ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು  ಕೃತಿಗಳ ಪರಿಚಯ.. ಭಾಗ-17

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

81 ಕೃತಿ : ರಸಿಕರಿಗೆಂದೇ ಕವನಸುಧೆ

ಲೇಖಕ : ಕುಮಾರಕವಿ ನಟರಾಜ

ಅನ್ವೇಷಕರು: (1)ಡಿ.ಕೆ.ಈರೇಗೌಡ

ಮತ್ತು……..: (2)ಕೃಷ್ಣ ಹಾಸನ

ಮೈಸೂರಿನ ಪ್ರತಿಷ್ಠಿತ ರಾಜಲಕ್ಷ್ಮಿ ಪ್ರಕಾಶನ ಹೊರತಂದಿರುವ “ರಸಿಕರಿಗೆಂದೇ…..ಕವನಸುಧೆ” ಕವನ ಸಂಕಲನದ ಕರ್ತೃ, ಕುಮಾರಕವಿ ಕಾವ್ಯನಾಮದ ಬಿ.ಎನ್.ನಟರಾಜ. ಈ ಯುವ ಕವಿಯ ಪ್ರಪ್ರಥಮ ಕವನ ಸಂಕಲನವಾದ ಇದರಲ್ಲಿ ಒಟ್ಟು 25ಕವನಗಳಿದ್ದು, ಕಡೆಯ ಪುಟದಲ್ಲಿ 6 ಚುಟುಕಗಳು ಇವೆ. 42 ಪುಟಗಳ ಇದರ ಬೆಲೆ 2.00 ರೂಪಾಯಿ. 1977ರಲ್ಲಿ ಮೊದಲ ಮುದ್ರಣ ಕಂಡ ನಂತರ ಒಂದೇ ವರ್ಷದೊಳಗೆ ಎರಡನೆಯ ಮುದ್ರಣ ಕಂಡಿರುವುದು ಪುಸ್ತಕದ ನೂತನ ದಾಖಲೆ ಎನ್ನಬಹುದು!

ತನ್ನ ಮನಸ್ಸಿನ ಅನಿಸಿಕೆಗಳಿಗೆ ಕಾವ್ಯದ ರೂಪ ಕೊಡುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಕೆಲವುಕಡೆ ಯುವ ಕವಿಮನದ ಭಾವನೆಗಳು ಸೊಗಸಾಗಿ ಮೂಡಿ ಬಂದಿವೆ. ಆದರೆ ಹಲವು ಕವನಗಳು ಅವಿನಾಭಾವ ಸಂಬಂಧವನ್ನು ಕಳೆದುಕೊಂಡು ನೀರಸ ಆಗಿಬಿಡುತ್ತವೆ. ಆದರೂ ಅಲ್ಲಲ್ಲಿ ಕಾವ್ಯಾಂಶದ ಕಾವನ್ನು ಗುರುತಿಸಬಹುದು. ನವ ಬರಹಗಾರ ಕುಮಾರಕವಿಗೆ ಒಳಿತಾಗಲಿ.

 –ಡಿ.ಕೆ.ಈರೇಗೌಡ

ಮೈ.ವಿ.ವಿ. ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು-6.

“ರಸಿಕರಿಗೆಂದೇ…..ಕವನಸುಧೆ” ಕುಮಾರಕವಿ ಬಿ.ಎನ್. ನಟರಾಜ್ ರವರ ಚೊಚ್ಚಲ ಕವನ ಸಂಕಲನ. ಪುಸ್ತಕದಲ್ಲಿ ೨೫ ಕವನಗಳಿವೆ. ತಮ್ಮ ವಯಸ್ಸಿಗೆ ತಕ್ಕ ವಸ್ತು(ಕಾಮ)ವನ್ನು ಕುಮಾರಕವಿ ತೆಕ್ಕೆಗೆ ತೆಗೆದುಕೊಂಡರೂ ಅದು ಅವರಿಗೆ ಕೈ ಕೊಟ್ಟಿದೆ. ಬರವಣಿಗೆಯಲ್ಲಿ ಸಂಯಮ ವಾಗಲೀ ಅಥವಾ ಹೇಳುವುದನ್ನು ಸ್ಪಷ್ಟವಾಗಿ ಮತ್ತು ಖಚಿತವಾಗಿ ಹೇಳುವ ರೀತಿಯಾಗಲೀ ಇಲ್ಲಿನ ಯಾವ ಕವನದಲ್ಲೂ ಕಂಡು ಬರುವುದಿಲ್ಲ. ಕವನವನ್ನು ಬರೆಯಲೇಬೇಕೆಂಬ ‘ಹಠ’ದಿಂದ ಬರೆದ ಕವನಗಳಾದ್ದರಿಂದ ಇಲ್ಲಿನ ಯಾವ ಕವನದಲ್ಲಿಯೂ ಅನುಭವದ ತೀವ್ರತೆಯ ತುಡಿತ ಕಾಣಬರುವುದಿಲ್ಲ. ರಸಿಕರಿಗಾಗಿ ಕಾವ್ಯ ರಚಿಸಲು ಹೊರಟ ಕುಮಾರಕವಿಗಳು ಕೊಡುವ ಒಂದು ಉಪಮೆ ‘ದಾಹ’ ಎಂಬ ಕವನದ ಕೆಲ ಸಾಲುಗಳ ಮೂಲಕ ಹೀಗಿದೆ:

” ಶ್ರವಣಬೆಳಗೊಳದ

ಗೊಮ್ಮಟನಂತೆ

ದಿವ್ಯ ದಿಗಂಬರನಾದೆ

ನವ್ಯ ಮನ್ಮಥನಾದೆ

ನಿಗ್ರಹಿಸದಾದೆ

ನನ್ನತನವ

ಹೆಣವಿಲ್ಲದ ಮಸಣವಾದೆ

ಅವಳಿಲ್ಲದೆ….”

ಕುಮಾರಕವಿಗಳಿಗೆ ತಮ್ಮ ವಿರಹದ  ಉತ್ಕಟತೆಯನ್ನು ವ್ಯಕ್ತಪಡಿಸಲು “ಹೆಣವಿಲ್ಲದ ಮಸಣವಾದೆ” ಎಂಬ ಉಪಮೆಗಿಂತ ಬೇರೆ ಯಾವ ಸುಂದರವಾದ ವಸ್ತುವೂ ಹೊಳೆಯದೇ ಹೋದುದು ದುರಂತ! ನಿಗ್ರಹ, ತಾಳ್ಮೆ, ವಿವೇಚನೆ ಇಲ್ಲದ ಯಾವುದೇ ಬರಹವು ಹೀಗೆ ಅಪವ್ಯಯ ಆಗುವುದರಲ್ಲಿ ಆಶ್ಚರ್ಯವಿಲ್ಲ.

ಇಷ್ಟಾದರೂ ಈ ಕವನ ಸಂಕಲನದಲ್ಲಿ ಅಲ್ಲೊಂದು ಇಲ್ಲೊಂದು ನುಡಿಯಲ್ಲಿ ಕಾವ್ಯದ ‘ಮಿಂಚು’ ಹರಿದಿದೆ. ಒಂದು ಸಾಲು ಕಾವ್ಯ ಆಗಬಾರದು ಎಂದೇನಿಲ್ಲ. ಆದರೆ ಈ ಸಂಕಲನದಲ್ಲಿ ಅಂತಹ ವಾಕ್ಯಗಳು ಕವನದಲ್ಲಿ ಅರ್ಥಪೂರ್ಣ ಘಟಕಗಳಾಗಿ ಕೆಲಸ ಮಾಡದೆ ಪರದೇಶಿಗಳಾಗಿ ನಿಂತು ಬಿಡುತ್ತವೆ. ಕುಮಾರಕವಿಗೆ ಕಾವ್ಯ ಸೃಷ್ಟಿಯ ಬಗ್ಗೆ ಹೆಚ್ಚಿನ ಹುಮ್ಮಸ್ಸೇನೋ ಇದೆ. ಇದರೊಡನೆಯೇ ಚಿಂತನೆ, ಅನುಭವ, ಭಾಷೆ, ಇವುಗಳನ್ನೂ ಅರ್ಥಪೂರ್ಣವಾಗಿ ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ಏನನ್ನಾದರೂ ಯಶಸ್ವಿಯಾಗಿ ಬರೆಯಬಹುದು.

ಸಂಕಲನದ ಸಿ.ಪಿ.ಕೆ. ಮುನ್ನುಡಿಯ ಮಾತುಗಳನ್ನಾಗಲೀ, ಹಿರಿಯರ ಅನಿಸಿಕೆ ನುಡಿಗಳ ಭಾರವನ್ನಾಗಲಿ ಇಲ್ಲಿನ ಕವನಗಳು ಹೊರಲಾರವು! ಒಂದು ವರ್ಷದ ಅವಧಿಯಲ್ಲಿ ೨ನೇ ಮುದ್ರಣ ಆಗಿರುವುದು ಈ ಕವನಸಂಕಲನದ ಅದೃಷ್ಟ! ಈ ಸಂಗತಿ ನಮ್ಮ ಕಾವ್ಯ ರಸಿಕರ ಮಟ್ಟವನ್ನು ನಿರ್ದೇಶಿಸುತ್ತದೆ.

ಕೃಷ್ಣ ಹಾಸನ

ಪದವಿ ಕಾಲೇಜು ಕನ್ನಡ ಅಧ್ಯಾಪಕರು

82 ಕೃತಿ : ಕಪ್ಪುಸಮುದ್ರ

ಲೇಖಕ : ಕುಮಾರಕವಿ ಬಿ.ಎನ್.ನಟರಾಜ

1ನೇ ಅನ್ವೇಷಕ: ಎಸ್.ಆರ್.ವಿಜಯಶಂಕರ

ಅಪರೂಪದ ಮತ್ತು ಆಕರ್ಷಕವಾದ ಶೀರ್ಷಿಕೆಯುಳ್ಳ ‘ಕಪ್ಪುಸಮುದ್ರ’ ಕವನ ಸಂಕಲನದ ಲೇಖಕರು ಕುಮಾರಕವಿ ನಟರಾಜ್. ಇದರ ಪ್ರಕಾಶಕರು: ರಾಜಲಕ್ಷ್ಮಿ ಪ್ರಕಾಶನ 1260 ರವೆಬೀದಿ 1ನೇ ತಿರುವು ಅಶೋಕರಸ್ತೆ ಮೈಸೂರು-1. ಒಟ್ಟು 72ಪುಟಗಳು. ಬೆಲೆ 6.00 ರೂ. ಕ್ಯಾಲಿಕೋ/ಲೈಬ್ರರಿ ಪ್ರತಿಯ ಬೆಲೆ12.00ರೂ. ಬೆಳಗಾವಿಯಲ್ಲಿ ಜರುಗಿದ 52ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-1980ಇದರ ಅಧ್ಯಕ್ಷರೂ ಖ್ಯಾತ ಸಾಹಿತಿಯೂ ಆದ ಬಸವರಾಜ ಕಟ್ಟೀಮನಿ ಅವರಿಂದ ಬಿಡುಗಡೆಗೊಂಡ ಕೃತಿಇದು ಎಂಬುದು ಮತ್ತೊಂದು ವಿಶೇಷ.

ಕುಮಾರಕವಿಯ ‘ಕಪ್ಪುಸಮುದ್ರ’ ಕವನ ಸಂಕಲನವು ‘ಗಣಪ ಗೀತೆ’ ಯೊಂದಿಗೆ ಪ್ರಾರಂಭವಾಗಿ ಜಾನಪದಗೀತೆಯ ಕ್ರಮದ[ತರಹದ] ಬರಹ, ಲಾವಣಿ, ಚುಟುಕಚಟಾಕಿ, ವರ್ತಮಾನ ಸಮಸ್ಯೆಗಳ ಮೇಲಿನ ರಚನೆ; ಹೀಗೆ ವಿವಿಧ ರೀತಿಗಳನ್ನು ಒಳಗೊಂಡಿದೆ. ಈ ಸಂಕಲನದ ಒಳಗಿನ ಅತ್ಯುತ್ತಮವಾದ ಈ ಸಂಗ್ರಹಕ್ಕೆ ಹೆಸರು ಕೊಟ್ಟ ಶೀರ್ಷಿಕೆ ರಚನೆಯ ಕಪ್ಪುಸಮುದ್ರ ಎಂಬ ಕವನ ಹೀಗೆ ಕೊನೆಯಾಗುತ್ತದೆ……

“ಈ ಅನುಪಯುಕ್ತ ಹಲ್ಕಾಸೂ…ಮಕ್ಕಳ

ಅಡಕದಿಂದಾಗಿ

ಸುಭದ್ರ ಶ್ವೇತಸಮುದ್ರವೀಗ

ಕರಿಯಬಣ್ಣಕ್ಕೆ ತಿರುಗಿದೆ

ನವನಾಮಧೇಯ ಪಡೆದಿದೆ

ಕಪ್ಪು….ಸಮುದ್ರ, ಎಂದು”

 

ಈ ಮೇಲಿನ ಶಬ್ದಗಳನ್ನು “ಈ ಅನುಪಯುಕ್ತ ಹಲ್ಕಾ ಸೂಳೆಮಕ್ಕಳ ಅಡಕದಿಂದಾಗಿ ಸುಭದ್ರ ಶ್ವೇತಸಮುದ್ರ ಈಗ ಕರಿಯ ಬಣ್ಣಕ್ಕೆ ತಿರುಗಿ ಕಪ್ಪುಸಮುದ್ರ ಎಂದು ನವನಾಮಧೇಯ ಪಡೆದಿದೆ” ಎಂದು ಬರೆದಿದ್ದರೆ ಏನೊಂದೂ ತೊಂದರೆಯಾಗದೆ ಇದೊಂದು ಗದ್ಯ ವಾಕ್ಯವಾಗುತ್ತದೆ. ಪದ್ಯ ಅಥವಾ ಕವನ ಎಂದರೆ ವಾಕ್ಯಗಳನ್ನು ತುಂಡರಿಸುವುದಲ್ಲ. ಇಲ್ಲಿನ ರಚನೆಗಳಿಗೆಲ್ಲ ಒಟ್ಟಾಗಿ ಒಂದು ಸಮಾನ ಕಾಳಜಿ ಇಲ್ಲ.

ಶಿಕ್ಷಣ, ಪ್ರನಾಳಶಿಶು, ಗಾಂಧಿ, ಜೆ.ಪಿ. ಚುನಾವಣೆ, ಮಕ್ಕಳವರ್ಷ, ಇತ್ಯಾದಿ ರಚನೆಗಳಲ್ಲಿ ‘ವರ್ತಮಾನಕ್ಕೆ’ ಗೊಡ್ಡು ಪ್ರತಿಕ್ರಿಯೆ ಇದೆ. ಪ್ರತಿಕ್ರಿಯೆಗಳು ಹರಿತವಾಗಿಲ್ಲದೆ, ಬರೆದುದು ಕೇವಲ ಚಪಲಕ್ಕಾಗಿ ಆಡಿದ ಮಾತುಗಳಾಗುತ್ತವೆ. ‘ಜೆ.ಪಿ.’ ಕವನದಲ್ಲಿ ಆತನಿಂದ ಒಳ್ಳೆಯದು ಕೆಟ್ಟದ್ದು ಎರಡೂ ಆಗಿದೆ ಎಂದು ಹೇಳಲು ಹೊರಟಂತೆ ಭಾಸವಾಗುತ್ತದೆ. ಆದರೆ ಅನುಭವದ ಸಂಕೀರ್ಣತೆ ಇಲ್ಲದೆ ಮತ್ತು ನಿರೂಪಣೆ ಕೆಟ್ಟದಾಗಿ ಇರುವುದರಿಂದ ಕವನವು ಪರಿಣಾಮಕಾರಿಯಾಗಿಲ್ಲ. ‘ಪ್ರಣಾಳಶಿಶು’ವಿನಲ್ಲಿ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆ ವಿಜ್ಞಾನವನ್ನು ತಿಳಿದುಕೊಳ್ಳುವ ಕುತೂಹಲವೂ ಇಲ್ಲದೆ, ಪೂರ್ವ ನಿಶ್ಚಯದಿಂದ ತೆಗಳಿದಂತೆ ತೋರುತ್ತದೆ. ವ್ಯಂಗ್ಯವು ಸಫಲ ಆಗದಿರುವುದರಿಂದ ‘ಬುದ್ಧ’ ರಚನೆಯಲ್ಲಿ ಪ್ರಾರಂಭಕ್ಕೂ ಅಂತ್ಯಕ್ಕೂ ಸಂಬಂಧ ಕಡಿದು ಹೋಗಿ ಬುದ್ಧನನ್ನೇ ಗೇಲಿ ಮಾಡಿದಂತಾಗುತ್ತದೆ.

ತನ್ನೊಳಗೆ ಇರುವ ವೈರುಧ್ಯವನ್ನು ಅನೇಕ ಸಲ ಕವಿ ಗಮನಿಸುವುದೇ ಇಲ್ಲ. ಇದರಿಂದಾಗಿ ‘ಗಾಂಧೀ?’ ಕವನದಲ್ಲಿ ಕವಿಯು ಯಾರನ್ನು ಟೀಕಿಸುತ್ತಿದ್ದಾನೋ ಅವರ ಮನೋಭಾವದಲ್ಲೇ ಆತನೂ ಗಾಂಧಿಯನ್ನ ನೋಡುತ್ತಾನೆ (‘ಪ್ರಾಣಿ’ ಎಂಬ ಶಬ್ದ ಪ್ರಯೋಗವನ್ನು ಗಮನಿಸಿರಿ). ವ್ಯಂಗ್ಯವೂ ಮೂಡಿ ಬರದಿರುವುದರಿಂದ ಬರಹ ವ್ಯರ್ಥವಾಗುತ್ತದೆ. ಅದೇರೀತಿ ‘ಚುನಾವಣೆ’ಯಲ್ಲಿ ಭಾವಾಭಿನಯ ತರುವ ಉದ್ದೇಶದಿಂದ ಕೂಡಿಸಿದ ಕೊನೆಯ ಅರ್ಧಕ್ಕಿಂತ ಹೆಚ್ಚು ಭಾಗ ಕ್ರಿಯೆಯಲ್ಲಿ ವಿಫಲ ಆಗುವುದರಿಂದ ಬರೆದದ್ದು ಉಪಯೋಗವಿಲ್ಲದೆ ಹೋಗುತ್ತದೆ. ಅಂದರೆ ಕವನಕ್ಕೆ ಸೇರಿಕೊಳ್ಳದೆ ಉಳಿಯುತ್ತದೆ.

ಬ್ರಾಕೆಟ್ ಹಾಕುವ ಔಚಿತ್ಯವೇ ಅನೇಕ ಕಡೆ ಅರ್ಥವಾಗುವುದಿಲ್ಲ. ಇನ್ನು ಕೆಲವು ಕಡೆ ವಿಶೇಷ ವಿವರಣೆಗಳ ಮತ್ತು ವಿಶೇಷಣಗಳ ಉಪಯೋಗ ಏಕೆಎಂದೇ ತಿಳಿಯುವುದಿಲ್ಲ.(ಉದಾ:-‘ನನಗನಿಸುತಿದೆ’ ರಚನೆಯಲ್ಲಿ ‘ಜಾನ್ಸನ್ ಅಂಡ್ ಜಾನ್ಸನ್ ಪ್ಲಾಸ್ಟರನ್ನು ಅಂಟಿಸಿದವನೆ’ ಎಂಬಲ್ಲಿ ಕಂಪನಿ ಹೆಸರು). ಒಟ್ಟಿನಲ್ಲಿ ಕುಮಾರಕವಿಯು ತಮ್ಮ ‘ಕಪ್ಪು ಸಮುದ್ರ’ ಕವನ ಸಂಕಲನವನ್ನು ಪ್ರಕಟಿಸುವಲ್ಲಿ ನಿಧಾನಿಸಬಹುದಿತ್ತು!

ಎಸ್.ಆರ್.ವಿಜಯಶಂಕರ     

“ಪುಸ್ತಕ ಪುರವಣಿ” ಮಾಸಿಕ ಜೂನ್ ೧೯೮೦

 

ಕೃತಿ : ಕಪ್ಪುಸಮುದ್ರ

ಲೇಖಕ:ಕುಮಾರಕವಿ ಬಿ.ಎನ್.ನಟರಾಜ

2ನೇ ಅನ್ವೇಷಕರು:ಟಿ.ವಿ.ಪದ್ಮಾವತಿ

ಸಮಕಾಲೀನ ವಸ್ತು ಸ್ಥಿತಿಯನ್ನು ವೀಕ್ಷಿಸುವ ಪ್ರಾಮಾಣಿಕ ಪ್ರಯತ್ನದ ಫಲವೇ ‘ಕಪ್ಪುಸಮುದ್ರ’ ಕವನ ಸಂಕಲನ. ರಾಜ್ಯಕಾರ್ಯಗಳು, ರಾಜಕಾರಣಿಗಳು, ಪ್ರತಿದಿನ ನಡೆವ ಅನಾಹುತಗಳು, ಮೋಸಗಾರಿಕೆ, ದ್ವೇಷಾಸೂಯೆಗಳು, ಹೀಗೆ ಎಲ್ಲವನ್ನೂ ಕಂಡಿರುವ ಪ್ರಯತ್ನ ಇಲ್ಲಿ ನಡೆದಿದೆ.

ಅದೆಷ್ಟೋ

ಯೋ(ನಿ)ಜನೆಗಳೆಲ್ಲವನು

ಅಂಗಾತ ಬೀಳಿಸಿ

ಅಳೆದು ಸುರಿದು ಏಳಿಸವ್ರೆ

ಒಂದಿನವಾದರೂ

ಸಾಗರ ಗರ್ಭದೊಳಿಳಿದು

ಆಳಕ್ಕಿಣಿಕಿ ನೋಡಿ

ಇದೆ-ಇಲ್ಲ ವಿಚಾರಿಸಿದ್ದಿದ್ರೆ

ಎಲ್ಲಾ ಮೀನುಗಳು

ಋಣಿಯಾಗುತ್ತಿದ್ದವು (ಕಪ್ಪುಸಮುದ್ರ-

ಶೀರ್ಷಿಕೆ ಕವನ)

ತಮ್ಮ ಹೊಟ್ಟೆಯನ್ನು ತುಂಬಲು ಯತ್ನಿಸುವ ಇಂದಿನ ರಾಜಕಾರಣಿಗಳ ನಡವಳಿಕೆಗೆ ಇಟ್ಟ ದರ್ಪಣವಿದು. ಇಂಥ ಅನುಭವಪೂರ್ಣ ಮಾತುಗಳು ಈ ಕವನ ಸಂಕಲನದ ತುಂಬಾ ಕಂಡುಬಂದರೂ “ಈಗಲೂ ನಾವೆಲ್ಲ ಸಂಘಟಿತರಾಗಿ ಪಣತೊಟ್ಟರೆ ಬಡಿದೆಬ್ಬಿಸಿದರೆ ಗುರಿಸಾಧನೆ ಖಂಡಿತ…. ಎಂದಷ್ಟೇ ಹೇಳಿ ಮುಗಿಸುತ್ತೇನೆ”(ಪುಟ-೪)ಎಂಬ ಉದ್ಗಾರಗಳು ಕೇವಲ ಹೇಳಿಕೆಗಳಾಗೇ ನಿಲ್ಲುತ್ತವೆ. ಪದಗಳನ್ನು ವಿಂಗಡಿಸಿ ಬರೆದ ಮಾತ್ರಕ್ಕೆ ಹೊಸ ಅರ್ಥವಾಗಲೀ, ಕವನಕ್ಕೊಂದು ಹೊಸ ಆಯಾಮವಾಗಲಿ ಸಿಗದು. ಇದನ್ನು ಕವನಕಾರರು ಗಮನಿಸದೆ ನವ್ಯತೆ ಹೆಸರಲ್ಲಿ ಅನಾವಶ್ಯಕ ಪ್ರಯತ್ನ ನಡೆಸಿದ್ದಾರೆ. ಇನ್ನಷ್ಟು ಪ್ರಯತ್ನ ಪಟ್ಟರೆ, ಆಳವಾಗಿ ಅಭ್ಯಾಸ ನಿರತರಾದರೆ, ಉತ್ತಮ ಕವನಕಾರ ಆಗಬಲ್ಲ ಸಾಧ್ಯತೆಯನ್ನಂತೂ ಇಲ್ಲಿ ಮನಗಾಣಬಹುದು.

ಟಿ.ವಿ.ಪದ್ಮಾವತಿ 

ಗ್ರಂಥಲೋಕ ಮಾಸಪತ್ರಿಕೆ ಏಪ್ರಿಲ್ 1980

 

83 ಕೃತಿ: ಮಕ್ಕಳ ಮಿಠಾಯಿ

ಲೇಖಕ: ಕುಮಾರಕವಿ ಬಿ.ಎನ್.ನಟರಾಜ

“ಮಕ್ಕಳಿಗೆ ಹೇಳಿಕೊಡಲು ಮುದ್ದಾದ ಪದ್ಯಗಳು” ಎನ್ನುವ ತಲೆಬರಹ ಮುಖಪುಟದಲ್ಲಿದೆ. ಎಷ್ಟು ಮುದ್ದಾಗಿವೆ ಎಂದರೆ “ಹೆತ್ತವರಿಗೆ ಹೆಗ್ಗಣ ಮುದ್ದಾಗುವಷ್ಟು ಅಲ್ಲ”. ಉಳಿದವುಗಳಲ್ಲಿ ಒಂದೆರಡನ್ನು ಬಿಟ್ಟರೆ ಎಲ್ಲವೂ ಮಕ್ಕಳಿಗಾಗಿ ಚೆನ್ನಾಗಿದೆ. ಕೆಲವನ್ನು ಪದ್ಯಗಳು ಎನ್ನುವುದಕ್ಕಿಂತ ಚುಟುಕುಗಳು ಎನ್ನಬಹುದು.

ಅಕ್ಷರಮಾಲೆ, ಲಾಲನೆಪಾಲನೆ, ಬಾಲಕೃಷ್ಣ: ಈ ಪದ್ಯಗಳಲ್ಲಿನ ಕ್ಲಿಷ್ಟ ಪದಗಳನ್ನು ಮಕ್ಕಳು ಜೀರ್ಣಿಸಿಕೊಳ್ಳಲು ತುಸು ತ್ರಾಸ. ‘ನಮ್ಮಮನೆ’ ಪದ್ಯದ ಮೇಲೆ ದೇಸಾಯಿಯವರ ಪ್ರಭಾವವಿದೆ. ‘ಬಣ್ಣದಚಿಟ್ಟೆ’ ಪದ್ಯವು ಕಾವ್ಯತ್ವವನ್ನು ಪಡೆದಿಲ್ಲ. ಆರು ಸಾಲಿನ ‘ಡಿಂಗರನಿಂಗ’ ಮಕ್ಕಳಿಗೆ ತಕ್ಕದ್ದಲ್ಲ ಏಕಂದರೆ:

“ಅವನ ಕಣ್ಣು ನಿಂಗಿಯ ಮೇಲೆ

ಅದರ ಫಲವೇ ಮದುವೆಯೋಲೆ”

‘ಕನ್ನಡ ಕಂದ’ ಪದ್ಯವು ಕಂದಮ್ಮಗಳ ನಾಲಿಗೆಯ ಮೇಲೆ ನಲಿಯಲಾಗದಷ್ಟು ಉದ್ದದ ರಚನೆ:

“ಕೋಟಿ ಜನ್ಮದ ಪುಣ್ಯಫಲದಿಂದ

ಜನಿಸಿದ ಕುವರ

ಹೋಲಿಸಲಾಗದ ಶೌರಿ ಇವನು

ಕನ್ನಡದ ವೀರ…”

ಇತ್ಯಾದಿ ಸಾಲುಗಳು ಸುಮಾರಾಗಿವೆ.

ಕಥಾರೂಪದ ‘ಕಿಟ್ಟು-ಪುಟ್ಟು’ ಮಕ್ಕಳಿಗೆ ಹೆಚ್ಚು ಪ್ರಿಯವಾಗಬಹುದು. ಕೆಲವು ಪ್ರಾಸಬದ್ಧ ಸಾಲುಗಳು ಅರ್ಥವನ್ನು ಧ್ವನಿಸದೆ ಅಭ್ಯಾಸ ಉಂಟುಮಾಡುತ್ತವೆ, ಉದಾಹರಣೆಗೆ:

“ರೈಲುಬಂತುರೈಲು ರೈಲುಬಂತುರೈಲು

ಮಕ್ಕಳೆಲ್ಲ ಮನೆಗೆಹೋಗಿ ರಾತ್ರಿಕತ್ತಲು”

ಇನ್ನುಳಿದಂತೆ; ಪ್ರಾರ್ಥನೆ, ರಾಜುವಿನಕನಸು, ಗುಬ್ಬಚ್ಚಿಗೂಡು, ಅಪ್ಪಾಲೇತಿಪ್ಪಾಲೆ, ಚಂದಮಾಮ, ರಾಕ್ಷಸ, ಮುಂತಾದವು ಪರವಾಯಿಲ್ಲ. ಅನಾಥ ಮಕ್ಕಳಿಗಾಗಿ ‘ಅನಾಥ’ ಎಂಬ ಪದ್ಯವೂ ಇದೆ. ಈ ಸಂಕಲನದಲ್ಲಿ ಉತ್ತಮದ್ದೆಂದು ಹೆಸರಿಸಬಹುದಾದ ಪದ್ಯ ‘ಮದುವೆ’. ಲೇಖಕರ ಲೇಖನಿಯು ಇನ್ನೂ ಪಳಗಬೇಕು, ಕುಮಾರಕವಿಯವರು ಇನ್ನೂ ಬೆಳೆಯಬೇಕು ಎಂಬುದನ್ನು ಈ ಸಂಕಲನವು ಹೇಳುತ್ತದೆ.

– ಮಾವಿನಕುಳಿ ಶ್ರೀನಿವಾಸ್

ಅಧ್ಯಾಪಕರು, ಅಂಚೆ ತೆರಪಿನ ಶಿಕ್ಷಣ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು-೬

ಗ್ರಂಥಲೋಕ ಮಾಸಪತ್ರಿಕೆ,ಆಗಸ್ಟ್ 1979

 

84 ಹನಿಗವನ ಸಂಕಲನ : ಕನ್ನಡ ಡಿಂಡಿಮ

ಬರೆದವರು : ಕುಮಾರಕವಿ ನಟರಾಜ

ಪ್ರಕಾಶಕರು : ಶ್ರೀ ರಾಜಲಕ್ಷ್ಮಿ ಪ್ರಕಾಶನ

1260 ರವೆಬೀದಿ 1ನೆ ತಿರುವು ಮೈಸೂರು.

ಪ್ರತಿಗಳಿಗೆ :ಗೀತಾ ಬುಕ್ ಹೌಸ್, ಕೆ.ಆರ್.ಸರ್ಕಲ್, ಮೈಸೂರು-1

ಮುದ್ರಕರು: ಮೈಸೂರು ಪವರ್ ಪ್ರೆಸ್, ಅಶೋಕ ರಸ್ತೆ ಮೈಸೂರು-1

ಪುಟಗಳು:66, ಬೆಲೆ:ರೂ.5

ಮೊದಲ ಮುದ್ರಣ: ಡಿಸೆಂಬರ್ 1985

ಆಡು ಮುಟ್ಟದ ಸೊಪ್ಪಿಲ್ಲ, ಕುಮಾರಕವಿ ಬರೆಯದ ಸಾಹಿತ್ಯ ಪ್ರಾಕಾರವಿಲ್ಲ. ಕಳೆದ 9 ವರ್ಷದಲ್ಲಿ 4 ಕವನ ಸಂಕಲನ, 2ಕಥಾ ಸಂಕಲನ, 2ಮಕ್ಕಳ ಪುಸ್ತಕ, 1ಕಾದಂಬರಿ, 1ನಾಟಕ, ಹೀಗೆ ಒಟ್ಟು 10ಕೃತಿಗಳನ್ನು ಬರೆದು ಕನ್ನಡನಾಡಿನ ಓದುಗರಿಗೆ ಈಗಾಗಲೇ ಪರಿಚಿತ ರಾಗಿದ್ದಾರೆ ‘ಕುಮಾರಕವಿ’ ಕಾವ್ಯನಾಮದ ಮೈಸೂರು ವಿಶ್ವವಿದ್ಯಾನಿಲಯ ಉದ್ಯೋಗಿ ಬಿ.ಎನ್.ನಟರಾಜ. ಪ್ರಸ್ತುತ ಕನ್ನಡ ಡಿಂಡಿಮ ಕೃತಿಯ ಪ್ರಾರಂಭ ಪುಟದಲ್ಲಿ ಕಾಣಿಸಿರುವಂತೆ ಇನ್ನೂ 5ಕೃತಿಗಳು (1ವಿಮರ್ಶೆ, 1ಗಾದೆಗಳಸಂಕಲನ, 1ಒಗಟುಗಳಸಂಕಲನ, 1ಸಿನಿಮಾ ಕೈಪಿಡಿ, 1ನಿಘಂಟು) ಅಚ್ಚಿನಲ್ಲಿವೆಯಂತೆ. ಇವರ ಮೊಟ್ಟಮೊದಲ ಕವನ ಸಂಕಲನ ‘ಕವನಸುಧೆ’ ಕೃತಿಯು ಕೇವಲ 1ವರ್ಷ ಅವಧಿಯಲ್ಲಿ 2ನೇ ಮುದ್ರಣ ಕಂಡು ನೂತನ ದಾಖಲೆ ನಿರ್ಮಿಸಿತ್ತು.

ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನ ದಿನದಂದು “ಕನ್ನಡ ಡಿಂಡಿಮ” ಹನಿಗವನ ಸಂಕಲನವು ಬಿಡುಗಡೆಯಾದ್ದು ಒಂದು ದಾಖಲೆಯಾಗಿದೆ. ಆದರೂ ಈ ಪುಸ್ತಕದ ಮತ್ತಷ್ಟು ವಿಶೇಷತೆ ಎಂದರೆ: ಮುನ್ನುಡಿ,  ಬೆನ್ನುಡಿ, ಪ್ರಕಾಶಕಾರನುಡಿ, ಲೇಖಕನನುಡಿ, ಆಶೀರ್ವಚನ, ಹಾರೈಕೆ ಇದ್ಯಾವುದು ಇಲ್ಲದ ಅಷ್ಟೇಏಕೆ ಪರಿವಿಡಿ ರಹಿತದ ವೈಶಿಷ್ಟ್ಯ ಉಳ್ಳ ಕೃತಿಯಾಗಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ! ಇಡೀ ಪುಸ್ತಕದಲ್ಲಿ ಲೇಖಕರನ್ನು ಹೊರತು ಪಡಿಸಿ ಬೇರೆಯವರದ್ದು ಏನಾದರೂ ಬರಹವಿದ್ದರೆ ಅದು ಮತ್ತೇನೂ ಅಲ್ಲದೇ ಪುಸ್ತಕದ ಬಗ್ಗೆ ಕೇವಲ ನಾಲ್ಕೇನಾಲ್ಕು ಸಾಲುಗಳು ಹೀಗಿವೆ:

_”ಇದೊಂದು ಅಪೂರ್ವ ಕವನಸಂಕಲನ

ಕೊಂಡುಓದುವ ಕನ್ನಡಿಗರಿಗೆ ನಮನ

ಹುಟ್ಟುತ್ತಲೇ ಯಾರೂ ಕವಿಗಳಲ್ಲ

ಇದನ್ನರಿತು ಮುನ್ನಡೆಯಬೇಕು ನಾವೆಲ್ಲ”_

– ಡಾ.ಸುಮಾ ಮೈ.ನಾ.ಗೌಡ.

ಮೇಲ್ಕಂಡ ಸುಮಾರವರ ಅಭಿಪ್ರಾಯ ಸರಿಯಾಗೇ ಇದೆ ಎಂದು ನನಗೆ ಮಾತ್ರವಲ್ಲ, ಬಹುಶಃ ಎಲ್ಲಾ ಓದುಗರಿಗೂ ಅನಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ, ಓದೋಣವೆಂದು ಪುಸ್ತಕದ ಪುಟ ತೆರೆಯುತ್ತಿದ್ದಂತೆ ಕಾಣಸಿಗುವ ಮೊಟ್ಟಮೊದಲ ಕವನಹನಿಯ ಹೆಸರು ‘ಅ’ ಗಳ ‘ಭ’ ಖಂಡದಲ್ಲಿ.. ಇಲ್ಲಿಂದ ಮುಂದಕ್ಕೆ ಕೊನೇಪುಟದವರೆಗೆ ಒಟ್ಟು 60ಹನಿಗವನಗಳಿದ್ದು ಅಂತಿಮ ಹನಿಯ ಹೆಸರೇ”ತಾಯಿ-ತಂದೆ”. ಕೆಲವು ಕವನದ ಶೀರ್ಷಿಕೆ ಚಿತ್ರ ವಿಚಿತ್ರ ಎನಿಸಿದರೂ ಅಷ್ಟೇ ಅರ್ಥಗರ್ಭಿತವಾಗಿದೆ, ಆಕರ್ಷಕವಾಗಿದೆ, ಆಶ್ಚರ್ಯಕರವಾಗೂಇದೆ! 1 ರಿಂದ 60ರವರೆಗೆ ಕನ್ನಡಾಕ್ಷರ ವರ್ಣಮಾಲೆ ಅಕಾರಾದಿ ಪ್ರಕಾರ ಸಂಕಲನ ಮಾಡಲಾಗಿದೆ ಎಂಬುದಿನ್ನೊಂದು ವಿಶೇಷ. ಈ ಅರವತ್ತರಲ್ಲಿ ಯಾವುದನ್ನು ಹೇಳುವುದೋ ಯಾವುದನ್ನ ಬಿಡುವುದೋ ತಿಳಯದಾಗಿದೆ ಆದರೂ…ಒಂದು ಉದಾಹರಣೆ :

ಅಸಲು ಸುಖ

ಹೆಣ್ಣಂ

ಗಾಂಗವನೆಲ್ಲಾ

ಕಣ್ಣ

ಕ್ಷ-ಕಿರಣದಲಿ

ಅಳೆದು ಸುರಿದರೂ

ಹೊನ್ನ

ಲೇಖನಿಯಲಿ

ಬರೆದು ಬಣ್ಣಿಸಿದರೂ

ಅಸಲುಸುಖ

ಸವಿದಂತಾಗುವುದೇ?!

 

ಇನ್ನೊಂದು ಉದಾಹರಣೆ:

ಅನಿವಾರ್ಯ

ಮನೆಯಲಿ

ಹೆಂಡತಿ

ಮಾಸಿಕ

‘ರಜ’

ಹೊಂದಿದಾಗ

ಕಚೇರಿಯಲ್ಲಿ

ಗಂಡನು

ಸಾಂದರ್ಭಿಕ

‘ರಜೆ’

ಪಡೆವುದು..!

ಇಲ್ಲಿ ಒಂದು ಅಂಶವನ್ನು ಹೇಳಲೇಬೇಕಾಗುತ್ತದೆ. ‘ರಜ’ ಎಂಬುದರ ಒಳಾರ್ಥ’ಮುಟ್ಟು’/ಮಂತ್ಲೀ ಮೆನ್ಸಸ್?

‘ರಜೆ’ ಎಂಬುದರ ಒಳಾರ್ಥ ಸಿ.ಎಲ್./ಕ್ಯಾಶುವಲ್ ಲೀವ್?!

ಮತ್ತೊಂದು ಉದಾಹರಣೆ:

ಅ-ಜ್ಞಾನ

ಸಾಮಾನ್ಯ ಜ್ಞಾನ

ಇಲ್ಲದ

ಕವಿ: ಅನರ್ಹ?

ನೀಡಿದ್ದರೂ

ಜ್ಞಾನಪೀಠದ

ಬಹುಮಾನ!

ಶ್ರೀಸಾಮಾನ್ಯ ದೀನ

ಒಲ್ಲದ

ಕ(ಸಿ)ಹಿ: ಅರ್ಹ?

ಪಡೆದಿದ್ದರೂ

ಗವಿ(ಶ್ರೀ)ಮಠದ

ರಸಾಯನ!

 

ಮಗದೊಂದು ಉದಾಹರಣೆ: ಅ(ಪಾ)ರ್ಥ

ಒಂದೇ ಘಟನೆ:

ಬಡವನ

ಕಿರುಮನೆಯಲ್ಲಿ

ಜರುಗಿದರೆ

ವ್ಯಭಿಚಾರ!

ಅದೇ:

ಬಲ್ಲಿದನ

ಅರಮನೆಯಲ್ಲಿ

ನಡೆದರೆ

ವ್ಯಾಪಾರ?

 

ಕೊನೆಯ ಉದಾಹರಣೆ:

ಆಹ್ವಾನಪತ್ರಿಕೆ

ಬಲಿತವಳೊಡನೆ

ಹಗಲು

ಬಯಲೊಳು

ಬಹಿರಂಗವಾಗಿ ಜರುಗುವ ಮದುವೆಗೆ

ಮನಮಾಡಿ ಬನ್ನಿರಿ!

ಆ..ನಂತರದ…

ರಾತ್ರಿ

ಕೋಣೆಯೊಳು

ಗೋಪ್ಯವಾಗಿ ನಡೆವ ನಿಷೇಕಕ್ಕೂ

ಮುಂದಿನ ಮಧುಚಂದ್ರ ತಾಣಕ್ಕೂ

ದಯಮಾಡಿ ಬರದಿರಿ…..?

 

ಕಟ್ಟಕಡೇ ಉದಾಹರಣೆ:

…..ಚಕ್ರ

ಹುಡುಗ ಗಂಡಸಾಗುವುದು

ಹುಡುಗಿ ಹೆಂಗಸಾಗುವುದು

ಪರಸ್ಪರ ಕೂಡಿ

ಎರಡೊಂದಾಗುವುದು!

ಮತ್ತೆ ಗಂಡ್ತನ ಹೆಣ್ತನ

ಎರಡರ ಮಿಲನದಾ ಜನನ

ಮತ್ತೊಮ್ಮೆ ಮಗದೊಮ್ಮೆ

ಮರಣ-ಜನನ-ಮರಣ-ಜನನ…..

 

60 ನೇ ಕವನ

ತಾಯಿ-ತಂದೆ

ಅರಮನೆ ಸೆರೆಮನೆ

ಸಮಾಜ ಸಂಸ್ಕಾರ

ಗರ್ಭದೊಳಗೇ ಹುಟ್ಟುವ

ಎಲ್ಲಾ ಕುನ್ನಿಗಳಿಗು:

ಉಣಬಡಿಸುವ

ಸಂಪದ ಸತ್ಯ: ತಾಯಿ

ಬಡಬಡಿಸುವ

ನೆಪದ ಮಿಥ್ಯ: ತಂದೆ

ಕಲ್ಲು ಕ್ಯಾಲೆಂಡರ್ ಗಿಂತಲೂ

ಸಮಯೋಚಿತ ಉಸಿರಾಡುವ

ಈ ದೈವವೆರಡೂ ಮಿಗಿಲು

ಅಬ್ಬಬ್ಬಾ…..ಎಂಥಾ ಸಂ-ಶೋಧನೆ ಈ ಲೇಖಕರದ್ದು! ಒಂದಕ್ಕಿಂತ ಒಂದು, ಇನ್ನೊಂದು ಮತ್ತೊಂದು ಮಗದೊಂದು, ಎಲ್ಲ 60 ಮಿನಿ ಕವನಗಳೂ 600 ಹುಳುಗಳನ್ನು ಬಿಡುತ್ತವೆ ಓದುಗರ ಮೆದುಳಿನೊಳಕ್ಕೆ. ಆದ್ದರಿಂದ ಇನ್ನುಮೇಲೆ ನನ್ನದೇನೂಇಲ್ಲ, ಧೈರ್ಯ ಮಾಡಿಕೊಂಡು ಓದುವವರಿಗೆ, ನಂಬಿಕೆ ಇಲ್ಲದವರಿಗೆ ಅಪ(ಮೂಢ)ನಂಬಿಕೆ ಇರುವವರಿಗೆ ಟೀಕೆ-ಟಿಪ್ಪಣಿ ಮಾಡುವವರಿಗೆ ಹಾಗೂ ಅವರವರ ತಾಕತ್ಗೆ ಬಿಟ್ಟು ಅವರಿವರ ಇಕ್ಮತ್ಗೆ ಕೊಟ್ಟು, ನಾನಂತೂ ಮುಂದೆ ಸರಿಯುತ್ತೇನೆ.

 –ಸದಾಶಿವ ಎಣ್ಣೆಹೊಳೆ

ಸಂಪಾದಕೀಯ ವಿಭಾಗ, ಪ್ರಸಾರಾಂಗ

ಮೈವಿವಿ,ಮಾನಸಗಂಗೋತ್ರಿ, ಮೈಸೂರು-6

 

85 ಕೃತಿ: ಕನ್ನಡ ಫಿಲಂ ಡೈರೆಕ್ಟರಿಭಾಗ-1

ಲೇಖಕ: ಕುಮಾರಕವಿ ಬಿ.ಎನ್.ನಟರಾಜ

ಪ್ರಕಾಶಕರು: ಕರ್ನಾಟಕ ವಚನ ಸಾಹಿತ್ಯ ಪರಿಷತ್, ಬೆಂಗಳೂರು

ಮುದ್ರಕರು: ಶ್ರೀನಂಜುಂಡೇಶ್ವರ ಪ್ರಿಂಟರ್ಸ್

ಮೊದಲ ಮುದ್ರಣ: ನವೆಂಬರ್ 2020

ಪುಟಗಳು: 232,  ಬೆಲೆ: ರೂ.270/-

 ಮುನ್ನುಡಿ

ಕನ್ನಡ ಕುಲಕೋಟಿಗೆ ವಂದನೆಗಳು. ಕುಮಾರಕವಿ ಬಿ.ಎನ್.ನಟರಾಜ್ ರವರು ತಮ್ಮ 50ವರ್ಷಕ್ಕು ಹೆಚ್ಚಿನ ಪರಿಶ್ರಮದಿಂದ 85 ವರ್ಷದ ಇತಿಹಾಸ ಇರುವ ಸ್ಯಾಂಡಲ್‌ವುಡ್‌ನ ಕನ್ನಡ ಫಿಲಂ ಡೈರೆಕ್ಟರಿ (ಕನ್ನಡ ಚಲನಚಿತ್ರ ಕೈಪಿಡಿ) ರಚಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರತರಲು ಆಶಿಸಿ ಅದಕ್ಕೆ ನನ್ನಿಂದ ‘ಮುನ್ನುಡಿ’ ಬರೆಸಲು ಬಯಸಿ ದೂರವಾಣಿ ಮೂಲಕ ಸಂಪರ್ಕಿಸಿದರು. ಜತೆಗೆ ನಮ್ಮ ತಾಯಿ ಶ್ರೀಮತಿ ಪ್ರತಿಮಾದೇವಿ ಡಿ.ಶಂಕರಸಿಂಗ್ ರವರು ಸಹ ಕನ್ನಡ ಚಲನಚಿತ್ರ ರಂಗದ ಇತಿಹಾಸವುಳ್ಳ ಈ ಕೃತಿಯ ಬಗ್ಗೆ ಮತ್ತು ಇದರ ಕರ್ತೃವಿನ ಬಗ್ಗೆ ನನಗೆ ಮಾಹಿತಿ ಕೊಟ್ಟರು.

ಆದರೆ, ಈಗಾಗಲೇ ಕನ್ನಡ ಚಿತ್ರರಂಗದ ಇತಿಹಾಸದ ಬಗ್ಗೆ ಅನೇಕ ಪುಸ್ತಕಗಳು ಪ್ರಕಟವಾಗಿವೆ ಹಾಗೂ ಈ ಹಿಂದೆ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಸಹ ಚಲನಚಿತ್ರ ಇತಿಹಾಸದ ಬಗ್ಗೆ ಪುಸ್ತಕವನ್ನು ಪ್ರಕಟಿಸಿದ್ದಾಗ ಅದು ಬಹಳ ವಿವಾದಕ್ಕೆ ಗುರಿಯಾಗಿತ್ತು. ಅದರ ಹೋರಾಟಕ್ಕೆ ನಾನೇ ಮುಂಚೂಣಿಯಲ್ಲಿದ್ದು ಬಹಳ ವಿರೋಧದೊಂದಿಗೆ ಆ ಪುಸ್ತಕವನ್ನು ಹಿಂದಕ್ಕೆ ಪಡೆಯುವಂತಾಗಿತ್ತು! ಪ್ರಸ್ತುತ ಶ್ರೀ ಬಿ.ಎನ್. ನಟರಾಜ್ ರವರು ದೂರವಾಣಿ ಮೂಲಕ ಕರೆ ಮಾಡಿ ಅವರು ರಚಿಸಿರುವ ‘ಸಮಗ್ರ ಕನ್ನಡ ಚಿತ್ರಾವಲೋಕನ’ (ಕನ್ನಡ ಫಿಲಂ ಡೈರೆಕ್ಟರಿ) ಪುಸ್ತಕಕ್ಕೆ ‘ಮುನ್ನುಡಿ’ ಬರೆಯಲು ನನ್ನನ್ನು ಕೇಳಿದಾಗ ನನಗೆ ಸ್ವಲ್ಪ ಮುಜುಗರ ಉಂಟಾಯಿತು!

ಈ ಇತಿಹಾಸದ ಸಂಬಂಧ ಮುನ್ನುಡಿ ಬರೆಯಲು ನಾನು ಯೋಗ್ಯನೇ ಹಾಗೂ ಮುನ್ನುಡಿ ಬರೆಯುವ ಅನುಭವ ಇದೆಯೇ? ಎಂದೆನಿಸಿ, ನಾನು ಇದೇ ಮೊದಲ ಬಾರಿ ಒಂದು ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯಲು ಒಪ್ಪಿಕೊಂಡು ಒಂದೇಒಂದು ಸಲಹೆಯನ್ನು ನಟರಾಜ್ ರವರಿಗೆ ನೀಡಿದ್ದೇನೆಂದರೆ: “ಮೊದಲು ನಿಮ್ಮ ಪುಸ್ತಕವನ್ನು ಕಳುಹಿಸಿಕೊಡಿ, ಅದನ್ನು ಓದಿದ ನಂತರ ನಾನು ಯೋಚನೆ ಮಾಡಿ ನಿಮಗೆ ಉತ್ತರ ಕೊಡುತ್ತೇನೆ” ಎಂದು ಹೇಳಿ ಜಾರಿಕೊಳ್ಳೋಣವೆಂದು ಮನಸ್ಸು ಮಾಡಿದ್ದೆ.

ಆದರೆ ಕುಮಾರಕವಿ ನಟರಾಜ್ರವರ ಪುಸ್ತಕವು ನನ್ನ ಕೈ ಸೇರಿದ ಮೇಲೆ ನನಗೆ ಮೊದಲ ಪುಟದಿಂದಲೇ ಒಂದು ತರಹ ರೋಮಾಂಚನವಾಯಿತು! ಈವರೆಗೆ ನಾನು ಓದಿರುವ ಕನ್ನಡ ಚಲನಚಿತ್ರ ಇತಿಹಾಸದ ಪುಸ್ತಕಗಳಿಗಿಂತಲೂ ಇದು ಬಹಳ ವಿಭಿನ್ನವಾಗಿತ್ತು! ಮಾನ್ಯ ಶ್ರೀ ನಟರಾಜ್ ರವರು ಸಂಗ್ರಹಿಸಿರುವ ಅಮೋಘ ಮಾಹಿತಿ ಮತ್ತು ಅಂಕಿಅಂಶ, ಮುಂತಾದವುಗಳು ಪ್ರತಿಯೊಬ್ಬರಿಗೂ ಬಹಳ ಮೆಚ್ಚುಗೆಯಾಗಿ ಹರ್ಷ ವ್ಯಕ್ತಪಡಿಸುವಂತೆ ಇದೆ.

ಇಂತಹ ಅಪರೂಪದ ಅಂಕಿಅಂಶ, ಅದ್ಭುತ ಮಾಹಿತಿ ಹಾಗೂ ಅಪೂರ್ವ ಸಂಗ್ರಹಣೆ, ಇವೆಲ್ಲದರ ಹಿಂದೆ ಇರುವ ಲೇಖಕರ ಧೀರ್ಘಕಾಲದ ಪರಿಶ್ರಮ ಮತ್ತು ತಾಳ್ಮೆ ನನಗೆ ತುಂಬಾ ಸಂತೋಷ ಉಂಟು ಮಾಡಿದೆ. ಈ ಬಗೆಯ ಅಂಕಿ-ಅಂಶ ಇರುವ ಕನ್ನಡ ಚಿತ್ರರಂಗದ ಇತಿಹಾಸ ಪುಸ್ತಕವನ್ನು ಬರೆಯುವ ಮೂಲಕ ಇದುವರೆಗೂ ಯಾರೂ ಮಾಡದೆ ಇರುವಂಥ ಸಾಹಸವನ್ನು ಇದರ ಲೇಖಕ ಕುಮಾರಕವಿ ಮಾಡಿದ್ದಾರೆ! ಯಾವ ಕಲಾವಿದರು ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ, ಯಾವ್ಯಾವ ನಾಯಕ-ನಾಯಕಿಯರು ಜತೆಯಾಗಿ ನಟಿಸಿದ್ದಾರೆ.

ನಿರ್ಮಾಪಕ, ನಿರ್ದೇಶಕರ ಬಗ್ಗೆ, ಹಾಡು ಬರೆದವರ ಬಗ್ಗೆ, ಸಂಗೀತ ನಿರ್ದೇಶಕರ ಬಗ್ಗೆ, ಛಾಯಾಗ್ರಾಹಕರ ಬಗ್ಗೆ, ಹಿನ್ನೆಲೆ ಗಾಯಕರ ಬಗ್ಗೆ, ಅಷ್ಟೇ ಅಲ್ಲದೆ ಪೋಷಕ ನಟನಟಿಯರು, ಬಾಲ ನಟನಟಿಯರು, ನೃತ್ಯ ಕಲಾವಿದೆಯರು ಹಾಗುವಿವಿಧ ತಾಂತ್ರಿಕ ವರ್ಗದವರ ಬಗ್ಗೆಯೂ ಅನೇಕ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಈ ‘ಕನ್ನಡ ಫಿಲಂ ಡೈರೆಕ್ಟರಿ’ ಪುಸ್ತಕವು ನಿಜವಾಗಿಯೂ ಮುಂದಿನ ಪೀಳಿಗೆಗೆ ಒಂದು ಅಪೂರ್ವವಾದ ‘ಕನ್ನಡಿ’ಯಂತೆ ಇದ್ದು, ಇಡೀ ಕನ್ನಡ ಚಿತ್ರರಂಗದ (ಸ್ಯಾಂಡಲ್ ವುಡ್ ನ) ಪ್ರತಿಯೊಂದು ಅಂಕಿ-ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಇಂತಹ ಅತ್ಯುತ್ತಮ ಮಾಹಿತಿ ಸಂಗ್ರಹಣೆಗಾಗಿ ಶ್ರೀ ನಟರಾಜ್ ರವರಿಗೆ ಅಭಿನಂದನೆಗಳು.

ಈ ಮೌಲ್ಯಯುತ ಪುಸ್ತಕವನ್ನು ಪ್ರತಿಯೊಬ್ಬ ಕನ್ನಡಿಗರೂ ಕೊಂಡು ಓದಬೇಕು. ಹಾಗೆಯೇ ಸರ್ಕಾರಿ ಲೈಬ್ರರಿಗಳಲ್ಲಿ ಈ ಸಂಗ್ರಹ ಯೋಗ್ಯ ಪುಸ್ತಕವು ಸಾರ್ವಜನಿಕರಿಗೆ ದೊರಕುವ ರೀತಿಯಲ್ಲಿ ಮತ್ತು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗೀ ಗ್ರಂಥಾಲಯದಲ್ಲೂ ಲಭ್ಯವಾಗುವಂತೆ ಇರಬೇಕು. ಈ ಪುಸ್ತಕವು ಕನ್ನಡ ಚಲನಚಿತ್ರ ರಂಗದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿ, ಎಲ್ಲರಿಂದ ಉತ್ತಮವಾದ ಪ್ರಶಂಸೆ ದೊರಕುತ್ತದೆ ಎಂದು ನನ್ನ ದೃಢವಾದ ನಂಬಿಕೆ!

ನಾನು ನಿಮಗೆ ಈ ಸುಸಂದರ್ಭದಲ್ಲಿ ಅಭಿನಂದಿಸುತ್ತಾ, ಒಂದುವೇಳೆ ನಾನೇನಾದರೂ ಈ ಮುನ್ನುಡಿಯನ್ನು ಬರೆಯದೇ ಇದ್ದಿದ್ದರೆ, ನಾನೊಂದು ಸುವರ್ಣ ಅವಕಾಶದಿಂದ ವಂಚಿತನಾಗುತ್ತಿದ್ದೆನೇನೋ ಎಂದು ಭಾವಿಸಿ ನನ್ನ ಈ ಎರಡು ಮಾತುಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟ ಲೇಖಕ ಕುಮಾರಕವಿ ನಟರಾಜರಿಗೆ ನಾನು ಆಭಾರಿಯಾಗಿದ್ದೇನೆ. ಇನ್ನು ಮುಂದೆಯೂ ಸಹ ಇವರು ಕನ್ನಡ ಚಿತ್ರರಂಗದ ಬಗ್ಗೆ ಹೊಸ ಹೊಸ ಯೋಜನೆಗಳನ್ನು ಬರೆದು ಪ್ರಕಟಿಸಲಿ. ಕನ್ನಡ ಫಿಲಂ ಡೈರೆಕ್ಟರಿ ಕೃತಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಲಭಿಸಲಿ ಎನ್ನುವುದೇ ನನ್ನ ಆಸೆ. ಭಗವಂತನು ಶ್ರೀ ಬಿ.ಎನ್.ನಟರಾಜ್ ರವರ ಪ್ರಯತ್ನಕ್ಕೆ ಹೆಚ್ಚಿನ ಯಶಸ್ಸನ್ನು ನೀಡಲಿ ಎಂದು ಸದಾ ಪ್ರಾರ್ಥಿಸುತ್ತೇನೆ.

ಎಸ್.ವಿ.ರಾಜೇಂದ್ರಸಿಂಗ್ ಬಾಬು

ನಟ-ನಿರ್ಮಾಪಕ-ನಿರ್ದೇಶಕ ಹಾಗು ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ಅಧ್ಯಕ್ಷರು

ದಿನಾಂಕ 28ನೆ ಏಪ್ರಿಲ್ 2019

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು  ಕೃತಿಗಳ ಪರಿಚಯ.. ಭಾಗ-16

admin
the authoradmin

Leave a Reply