ಚಂದನವನದಲ್ಲಿ ತನ್ನದೇ ಆದ ವ್ಯಕ್ತಿತ್ವ ಮತ್ತು ನಟನೆಯಿಂದ ಗಮನಸೆಳೆದಿರುವ ನಟ ಜೈಜಗದೀಶ್.. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಿನಿ ಪಯಣ ಸಾಗಿ ಬಂದಿದೆ… ಅವರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ ಇಲ್ಲಿ ಬರೆದಿದ್ದಾರೆ.
ಮೂಲತಃ ಕೊಡಗಿನವರಾದ ಜೈಜಗದೀಶ್ 29ನೇ ಜೂನ್ 1954ರಂದು ಮೈಸೂರು ನಗರದ ಮಧ್ಯಮವರ್ಗ ಕುಟುಂಬದಲ್ಲಿ ಜನಿಸಿದರು. ಎಂ.ಡಿ.ಟಿ.ಡಿ.ಬಿ.ಕಾಲೇಜು ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆದರು. ಶಾಲಾ ಕಾಲೇಜು ದಿನಗಳಿಂದಲೂ ನಾಟಕ ಸಿನಿಮಾದ ಹುಚ್ಚು ಅಂಟಿಸಿಕೊಂಡಿದ್ದರು.

ವಿದ್ಯಾರ್ಥಿ ಜೀವನದಲ್ಲಿ ಅಭಿನಯ ಕಲೆಯನ್ನು ಹವ್ಯಾಸವನ್ನಾಗಿಸಿ ಹಲವು ಸಲ ಬಣ್ಣ ಹಚ್ಚಿದ್ದರು. ಅಂತರ್ ಶಾಲಾ-ಕಾಲೇಜು ಸಾಂಸ್ಕೃತಿಕ ಚಟುವಟಿಕೆಗಳ ಸ್ಫರ್ಧೆ, ಪ್ರತಿಭಾ ಪ್ರದರ್ಶನ, ಏಕಪಾತ್ರಾಭಿನಯ, ಏಕಾಂಕ ನಾಟಕ ಮುಂತಾದ ಪಠ್ಯೇತರ ಚಟುವಟಿಕೆ ಸ್ಫರ್ಧೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನ ಗಳಿಸಿದ್ದರು ಆದರೆ ಮುಂದೊಂದಿನ ಚಂದನವನ ಚಿತ್ರರಂಗದ ಹೀರೋ ಆಗುತ್ತೇನೆಂಬ ಆಸೆಯನ್ನಾಗಲೀ ಭರವಸೆಯನ್ನಾಗಲೀ ಖಂಡಿತ ಇಟ್ಟುಕೊಂಡಿರಲಿಲ್ಲ. ಈ ವಿಚಾರವನ್ನ ಎಷ್ಟೋಸಲ ಅವರೇ ಬಹಿರಂಗ ಪಡಿಸಿದ್ದಾರೆ!
ಇದನ್ನೂ ಓದಿ: ಮೇರು ನಟ, ಸಿರಿಕಂಠದ ಕರ್ನಾಟಕ ರತ್ನ ‘ಡಾ ರಾಜ್ ಕುಮಾರ್’ ಮತ್ತೆ, ಮತ್ತೆ ನೆನಪಾಗುತ್ತಾರೆ..
ಭಾರತದ ದಿಗ್ಗಜ ನಿರ್ದೇಶಕರಾದ ಶ್ಯಾಂ ಬೆನಗಲ್, ಸತ್ಯಜಿತ್ ರೇ, ಕೆ.ಬಾಲಚಂದರ್ ಮುಂತಾದವರಿಂದ ಹೊಗಳಿಸಿಕೊಂಡ ಖ್ಯಾತ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್ ರವರ ಕೃಪೆಯಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡ ಈ ನವಯುವಕ ಬಹುಕಾಲ ಇವರ ಗರಡಿಯಲ್ಲಿ ಪಳಗಿದ ಪ್ರತಿಭಾವಂತ. 1970ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ನವನಟರಲ್ಲಿ ಅಗ್ರಗಣ್ಯರೆನಿಸಿದ ಜೈಜಗದೀಶನ್ನು ಪರಿಚಯ ಮಾಡಿಸಿದವರು ಮಹಾಕೋಪಿಷ್ಟ ಮುಂಗೋಪಿ ಪುಟ್ಟಣ್ಣಕಣಗಾಲ್. ಇಂಥವರ ವಾಚಾಮಗೋಚರ ಸಹಸ್ರನಾಮಕ್ಕೆ ಅಥವಾ ಕೋಪತಾಪದ ಅಷ್ಟೋತ್ತರಕ್ಕೆ ಸಿಲುಕದೆ ಗೆದ್ದುಬಂದ ಏಕೈಕ ಉದಯೋನ್ಮುಖ ನಟ. ತನ್ನ ಗುರುವಿಂದಲೇ ಭೇಷ್ ಎನಿಸಿಕೊಂಡ ಯಶಸ್ವಿ ಸಹನಾ ಕಲಾವಿದ!

1976ರಲ್ಲಿ ತೆರೆಕಂಡ ಫ಼ಲಿತಾಂಶ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಸ್ಫುರದ್ರೂಪಿ ಪಡ್ಡೆಹೈದ ಕಾಲಕ್ರಮೇಣ ಹ್ಯಾಂಡ್ಸಂ ಸ್ಟಾರ್ ಎಂಬ ಬಿರುದು ಪಡೆದು ದಕ್ಷಿಣ ಭಾರತದ ೫ ಭಾಷೆಗಳಲ್ಲಿ ತಮ್ಮ ನಟನಾಪ್ರತಿಭೆ ತೋರಿದ ಪೋರ. ಪುಟ್ಟಣ್ಣಕಣಗಾಲರ ಪಡುವಾರಹಳ್ಳಿ ಪಾಂಡವರು ಮೂಲಕ ಹೆಸರು ಗಳಿಸಿದ ನಂತರ ಬಂಧನ ಮತ್ತು ಗಾಳಿಮಾತು ಟರ್ನಿಂಗ್ ಪಾಯಿಂಟ್ ಆಗಿ ತಳವೂರಲು ಬುನಾದಿಯಾದವು. ಕಾಲಕ್ರಮೇಣ ಒಂದಾದ ಮೇಲೊಂದರಂತೆ ಹಣ ಕೀರ್ತಿ ಎಲ್ಲವನ್ನು ನೀಡಿದ ಚಿತ್ರಗಳೆಂದರೆ: ಬೆಂಕಿಯಲ್ಲಿಅರಳಿದ ಹೂವು, ಸಿಡಿದೆದ್ದಗಂಡು, ಧೈರ್ಯಂ, ಸಾಂಗ್ಲಿಯಾನ, ಚೆಲ್ಲಿದರಕ್ತ, ಅವಳಅಂತರಂಗ, ಅರ್ಚನಾ, ತಾಯಿಯಮಡಿಲಲ್ಲಿ, ಶಪಥ, ಪ್ರಜಾಶಕ್ತಿ, ಶ್ವೇತಾಗ್ನಿ, ಜಗ್ಗು, ಜಿದ್ದು, ಮತ್ಸರ, ರಣಭೇರಿ, ಕೆಂಪೇಗೌಡ, ಬುಲ್ ಬುಲ್, ರಣವಿಕ್ರಮ, ಅಪ್ಪು, ಮೌರ್ಯ, ಮೆಜೆಸ್ಟಿಕ್ ಮುಂತಾದ ಅನೇಕ ಚಿತ್ರಗಳಲ್ಲಿ ಸ್ವಚ್ಚ ಅಭಿನಯ ನೀಡಿದ ಅಚ್ಚ ಕನ್ನಡಿಗ.
ಇದನ್ನೂ ಓದಿ: ಗಾನಗಾಂಧರ್ವ ಎಸ್ ಪಿ ಬಾಲಸುಬ್ರಮಣ್ಯಂರವರ ನೆನಪು ಸದಾ ಹಸಿರು
ಜೈಜಗದೀಶ್ ತಮ್ಮ ಸಿನಿಜೀವನವನ್ನು ನಟನೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ನಿರ್ಮಾಪಕ, ನಿರ್ದೇಶಕನಾಗೂ ಕಲಾಸೇವೆ ಮಾಡಿದರು. ಇವರು ತಯಾರಿಸಿದ ಸಿನಿಮಾಗಳ ಪೈಕಿ ಎರಡು ಪ್ರಮುಖ ಉದಾಹರಣೆ: ಮೊದಲನೆಯದಾಗಿ “ಭೂಮಿ ತಾಯಿಯ ಚೊಚ್ಚಲಮಗ” ಚಿತ್ರವು ಹೊಸದೊಂದು ಅಲೆಯನ್ನೆ ಸೃಷ್ಟಿಸಿ ಹಲವಾರು ಬಹುಮಾನ ಪ್ರಶಸ್ತಿ ಗಳಿಸಿತು. ಎರಡನೆಯದಾಗಿ ಇವರು ನಿರ್ದೇಶಿಸಿದ “ಮದನ” ಫಿಲಂ 2006-07ನೇ ಸಾಲಿನ ಶ್ರೇಷ್ಠ ನಟ, ಉತ್ತಮ ಪೋಷಕನಟ ಪ್ರಶಸ್ತಿ ಜತೆಗೇ ನಿರ್ಮಾಪಕ, ನಿರ್ದೇಶಕ ವಿಭಾಗದಲ್ಲೂ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಹಾಗೂ ಫ಼ಿಲಂಫ಼ೇರ್ ಪ್ರಶಸ್ತಿ ಮುಡಿಗೇರಿಸಿಕೊಂಡು ಚಂದನವನ ಚರಿತ್ರೆಯ ಮೈಲಿಗಲ್ಲು ಎನಿಸಿತು.

ಸ್ಯಾಂಡಲ್ವುಡ್ ನ ಬಹುತೇಕ ಎಲ್ಲಾ ಮುಖ್ಯ ನಟ-ನಟಿಯರೊಡನೆ ಅಭಿನಯಿಸಿರುವ ಗಾಂಭೀರ್ಯವಂತ ಕಲಾವಿದ. ತನಗೆ ಸಿಕ್ಕ ಯಾವುದೆ ಪಾತ್ರವಿರಲಿ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು ತಮ್ಮ ಕರ್ತವ್ಯ ನಿರ್ವಹಿಸುವ ಪ್ರಾಮಾಣಿಕ ನಟ. ಕನ್ನಡ ಹಿಂದಿ ಮರಾಠಿ ತುಳು ಕೊಂಕಣಿ ಕೊಡವ ತಮಿಳು ತೆಲುಗು ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಯೊಬ್ಬರಿಂದಲೂ ‘ಸೈ’ ಎನಿಸಿಕೊಂಡ ಅಪರೂಪದ ಪ್ರತಿಭಾವಂತ. ಟ್ರ್ಯಾಜಿಡಿ, ಕಾಮಿಡಿ, ನೆಗಟಿವ್, ಪಾಸಿಟಿವ್, ಹೀರೋ, ನಾನ್-ಹೀರೋ, ಮುಂತಾದ ರೋಲ್ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನೈಜಕಲಾವಿದ.
ಇದನ್ನೂ ಓದಿ: ಎಡಕಲ್ಲು ಗುಡ್ಡದ ಮೇಲಿನ ನಂಜುಂಡನಾಗಿ ಮಿಂಚಿದ ನಟ ಚಂದ್ರಶೇಖರ್…. ಈಗ ನೆನಪು!
ಕಳೆದ 50ವರ್ಷದಿಂದ ಅಂದಾಜು 300ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ. ಈ ಪೈಕಿ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕನಾಗಿ ಜಯಭೇರಿ ಭಾರಿಸಿದ್ದಾರೆ. ಹತ್ತಾರು ಫಿಲಮ್ಸ್ ಜ್ಯುಬ್ಲಿ ಆಚರಿಸಿವೆ. ಇಂಥ ಅಪ್ರತಿಮ ನಟ ಇವತ್ತಿಗೂ ಹೇಳುವುದಿಷ್ಟೆ: “ಕಲಾವಿದನಾಗಿ ನಾನಿನ್ನೂ ಕಲಿಯುವುದು ಬಹಳಷ್ಟಿದೆ” ಎಂದು. ಸರಳ ಸಜ್ಜನಿಕೆಯ ಪ್ರತೀಕವೆನಿಸುವ ಜೈಜಗದೀಶ್ ತಮ್ಮದೇ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ನಾಡಿನ ಅನೇಕ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿ ಸನ್ಮಾನ ಬಿರುದು ಬಹುಮಾನ ಗಳಿಸಿದ್ದಾರೆ.

ತಮ್ಮ ಮೊದಲನೇ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಹಿರಿಯ ತಾರಾದಂಪತಿ ಶ್ರೀಮತಿ ಪ್ರತಿಮಾದೇವಿ-ಶ್ರೀಶಂಕರ್ಸಿಂಗ್ ಪುತ್ರಿ, ನಿರ್ಮಾಪಕ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ಬಾಬು ಸೋದರಿಯಾದ ನಟಿ ವಿಜಯಲಕ್ಷ್ಮಿಸಿಂಗ್ರನ್ನು ವಿವಾಹವಾಗಿ ಸ್ಯಾಂಡಲ್ವುಡ್ನ ರೀಲ್ ಲೋಕದ ರಿಯಲ್ ದಂಪತಿಗಳ ಪಟ್ಟಿಗೆ ಸೇರ್ಪಡೆಯಾದರು. ಕೆಲವು ವರ್ಷಗಳಿಂದ ಈಚೆಗೆ ಕಿರುತೆರೆ ಟಿವಿ ಧಾರಾವಾಹಿಯಲ್ಲೂ ಅಭಿನಯಿಸುತ್ತಿರುವ ಜೈಜಗದೀಶ್-ವಿಜಯಲಕ್ಷ್ಮೀ ದಂಪತಿಯ ಮಕ್ಕಳೇನಾದರು ಒಂದು ವೇಳೆ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದೇ ಆದರೆ ಸಿನಿಲೋಕದ ದಿಗ್ಗಜ ಕೆ.ಶಂಕರ್ಸಿಂಗ್ ಪ್ರತಿಮಾದೇವಿ ತಾರಾದಂಪತಿ ಕುಟುಂಬದ ಮೂರು ತಲೆಮಾರಿನವರು ಸಿನಿಮಾಭಿನಯ ಲೋಕದಲ್ಲಿ ಸೇವೆ ಮಾಡಿದಂತಾಗಿ ಚಂದನವನ ಚರಿತ್ರೆಯಲ್ಲಿ ನೂತನ ದಾಖಲೆ ಸ್ಥಾಪಿಸಿದಂತಾಗುತ್ತದೆ!









