ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಕಟ್ಟೆಮಳಲವಾಡಿಯ ಬೆಳಕು ಸೇವಾಸಂಸ್ಥೆ ವತಿಯಿಂದ ಸಂಕಷ್ಟದಲ್ಲಿರುವ ವೃದ್ಧರಿಗಾಗಿ ಆರಂಭಿಸಿರುವ ಹಗಲು ಯೋಗಕ್ಷೇಮ ಕೇಂದ್ರವನ್ನು ಶಾಸಕರ ಪತ್ನಿ ವರ್ಷಾ ಹರೀಶ್ ಗೌಡ ಉದ್ಘಾಟಿಸಿದರು.
ಸಂಸ್ಥೆಯ ಆವರಣದಲ್ಲಿ ವೃದ್ದರಿಗೆ ಸಿಹಿ ಊಟ ಬಡಿಸಿ ಮಾತನಾಡಿದ ಅವರು, “ಇದೊಂದು ಮಾನವೀಯ ಕಾರ್ಯವಾಗಿದೆ. ಯಾರೂ ಇಲ್ಲದವರು ಅನಾಥರಲ್ಲ, ಎಲ್ಲರೂ ಇದ್ದು ಇಲ್ಲದವರು ಅನಾಥರಾಗಿರುತ್ತಾರೆ. ಎಷ್ಟೋ ಮನೆಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಹಾಗೂ ಸೊಸೆಯಂದಿರು ಅತ್ತೆ-ಮಾವಂದಿರನ್ನು ವಯಸ್ಸಾದ ವರನ್ನು ತಿರಸ್ಕಾರ ಮನೋಭಾವದಿಂದ ಬೀದಿಗೆ ತಳ್ಳುವ ಸ್ಥಿತಿ ಇದೆ.
ಅಂತಹವರು ತುತ್ತು ಅನ್ನಕ್ಕಾಗಿ ಪರದಾಡುತ್ತಾರೆ. ಇಲ್ಲವೇ ಭಿಕ್ಷೆಗೆ ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ನಿರ್ಗತಿಕ ವೃದ್ಧರನ್ನು ಗುರುತಿಸಿ ಇವರಿಗೆ ಹಗಲು ಯೋಗಕ್ಷೇಮ ಕೇಂದ್ರ ಆರಂಭಿಸಿ ನಿತ್ಯ ಮಧ್ಯಾಹ್ನ ಒಂದೊತ್ತಿನ ಊಟ ನೀಡಲು ನಿರ್ಧರಿಸಿರುವುದು ಸಂಸ್ಥೆಯ ಪುಣ್ಯದ ಕಾರ್ಯ. ಇಂತಹ ಮಾನವೀಯ ಕಾರ್ಯಕ್ಕೆ ನಮ್ಮ ಕುಟುಂಬ ಸಹಕಾರಿಯಾಗಿ ನಿಲ್ಲಲಿದೆ,” ಎಂದರು.

ಬೆಳಕು ಸಂಸ್ಥೆಯ ಸಂಸ್ಥಾಪಕ ನಿಂಗರಾಜ್ ಮಲ್ಲಾಡಿ ಮಾತನಾಡಿ, “ಕಟ್ಟೆಮಳಲವಾಡಿ ಸುತ್ತಮುತ್ತ ಸುಮಾರು 40ಕ್ಕೂ ಹೆಚ್ಚು ಸಂಕಷ್ಟ ದಲ್ಲಿರುವ ವೃದ್ಧರನ್ನು ಗುರುತಿಸಿದ್ದೇವೆ. ಇವರಿಗೆ ಒಂದೊತ್ತಿನ ಊಟಕ್ಕೂ ಅವರಿವರ ಬಳಿ ಕೈ ಚಾಚುವ ಪರಿಸ್ಥಿತಿ ಇದೆ. ನಮಗೆ ಯಾರೂ ಇಲ್ಲ ಎನ್ನುವ ಮನೋಭಾವ ಇವರಲ್ಲಿದೆ. ಇಂತಹವರ ಸಂಕಷ್ಟಕ್ಕೆ ಬೆಳಕು ಸೇವಾ ಸಂಸ್ಥೆ ಪ್ರಾರಂಭದಲ್ಲಿ ಪ್ರತಿ ಶುಕ್ರವಾರ ಮಧ್ಯಾ ಹ್ನದ ಊಟವನ್ನು ಕೊಟ್ಟು ಆರೈಕೆ ಮಾಡುತ್ತಿತ್ತು. ಇದೀಗ ಎಲ್ಲರ ಸಹಕಾರ ದಿಂದ ನಿತ್ಯ ಒಂದೊತ್ತಿನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇದೇ ವೇಳೆ ವೃದ್ದ ಮಹಿಳೆಯರು ವರ್ಷಾ ಹರೀಶಗೌಡ ಅವರನ್ನು ಸನ್ಮಾನಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವಲಿಂಗಯ್ಯ, ವಿಜಯಲಕ್ಷ್ಮಿ, ನಿವೃತ್ತ ಪಿಡಿಒ ಕೆಂಚೇಗೌಡ, ಗ್ರಾಮದ ಮುಖಂಡರಾದ ಕೇಶವಮೂರ್ತಿ, ಕೃಷ್ಣಶೆಟ್ಟಿ ಇತರರಿದ್ದರು.








