ArticlesLatest

ನೂರಾರು ಸಮಸ್ಯೆಗಳ ನಡುವೆ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ…! ಬದಲಾಗದ ದೇಶದ ಹಣೆಬರಹ

ಪ್ರತಿ ವಷ೯ ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ನನ್ನ ಮನದಲ್ಲಿ ಹತ್ತಾರು ವಿಚಾರಗಳು ಓಡಾಡುತ್ತಲೇ ಇರುತ್ತದೆ…! ಆಗಸ್ಟ್ ಒಂದು… ಎರಡು… ಎಂದು ಲೆಕ್ಕ ಹಾಕುತ್ತಾ ಆಗಸ್ಟ್ ಹದಿನೈದು ತಲುಪುತ್ತಿದ್ದಂತೆ ಮನಸ್ಸು ಒಂದು ಕಡೆ ಸಂಭ್ರಮ – ಸಡಗರದಲ್ಲಿ ಮುಳುಗಿದ್ದರೇ, ಮತ್ತೊಂದು ಕಡೆ ನೋವು -ಸಂಕಟದಿಂದ  ರೋಧಿಸತೊಡಗುತ್ತದೆ…!!

ನಿಜ…., ನಮ್ಮದ್ದು ಸ್ವಾತಂತ್ರ್ಯ ಭಾರತ ದೇಶ….ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯ ಹೊಂದಿ, ಇಂದಿಗೆ 80 ವಷ೯ಗಳು ಆಗಿವೆ… ಈ ಶುಭ ದಿನ ನಾವು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಹೋರಾಟ ನಡೆಸಿದ, ಸವ೯ ಮಹಾನ್ ನಾಯಕರುಗಳಿಗೆ ಗೌರವ ನೀಡಿ, ಭಾರತಾಂಬೆಗೆ ಜೈಕಾರ ಕೂಗುತ್ತಾ ಈ ಶುಭ ದಿನ ಭಾರತೀಯರು ಸಂಭ್ರಮ ಪಡಬೇಕಾಗಿರುವುದು ಮೊದಲ ಕೆಲಸ ಮತ್ತು ಕತ೯ವ್ಯವಾಗಿದೆ.

ಈ ಶುಭ ವೇಳೆಯಲ್ಲಿ ಒಂದು ನೋವಿನ ವಿಚಾರವನ್ನು ಹೇಳಲೇ ಬೇಕಾಗಿದೆ…. ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವರ್ಷವಾದ್ದರೂ, ದೇಶದ ‘ಹಣೆಬರಹ’ ಮಾತ್ರ ಬದಲಾಗಿಲ್ಲ…! ಅದೇ ರಾಗ ..ಅದೇ ಹಾಡು…! ದೇಶಕ್ಕೆ ಜಗತ್ತು ಮೆಚ್ಚಿರುವ ‘ಪ್ರಧಾನಿ’ ದೊರೆತ್ತಿದ್ದರೂ, ದೇಶದ ಒಳಗೆ ಬದುಕು ಸಾಗಿಸುತ್ತಿರುವ ಕೆಲ ಮಂದಿಗೆ ಇನ್ನೂ ಸಹ , ಆ ಪ್ರಧಾನಿಯ ಬೆಲೆ – ಗೌರವ ತಿಳಿದೇ ಇಲ್ಲ….!

ದೇಶವು ಶತ್ರು ರಾಷ್ಟ್ರಗಳಿಗೆ  ಮತ್ತು ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿ ‘ಮೀಸೆ’ ತಿರುಗಿಸಿ ನಿಂತಿದ್ದರೂ, ದೇಶದಲ್ಲಿರುವ ನೂರಾರು ವಿರೋಧ ಪಕ್ಷಗಳು ಆಡಳಿತ ಪಕ್ಷದ ತಪ್ಪುಗಳನ್ನು ಹುಡುಕುವುದರಲ್ಲಿಯೇ ಕಾಲ ಕಳೆಯುತ್ತಿದೆ…! ಜೊತೆಗೆ ಹೊಸದಾಗಿ ಹುಟ್ಟಿರುವ ‘ಜಿರಲೆ’ ಪಕ್ಷದ ಕಾಟವು, ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ…!.

ದೇಶಕ್ಕೆ ಬ್ರಿಟಿಷರ ಕೈಯಿಂದ ‘ಶಾಂತಿ’ಯ ಮಂತ್ರ ಜಪಿಸಿ  ಸ್ವಾತಂತ್ರ್ಯ ಸಿಕ್ಕಿದ್ದರೂ, ಈಗ ದೇಶದ ಭವಿಷ್ಯವಾಗಿರುವ ಯುವಜನಾಂಗಕ್ಕೆ ‘ಶಾಂತಿ’ ಎಂದರೇನು ಎಂಬುವುದೇ ಗೊತ್ತಿಲ್ಲ…..! ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಇವರಿಗೆ ಚಿಂತೆಯೇ ಇಲ್ಲ…!ಹಲವು ಕೆಟ್ಟ ಚಟಗಳನ್ನು ಕಲಿತುಕೊಂಡು, ಸುಂದರ ಬಾಳನ್ನು ‘ ನರಕ’ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ…! ದೇಶದ ಹಣೆಬರಹ ಬದಲಾಗಲು , ಮೊದಲು ಯುವಶಕ್ತಿ ಬದಲಾಗಬೇಕು…! ಆ ದಿನ ಯಾವಾಗ….? ಈ ಪ್ರಶ್ನೆಗೆ ಭಗವಂತನಿಗೂ ಸರಿಯಾದ ಉತ್ತರ ಹೇಳಲು ಸಾಧ್ಯವಿಲ್ಲ…!!.

ನಿಜ…., ಈಗ ನಮ್ಮ ದೇಶವು ಸ್ವಾತಂತ್ರ್ಯ ಹೊಂದಿ, ಜಗತ್ತಿನಲ್ಲಿಯೇ ಬೃಹತ್ ‘ಪ್ರಜಾಪ್ರಭುತ್ವ ರಾಷ್ಟ್ರ’ವಾಗಿ ಬೆಳೆದು ನಿಂತಿದೆ…!ಪ್ರಜೆಗಳು ದೇಶದ ಪ್ರಭು ….! ಚುನಾವಣೆ ವೇಳೆ ಯಾವುದೇ ರಾಜಕೀಯ ಪಕ್ಷ ಗಳನ್ನು ಅಧಿಕಾರಕ್ಕೆ ಏರಿಸಬಹುದು ಅಥವಾ ಇಳಿಸಬಹುದು…! ಆದರೆ ಇಂದು ದೇಶದ ಪ್ರಜೆಗಳ ಅಜ್ಞಾನದ ಫಲವಾಗಿ, ಯಾವುದೇ ಪಕ್ಷಗಳಿಗೂ ಬಹುಮತ ದೊರೆಯದಂತಹ ಪರಿಸ್ಥಿತಿ ನಿಮಾ೯ಣವಾಗಿದೆ…!

ಜೊತೆಗೆ ಮತದಾರ ಪ್ರಭುಗಳು ರಾಜಕೀಯ ಪಕ್ಷಗಳ ತತ್ವ-ಸಿದ್ಧಾಂತಗಳನ್ನು ಗಮನಿಸದೇ, ಹಣ – ಹೆಂಡ ಮತ್ತು ಗ್ಯಾರಂಟಿಗಳನ್ನು ನಂಬಿ ಮತ ಚಲಾಯಿಸುವಂತಹ ಕಾಲ ಬಂದಿದೆ…!ಇದು ಪ್ರಜಾಪ್ರಭುತ್ವ ದೇಶದ ಮಹಾ ದುರಂತ ಎಂದರೇ ತಪ್ಪಾಗುವುದಿಲ್ಲ….!

ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವಷ೯ವಾದ್ದರೂ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಚಳುವಳಿಯಂತೆ, “ಭ್ರಷ್ಟಚಾರಿಗಳು ಭಾರತ ಬಿಟ್ಟು ತೊಲಗಿ’ ಎಂಬ ಚಳುವಳಿ ಪ್ರಾರಂಭಿಸಬೇಕಾಗಿರುವ ಘಟ್ಟದಲ್ಲಿ, ಕೆಲವೊಂದು ಭಾರತೀಯರು ಹೆಜ್ಜೆ ಹಾಕುವುದನ್ನು ಕಂಡು, ಸ್ವಗ೯ದಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರು ಮನನೊಂದು ರೋಧಿಸುತ್ತಿದ್ದಾರೆ…! ಆದರಿಂದ ವಿಧಿ ಇಲ್ಲಾದೇ ನಾವು ಹೇಳಲೇ ಬೇಕು….!

‘ಓ ರಾಷ್ಟ್ರಪಿತ ಗಾಂಧೀಜೀ… ಮತ್ತು ಹೋರಾಟಗಾರರೇ ಭಾರತೀಯರನ್ನು ಕ್ಷಮಿಸಿ ಬಿಡಿ…!

ನಮ್ಮದ್ದು ಸ್ವಾತಂತ್ರ್ಯ ಭಾರತ… ಪ್ರಚಾಪ್ರಭುತ್ವ ರಾಷ್ಟ್ರ… ಎನ್ನುವಾಗ, ಮನಸ್ಸಿಗೆ ಬಹಳ ಖುಷಿಯಾಗುತ್ತದೆ….ಆದರೆ ದೇಶದ ಸ್ಥಿತಿ-ಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಮಗೂ ಸ್ವಾತಂತ್ರ್ಯ ಹೋರಾಟಗಾರರ ರೀತಿ ಮನಸ್ಸಿಗೆ ನೋವು ವಾಗುತ್ತದೆ…!ಏಕೆಂದರೆ ದೇಶದ ಸ್ಥಿತಿ-ಗತಿ ಬಹಳ ಮಂದಗತಿಯಲ್ಲಿ ಸಾಗುತ್ತಿದೆ… ದೇಶದ ಹೆಚ್ಚಿನ ಪ್ರಮಾಣದ ಪ್ರಜೆಗಳು ಇನ್ನೂ ಸಹ ‘ಬಡತನ’ ರೇಖೆಯ ಕೆಳಗೆಯೇ ಬದುಕು ಸಾಗಿಸುತ್ತಿದ್ದಾರೆ…

ಆಧಿಕಾರಕ್ಕೆ ಏರಿರುವ ಪಕ್ಷಗಳಿಗೆ, ದೇಶದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಸೋತುಹೋಗಿವೆ…!. ದೇಶದ ಹೆಚ್ಚಿನ ರಾಜಕಾರಣಿಗಳಿಗೆ, ಜನಸೇವೆಕ್ಕಿಂತ, ಭ್ರಷ್ಟಚಾರ ಯಾತ್ರೆ ಮಾಡುವುದೇ ಮುಖ್ಯ ಗುರಿಯಾಗಿದೆ….! ಯಾವುದೇ ಸಕಾ೯ರಿ ಕೆಲಸಗಳು, ‘ಲಂಚ’ ನೀಡದೇ ನಡೆದ್ದರೇ, ಅದನ್ನು ಜಗತ್ತಿನ ಮತ್ತೊಂದು ವಿಸ್ಮಯಕ್ಕೆ ಸೇರಿಸುವಂತಹ ಸ್ಥಿತಿ ನಿಮಾ೯ಣವಾಗಿದೆ…! ಸ್ತ್ರೀ ಶೋಷಣೆ….. ಅತ್ಯಾಚಾರ…. ಕೊಲೆ…. ಮುಗಿಯದ ಕತೆಯಾಗಿದೆ….! ಜೊತೆಗೆ ನಿತ್ಯ ಬೆಲೆ ಏರಿಕೆಯಿಂದಾಗಿ, ಬಡ ಜನತೆಯ ಉಸಿರಾಟವೇ ನಿಂತು ಹೋಗಿದೆ…! ದೇಶದ ಕೆಲ ಹಿರಿಯ ಜೀವಗಳು ದಾರಿ ತಪ್ಪಿ ಹೆಜ್ಜೆ ಹಾಕುತ್ತಿರುವ  ಯುವಜನಾಂಗ ಮತ್ತು ರೋಧಿಸುತ್ತಿರುವ ಭಾರತಾಂಬೆಯನ್ನು ನೋಡಿ, ನಮ್ಮದ್ದು ಸ್ವಾತಂತ್ರ್ಯ ಭಾರತ ಎಂದರೇ ನಂಬುವುದೇ ಇಲ್ಲ…!

ಇಂದು ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವಷ೯ವಾಗಿರುವ ಕಾರಣ, ಈ ಶುಭ ವೇಳೆಯಲ್ಲಿ ನಾವು ಯಾವುದೇ ನೋವು-ಸಂಕಟಗಳನ್ನು ಮನಸ್ಸಿನಿಂದ ಬಿಡುಗಡೆ ಮಾಡದೇ, ಸಂಭ್ರಮ – ಸಡಗರದಿಂದ ಸ್ವಾತಂತ್ಯ ಅಚರಣೆಯಲ್ಲಿ ತೊಡಗಬೇಕು… ಭಾರತಾಂಬೆಯ ಪಾದಕ್ಕೆ ನಮಸ್ಕಾರಿಸುತ್ತಾ, ದೇಶಭಕ್ತಿಯಿಂದ ಸಮಾಜ ಸೇವೆಯಲ್ಲಿ ತೊಡಗಬೇಕು.

ದೇಶದ ಪ್ರಜೆಗಳು ಕೇವಲ ಆಗಸ್ಟ್ 15ರಂದು ಮಾತ್ರ, ದೇಶಪ್ರೇಮ- ರಾಷ್ಟ್ರ ಭಕ್ತಿ ಪ್ರದಶ೯ನ ಮಾಡಿದ್ದರೇ, ದೇಶದ ಹಣೆಬರಹ ಬದಲಾಗುವುದಿಲ್ಲ…! ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುವುದಿಲ್ಲ…!ಹಳ್ಳಿಯಿಂದ ದಿಲ್ಲಿ ತನಕ ಬದಲಾವಣೆ ಗಾಳಿ ಬೀಸಿ, ದೇಶವು ಅಭಿವೃದ್ಧಿ ಪಥದಲ್ಲಿ ಸಾಗಿದ್ದರೇ ಮಾತ್ರ, ಸ್ವಾತಂತ್ರ್ಯ ಭಾರತಕ್ಕೆ ಒಂದು ಬೆಲೆ ಮತ್ತು ಗೌರವ ಬರುತ್ತದೆ… ಇದಕ್ಕಾಗಿ ದೇಶದ ಸವ೯ ಪ್ರಜೆಗಳು ಧಮ೯-ಜಾತಿಯನ್ನು ಮರೆತು, ಒಂದಾಗಿ ಕೈಜೋಡಿಸಬೇಕು. ಇಲ್ಲದಿದ್ದರೇ ಪ್ರತಿ ವಷ೯ ಆಗಸ್ಟ್ 15ರಂದು ಎಂದಿನಂತೆ “ಭಾರತೀಯರನ್ನು ಕ್ಷಮಿಸು ” ಎನ್ನುತ್ತಾ, ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಒಂದು ‘ರಜೆ’ಯ ಮಜವನ್ನು ಎಂಜಾಯ್ ಮಾಡಿಕೊಳ್ಳಬೇಕು ಅಷ್ಟೇ…!!!.

admin
the authoradmin

Leave a Reply