಧ್ಯಾಯದಿಂದ ಮೊದಲ್ಗೊಂಡು ‘ಕ್ರೀಡಾಪಟುವಿನ ನೀತಿ’ ವರೆಗೆ ಒಟ್ಟು 185ಪುಟಗಳಷ್ಟು ಧೀರ್ಘವಾಗಿ ಬರೆದಿರುವ ಹದಿನೇಳು ಅಧ್ಯಾಯಗಳ ಕ್ರೀಡಾ ವಿಜ್ಞಾನ (sports as a science) ಕೃತಿಯು ಖ್ಯಾತ ಕ್ರೀಡಾಲೇಖಕ ಪಾಟೀಲರ ಲೇಖನಿಯಿಂದ ಹೊರಬಂದು ಲೋಕಾರ್ಪಣೆ ಆಗಿದೆ. ಕ್ರೀಡೆಯು ವಿಜ್ಞಾನದ ಪ್ರಮುಖ ಅಂಗವಿದ್ದಂತೆ, ನಿರಂತರ ಹರಿವ ಸಾಹಿತ್ಯ ಸುಧೆಯಂತೆ, ಎಂಬುದನ್ನು ಪ್ರತಿಪಾದಿಸುವ ರೀತಿ ಸದರಿ ಪುಸ್ತಕದಲ್ಲಿ; ಸಾರವಿದೆ ಸಾರಾಂಶವಿದೆ ಸ್ವಾರಸ್ಯವೂಇದೆ. ಇವುಗಳನ್ನ ಪುಷ್ಟೀಕರಿಸುವ 5 ಲೇಖನಗಳು:

*ಒಲಂಪಿಕ್ಸ್, *ಕ್ರೀಡೆ ಹಾಗು ಮನರಂಜನೆ, *ಕ್ರೀಡಾ ಮನೋವಿಜ್ಞಾನ, *ಕ್ರೀಡೆ ಮತ್ತು ಯೋಗ, *ಏಶಿಯನ್ ಕ್ರೀಡೆಗಳು. ಪ್ರಸಕ್ತ ಅಧ್ಯಾಯಗಳು ಎಲ್ಲಕ್ಕಿಂತ ವಿಶೇಷ ಎನಿಸಿ ಸ್ವಲ್ಪವಾದರೂ ಮೇಲ್ಮಟ್ಟದಲ್ಲಿ ನಿಲ್ಲುತ್ತವೆ.

ಎನ್.ಎಸ್.ಪಾಟೀಲರ ಕ್ರೀಡಾವಿಜ್ಞಾನ ಕೃತಿಯು ಕ್ರೀಡಾಭಿಮಾನಿಗಳನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಅಲ್ಲದೆ ಸಾಂದರ್ಭಿಕ ಚಿತ್ರಗಳಿಂದ ಕೂಡಿರುವ ಈ ಪುಟ್ಟ ಗ್ರಂಥವು ಕ್ರೀಡಾ ಪಟುಗಳಿಗೆ, ಕ್ರೀಡಾ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎನಿಸುತ್ತದೆ. ಏಕೆಂದರೆ ಕ್ರೀಡಾ ಕ್ಷೇತ್ರದ ಪ್ರತಿಯೊಬ್ಬರಿಗೂ ಒಂದಲ್ಲೊಂದು ರೀತಿಯಲ್ಲಿ ನೆರವಾಗುವ ಅನೇಕ ಉಪಯುಕ್ತ ಮಾಹಿತಿ ಮತ್ತು ಸಲಹೆ ಇದರಲ್ಲಿದೆ.

(ಜನವರಿ 1983’ಗ್ರಂಥಲೋಕ’ಮಾಸಪತ್ರಿಕೆ “ಗ್ರಂಥಲೋಕದ ಮೂಸೆಯಲ್ಲಿ” ಶೀರ್ಷಿಕೆಯಡಿ ಪ್ರಕಟ)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-12

admin
the authoradmin

Leave a Reply