LatestMysore

ಅಲೆಮಾರಿ ವ್ಯಕ್ತಿ ವೆಂಕಟೇಶನಿಗೆ ಸ್ಕೂಟರ್  ಅಪಘಾತ : ಸವಾರ ಪರಾರಿ…ದಸಂಸ ತೀವ್ರ ಆಕ್ರೋಶ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲ್ಲೂಕು ಕಟ್ಟೆಮಳಲವಾಡಿ ಗ್ರಾಮದ ಅಲೆಮಾರಿ ಸಮುದಾಯದ ವೆಂಕಟೇಶ ಎಂಬ ವ್ಯಕ್ತಿಗೆ ಸೋಮವಾರ(ಆ.10) ಬೆಳಿಗ್ಗೆ 4ಗಂಟೆ ಸಮಯದಲ್ಲಿ ಕಟ್ಟೆಮಳಲವಾಡಿಯಿಂದ ಹುಣಸೂರಿಗೆ ಕೂಲಿ ಕೆಲಸಕ್ಕಾಗಿ ಜಯರಾಮೇಗೌಡರ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅಪರಿಚಿತ ವ್ಯಕ್ತಿಯ ಸ್ಕೂಟರ್  ವೇಗವಾಗಿ ಬಂದು ವೆಂಕಟೇಶನಿಗೆ ಅಪಘಾತ ಮಾಡಿದ ಪರಿಣಾಮ ಆತನ ಬಲಗಾಲು ಮುರಿದು ಹೋಗಿದ್ದು, ಸ್ಕೂಟರ್ ಸವಾರ ನಿಲ್ಲಿಸಿ ಆತನನ್ನು ರಕ್ಷಿಸಿ ಆಸ್ಪತ್ರೆಗೂ ಸೇರಿಸದೆ  ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದನ್ನು ಹುಣಸೂರು ದಸಂಸ ವು ತೀವ್ರವಾಗಿ ಖಂಡಿಸಿದೆ.

ಈ ಘಟನೆಯು ಅಮಾನವೀಯ ಘಟನೆಯಾಗಿದೆ. ಅಪಘಾತಗಳು ಆಕಸ್ಮಿಕವಾದರೂ ಆತನನ್ನು ಉಪಚರಿಸಿ ಆಸ್ಪತ್ರೆಗೂ ದಾಖಲು ಮಾಡದೇ ಪಲಾಯನ ಮಾಡುವುದು ಮನುಷ್ಯತ್ವವಿಲ್ಲದವರು ಮಾಡುವ ಕೃತ್ಯವಾಗಿದೆ.  ವೆಂಕಟೇಶ ಅಲೆಮಾರಿ ಸಮುದಾಯಕ್ಕೆ ಸೇರಿದ್ದು, ಗುಡಿಸಲುವಾಸಿಯಾಗಿ ತನ್ನ ತಾಯಿ ಎಲ್ಲಮ್ಮ ನೊಂದಿಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಾಗಿದ್ದು, ಕೂಲಿ ನಾಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಇಂತಹ ದಿಕ್ಕು ದನಿಯಿಲ್ಲದ ಅಲೆಮಾರಿ ವೆಂಕಟೇಶನಿಗೆ ಸ್ಕೂಟರ್ ಸವಾರ ಅಪಘಾತ ಮಾಡಿ ಕಾಲು ಮುರಿದಿರುವುದು ಆತನ ಬದುಕೇ ನಶ್ವರವಾದಂತಾಗಿದೆ.

ಈ ಅಪಘಾತದ ವಿಷಯವು ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರ ಗಮನಕ್ಕೆ ಬಂದು ಅಪಘಾತ ವಾಗಿರುವ ವ್ಯಕ್ತಿಯನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸತೀಶ್ ರವರು ವೆಂಕಟೇಶನಿಗೆ ಕಾಲಿನ ಮೂಳೆ ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಪಿ.ಕೆ. ಟ್ರಾಮಾ ಕೇರ್ ಸೆಂಟರ್ ಗೆ  ಕರೆದುಕೊಂಡು ಹೋಗುವಂತೆ ಹೇಳಿದಾಗ ನಾನು ಡಾಕ್ಟರೇ ಈತನು ತುಂಬಾ ನಿರ್ಗತಿಕನಾಗಿದ್ದು,  ಈತನ ಬಳಿ ರೇಷನ್ ಕಾರ್ಡು ಸಹ ಇರುವುದಿಲ್ಲ. ಆಸ್ಪತ್ರೆಯ ಚಿಕಿತ್ಸೆಗೂ ಈತನ ಬಳಿ ಹಣವಿರುವುದಿಲ್ಲ. ದಯಮಾಡಿ ಈತನಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಈತನನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ಉಚಿತವಾಗಿ ಮಾಡಿಕೊಡಿ ಎಂದು  ಕೇಳಿಕೊಳ್ಳಲಾಯಿತು.

ದಸಂಸ ದ ಮನವಿಗೆ ಸ್ಪಂದಿಸಿದ ಡಾ. ಸತೀಶ್ ರವರು ಮೈಸೂರಿನ ಪಿ.ಕೆ. ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಫೋನ್ ಮಾಡಿ ವೆಂಕಟೇಶನ ಪರಸ್ಥಿತಿಯನ್ನು ತಿಳಿಸಿ ಉಚಿತವಾಗಿ ಚಿಕಿತ್ಸೆ ನೀಡುವಂತೆ ಕೇಳಿಕೊಂಡರು. ನಂತರ ವೆಂಕಟೇಶನನ್ನು ಮೈಸೂರಿನ ಪಿ.ಕೆ. ಟ್ರಾಮಾ ಸೆಂಟರ್ಗೆ ದಾಖಲಿಸಿ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈತನನ್ನು ಆ 11ರ ಮಂಗಳವಾರ ಪಿ.ಕೆ ಟ್ರಾಮಾ ಕೇರ್ ಸೆಂಟರ್ಗೆ ಭೇಟಿ ನೀಡಿ ಆತನ ಆರೋಗ್ಯವನ್ನು ವಿಚಾರಿಸಿ ಯಾವುದೇ ದಾಖಲೆಗಳಿಲ್ಲದಿದ್ದರೂ ಮಾನವೀಯತೆಯ ಆಧಾರದ ಮೇಲೆ ಚಿಕಿತ್ಸೆ ಕೊಡುತ್ತಿರುವ  ಅಲ್ಲಿನ ವೈದ್ಯಾಧಿಕಾರಿಗಳಿಗೆ  ಮತ್ತು ಆಸ್ಪತ್ರೆಯ ನೋಡಲ್ ಅಧಿಕಾರಿಯಾದ ಡಾ. ನೀಲನಗೌಡ ಪಿ.ಕೆ ಪಾಟೀಲ್ ರವರಿಗೆ ದಸಂಸ ವು ನೊಂದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತದೆ.

ಅಪಘಾತ ಮಾಡಿದ ವ್ಯಕ್ತಿ ಒಂದು ಕಡೆ ಪರಾರಿಯಾದರೆ ಮತ್ತೊಂದು ಕಡೆ ಮಾನವೀಯತೆ ಮತ್ತು ಮನುಷ್ಯತ್ವದ ನೆಲೆಗಟ್ಟಿನಲ್ಲಿ ವೈದ್ಯಾಧಿಕಾರಿಗಳು ಯಾವುದೇ ಆಪೇಕ್ಷೆ ಇಲ್ಲದೆ ಚಿಕಿತ್ಸೆಕೊಡುವುದು ಮತ್ತೊಂದೆಡೆಯಾಗುವುದು ಇನ್ನೂ ಸಮಾಜದಲ್ಲಿ ಮಾನವೀಯತೆ ಉಳಿದಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ವೆಂಕಟೇಶನಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಂತೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ಅಲೆಮಾರಿ ವೆಂಕಟೇಶನಿಗೆ ಹುಣಸೂರು ಶಾಸಕರಾದ ಜಿ.ಡಿ. ಹರೀಶ್ ಗೌಡ ರವರಿಂದ ಆಸ್ಪತ್ರೆಯ ನೋಡಲ್ ಅಧಿಕಾರಿಯಾದ ಡಾ. ನೀಲನಗೌಡ ಪಿ.ಕೆ ಪಾಟೀಲ್ ರವರಿಗೆ ಶಿಫಾರಸ್ಸು ಪತ್ರವನ್ನು ಕೊಡಿಸಿಕೊಡುವಂತೆ ತಿಳಿಸಿರುತ್ತಾರೆ. ಶಾಸಕರಿಗೆ ಶಿಫಾರಸ್ಸು ಪತ್ರಕ್ಕಾಗಿ ದಸಂಸ ವು ಮನವಿ ಮಾಡಿಕೊಂಡಿದೆ.

ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೆಂಕಟೇಶನ ಮಗನಾದ ರವಿ ರವರಿಂದ  ದೂರು ದಾಖಲಿಸಿ ಹಿಟ್ ಅಂಡ್ ರನ್ ಕೇಸು ದಾಖಲಿಸಲಾಗುವುದು. ಪೊಲೀಸ್ ನವರು ಅಪಘಾತ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ನೊಂದ ವೆಂಕಟೇಶನಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಹಾಗೂ ಪರಿಹಾರ ಕೊಡಿಸಿಕೊಡಬೇಕೆಂದು  ದಸಂಸ ವು ಮನವಿ ಮಾಡಿದೆ.

admin
the authoradmin

Leave a Reply