LatestMysore

ಗ್ಯಾರಂಟಿ ಯೋಜನೆಯಿಂದ ಪ್ರತಿ ಮಹಿಳೆಯ ಖಾತೆಗೆ 62 ಸಾವಿರ ಜಮಾ: ಎಂ.ಎಸ್.ಮಹದೇವ್

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಗ್ಯಾರಂಟಿ ಯೋಜನೆ ಅನುಷ್ಠಾನಗೊಂಡು 3 ವರ್ಷಗಳಾಗುತ್ತಿದ್ದು ಈಗಾಗಲೇ ಪ್ರತಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರದಂತೆ 31 ಕಂತುಗಳಿಂದ 62 ಸಾವಿರ ರೂಪಾಯಿಗಳು ಖಾತೆಗೆ ಜಮಾ ಆಗಿದ್ದು, ಯುವನಿಧಿ ಯೋಜನೆಯಲ್ಲಿ 5ಕೋಟಿ 30ಲಕ್ಷ ರೂಪಾಯಿ ಬಂದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಸ್.ಮಹದೇವ್ ಹೇಳಿದರು.

ಜಿಲ್ಲೆಯ ಕೆ.ಆರ್.ನಗರ ತಾಲೂಕು ಹೊಸಅಗ್ರಹಾರ ಗ್ರಾ.ಪಂ.ವ್ಯಾಪ್ತಿಯ ಹರಂಬಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ಯಾರಂಟಿ ಯೋಜನೆ ಸಾಮಾನ್ಯ ಜನತೆಯ ಜೀವನವನ್ನು ಸುಧಾರಿಸುವಲ್ಲಿ ಯಶಸ್ವಿಯಾಗಿದ್ದು ಇದರಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇದರ ಯಶಸ್ಸು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕೆಂದರು.

ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಇದುವರೆವಿಗೆ ಎಲ್ಲಾ ಯೋಜನೆಗಳು ಕ್ರಮಬದ್ದವಾಗಿ ತಲುಪುತ್ತಿದ್ದು ತಾಂತ್ರಿಕದೋಷದಿಂದ ಅಥವಾ ಹಲವಾರು ಕಾರಣಗಳಿಂದ ಯೋಜನೆ ತಲುಪದಿದ್ದಲ್ಲಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲವೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಂಡು ಯೋಜನೆಯ ಸೌಲಭ್ಯ ಸದ್ಬಳಕೆಮಾಡಿಕೊಳ್ಳುವಂತೆ ಹೇಳಿದರು.

ಸೆಸ್ಕಾಂ ಕಛೇರಿಗೆ ತೆರಳಿ ಇಲ್ಲವೆ ಮನೆಬಾಗಿಲಿಗೆ ಬರುವ ಪವರ್‌ ಮೆನ್‌ಗಳಿಗೆ ಮಾಹಿತಿ ನೀಡಿ ತಪ್ಪದೆ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನು ಅಪ್‌ ಡೇಟ್ ಮಾಡಿಕೊಳ್ಳುವಂತೆ ಹೇಳಿದ ಅಧ್ಯಕ್ಷರು, ಯಾವುದೇ ಯೋಜನೆಯಲ್ಲಿ ಸಮಪರ್ಕವಾಗಿ ನಿಯಮಪಾಲಿಸಿ ಸರಕಾರದ ಯೋಜನೆಗಳ ಸೌಲಭ್ಯ ಪಡೆಯುವಂತೆ ಹೇಳಿದರು.

ಸಿಡಿಪಿಒ ಸಿ.ಎಂ.ಅಣ್ಣಯ್ಯ, ಆಹಾರಇಲಾಖೆ ಶಿರಸ್ತೇದಾರ್ ಮಂಜುನಾಥ್, ಸಾರಿಗೆ ಇಲಾಖೆ ಅಧಿಕಾರಿ ಗುರುಬಾರಾಗಣಿ, ಸೆಸ್ಕಾಂ ಎಇಇ, ತಮ್ಮ ಇಲಾಖೆಗಳ ಗ್ಯಾರಂಟಿ ಅನುಷ್ಠಾನದಲ್ಲಿ ಆಗುತ್ತಿರುವ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದರು.

ತಾ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿ.ಪಿ.ಕುಲದೀಪ್, ಗ್ಯಾರಂಟಿ ಅನುಷ್ಠಾನಸಮಿತಿ ಸದಸ್ಯ ಮೋಹನ್‌ದೇವರಹಟ್ಟಿ ಮತ್ತಿತರರು ಮಾತನಾಡಿದರು. ಸಮಾಜಕಲ್ಯಾಣಾಧಿಕಾರಿ ಶಂಕರಮೂರ್ತಿ, ಹೊಸಅಗ್ರಹಾರ ಗ್ರಾ.ಪಂ.ಪಿಡಿಒ ಶಲ್ಯಾ, ಸಿಬ್ಬಂದಿ ಕುಮಾರ್, ಗ್ಯಾರಂಟಿ ಅನುಷ್ಠಾನಸಮಿತಿ ಸದಸ್ಯ ಚೇತನ್, ಮಂಜು, ಕುಮಾರ್, ಗಂಗಾಧರ್, ಜಯಮ್ಮ, ಸೋಮಣ್ಣ ಮತ್ತು ಗ್ರಾಮಸ್ಥರು ಹಾಜರಿದ್ದರು.

admin
the authoradmin

Leave a Reply