LatestMysore

ಸರ್ಕಾರಗಳು ಸಂವಿಧಾನ ಆಶಯದಂತೆ ಆಡಳಿತ ನಡೆಸುತ್ತಿಲ್ಲ: ಮುಖ್ಯಮಂತ್ರಿ ಚಂದ್ರು ಬೇಸರ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಸ್ವಾತಂತ್ರ್ಯ ಭಾರತದಲ್ಲಿ ನಮ್ಮನ್ನಾಳುತ್ತಿರುವ ಸರ್ಕಾರಗಳು ಸಂವಿಧಾನ ಆಶಯದಂತೆ ಆಡಳಿತ ನಡೆಸದೆ ಯುವಪೀಳಿಗೆಯನ್ನು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿದ್ದು ಅದನ್ನು ಪ್ರಶ್ನಿಸುವ ಮನಸ್ಥಿತಿ ಯುವಸಮುದಾಯ ಬೆಳೆಸಿಕೊಳ್ಳಬೇಕಾಗಿದೆ ಎಂದು ರಂಗಕರ್ಮಿ ಚಲನಚಿತ್ರ ಹಿರಿಯ  ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ದಾರಿ ಫೌಂಡೇಶನ್‌ ಮೈಸೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʼಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿʼ ಎಂಬ ವಿಷಯವಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್.‌ ಅಂಬೇಡ್ಕರ್  ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಂವಿಧಾನಾತ್ಮಕ ಚೌಕಟ್ಟು ರೂಪಿಸಿ  ಸರ್ವ ಧರ್ಮ, ಜಾತಿಗಳನ್ನು ಒಗ್ಗೂಡಿಸಿ ಅಭಿವೃದ್ಧಿ ಹೊಂದಲು ಅವಕಾಶ ನೀಡಿದ್ದರೂ, ರಾಜಕಾರಣಿಗಳು ತಮ್ಮ ಆಶಯಕ್ಕೆ ತಕ್ಕಂತೆ ಕಳೆದ 79 ವರ್ಷದಿಂದಲೂ ದೇಶವನ್ನು ಅವರ ಇಚ್ಚೆಯಂತೆ ಆಳ್ವಿಕೆ ನಡೆಸಿದ್ದಾರೆ.

ಈ ಸಂಬಂಧ ದೇಶದ ಯುವಶಕ್ತಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಗೊಂದಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ದೇಶದ ರಕ್ಷಣೆಗೆ ಸಂವಿಧಾನ ಅಗತ್ಯವಿದ್ದು ಅದರೊಳಗೆ ಎಲ್ಲವನ್ನು ಒಳಗೂಡಿಸಿ ಮೂಲಭೂತ ಸವಲತ್ತು ಕಲ್ಪಿಸಬೇಕಿದೆ, ಆದರೆ ಈ ವರಗೆ ತಳಹಂತದ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ಮೂಲಭೂತ ಸವಲತ್ತು ಸಿಗದೆ ಮುಖ್ಯವಾಹಿನಿಗೆ ಬರಲಾಗಿಲ್ಲ.

ಶತಮಾನದ ಹಿಂದೆ ಬಸವಣ್ಣನವರು ಅನುಭವ ಮಂಟಪದಲ್ಲಿ ಸರ್ವ ಜನರಿಗೂ ಒಳಿತು ಮಾಡುವ ಜೀವನಾಧಾರಿತ ಸಂವಿಧಾನ ರೂಪಿಸಿದ್ದರು , ಸ್ವಾತಂತ್ರ್ಯ ಭಾರತದಲ್ಲಿ ಅಂಬೇಡ್ಕರ್ ಸಂವಿಧಾನ ರಚಿಸಿ ಜಾತಿ, ಧರ್ಮ, ಭಾಷೆಗೆ ಅನುಗುಣವಾಗಿ ಮೀಸಲಾತಿ ಜಾರಿಗೊಳಿಸಿ ಹಿಂದುಳಿದವರ ಅಭಿವೃದ್ಧಿಗೆ ಒತ್ತು ನೀಡಿದ್ದರು ಕಾಣದ ಕೈಗಳಿಂದ ಮೀಸಲಾತಿ ಸಮಪಾಲು ದಕ್ಕದೆ ಉಳ್ಳವರ ಪಾಲಾಗಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕರು ರಾಜಕೀಯ ಶಕ್ತಿ ಹೊಂದುವ ಅವಕಾಶವಿದ್ದರೂ ಇತ್ತೀಚಿನ ರಾಜಕೀಯ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿ ಮತದಾರ ಸ್ಥಳಿಯ ಕ್ಷೇತ್ರದಿಂದ ವಿಧಾನಸಭೆ ಹಂತದವರೆಗೂ ವಂಚಿತರಾಗುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ಯುವಸಮುದಾಯ ದಿಕ್ಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ ಎಂದರು.

ಯುವಸಮುದಾಯ ಭ್ರಷ್ಟಚಾರದ ವಿರುದ್ಧ ಜಾಗೃತಿ ಹೊಂದಬೇಕಾಗಿದೆ. ಭ್ರಷ್ಟಚಾರ ಆರೋಪ ಎದುರಿಸುವ  ರಾಜಕಾರಣಿಗೆ ಮನ್ನಣೆ ನೀಡುವ ಸಂಪ್ರದಾಯ ಪ್ರಜಾಪ್ರಭುತ್ವ ಅಧೊಪತನಕ್ಕೆ ಮೂಲ. ಇತ್ತೀಚಿನ ರಾಜಕೀಯ ಪಕ್ಷಗಳು ಸಂವಿಧಾನದ ಹೆಸರಿನಲ್ಲಿ ಅನೇಕ ತಪ್ಪು ಮಾಡುತ್ತಿದ್ದು ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ಎಲ್ಲವೂ ಕೇಂದ್ರೀಕೃತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಹಳಿ ತಪ್ಪಲಿದೆ ಎಂದರು.

ಕಾರ್ಯಕ್ರಮದಲ್ಲಿ ದಾರಿ  ಫೌಂಡೇಶನ್‌ ಕಾರ್ಯದರ್ಶಿ ತಗಡೂರು ವೀರೇಶ್‌ ಕುಮಾರ್‌ ಮಹಾಮನೆ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪುಟ್ಟರಾಜು ಸ್ವಾಗತಿಸಿದರು. ವೇದಿಕೆಯಲ್ಲಿ ದಾರಿ ಫೌಂಡೇಶನ್‌ ಅಧ್ಯಕ್ಷ ಎಲ್.‌ ರಂಗಯ್ಯ, ಪ್ರಾಂಶುಪಾಲರಾದ ರಜೀಯಾ ಸುಲ್ತಾನ, ಸಾಂಸ್ಕೃತಿಕ ಸಮಿತಿ ಸಂಚಾಲಕ ಬಸವಲಿಂಗಸ್ವಾಮಿ, ಎಂ.ಕೆ. ಅಪ್ಪಯ್ಯ, ವಿದ್ಯಾರ್ಥಿ ಪ್ರತಿನಿಧಿ ಅರುಂಧತಿ, ಸುರಕ್ಷಾ ಇದ್ದರು. ಪ್ರಸನ್ನ ನಿರೂಪಿಸಿದರು.

admin
the authoradmin

Leave a Reply